ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಹಣವೂ ಅಸಲಿ ಬಣ್ಣವೂ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕ್ರಿ.ಶ.1162. ‘ಸಾಂಗ್’ ಎಂಬ ಇಂಗ್ಲಿಷ್ ಪ್ರಾಂತ್ಯದಲ್ಲಿ ಗಾವೋಜೊಂಗ್ ಎಂಬ ರಾಜನು ಒಬ್ಬ ಕಲಾವಿದನಿಗೆ ಮರಣದಂಡನೆ ವಿಧಿಸಿದ. ಆ ಕಲಾವಿದನು ಅಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳನ್ನೇ ಹೋಲುವ ನಕಲಿ ನಾಣ್ಯಗಳನ್ನು ಸೃಷ್ಟಿಸಿದ್ದ. ಆ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆಗೂ ಬಿಟ್ಟು, ತನ್ನ ಪರಾಕ್ರಮವನ್ನು ಆಪ್ತರಲ್ಲಿ ಹೇಳಿಕೊಂಡಿದ್ದ. ಅದು ಹೇಗೋ ರಾಜನನ್ನು ತಲುಪಿ, ಕಲಾವಿದನ ಸಾವಿನಲ್ಲಿ ಪ್ರಕರಣ ಮುಗಿದಿತ್ತು.

ಇಂಗ್ಲೆಂಡ್‌ನ ಥಾಮಸ್ ರೋಜರ್ಸ್‌- ಆ್ಯನೆ ದಂಪತಿ ಬರೀ 40 ನಕಲಿ ಬೆಳ್ಳಿನಾಣ್ಯಗಳನ್ನು ಟಂಕಿಸಿದ ಕಾರಣಕ್ಕೆ ಸಿಕ್ಕಿಬಿದ್ದ ಘಟನೆ ನಡೆದದ್ದು 1690ರಲ್ಲಿ. ಸಾರ್ವಜನಿಕರ ಸಮ್ಮುಖದಲ್ಲಿ ಥಾಮಸ್‌ಗೆ ಗಲ್ಲುಶಿಕ್ಷೆಯಾಯಿತು. ಆ್ಯನೆಯನ್ನು ಬೆಂಕಿಹಚ್ಚಿ ಜನರ ಸಮ್ಮುಖದಲ್ಲೇ ಸುಟ್ಟರು.
ಪ್ರಾಚೀನ ನಾಣ್ಯಗಳ ಕಾಲದಲ್ಲೇ ‘ನಕಲಿ’ಶಾಮರಿಗೆ ಮರಣದಂಡನೆಯಾಗುತ್ತಿತ್ತು ಎಂಬುದೇ ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಇತರೆ ಸಾಮಾಜಿಕ ಅಪರಾಧಗಳಿಗೂ ಮೀರಿದ ಶಿಕ್ಷೆಯನ್ನು ನಕಲಿ ನಾಣ್ಯ ಟಂಕಿಸುವ ಮಂದಿಗೆ ನೀಡಲು ಕಾರಣ- ಅದರಿಂದ ಇಡೀ ಸಾಮ್ರಾಜ್ಯದ ಮೇಲಾಗುತ್ತಿದ್ದ ಕೆಟ್ಟ ಪರಿಣಾಮ. ಬೆಂಜಮಿನ್ ಫ್ರಾಂಕ್ಲಿನ್ ಮುದ್ರಿಸಿದ ಅನೇಕ ವಿನ್ಯಾಸದ ನೋಟುಗಳ ಮೇಲೆ ‘ನಕಲು ಮಾಡಿದರೆ ಮರಣದಂಡನೆ’ ಎಂಬ ಬರಹ ಸಾಮಾನ್ಯವೆಂಬಂತೆ ಇರುತ್ತಿತ್ತು.

ನಾಣ್ಯ, ನೋಟುಗಳ ಈ ಹಳೆಕಥೆಗಳನ್ನು ನೆನಪಿಸಿಕೊಳ್ಳಲು ಕಾರಣ- ಪಾಕಿಸ್ತಾನದಿಂದ ಮುದ್ರಿತಗೊಂಡಿದೆ ಎಂಬ ಶಂಕೆಯಿರುವ ನಕಲಿ ನೋಟುಗಳು ಥಾಯ್ಲೆಂಡ್, ಬಾಂಗ್ಲಾದೇಶ, ನೇಪಾಳ ದೇಶಗಳನ್ನು ಹಾದು ಭಾರತಕ್ಕೂ ಪ್ರವೇಶಿಸಿವೆ ಎಂದು ಜಾಗತಿಕ ಹಣಕಾಸು ಸಮಗ್ರತಾ ಅಧ್ಯಯನ ತಂಡ ವಾಷಿಂಗ್ಟನ್‌ನಲ್ಲಿ ಶಂಕಿಸಿರುವ ಸುದ್ದಿ. ಕಳೆದ ವರ್ಷ ಭಾರತದಲ್ಲಿ 10 ಸಾವಿರ ಕೋಟಿಯಷ್ಟು ನಕಲಿ ನೋಟುಗಳು ಚಲಾವಣೆಗೊಂಡಿವೆ ಎಂಬ ಆತಂಕವನ್ನೂ ತಂಡ ವ್ಯಕ್ತಪಡಿಸಿದೆ.

ಅಸಲಿಯಷ್ಟೇ ಹಳತು: ಗ್ರೀಕ್ ನಗರಿ ಲಿಡಿಯಾದಲ್ಲಿ ನಾಣ್ಯಗಳ ಚಲಾವಣೆ ಶುರುವಾದದ್ದು ಕ್ರಿ.ಪೂ.600ರಲ್ಲಿ. ಜಗತ್ತಿನಲ್ಲೇ ವ್ಯವಹಾರಕ್ಕೆ ಹಣದ ಕಿಮ್ಮತ್ತು ಮೊದಲು ಬಂದದ್ದು ಆಗಲೇ. ಚಿನ್ನ ಅಥವಾ ಬೆಳ್ಳಿಯ ಲೇಪವಿರುವ ಲೋಹದ ನಾಣ್ಯಗಳನ್ನು ಆಗ ಟಂಕಿಸಿದ್ದರು. ಅದಕ್ಕೂ ಮೊದಲು ಜನ ತಮ್ಮ ಬೆಳೆಗಳ ವಿನಿಮಯದಿಂದಲೇ ಬದುಕು ಕಂಡುಕೊಂಡಿದ್ದರು. ಕೊಡು-ಕೊಳ್ಳುವ ಭಾವನಾತ್ಮಕ ಸಂಬಂಧಕ್ಕೆ ವ್ಯಾವಹಾರಿಕ ಚೌಕಟ್ಟು ಯಾವಾಗ ಲಭ್ಯವಾಯಿತೋ, ನಾಣ್ಯಗಳನ್ನು ಟಂಕಿಸುವುದು ರಾಜರಿಗೆ ಪ್ರತಿಷ್ಠೆಯ ಸಂಕೇತವಾಯಿತೋ ಆಗ ಶುರುವಾದದ್ದೇ ಹಣಕಾಸಿನ ವಹಿವಾಟು. ಧಾನ್ಯ, ಸಾಮಾನು-ಸರಂಜಾಮಿನ ವಿನಿಮಯಕ್ಕೂ ದುಬಾರಿ ಬೆಲೆಯ ಲೋಹಗಳ ವಿನಿಮಯಕ್ಕೂ ಸಹಜವಾಗಿಯೇ ದೊಡ್ಡ ವ್ಯತ್ಯಾಸವಿದೆ.

ಹೆಚ್ಚು ಧಾನ್ಯ ಬೆಳೆದವನು ಶ್ರೀಮಂತ ಎನ್ನಿಸಿಕೊಳ್ಳುವಲ್ಲಿ ಅವನ ಶ್ರಮಜೀವನ ಎದ್ದುಕಾಣುತ್ತಿತ್ತು. ಆದರೆ, ವ್ಯವಹಾರದ ಬೇಲಿ ಹಾಕಿದ ಮೇಲೆ ಶ್ರಮಿಕವರ್ಗಕ್ಕೆ ಹೊರತಾದವರ ಥೈಲಿಗಳನ್ನು ನಾಣ್ಯಗಳು ತುಂಬಿದವು. ಶ್ರಮಜೀವನಕ್ಕೂ ಮಿಗಿಲಾಗಿ ಚಾಲಾಕಿತನ ತೋರಿದ ಕೆಲವರು ಹಣಕಾಸಿನ ಒಡೆಯರಾಗಿಬಿಟ್ಟರು. ರಾಜ ಮಹಾರಾಜರಂತೂ ಟಂಕಿಸಿದ ನಾಣ್ಯಗಳ ಸಿಂಹಪಾಲನ್ನು ಇಟ್ಟುಕೊಂಡು ಸುಖಿಸಿದರು. ಇದನ್ನೆಲ್ಲಾ ಗಮನಿಸುತ್ತಿದ್ದ ಸೃಜನಶೀಲ ವರ್ಗವೊಂದು ಕಣ್ಣಿಗೆ ಕಂಡ ಅಸಮಾನತೆಯನ್ನು ನೀಗಿಕೊಳ್ಳಲೋ ಅಥವಾ ರಾಜರ ಪ್ರತಿಷ್ಠೆಗೆ ಮಸಿ ಬಳಿಯಲೆಂದೋ ನಕಲಿ ನಾಣ್ಯಗಳನ್ನು ಟಂಕಿಸತೊಡಗಿತು.
 
ಆ ವರ್ಗ ರಾಜನ ವಿರೋಧಿ ಪಾಳಯದ್ದಾಗಿರಬಹುದು ಅಥವಾ ಸ್ಥಳೀಯ ವ್ಯವಸ್ಥೆಯಿಂದ ಬೇಸತ್ತ ಗುಂಪೂ ಆಗಿದ್ದಿರಬಹುದು. ಗುಂಪು ಯಾವುದೇ ಆದರೂ ನಕಲಿ ನಾಣ್ಯಗಳಿಂದ ಸಾಮ್ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯಂತೂ ತಲೆದೋರುತ್ತಿತ್ತು. ನಕಲಿ-ಅಸಲಿಗಳ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವಷ್ಟರಲ್ಲೇ ಅಗತ್ಯಕ್ಕಿಂತ ಹೆಚ್ಚು ಹಣ ಮಾರುಕಟ್ಟೆಯಲ್ಲಿ ಓಡಾಡಿದರೆ ಹೇಗಾಗಬೇಡ. ಉದಾಹರಣೆಗೆ ಹೇಳುವುದಾದರೆ, ಹತ್ತು ಜನ ಪ್ರತಿನಿತ್ಯ ಎರಡು ಕೆ.ಜಿ. ಅಕ್ಕಿಯಿಂದ ಮಾಡಿದ ಅನ್ನ ಉಣ್ಣುತ್ತಾರೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಅಷ್ಟೂ ಜನರಿಗೆ 10 ಕೆ.ಜಿ. ಅಕ್ಕಿ ಬೇಯಿಸಿ ಬಡಿಸಿದರೆ? ಆಗುವುದು ಅಜೀರ್ಣ. ಹಣಕಾಸಿನ ವಹಿವಾಟಿಗೂ ಇದನ್ನೇ ಅನ್ವಯಿಸಬಹುದು.

ಇಂಗ್ಲೆಂಡ್‌ನಲ್ಲಿ ‘ಕಾಯಿನ್‌ಗಳ ಸರದಾರ’ ಎಂದೇ ಖ್ಯಾತನಾಗಿದ್ದ ಡೇವಿಡ್ ಹಾರ್ಟ್ಲಿ ಎಂಬುವನನ್ನು ಗಲ್ಲಿಗೇರಿಸಿದಾಗ ಇಸವಿ 1770. ಅಗತ್ಯಕ್ಕಿಂತ ಹೆಚ್ಚು ಹಣಕಾಸು ಚಲಾವಣೆಗೊಂಡರೆ ಸಮಾಜದಲ್ಲಿ ‘ಆರ್ಥಿಕ ಅಜೀರ್ಣ’ವಾಗುತ್ತದೆಂಬ ಸರಳವಾದ ಸತ್ಯ ಎಲ್ಲಾ ರಾಜರಿಗೂ ಗೊತ್ತಿತ್ತು. ಅದನ್ನೇ ಎದುರಾಳಿ ರಾಜರನ್ನು  ಅಸ್ಥಿರಗೊಳಿಸಲು ಅಸ್ತ್ರವಾಗಿ ಕೆಲವು ರಾಜರು ಬಳಸಿದ ಉದಾಹರಣೆಗಳು ಇತಿಹಾಸದ ಪುಟದಲ್ಲಿವೆ. ‘ಚಿನ್ನವನ್ನು ಸೇರುಗಳಲ್ಲಿ ಅಳೆಯುತ್ತಿದ್ದ ಕೃಷ್ಣದೇವರಾಯನ ಕಾಲ’ ಎಂಬುದನ್ನು ನಾವು  ಈಗ ‘ಆರ್ಥಿಕ ಅಜೀರ್ಣ’ದ ದೃಷ್ಟಿಯಿಂದ ನೋಡಬೇಕಾಗಿದೆ. ಹಾಗೆ ಸೇರಿನಲ್ಲಿ ಅಳೆಯುತ್ತಿದ್ದ ಚಿನ್ನದಲ್ಲಿ ಖೊಟ್ಟಿ ಕೂಡ ಇತ್ತೇ ಎಂಬುದು ಪ್ರಶ್ನೆ.

2002ರಿಂದೀಚೆಗೆ ಯೂರೋ ನೋಟುಗಳು ಚಲಾವಣೆಗೆ ಬಂದಮೇಲೆ ನಕಲಿ ನೋಟುಗಳ ಹಾವಳಿ ಹೊಸ ಬಣ್ಣ ಪಡೆದುಕೊಂಡಿತು. ಅಸಲಿಗೂ ನಕಲಿಗೂ ತುಸುವಷ್ಟೇ ವ್ಯತ್ಯಾಸ ಎನ್ನುವಂತೆ ಕಳ್ಳನೋಟುಗಳನ್ನು ಛಾಪಿಸತೊಡಗಿದರು. ಅಸಲಿ ನೋಟಿನಂತೆಯೇ ಮಾರುಕಟ್ಟೆಯಲ್ಲಿ ಚಲಾವಣೆಯಾಗುವ ಇಂಥ ನೋಟುಗಳನ್ನು ‘ಸೂಪರ್‌ಡಾಲರ್’ ಎಂದು ಕರೆಯತೊಡಗಿದರು.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನಾಜಿಗಳು ಕಳ್ಳನೋಟುಗಳನ್ನು ಛಾಪಿಸುವ ಹುನ್ನಾರ ನಡೆಸಿದ್ದರು. ‘ಸ್ಯಾಚ್‌ಸೆನ್‌ಹೌಸೆನ್ ಕ್ಯಾಂಪ್’ಗೆ ಯಹೂದಿ ಕಲಾವಿದರನ್ನು ಬಲವಂತವಾಗಿ ಕರೆತಂದು, ಅವರಿಂದ ಬ್ರಿಟಿಷ್ ಪೌಂಡುಗಳು ಹಾಗೂ ಅಮೆರಿಕನ್ ಡಾಲರ್‌ಗಳನ್ನು ವಿನ್ಯಾಸಗೊಳಿಸಿ ಮುದ್ರಿಸಿದರು. ಆ ನಕಲಿ ನೋಟುಗಳ ಗುಣಮಟ್ಟ ಅಸಲಿಯ ತಲೆಮೇಲೆ ಹೊಡೆದಂತಿತ್ತು. ಆದರೆ, ಜರ್ಮನ್ನರಿಗೆ ಈ ಯೋಜನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಕಳ್ಳನೋಟುಗಳನ್ನೆಲ್ಲಾ ಸರೋವರಕ್ಕೆ ಸುರಿದರು.

ಮೂಲ ಯಾವುದಯ್ಯಾ...
ಅತಿ ಹೆಚ್ಚು ಆಧುನಿಕ ಕಳ್ಳನೋಟುಗಳು (ಸೂಪರ್‌ಡಾಲರ್ಸ್‌) ತಯಾರಾಗುವುದು ಉತ್ತರ ಕೊರಿಯಾದಲ್ಲಿ ಎಂದು ಅಮೆರಿಕ ಸರ್ಕಾರ ಭಾವಿಸಿತ್ತು. 2007ರಲ್ಲಿ ಸ್ವಿಸ್ ಸರ್ಕಾರ ಈ ಆರೋಪದ ಕುರಿತು ಅನುಮಾನ ವ್ಯಕ್ತಪಡಿಸಿದಾಗ, ಬಲ್ಗೇರಿಯಾ, ಕೊಲಂಬಿಯಾ ದೇಶಗಳ ಹೆಸರುಗಳೂ ಕೇಳಿಬಂದವು. ಡಾಲರ್‌ಗಿಂತ ಹೆಚ್ಚಾಗಿ ನಕಲಿ ಯೂರೋಗಳೇ ಮಾರುಕಟ್ಟೆಗೆ ಲಗ್ಗೆಇಟ್ಟಿದ್ದು. ವಿವಿಧ ದೇಶಗಳಲ್ಲಿ ವಸಾಹತುಗಳನ್ನು ಮಾಡಿಕೊಂಡಿದ್ದ ಬ್ರಿಟಿಷರ ದಬ್ಬಾಳಿಕೆಗೆ ಇದು ಬಂಡಾಯದ ಉತ್ತರ ಇದ್ದಿರಬೇಕು ಎಂಬ ಅನುಮಾನವನ್ನೂ ಕೆಲವು ಪರಿಣತರು ವ್ಯಕ್ತಪಡಿಸಿದರು.

ನಕಲಿ ನೋಟುಗಳ ಪರಿಣಾಮ: ನಕಲಿ ನೋಟುಗಳಿಂದ ಅಂಥಾದ್ದೇನಾದೀತು ಎಂಬ ಪ್ರಶ್ನೆ ಸಹಜವೇ. ಅದರಿಂದ ದೇಶದ ಆರ್ಥಿಕ ಸ್ಥಿತಿಗತಿಗೆ ದೊಡ್ಡ ಪೆಟ್ಟು ಬೀಳುತ್ತದೆ. ದೇಶದ ಹಣಕಾಸಿನ ನಿಜವಾದ ಮೌಲ್ಯವು ಕುಸಿಯುತ್ತದೆ. ನಿಯಮ ಹಾಗೂ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಹಣ ಮಾರುಕಟ್ಟೆಯಲ್ಲಿ ಹರಿದಾಡಿದರೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಉಂಟಾಗಿ, ಹಣದುಬ್ಬರಕ್ಕೆ ಎಡೆಮಾಡಿಕೊಡುತ್ತದೆ. ವಹಿವಾಟು ನಡೆಸುವವರು ಹಣದ ಬದಲಿಗೆ ಚಿನ್ನದಂಥ ದುಬಾರಿ ವಸ್ತುಗಳನ್ನೇ ವಿನಿಮಯದ ರೂಪದಲ್ಲಿ ನೀಡುವಂತೆ ಕೇಳತೊಡಗುವುದರಿಂದ ಹಣದ ಕಿಮ್ಮತ್ತು ಸಹಜವಾಗಿಯೇ ಕುಸಿದುಹೋಗುತ್ತದೆ.

ಯಾವುದಾದರೂ ದೊಡ್ಡ ಕಂಪೆನಿಯ ತಿಜೋರಿಯನ್ನು ನಕಲಿ ನೋಟುಗಳು ಪ್ರವೇಶಿಸುತ್ತದೆ ಎಂದಿಟ್ಟುಕೊಳ್ಳೋಣ. ಎಂದಿಗೂ ನಕಲಿಯನ್ನು ಅಸಲಿಯಾಗಿ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಸರ್ಕಾರವೂ ನಕಲಿ ನೋಟುಗಳನ್ನು ಅಸಲಿಗೆ ಬದಲಿಸಿ ಕೊಡುವುದಿಲ್ಲ. ಹಾಗಾಗಿ ಆ ಕಂಪೆನಿಯು ನಷ್ಟ ತುಂಬಿಕೊಳ್ಳಲು ತನ್ನ ಉತ್ಪನ್ನಗಳ ಬೆಲೆಯನ್ನು ಅನಿವಾರ್ಯವಾಗಿ ಏರಿಸುತ್ತದೆ. ಅಗತ್ಯ ವಸ್ತುಗಳಿಂದ ಹಿಡಿದು ದುಬಾರಿ ಉತ್ಪನ್ನಗಳವರೆಗೆ ಎಲ್ಲವುಗಳ ದರ ಗಗನಮುಖಿಯಾದರೆ ಬಡತನ-ಶ್ರೀಮಂತಿಕೆಯ ನಡುವಿನ ಕಂದಕ ಇನ್ನಷ್ಟು ದೊಡ್ಡದಾಗುತ್ತದೆ. ಒಂದು ಬಗೆಯಲ್ಲಿ ತೆರಿಗೆಯ ಪರಿಧಿಗೆ ಬರದಂತೆ ಕಲೆಹಾಕುವ ಕಪ್ಪು ಹಣದ ಪರಿಣಾಮ ಕೂಡ ನಕಲಿ ನೋಟಿನಿಂದ ಆಗುವಷ್ಟೇ ತೀವ್ರವಾದದ್ದು.

ಅಂತರರಾಷ್ಟ್ರೀಯ ಭಯೋತ್ಪಾದನೆ: ಶಸ್ತ್ರಾಸ್ತ್ರ ಸಂಗ್ರಹಣೆ, ವಿರೋಧಿ ಸಮಾಜವನ್ನು ಅಸ್ಥಿರಗೊಳಿಸುವುದು, ಬಿನ್ ಲ್ಯಾಡನ್ ಮಾದರಿಯಲ್ಲಿ ಯುದ್ಧದ ಹುಯಿಲೆಬ್ಬಿಸುವುದು ಆಧುನಿಕ ಭಯೋತ್ಪಾದನೆಯ ಸಾಮಾನ್ಯ ಸಂಗತಿಗಳು. ನಾವು ಸಿನಿಮಾಗಳಲ್ಲಿ ನೋಡುವಂತೆ ಮಾದಕದ್ರವ್ಯಗಳಿಗೆ ದೊಡ್ಡ ಮೊತ್ತದ ಹಣ ವಿನಿಮಯವಾಗುವುದು ವಾಸ್ತವದಲ್ಲೂ ಉಂಟು. ಗಸೆಗಸೆ ಬೆಳೆಯಲು ಕಾನೂನಿನ ಅನುಮತಿ ಬೇಡದ ಪ್ರದೇಶಗಳಿದ್ದು, ಅಲ್ಲಿಂದ ಕಚ್ಚಾಮಾಲುಗಳನ್ನು ತರಿಸಿಕೊಂಡು ಮಾದಕದ್ರವ್ಯಗಳನ್ನು ಕಳ್ಳತನದಲ್ಲಿ ಹರಡುವ ಜಾಲವೇ ನಕಲಿ ನೋಟುಗಳ ಪ್ರಸಾರ ಕಾರ್ಯವನ್ನೂ ನಡೆಸಿರುವ ಉದಾಹರಣೆಗಳಿವೆ.

ತಂತ್ರಜ್ಞಾನ ಉತ್ತಮವಾಗಿರುವ ಈ ದಿನಗಳಲ್ಲಿ ನೋಟುಗಳನ್ನು ಮಾಡುವ ಪ್ರಕ್ರಿಯೆ ಸಂಕೀರ್ಣವಾಗಿದೆ. ಅಸಲಿ ವಿನ್ಯಾಸಕರು ಹೆಚ್ಚುಹೆಚ್ಚು ಜಾಣರಾಗಿದ್ದಾರೆ. ಆದರೂ, ಕಳ್ಳನೋಟುಗಳನ್ನು ಅಸಲಿಗೆ ಸಾಕಷ್ಟು ಸಾಮ್ಯವಾಗಿರುವಂತೆ ರೂಪಿಸುವ ಇನ್ನೊಂದು ವರ್ಗದ ಚಟುವಟಿಕೆ ಕಡಿಮೆಯೇನೂ ಆಗಿಲ್ಲ. ಆಂತರಿಕವಾಗಿ ಜಾಲಗಳನ್ನು ಬಯಲಿಗೆಳೆಯುವುದು ಪೊಲೀಸರಿಗೆ ಈಗ ಅಷ್ಟು ಕಷ್ಟದ ಸಂಗತಿಯೇನಲ್ಲ.

ಆದರೆ, ಅಂತರರಾಷ್ಟ್ರೀಯ ಭಯೋತ್ಪಾದನೆಯ ಭಾಗವಾಗಿ ಕಳ್ಳನೋಟು ಚಲಾವಣೆ ಜಾರಿಯಲ್ಲಿರುವುದು ತಲೆನೋವಿನ ಸಂಗತಿ. ನೇಪಾಳದಲ್ಲಿ ಭಾರತದ ಒಂದು ಸಾವಿರ ರೂಪಾಯಿಯ ನೋಟನ್ನು ಯಾರೂ ಸ್ವೀಕರಿಸುವುದಿಲ್ಲ. ಯಾಕೆಂದರೆ, ಅಲ್ಲಿ ಭಾರತದ ಸಾವಿರ ರೂಪಾಯಿಯ ಕೆಲವು ಕಳ್ಳನೋಟುಗಳು ಇತ್ತೀಚೆಗೆ ಚಲಾವಣೆಗೊಂಡಿದ್ದವು. ಈಗ ಪಾಕಿಸ್ತಾನದಲ್ಲಿ ಮುದ್ರಿತವಾಗಿ ವಿವಿಧ ದೇಶಳಲ್ಲಿ ಚಲಾವಣೆಗೊಳ್ಳುತ್ತಿರಬಹುದು ಎನ್ನಲಾದ ನೋಟುಗಳ ಹಿಂದೆಯೂ ಭಯೋತ್ಪಾದನೆಯ ಉದ್ದೇಶ ಇರುವ ಸಾಧ್ಯತೆ ಇದೆ. ತತ್ವಶಾಸ್ತ್ರದಿಂದ ಹಿಡಿದು ಧರಿಸುವ ಬ್ರಾಂಡೆಡ್ ಬಟ್ಟೆಯವರೆಗೆ ‘ನಕಲಿ’ಗಳ ನಡುವೆಯೇ ನಾವು ಜೀವಿಸುತ್ತಿರುವುದರಿಂದ ಕಳ್ಳನೋಟುಗಳ ಹಾವಳಿ ಸಂಪೂರ್ಣ ಇಲ್ಲವಾಗುವ ಸಂಭವ ತುಂಬಾ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT