ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ತ್ಯಾಜ್ಯ: ಸಾಂಕ್ರಾಮಿಕ ರೋಗ ಭೀತಿ

Last Updated 3 ಜೂನ್ 2013, 13:24 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದಲ್ಲಿ ಸ್ವಚ್ಛತೆ ಮಾಯವಾಗಿದೆ. ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ ಗುಡ್ಡೆಯಾಗಿ ಬಿದ್ದಿದೆ. ಗಟಾರಗಳು ಸ್ವಚ್ಛತೆ ಇಲ್ಲದೇ ಕೊಳೆತು ನಾರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಪೌರ ಕಾರ್ಮಿಕರು ಗಟಾರದಿಂದ ಹೊರಗೆ ಎತ್ತಿ ಹಾಕಿರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳು ರಸ್ತೆ ತುಂಬೆಲ್ಲ ಹರಡಿಕೊಂಡಿದ್ದು, ಜನ ಸಂಚಾರಕ್ಕೆ ತೊಂದರೆಯಾಗಿದೆ.

ವಾಸವಿ ಚಿತ್ರಮಂದಿರ ಹಿಂದಿನ ರಸ್ತೆ, ಶಾರದಾ ವಸತಿ ಗೃಹದ ಮುಂಭಾಗದ ಗಟಾರು ಪಕ್ಕದ ರಸ್ತೆ, ಶಾಂತಿ ಆಸ್ಪತ್ರೆ, ಹಳಪೇಟ ಮಡು, ಕೆರೂಡಿ ಆಸ್ಪತ್ರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ತ್ಯಾಜ್ಯ ರಾಶಿ ರಾಶಿ ಬಿದ್ದಿದ್ದು ಹಂದಿ, ನಾಯಿ, ಜಾನುವಾರುಗಳು ಅಲ್ಲಿಯೇ ತಿಂದು, ಸುತ್ತಮುತ್ತಲ ಪರಿಸರದಲ್ಲಿ ಹರಡುತ್ತಿವೆ.

ಪ್ರತಿ ಶನಿವಾರ ಬೆಳಿಗ್ಗೆ ನಗರದ ರಸ್ತೆ ಮತ್ತು ಇಕ್ಕೆಲಗಳಲ್ಲಿ ಇರುವ ತ್ಯಾಜ್ಯ ವಸ್ತುಗಳನ್ನು ನಗರಸಭೆಯ ಕಾರ್ಮಿಕರು ಗುಡಿಸಿ ಒಟ್ಟುಗೂಡಿಸುತ್ತಾರೆ. ಆದರೆ, ತ್ಯಾಜ್ಯವನ್ನು ವಿಲೇವಾರಿ ಮಾಡದೇ ಹಾಗೆಯೇ ಬಿಟ್ಟು ಹೋಗುತ್ತಿರುವುದರಿಂದ ಗಾಳಿಗೆ, ಬಿಡಾಡಿ ದನಗಳು, ಹಂದಿಗಳು ತ್ಯಾಜ್ಯವನ್ನು ಕೆದರಿ ಹರಡುತ್ತಿವೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದು ಮೂರು - ನಾಲ್ಕು ತಿಂಗಳು ಗತಿಸಿದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗದಿರುವುದರಿಂದ ಹೇಳುವವರು, ಕೇಳುವವರು ಇಲ್ಲದೇ ಅಧಿಕಾರಿಗಳ ದರ್ಬಾರು ಮುಂದುವರಿದಿದೆ.

ನಗರ ಮಲಿನವಾಗುವಲ್ಲಿ ನಗರದ ನಿವಾಸಿಗಳ ಪಾಲು ಬಹುತರವಾಗಿದೆ. ಮನೆಯ ತ್ಯಾಜ್ಯವನ್ನು ನಗರಸಭೆಯ ಕಸದ ತೊಟ್ಟಿಗೆ ಹಾಕುವ ಬದಲು ಗಟಾರಕ್ಕೆ ಎಸೆಯುವುದು, ಮನೆ ಸ್ವಚ್ಛಗೊಳಿಸಿದ ಬಳಿಕ ಕಸವನ್ನು ರಸ್ತೆ ಮೇಲೆ ಎಸೆಯುವ ಅನಾಗರಿಕತೆ ಮುಂದುವರಿದಿದೆ. ಕೆಲವು ವಾರ್ಡ್‌ಗಳಲ್ಲಿ ರಸ್ತೆ ಪಕ್ಕ, ಖಾಲಿ ಜಾಗದಲ್ಲೇ ಮಲ, ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತಿದೆ. ಎಲ್ಲವನ್ನೂ ನಗರಸಭೆ ಸಿಬ್ಬಂದಿ ಮಾಡಬೇಕು ಎಂಬ ಬೇಜವಾಬ್ದಾರಿ ನಡವಳಿಕೆ ನಗರ ನೈರ್ಮಲ್ಯಕ್ಕೆ ಧಕ್ಕೆಯಾಗಿದೆ.

ಮುಂಗಾರು ಆರಂಭವಾಗಿದೆ. ಡೆಂಗೆ, ಮಲೇರಿಯಾ, ಚಿಕೂನ್‌ಗುನ್ಯದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ತಲೆದೋರಿದೆ. ಇಂತಹ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ಅಗತ್ಯ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT