ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸಹಿ: 55 ಲಕ್ಷಕ್ಕೂ ಹೆಚ್ಚು ಬೆಲೆಯ ಉಪಕರಣ ಖರೀದಿ!

Last Updated 17 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹಾಸನ: ಹಾಸನ ವೈದ್ಯಕೀಯ ಕಾಲೇಜಿನಲ್ಲಿ ನಿರ್ದೇಶಕ ಡಾ.ಎಚ್.ಆರ್. ಪ್ರಸಾದ್ ಅವರ ನಕಲಿ ಸಹಿ ಮಾಡಿ ರೂ. 55 ಲಕ್ಷಕ್ಕೂ ಹೆಚ್ಚು ಬೆಲೆಯ ಪ್ರಯೋಗಾಲಯ ಉಪಕರಣಗಳನ್ನು ಖರೀದಿ ಮಾಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಡಾ. ಪ್ರಸಾದ್ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿವರ: ಗುರುವಾರ ಬೆಳಿಗ್ಗೆ ಕಾಲೇಜಿಗೆ ಆಟೊವೊಂದರಲ್ಲಿ ಲ್ಯಾಬ್‌ಗಳಲ್ಲಿ ಬಳಸುವ ‘ಎಚ್‌ಪಿಟಿಸಿಎಲ್ ಯಂತ್ರ’ (ಕ್ರೊಮೊಟೋಗ್ರಾಫ್ ಯಂತ್ರ) ಹಾಗೂ ಅದಕ್ಕೆ ಸಂಬಂಧಿಸಿದ ಬಿಡಿಭಾಗಗಳನ್ನು ತರಲಾಗಿತ್ತು. ಮುಂಬೈ ಮೂಲದ ಎಂ ಆ್ಯಂಡ್ ಪಿ ಕ್ಲಿಯರಿಂಗ್ ಆ್ಯಂಡ್ ಫಾರ್ವರ್ಡಿಂಗ್ ಏಜನ್ಸೀಸ್ ಪ್ರೈ.ಲಿ. ಸಂಸ್ಥೆಯವರು ಇದನ್ನು ಕಳುಹಿಸಿಕೊಟ್ಟಿದ್ದರು. ಮುಂಬೈನಿಂದ ಇದನ್ನು ತಂದಿರುವ ಆಟೊದವರು ಬೆಳಿಗ್ಗೆ ಪ್ರಾಚಾರ್ಯರನ್ನು ಸಂಪರ್ಕಿಸಿ ಯಂತ್ರ ತಂದಿರುವುದಾಗಿ ಮಾಹಿತಿ ನೀಡಿದರು. ಪ್ರಾಚಾರ್ಯರು ‘ನಾವು ಅಂಥ ಯಂತ್ರಕ್ಕೆ ಬೇಡಿಕೆ ಸಲ್ಲಿಸಿಲ್ಲ’ ಎಂದು ತಿಳಿಸಿದರು.

ಆದರೆ ಅವರಲ್ಲಿ ಕಾಲೇಜಿನಿಂದ ಕಳುಹಿಸಿದ್ದ ಆದೇಶಪತ್ರ ಇತ್ತು. ನೋಡಿದರೆ ಪತ್ರದಲ್ಲಿ ಪ್ರಸಾದ್ ಅವರ ಸಹಿಯೂ ಇತ್ತು. ತನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂಬುದನ್ನು  ಅರಿತ ಪ್ರಾಚಾರ್ಯರು ಕೂಡಲೇ ಪೊಲೀಸರಿಗೆ ಈ ಮಾಹಿತಿ ನೀಡಿದರು.

ಸ್ವಿಜರ್‌ಲೆಂಡ್‌ನ Camag Ag ಎಂಬ ಸಂಸ್ಥೆಯಿಂದ 2010ರ ಡಿ.16ರಂದು ಈ ಯಂತ್ರವನ್ನು ಮುಂಬೈಗೆ ಆಮದು ಮಾಡಿಕೊಳ್ಳಲಾಗಿತ್ತು. ಈ ಯಂತ್ರದ ಒಟ್ಟಾರೆ ಬೆಲೆ 55,46,718 ರೂಪಾಯಿಯಾಗಿದ್ದು, ಆಮದು ಮಾಡಿರುವ ಸಂಸ್ಥೆಯವರು ಅಲ್ಲಿಂದ ಗೂಡ್ಸ್ ಆಟೊದಲ್ಲಿ ಅದನ್ನು ಹಾಸನಕ್ಕೆ ಕಳುಹಿಸಿ ಕೊಟ್ಟಿದ್ದರು.

ವಿಷಯ ತಿಳಿಯುತ್ತಿದ್ದಂತೆ ಕಾಲೇಜಿಗೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡು ಮುಂಬೈನಿಂದ ಬಂದಿರುವ ಆಟೊ ಹಾಗೂ ಉಪಕರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆಟೊದಲ್ಲಿ ಬಂದಿದ್ದ ಗೋಟಿಯಾ ಹಾಗೂ ಮುಖೇಶ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿದೇಶದಿಂದ ಯಂತ್ರವನ್ನು ಆಮದು ಮಾಡಿ ಕಳುಹಿಸಿರುವ ಮುಂಬೈ ಮೂಲದ ಸಂಸ್ಥೆ ಸರ್ಕಾರಿ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ವೈದ್ಯಕೀಯ ಕಾಲೇಜಿಗೆ ಇಂಥ ಯಂತ್ರ ಖರೀದಿ ಮಾಡುವಾಗ ಆಮದು ಸುಂಕವನ್ನು ಪೂರ್ಣ ಮನ್ನಾ ಮಾಡಲಾಗುತ್ತದೆ. ಸುಂಕ ಉಳಿಸುವ ಸಲುವಾಗಿ ಯಾರೋ ಇಂಥ ಕೃತ್ಯ ಎಸಗಿರಬಹುದು ಎಂದು ಪ್ರಸಾದ್ ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT