ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಈಗ ಸರತಿ ಸಾಲಿನಲ್ಲಿ ಜನ...!

Last Updated 22 ಜುಲೈ 2013, 6:09 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಈಗ ಅಲ್ಲಲ್ಲಿ ಜನರು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯ, ಸಾಲ ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿರುತ್ತಾರೆ.

ಕಳೆದ ಒಂದು ವಾರದಿಂದ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮುಂದೆ ನಿಗಮದ ವಿವಿಧ ಯೋಜನೆಗಳಡಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ಪಡೆಯಲು ಉದ್ದನೆಯ ಸಾಲು ಕಾಣ ಸಿಗುತ್ತಿದೆ.

ಅರಿವು, ಚೈತನ್ಯ, ಗಂಗ ಕಲ್ಯಾಣ, ಸ್ವಪೂರ್ಣಿಮಾ ಸೇರಿದಂತೆ ಹಲವು ಯೋಜನೆಗಳಿಗೆ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.

ಕಚೇರಿ ಬೆಳಿಗ್ಗೆ 10.30ಕ್ಕೆ ಆರಂಭವಾ ಗುತ್ತದೆಯಾದರೂ ಕಚೇರಿ ಮುಂದೆ ಬೆಳಿಗ್ಗೆ 8 ಗಂಟೆಯಿಂದಲೇ ಜನರು ಅರ್ಜಿ ಸಲ್ಲಿಸಲು ಕಾದು ಕುಳಿತಿರುತ್ತಾರೆ. ಸಂಜೆ 5 ಗಂಟೆಯವರೆಗೂ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇರುತ್ತದೆ.

ಪ್ರತಿ ವರ್ಷ 4,500 ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಈ ಬಾರಿ ಈಗಾಗಲೇ ಆ ಸಂಖ್ಯೆ ಮುಟ್ಟಿದೆ. ಇನ್ನೂ 2 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಹಿಂದಿನ ಬಾರಿ ಅರ್ಜಿ ಹಾಕಿದ್ದೇವು ಸಾಲ ಲಭಿಸಿರಲಿಲ್ಲ. ಈ ಬಾರಿ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಸಿಗುವುದೆಂಬ ವಿಶ್ವಾಸವಿದೆ ಎನ್ನುತ್ತಾರೆ ಮದ್ದೂರಿನ ನಿವಾಸಿ ಕಾಳೇಗೌಡ.

ಆಧಾರ: ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾದ ಆಧಾರ ಕಾರ್ಡ್ ಪಡೆಯಲೂ ನಗರದ ಅಂಚೆ ಕಚೇರಿ ಮುಂದೆ ಬೆಳಿಗ್ಗೆ 7 ಗಂಟೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ.

ದಿನಕ್ಕೆ 40 ರಿಂದ 50 ಆಧಾರ್ ಕಾರ್ಡ್‌ಗಳನ್ನು ಮಾತ್ರ ವಿತರಿಸುವುದರಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಒಮ್ಮೆಮ್ಮ ಕಾರ್ಡ್ ಸಿಗುವುದಿಲ್ಲ.
ಬೇರೆ, ಬೇರೆ ಕಡೆ ಕಾರ್ಡ್ ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ. ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳನ್ನು ನೀಡದ್ದರಿಂದಾಗಿ ಅಲ್ಲಿಯೂ ಸರಿಯಾಗಿ ನಡೆಯತ್ತಿಲ್ಲ. ಕಾರ್ಡ್ ಪಡೆಯಲು ಜನರು ಹರಸಾಹಸ ಪಡುವಂತಾಗಿದೆ.

ಪಡಿತರ ಚೀಟಿ: ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಅಕ್ಕಿ ನೀಡಲು ಆರಂಭಿಸಿದ ಮೇಲೆ ಬಿಪಿಎಲ್ ಪಡಿತರ ಚೀಟಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪಡಿತರ ಚೀಟಿ ವಿತರಣಾ ಕೇಂದ್ರಗಳ ಮುಂದೆ ಜನರ ಸಾಲೂ ದೊಡ್ಡದಾಗಿದೆ.

ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿಗಳ ಸಲ್ಲಿಕೆಯಾಗುತ್ತಲೇ ಇದೆ. ಚೀಟಿ ಪಡೆಯುವ ಪ್ರಕ್ರಿಯೆಯೂ ನಡೆದೇ ಇದೆ. ಒಂದು ದಿನ ಕೆಲಸಕ್ಕೆ ಹೋಗುವುದನ್ನು ಬಿಟ್ಟು ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.

ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆದಾಯ ಪ್ರಮಾಣಪತ್ರ ಪಡೆಯಲೂ ತಹಶೀಲ್ದಾರ್ ಕಚೇರಿಯ ಮುಂದೆ ಸಾಲಿರುತ್ತದೆ.
ಕೆಲವು ಕಡೆಗಳಲ್ಲಿ ಕೌಂಟರ್ ಅಥವಾ ಕೇಂದ್ರಗಳನ್ನು ಹೆಚ್ಚಿಸಬೇಕು. ಆ ಮೂಲಕ ಒತ್ತಡವನ್ನು ಕಡಿಮೆ ಮಾಡಿ, ಜನರು ಶೀಘ್ರವಾಗಿ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT