ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯರ ಆಸ್ಪತ್ರೆ ಮೇಲೆ ದಾಳಿ

Last Updated 20 ಡಿಸೆಂಬರ್ 2013, 6:00 IST
ಅಕ್ಷರ ಗಾತ್ರ

ಅಕ್ಕಿಆಲೂರ: ಅರ್ಹತೆ ಇರದಿದ್ದರೂ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಇಲ್ಲಿಯ ಉದಯಕುಮಾರ ಸಂಗಪ್ಪ ಹಿರೇಮಠ ಎಂಬವರ ಹಳೂರು ಓಣಿಯಲ್ಲಿನ ಆಸ್ಪತ್ರೆಯ ಮೇಲೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಗುರುವಾರ ಮುಂಜಾನೆ ಜಂಟಿಯಾಗಿ ದಾಳಿ ನಡೆಸಿದರು.

ಆಸ್ಪತ್ರೆಯ ಪರಿಶೀಲನೆ ಕೈಗೊಂಡ ಅಧಿಕಾರಿಗಳು ವೈದ್ಯಕೀಯ ಪ್ರಮಾಣ ಪತ್ರಗಳಿಗಾಗಿ ತಡಕಾಡಿದರೂ ಸಹ ಪತ್ತೆಯಾಗಲಿಲ್ಲ. ಈ ವೇಳೆ ವೈದ್ಯಕೀಯ ವೃತ್ತಿಗೆ ಬಳಕೆ ಮಾಡುತ್ತಿದ್ದ ಸಾಮಗ್ರಿ ಮತ್ತು ಔಷಧಗಳನ್ನು ವಶಪಡಿಸಿಕೊಳ್ಳಲಾಯಿತು.

ಆರೋಗ್ಯ ಇಲಾಖೆಯ ಮೂಲಕ ವಿತರಿಸ ಲಾಗಿರುವ ಔಷಧಿಗಳು ಸ್ಥಳದಲ್ಲಿ ದೊರೆತಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹುಬ್ಬೇರಿ ಸುವಂತೆ ಮಾಡಿತು. ದಾಳಿ ನಡೆದ ಸಂದರ್ಭದಲ್ಲಿ ಉದಯಕುಮಾರ ಹಿರೇಮಠ ಸ್ಥಳದಲ್ಲಿರಲಿಲ್ಲ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಾರುತಿ ಚಿಕ್ಕಣ್ಣನವರ, ಅರ್ಹತೆ ಹೊಂದಿಲ್ಲದೇ ಇದ್ದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ನಕಲಿ ವೈದ್ಯರಿಗೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿದೆ. ಆದರೂ ವೃತ್ತಿ ಮುಂದುವರೆಸಿರುವ ನಕಲಿ ವೈದ್ಯರ ಮೇಲೆ ಸಾರ್ವಜನಿಕ ದೂರು ಆಧರಿಸಿ ಮತ್ತು ಸರ್ಕಾರದ ಆದೇಶದ ಪ್ರಕಾರ ದಾಳಿ ನಡೆಸಲಾಗಿದೆ.

ತಕ್ಷಣವೇ ವೃತ್ತಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ಎದುರು ನಕಲಿ ವೈದ್ಯರು ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿ ವೃತ್ತಿಯಲ್ಲಿ ಮುಂದುವರೆದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಹಾನಗಲ್‌ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಗೊಡ್ಡೆಮ್ಮಿ, ಆಹಾರ ಸುರಕ್ಷತಾ ಅಧಿಕಾರಿ ಆರ್.ಪಿ.ಮಡಿವಾಳರ, ಡಾ.ಎಸ್. ಆರ್.ಕಿತ್ತೂರಮಠ, ಡಾ.ಆನಂದ ನಾಯ್ಕ, ಡಾ.ಬಸವರಾಜ್ ಹುಲಿಕಟ್ಟಿ, ಕ್ರೈಂ ಪಿ.ಎಸ್.ಐ. ಎಸ್.ಆರ್.ಬಡಿಗೇರ, ಬ್ಲಾಕ್ ಯೋಜನಾ ಅಧಿಕಾರಿ ಬಸವರಾಜ್ ಹಾದಿಮನಿ ಸೇರಿದಂತೆ ಇತರರು ಈ ವೇಳೆ ಪಾಲ್ಗೊಂಡಿದ್ದರು.

ಹಾನಗಲ್‌ನಲ್ಲಿಯೂ ದಾಳಿ
ಹಾನಗಲ್‌:
ಅನಧಿಕೃತವಾಗಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದ ಹಾನಗಲ್‌ ಮತ್ತು ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.

ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ  ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದೆ ಅಧಿಕಾರಿ ಡಾ.ಮಾರುತಿ ಚಿಕ್ಕಣ್ಣನವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳ ತಂಡ, ಪೋಲಿಸ್‌ ಇಲಾಖೆಯ ಸಹಯೋಗದಲ್ಲಿ  ಕಾರ್ಯಾಚರಣೆಗೆ ಇಳಿದಿದ್ದರು.

ಹಾನಗಲ್‌ ಪಟ್ಟಣದಲ್ಲಿನ 4 ವೈದ್ಯರ ದವಾಖಾನೆ ಮೇಲೆ ದಾಳಿ ನಡೆಸಿದರು. ಹಾನಗಲ್‌ನ ಸಹನಾ ಕ್ಲಿನಿಕ್‌, ಕುಂದಗೋಳ ದವಾಖಾನೆ, ಹಲ್ಲಿನ ದವಾಖಾನೆ, ಮೂಲವ್ಯಾಧಿ ದವಾಖಾನೆಗಳು ಮತ್ತು ಬಮ್ಮನಹಳ್ಳಿಯ ಮೊಹ್ಮದ್‌ಶರೀಫ್‌  ನೂರಕೇಲಿ ಎಂಬ ನಕಲಿ ವೈದ್ಯರ ಕ್ಲಿನಿಕ್‌ ಮೇಲೆ ದಾಳಿ ನಡೆಸಿ ವೃತ್ತಿ ಪರವಾನಗಿ  ಮತ್ತು ವೈದ್ಯಕೀಯ ಶಿಕ್ಷಣದ ದಾಖಲಾತಿಗಳನ್ನು ಪರಿಶೀಲಿಸಿದರು. ಸಮರ್ಪಕ ದಾಖಲಾತಿಗಳು ಇಲ್ಲದ ಕಾರಣ ನೋಟಿಸ್‌ ನೀಡಿದರು. ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸುವ ಕುರಿತು ಸುದ್ದಿಗಾರರಿಗೆ ವಿವರಣೆ ನೀಡಿದರು.

ವೈದ್ಯರ ತಂಡ ದಾಳಿ ನಡೆಸುವ ಸೂಚನೆ ಅರಿತ ವೃತ್ತಿ ಪರವಾನಿಗೆ ಇಲ್ಲದ ಬಹಳಷ್ಟು ವೈದ್ಯಕೀಯ ವೃತ್ತಿಯವರು ಕ್ಲಿನಿಕ್‌ ಬಂದ್‌ ಮಾಡಿದ್ದರಿಂದ  ದಾಳಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಈ ದಾಳಿ ಒಂದೇ ದಿನಕ್ಕೆ ಸೀಮಿತವಲ್ಲ, ನಿರಂತರವಾಗಿ ನಡೆಯುತ್ತದೆ ಎಂಬ ಎಚ್ಚರಿಕೆಯನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜೇಂದ್ರ ಗೊಡ್ಡೆಮ್ಮಿ ನೀಡಿದ್ದಾರೆ.

ತಾಲ್ಲೂಕು ಆಯುಷ್‌ ವೈದ್ಯಾಧಿಕಾರಿ ಡಾ.ಆನಂದ ನಾಯ್ಕ, ಹಾವೇರಿಯ ಆಹಾರ ಸುರಕ್ಷಿತಾ ಅಧಿಕಾರಿ ಆರ್‌.ವಿ.ಮುದಿಗೌಡರ, ಕಾರ್ಯಕ್ರಮ ಅಧಿಕಾರಿ ಬಸವರಾಜ ಹಾದಿಮನಿ, ಖಾಸಗಿ ವೈದ್ಯರಾದ ಎಸ್‌.ಆರ್‌.ಕಿತ್ತೂರಮಠ, ಬಸವರಾಜ ಹುಲಿಕಟ್ಟಿ ಮತ್ತು ಪಿಎಸ್‌ಐ ಸಿದ್ಧಾರೂಢ ಬಡಿಗೇರ ಅವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT