ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದವಾಡಗಿ ರಾಜಕೀಯ ಅಸ್ತ್ರ ಆಗದಿರಲಿ

Last Updated 11 ಜನವರಿ 2012, 9:20 IST
ಅಕ್ಷರ ಗಾತ್ರ

ಲಿಂಗಸುಗೂರ: ಈ ಭಾಗದ ಬಹುದಿನಗಳ ಕನಸಾದ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲಿಸುತ್ತದೆ. ಆದರೆ, ಕಳೆದ ನಾಲ್ಕಾರು ವರ್ಷಗಳಿಂದ ಈ ಯೋಜನೆ ಹೆಸರು ಹೇಳಿಕೊಂಡು ಚುನಾವಣೆ ಪೂರ್ವದಲ್ಲಿ ಗಿಮಿಕ್ ಮಾಡುವ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಯತ್ನ ಸರಿ ಅಲ್ಲ. ನಂದವಾಡಗಿ ಯೋಜನೆ ರಾಜಕೀಯ ಅಸ್ತ್ರವಾಗದಿರಲಿ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಾಮಯ್ಯ ಮುರಾರಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಕಿ ಶಾಸಕ ಪ್ರತಾಪಗೌಡ ಮತ್ತು ಲಿಂಗಸುಗೂರ ಶಾಸಕ ಮಾನಪ್ಪ ವಜ್ಜಲ ವಿಧಾಸಭೆ ಅಧಿವೇಶನಗಳಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಪ್ರಶ್ನಿಸದೆ, ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ತಂತ್ರ ಬಳಸಿಕೊಂಡು ನಿಯೋಗದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಾಸ್ತವವಾಗಿ ಯೋಜನೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಲಿ ಎಂದು ನುಡಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಂದವಾಡಗಿ ಏತ ನೀರಾವರಿ ಯೋಜನೆ ಸೇರಿದಂತೆ ಈ ಭಾಗದ ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತ ಬಂದಿದೆ. ನೀರಿನ ಹಂಚಿಕೆ ಆದೇಶ ಹೊರಡಿಸಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕಿದೆ. ರಾಜಕೀಯ ತಂತ್ರಗಾರಿಕೆಗೆ ರೈತರನ್ನು ಬಳಸಿಕೊಂಡರೆ ಕಾಂಗ್ರೆಸ್ ಸಹಿಸದು. ತಾವು ನಿಯೋಗ ಕೊಂಡೊಯ್ಯುವುದಿಲ್ಲ. ಶೀಘ್ರದಲ್ಲಿಯೆ ರೈತರ ಸಾರಥ್ಯದಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಭೂಪನಗೌಡ ಕರಡಕಲ್ಲ, ಮುಖಂಡರಾದ ಗುಂಡಪ್ಪ ನಾಯಕ, ಚೆನ್ನಾರೆಡ್ಡಿ, ಹನುಮಂತ ಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT