ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ತಡೆಯಿರಿ; ತಾರತಮ್ಯ ತಪ್ಪಿಸಿ

Last Updated 1 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ದಾವಣಗೆರೆ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಕ್ರಿಕೆಟ್ ಬೆಟ್ಟಿಂಗ್ ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗಾಗುವ ತಾರತಮ್ಯ ತಪ್ಪಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು.

- ಇದು ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು - ಕೊರತೆ ಸಭೆಯ ಪ್ರಮುಖ ಚರ್ಚೆಗಳು.

ಬಹುತೇಕ ಹಳೇ ವಿಷಯಗಳ ಪುನರಾವರ್ತನೆಯೇ ನಡೆಯಿತಾದರೂ ಪೊಲೀಸ್ ಇಲಾಖೆಗೆ ಹೊರತಾದ ವಿಷಯಗಳೂ ಚರ್ಚೆಗೆ ಬಂದವು.

ಕಾಂಗ್ರೆಸ್ ಮುಖಂಡ ಸೋಮಲಾಪುರ ಹನುಮಂತಪ್ಪ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗುಡಿ ಗುಂಡಾರ, ಸಮುದಾಯ ಭವನಗಳ ಪಾಲಾಗುತ್ತಿದೆ. ಅದನ್ನು ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲು ಬಳಸಬೇಕು. ಕೆಟಿಜೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಒತ್ತು ನೀಡಬೇಕು ಎಂದರು.

ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಮುಖಂಡ ಕೆ. ಮಂಜುನಾಥ ಮಾತನಾಡಿ, ನಗರದಲ್ಲಿ 53 ಕೊಳೆಗೇರಿಗಳಿವೆ. ಅಲ್ಲಿ ಪೌರ ಕಾರ್ಮಿಕರು ಸರಿಯಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಜಾಸ್ತಿ ಒತ್ತು ನೀಡಬೇಕು. ಆನೆಕೊಂಡಕ್ಕೆ ಸಿಟಿಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.

6 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ನಾವು ಹೇಗೆ ಬದುಕೋದು ಸ್ವಾಮಿ. ಭಾರತ್ ಕಾಲೊನಿಯಂಥ ಕೊಳೆಗೇರಿ ಪ್ರದೇಶಗಳಲ್ಲಿ ಮದ್ಯದ ಬಾಟಲಿಗಳನ್ನು ಪಾರ್ಸೆಲ್ ಮಾಡಿ ಗ್ರಾಮಾಂತರ ಪ್ರದೇಶಗಳಿಗೆ ಕಳುಹಿಸಲಾಗುತ್ತದೆ. ಜಾಸ್ತಿ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತದೆ ಎಂದು ಮಂಜುನಾಥ್ ದೂರಿದರು.

ರಮೇಶ್ ನಾಯಕ್ ಮಾತನಾಡಿ, ನಗರದಾದ್ಯಂತ ಕರ್ಕಶ ಹಾರನ್‌ಗೆ ಕಡಿವಾಣ ಹಾಕಬೇಕು. ಕೊಳೆಗೇರಿ ಯುವಕರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಇದು ಗಂಭೀರ  ಅಪರಾಧ ಪ್ರಕರಣಗಳಿಗೂ ಎಡೆಮಾಡಿಕೊಟ್ಟಿದೆ. ಅವರ ವಿರುದ್ಧ ಬೆಟ್ಟಿಂಗ್ ಸಹಿತ ಬೇರೆ ಬೇರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಪಿ ಲಾಭೂರಾಂ ಪ್ರತಿಕ್ರಿಯಿಸಿ, ಬೆಟ್ಟಿಂಗ್ ಜಾಮೀನು ನೀಡಬಹುದಾದ ಅಪರಾಧ. ಅಂಥವರ ಮೇಲೆ ಬೇರೆ ಪ್ರಕರಣ ದಾಖಲಿಸಲಾಗದು ಎಂದರು.

ದಲಿತರಿಗೆ ರಕ್ಷಣೆಯೇ ಇಲ್ಲ!?
ಹೊನ್ನಾಳಿ ತಾಲ್ಲೂಕಿನ ದಲಿತ ಮುಖಂಡ ಜಿ.ಎಚ್. ಶಂಬಣ್ಣ ಮಾತನಾಡಿ, ದಲಿತರಿಗೆ ಹೋಟೆಲ್‌ಗಳಲ್ಲಿ ಪ್ರತ್ಯೇಕ ಲೋಟ ಇಡಲಾಗುತ್ತಿದೆ. ಕ್ಷೌರದಂಗಡಿಗಳಲ್ಲಿ ಕ್ಷೌರ ಮಾಡುವುದಿಲ್ಲ. ದಲಿತರ ಮೇಲೆ ದೌರ್ಜನ್ಯ ಆದಾಗ, ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸಿದಾಗ  ಅದನ್ನು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಸಮಾಜದಲ್ಲಿ ದಲಿತರಿಗೆ ರಕ್ಷಣೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಸ್‌ಪಿ ಪ್ರತಿಕ್ರಿಯಿಸಿ, ನಿಮಗೆ ಏನು ರಕ್ಷಣೆ ಬೇಕು? ನಾವು ಕೊಡುತ್ತೇವೆ. ಸುಮ್ಮನೆ ಹಾಗೆ ಹೇಳಿದರೆ ಒಪ್ಪಲಾಗದು ಎಂದು ನುಡಿದರು.
ಹರಪನಹಳ್ಳಿ ತಾಲ್ಲೂಕಿನಲ್ಲಿ ಮಟ್ಕಾ, ಅಕ್ರಮ ಮದ್ಯ ಮಾರಾಟದ ಬಗ್ಗೆ ನಿರ್ದಿಷ್ಟ ಪ್ರಕರಣಗಳನ್ನು ಮಂಜಪ್ಪ ಅವರು ಉದಾಹರಿಸಿದರು.

ರಾಮಗೊಂಡನಹಳ್ಳಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಇಬ್ಬರು ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂದು ಜಿ. ತಿಪ್ಪೇಸ್ವಾಮಿ ಪ್ರಕರಣ ವಿವರಿಸಿದರು. ದಲಿತ ಮುಖಂಡರಿಗೆ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ, ಪಾಲಿಕೆ ಆಯುಕ್ತ ಭೀಮಪ್ಪ, ಹೆಚ್ಚುವರಿ ಎಸ್‌ಪಿ ಬಿ.ಟಿ. ಚವಾಣ್, ಡಿವೈಎಸ್‌ಪಿಗಳಾದ ಡಾ.ಶಿವಕುಮಾರ್, ಡಿ.ಕೆ. ಕವಳಪ್ಪ, ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT