ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕ್ರಿಮಿನಾಶಕ: ಅಂತರರಾಜ್ಯ ಮಾಫಿಯಾ ಶಂಕೆ

Last Updated 14 ಅಕ್ಟೋಬರ್ 2011, 5:20 IST
ಅಕ್ಷರ ಗಾತ್ರ

ವಿಜಾಪುರ: ನಕಲಿ ಕ್ರಿಮಿನಾಶಕ- ಪೌಷ್ಟಿಕಾಂಶ ತಯಾರಿಸಿ ರೈತರಿಗೆ ಪೂರೈಸುವ ಜಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ತಿಳಿದು ಇಡೀ ರೈತ ಸಮುದಾಯ ಬೆಚ್ಚಿ ಬಿದ್ದಿದೆ. ಈ ಅಂತರರಾಜ್ಯ ವ್ಯವಹಾರದಲ್ಲಿ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿರುವ ಶಂಕೆಯೂ ಬಲವಾಗಿದೆ.

ವಿಜಾಪುರದ ಮಹಾಲಬಾಗಾಯತ್ ಕೈಗಾರಿಕಾ ಪ್ರದೇಶದಲ್ಲಿರುವ ಆ ಚಿಕ್ಕ ಗೋದಾಮಿನಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಕ್ರಿಮಿನಾಶಕ ಪತ್ತೆಯಾಗಿದೆ. ನೀರಿನ ದೊಡ್ಡ ಕ್ಯಾನ್‌ಗಳು, ಬ್ಯಾರಲ್‌ಗಳು, ಬಣ್ಣ, ರಸಾಯನ ತುಂಬಿದ್ದ ಮೂಟೆ, ನಕಲಿ ಕ್ರಿಮಿನಾಶಕ ತುಂಬುವ ಖಾಲಿ ಬಾಟಲ್‌ಗಳು, ದೇಶ- ವಿದೇಶದ ಪ್ರಸಿದ್ಧ ಕಂಪೆನಿಗಳ ನಕಲಿ ಲೇಬಲ್‌ಗಳು... ಹೀಗೆ ಆ ಗೋದಾಮಿನಲ್ಲಿ ಏನೆಲ್ಲವೂ ಪತ್ತೆಯಾಗಿದೆ!

`ನಕಲಿ ಕ್ರಿಮಿನಾಶಕ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಬುಧವಾರ ಸಂಜೆ ಈ ಗೋದಾಮಿನ ಮೇಲೆ ದಾಳಿ ನಡೆಸಿದ್ದೇವೆ. ಪೊಲೀಸರ ಸಹಕಾರದಿಂದ ಗೋದಾಮು ಸೀಜ್ ಮಾಡಿದ್ದು, ಗುರುವಾರವೂ ತಪಾಸಣೆ ಮುಂದುವರೆಸಲಾಯಿತು~ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಸಿ. ಭೈರಪ್ಪ ಹೇಳಿದರು.

`ಕೃಷಿ ಇಲಾಖೆಯವರು ಬುಧವಾರ ಸಂಜೆ 5 ಗಂಟೆಗೇ ದಾಳಿ ನಡೆಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದು ರಾತ್ರಿ 10ಕ್ಕೆ. ಅದೂ ಆ ಗೋದಾಮು ಕಾಯಲಿಕ್ಕೆ. ಇಲ್ಲಿ ತಯಾರಿಸಲಾಗಿರುವ ನಕಲಿ ಉತ್ಪನ್ನವನ್ನು ಜಿಲ್ಲೆಯ ನಿರ್ದಿಷ್ಟ ಅಂಗಡಿಗಳ ಮೂಲಕವೇ ರೈತರಿಗೆ ಮಾರಾಟ ಮಾಡಿರಬಹುದಾಗಿದೆ.
 
ಬುಧವಾರ ಸಂಜೆಯೇ ಎಲ್ಲ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರೆ ಈ ಮಾಫಿಯಾ ಬಲಿ ಬೀಳುತ್ತಿತ್ತು~ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹಳಹಳಿಸುತ್ತಿದ್ದರು. ಬೇರೆಯವರ ಈ ಗೋದಾಮನ್ನು ಆರೋಪಿ ಬಾಡಿಗೆ ಪಡೆದು ಈ ಕೃತ್ಯವೆಸಗುತ್ತಿಲ್ಲ. ಆರೋಪಿಯ  ಮೊಬೈಲ್ ಸಂಖ್ಯೆ ದೊರೆತಿದ್ದು, ಅದು ಸ್ವಿಚ್ ಆಫ್ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರು.

`ಈ ಗೋದಾಮಿನಲ್ಲಿ ಪತ್ತೆಯಾದ `ನಿಸರ್ಗ ಅಗ್ರೋ ಸೈನ್ಸ್‌ಸ್~ ಹೆಸರಿನ ಡೆಲಿವರಿ ಚಲನ್ ಬುಕ್‌ನಲ್ಲಿ ವಿಳಾಸ, ದೂರವಾಣಿ ಸಂಖ್ಯೆ, ಮೊಬೈಲ್ ಸಂಖ್ಯೆ ಸಹ ನಮೂದು ಇತ್ತು. ಆ ವಿಳಾಸ ಆಧರಿಸಿ ಕ್ರಮ ಕೈಗೊಳ್ಳುವ ಯತ್ನವೂ ನಡೆಯಲಿಲ್ಲ.

ಪೊಲೀಸ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿದ್ದರೆ ಆರೋಪಿಯನ್ನು ಬಂಧಿಸಬಹುದಾಗಿತ್ತು~ ಎಂದು ಈ ನಕಲಿ ಘಟಕ ನೋಡಲು ಬಂದಿದ್ದ ರೈತರು ದೂರಿದರು.

`ಈ ಗೋದಾಮು ಅತ್ಯಂತ ಚಿಕ್ಕದಾಗಿದೆ. ಇಲ್ಲಿ ಬಾಟ್ಲಿಂಗ್-ಮಿಶ್ರಣ ಮಾಡಲು ಅಷ್ಟೊಂದು ಸ್ಥಳಾವಕಾಶ ಇಲ್ಲ. ಈ ಎಲ್ಲ ಅಕ್ರಮ ಚಟುವಟಿಕೆ ಬೇರೆ ಕಡೆಯೂ ನಡೆಯುತ್ತಿರಬಹುದು.

ಈ ಗೋದಾಮು ಅದರ ಒಂದು ಭಾಗವಾಗಿರಬಹುದು. ಈತ ನೇರವಾಗಿ ರೈತರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ವಿತರಕರ ಮೂಲಕವೇ ಮಾರಾಟ ಮಾಡುತ್ತಿರುವ ಸಾಧ್ಯತೆ ಇದೆ. ಇದರ ಹಿಂದೆ ದೊಡ್ಡ ದುಷ್ಟಕೂಟವೇ ಇರಬಹುದು~ ಎಂದು ಆ ರೈತರು ಹೇಳುತ್ತಿದ್ದರು.

`ವಿಜಾಪುರ ಜಿಲ್ಲೆಯಲ್ಲಿ 280ಕ್ಕೂ ಹೆಚ್ಚು ರಸಗೊಬ್ಬರ ಮಾರಾಟಗಾರರು ಇದ್ದು, ಶಂಕಿತ ಅಂಗಡಿಗಳಲ್ಲಿಯ ಉತ್ಪನ್ನಗಳನ್ನಾದರೂ ಬುಧವಾರವೇ ತಪಾಸಣೆ ನಡೆಸಬೇಕಿತ್ತು. ಇನ್ನು ದಾಳಿ ನಡೆಸಿಯೂ ಪ್ರಯೋಜವಿಲ್ಲ. ನಕಲಿ ಉತ್ಪನ್ನ ಮಾರುವವರಿದ್ದರೂ ಅವರು ಆ ಉತ್ಪನ್ನವನ್ನು ಬೇರೆಡೆ ಸಾಗಿಸಿಬಿಟ್ಟಿರುತ್ತಾರೆ~ ಎಂದು ಅಲ್ಲಿದ್ದ ಸಿಬ್ಬಂದಿಯೊಬ್ಬರು ಹೇಳುತ್ತಿದ್ದರು.

ಅನ್ನದಾತನ ಜೀವಕ್ಕೇ ಕನ್ನ
ಇದು ಅನ್ನದಾತನ ಅನ್ನಕ್ಕಷ್ಟೇ ಅಲ್ಲ; ಆತನ ಜೀವಕ್ಕೇ ಕನ್ನ ಹಾಕುವ ಕೆಲಸ. ಸಾವಿರಾರು ರೂಪಾಯಿ ಬೆಲೆ ತೆತ್ತು ಖರೀದಿಸಿ ತಂದ ಔಷಧಿ ಯಾವುದೇ ಫಲ ನೀಡಿಲ್ಲ.

ಇತ್ತ ಇಳುವರಿಯೂ ಬರುತ್ತಿಲ್ಲ. ಇದಕ್ಕೆ ಈ ನಕಲಿ ಔಷಧಿಯ ಬಳಕೆಯೇ ಕಾರಣ ಇರಬಹುದೇ? ನಾವು ಹೆಚ್ಚಾಗಿ ನಂಬಿರುವವರು, ಉದ್ರಿ ನೀಡಿ ಉಪಕರಿಸುವವರೇ ನಮಗೆ ಈ ರೀತಿ ಮೋಸ ಮಾಡುತ್ತಿರಬಹುದೇ? ಎಂಬುದು ರೈತರ ಆತಂಕ.

ವಿಜಾಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಒಂದು ಎಕರೆ ದ್ರಾಕ್ಷಿಗೆ ಒಂದು ಬೆಳೆಗೆ ಕನಿಷ್ಠ 40 ಸಾವಿರ ರೂಪಾಯಿವರೆಗೂ ಕ್ರಿಮಿನಾಶಕಕ್ಕೆ ರೈತರು ಖರ್ಚು ಮಾಡುತ್ತಾರೆ.   ತೊಗರಿ ಬೆಳೆಗೆ ಎಕರೆಗೆ 10 ಸಾವಿರ ಖರ್ಚಾಗುತ್ತದೆ. ತರಕಾರಿಯಿಂದ ಹಿಡಿದು ಎಲ್ಲ ಬೆಳೆಗಳಿಗೂ ರೈತರು ರಸಗೊಬ್ಬರ- ಕ್ರಿಮಿನಾಶಕ-ಪೌಷ್ಟ್ಠಿಕಾಂಶ ಬಳಸುವುದು ಸಾಮಾನ್ಯ.

`ಕ್ರಿಮಿನಾಶಕ-ಪೌಷ್ಟಿಕಾಂಶದ ಒಂದು ಲೀಟರ್ ಬಾಟಲ್‌ಗೆ 1 ಸಾವಿರದಿಂದ 5 ಸಾವಿರ ರೂಪಾಯಿಯವರೆಗೂ ದರವಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡುತ್ತೇವೆ. ಬೀಜ- ಗೊಬ್ಬರ ನಕಲಿ ಆಯಿತು. ಈಗ ಕ್ರಿಮಿನಾಶಕವೂ ನಕಲಿಯಾದರೆ ಇನ್ನು ಕೃಷಿ ಚಟುವಟಿಕೆ ಕೈಗೊಂಡು ಬದುಕುವುದಾದರೂ ಹೇಗೆ?~ ಎಂಬ ರೈತರೊಬ್ಬರ ಪ್ರಶ್ನೆಗೆ ಉತ್ತರಿಸುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT