ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಅಂಡರ್‌ಪಾಸ್ ಸಂಚಾರ ದುಸ್ತರ

Last Updated 3 ಜೂನ್ 2013, 8:55 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ರೈಲು ನಿಲ್ದಾಣದ ಬಳಿ ಸೇತುವೆ ತಳಭಾಗದಲ್ಲಿ ನಿರ್ಮಿಸಿರುವ `ಅಂಡರ್‌ಪಾಸ್' ರಸ್ತೆಯಲ್ಲಿ ಹರಿಯುವ ಮಳೆ ನೀರನ್ನು ಹೊರ ಸಾಗಿಸುವ ಭೂಗತ ಕೊಳಾಯಿ ಮಾರ್ಗ ಮುಚ್ಚಿ ಹೋಗಿದೆ. ಪರಿಣಾಮ ಮಳೆ ಸುರಿದಾಗ ರಸ್ತೆಯಲ್ಲಿ ಸಂಗ್ರಹವಾಗುವುದರಿಂದ ಸಂಚಾರ ಹರಸಾಹಸವಾಗಿದೆ.

ಸೇತುವೆ ಭೂ ತಳದಲ್ಲಿ ಕಳಪೆ ಕಾಮಗಾರಿಯಿಂದ ಕಬ್ಬಿಣದ ಸರಳುಗಳು ಮೇಲಕ್ಕೆ ಎದ್ದಿವೆ, ಕಾಂಕ್ರಿಟ್ ಕಿತ್ತು ಗುಂಡಿಗಳಾಗಿವೆ. ಕಾಲುದಾರಿಯ ಸ್ಲಾಬ್‌ಗಳು ಹಾಳಾಗಿವೆ. ಕಿರಿದಾದ ಈ ಮಾರ್ಗದಲ್ಲಿ ವಾಹನಗಳು ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಜಲಾವೃತ ರಸ್ತೆಯಲ್ಲಿ ಗುಂಡಿಗಳು ಗೋಚರಿಸದೇ ದ್ವಿಚಕ್ರ ವಾಹನ ಸವಾರರು ಬಿದ್ದಿರುವ ನಿದರ್ಶನಗಳೂ ಇವೆ. ಈಗ  ಸೇತುವೆಯ ಅಟ್ಟಕೂಡ ಸೋರಲು ಆರಂಭವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಸತತ ಮೂರು ದಿನಗಳಿಂದ ಮಳೆ ಸುರಿಯಲಾರಂಭಿಸಿದೆ. ಅಂಡರ್‌ಪಾಸ್ ನಿರ್ಮಿಸುವ ವೇಳೆ ರಸ್ತೆಯ ತಳಭಾಗದಿಂದ ದಕ್ಷಿಣ ದಿಕ್ಕಿಗೆ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಗುಂಡ್ಲು ನದಿಗೆ ಮಳೆ ನೀರು ಹರಿದು ಹೋಗಲು ಅಳವಡಿಸಿರುವ ಪೈಪ್‌ಲೈನ್ ಕಾಮಗಾರಿ ಸಮರ್ಪಕವಾಗಿಲ್ಲ. ಮಾರ್ಗ ಮಧ್ಯೆ ಬಂಡೆಯೊಂದು ಅಡ್ಡ ವಿದ್ದು, ಇದನ್ನು ಸ್ಫೋಟಿಸದೇ ಅವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗಳಿಸಲಾಗಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿಯದೇ ರಸ್ತೆ ಕೆಸರಿನ ರಾಡಿಯಾಗುತ್ತಿದೆ.

ಕಾಮಗಾರಿ ನಡೆಸಿದ್ದೂ ರೈಲ್ವೆ ಹಣದಿಂದಲೇ ಆದರೂ ಅಂಡರ್ ಪಾಸ್ ಸೇರಿ, ಎಂ.ಜಿ.ಎಸ್ ರಸ್ತೆಯ ಮಾಲೀಕತ್ವ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹಾಗಾಗಿ ಸದರಿ ರಸ್ತೆಯ ಮುಂದಿನ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯೇ ನೋಡಿಕೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳು ಕೆಲ ವರ್ಷಗಳ ಹಿಂದೆ ಪತ್ರ ಬರೆದು ರವಾನಿಸಿದರು. ಆದರೆ, ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ನಂಜನಗೂಡು ಉಪ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿ ಆ ಪತ್ರ ಸ್ವೀಕರಿಸಿದ ಅಥವಾ ತಿರಸ್ಕರಿಸಿದ ಬಗ್ಗೆ ಉತ್ತರವನ್ನೇ ನೀಡಲಿಲ್ಲ.

ದೀರ್ಘ ಕಾಲ ಉತ್ತರ ನೀಡದಿದ್ದ ಮೇಲೆ ಅದನ್ನು ಒಪ್ಪಿಕೊಂಡಂತೆಯೇ ಎಂದು ರೈಲ್ವೆ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ. ಅಂದಿನ ಲೋಕೋಪಯೋಗಿ ಇಲಾಖೆ ಅಧಿಕಾರಿ ಸ್ಥಳ ಪರಿಶೀಲಿಸಿ `ಅಂಡರ್‌ಪಾಸ್' ರಸ್ತೆ ಮತ್ತು ಮಳೆ ನೀರು ಸಾಗಣೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಇಂಥ ಸ್ಥಿತಿಯಲ್ಲಿ ಇಲಾಖೆ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಉತ್ತರ ಬರೆದಿದ್ದರೆ ಆಗಿರುವ ಲೋಪವನ್ನು ರೈಲ್ವೆ ಇಲಾಖೆ ಸರಿಪಡಿಸಲೇ ಬೇಕಾಗುತ್ತಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು.

ಅಂಡರ್‌ಪಾಸ್ ರಸ್ತೆ ಮತ್ತು ಸೇತುವೆ ಕಳಪೆ ಕಾಮಗಾರಿಯ ಕುರಿತು `ಪ್ರಜಾವಾಣಿ' ಪತ್ರಿಕೆಯು ಅನೇಕ ಸಂದರ್ಭಗಳಲ್ಲಿ ವರದಿ ಪ್ರಕಟಿಸಿತ್ತು. ಇದರ ಪರಿಣಾಮವಾಗಿ ಈ ಭಾಗದ ಸಂಸದ ಆರ್.ಧ್ರುವನಾರಾಯಣ್ ಅವರು ಈ ಸೇತುವೆ ಮತ್ತು ರಸ್ತೆ  ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಯಾವುದೇ ಪ್ರಯೋಜನವಾಗಿಲ್ಲ. ಸಬಂಧಪಟ್ಟವರು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ವೈಜ್ಞಾನಿಕ ರೀತಿಯಲ್ಲಿ ಅಂಡರ್‌ಪಾಸ್ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT