ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಆಡಳಿತಕ್ಕೆ 10 ಸವಾಲುಗಳು

Last Updated 23 ಸೆಪ್ಟೆಂಬರ್ 2013, 6:58 IST
ಅಕ್ಷರ ಗಾತ್ರ

ಕೊಪ್ಪಳ: ನಗರಸಭೆಗೆ ಹೊಸ ಆಡಳಿತ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಬೆಳೆಯುತ್ತಿರುವ ಕೊಪಣಪುರದಲ್ಲಿ ಬೆಳವಣಿಗೆಯಷ್ಟೇ ಹಲವು ಸಮಸ್ಯೆಗಳೂ ಇವೆ. ಹೊಸ ಆಡಳಿತಕ್ಕೆ ಪ್ರಬಲ ಸವಾಲುಗಳೂ ಇವೆ. ಅದೆಲ್ಲವನ್ನೂ ಎದುರಿಸಿ ಯಶಸ್ವಿ ಆಡಳಿತ ನೀಡಿಯಾರೇ ಎಂಬ ನಿರೀಕ್ಷೆ ನಾಗರಿಕರದ್ದು.

ಸವಾಲು1: ನಗರ ಪ್ರವೇಶಿಸುತ್ತಿದ್ದಂತೇ ಕಣ್ಣಿಗೆ ರಾಚುವ ಮುಖ್ಯರಸ್ತೆ, ಹೆದ್ದಾರಿಯ ವಿಸ್ತರಣೆಗೆ ಅಂತ್ಯ ಹಾಡಬೇಕಿದೆ.ಮೂರು ವರ್ಷಗಳಿಂದ ಜಿಲ್ಲಾಡಳಿತ, ನಗರಸಭೆ, ನಿರ್ಮಿತಿ ಕೇಂದ್ರ, ಖಾಸಗಿ ಗುತ್ತಿಗೆ ಸಂಸ್ಥೆ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಕೊನೆಗೊಂಡು ನಗರದ ರಸ್ತೆಗಳು ಸುವ್ಯವಸ್ಥಿತವಾಗಬೇಕು.

2 ಸ್ವಚ್ಛತೆ: ನಗರದಲ್ಲಿ ಸ್ವಚ್ಛತೆ ಏನೇನೂ ಸಾಲದು. ಘನ ತ್ಯಾಜ್ಯ ನಿರ್ವಹಣೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿ­ದೆಯಾದರೂ ಅಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ತ್ಯಾಜ್ಯ ಸಂಸ್ಕರಣೆ, ಎರೆಗೊಬ್ಬರ ತಯಾರಿ ನಡೆಯುತ್ತಿಲ್ಲ. ವೈಯಕ್ತಿಕ, ಸಾಮೂಹಿಕ ಶೌಚಾಲಯಗಳು ನಿರ್ಮಾಣವಾಗಬೇಕು. ಇತ್ತ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಗೂ ವೇಗ ದೊರೆಯಬೇಕು.ಇದರಲ್ಲಿ ನಗರಸಭೆಯಷ್ಟೆ ನಾಗರಿಕರ ಜವಾಬ್ದಾರಿಯೂ ಇದೆ.

3 ಕುಡಿಯುವ ನೀರು: ನಗರದ ನೀರು ಶುದ್ಧೀಕರಣ ಘಟಕ ಸಂಪೂರ್ಣ ನವೀಕರಣಗೊಳ್ಳಬೇಕು. ಅದರಲ್ಲೂ ಕೊಳೆಗೇರಿ ಪ್ರದೇಶಗಳಲ್ಲಿ ದಲಿತರ ಕಾಲೊನಿಗಳಲ್ಲಿ ಕುಡಿಯುವ ನೀರಿನ ಶುದ್ಧತೆ ಬಗ್ಗೆ ಹೆಚ್ಚು ನಿಗಾ ವಹಿಸಬೇಕು.

4 ಉದ್ಯಾನ ನಿರ್ಮಾಣ: ನಗರದಲ್ಲಿ 10 ಉದ್ಯಾನಗಳಿವೆ. ಅವುಗಳಲ್ಲಿ 5 ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಕೆಲವು ಉದ್ಯಾನಗಳು ಕಾಂಪೌಂಡ್‌ ಮಾತ್ರ ಕಟ್ಟಿಕೊಂಡಿವೆ.  ಕಲ್ಲು ಬಂಡೆಗಳಿಂದಾವೃತವಾದ ನಗರದಲ್ಲಿ ಒಂದಿಷ್ಟು ಹಸಿರು, ತಂಪು ಕಾಣಬೇಕು.

5 ಮಾರುಕಟ್ಟೆ ಅಭಿವೃದ್ಧಿ: ನಗರದ  ಜೆ.ಪಿ. ಮಾರುಕಟ್ಟೆ ಪುನರ್‌ನಿರ್ಮಾಣ ಆದರೆ ವ್ಯಾಪಾರಿ, ಗ್ರಾಹಕರಿಗೂ ನೆಮ್ಮದಿ.

6 ಪಾರ್ಕಿಂಗ್‌: ನಗರಸಭೆ ಮುಂಭಾಗವೂ ಸೇರಿದಂತೆ ಬಸ್‌ ನಿಲ್ದಾಣದ ಮುಂಭಾಗ, ಜವಾಹರ ರಸ್ತೆ ಕಡೆಗಳಲ್ಲಿ ಅವ್ಯವಸ್ಥಿತ ವಾಹನ ನಿಲುಗಡೆಯಿಂದ ವಿಪರೀತ ತೊಂದರೆಯಾಗುತ್ತಿದೆ. ಇದೇ ವೇಳೆ ಅಲ್ಲಲ್ಲಿ ಆಗಿರುವ ಫುಟ್‌ಪಾತ್‌ ಒತ್ತುವರಿ ತೆರವಾಗಬೇಕು.

7 ಕಳಪೆ ಕಾಮಗಾರಿ: ನಗರದ ಮುಖ್ಯ ರಸ್ತೆ, ಚರಂಡಿ, ಮ್ಯಾನ್‌ಹೋಲ್‌ ನಿರ್ಮಾಣದಲ್ಲಿ ಕಳಪೆ ಇಟ್ಟಿಗೆ, ಪೈಪ್‌ ಬಳಕೆ, ಅರ್ಧಂಬರ್ಧ, ಕಳಪೆ ಕಾಮಗಾರಿ ವ್ಯಾಪಕ ನಡೆದಿ­ರುವ ಬಗ್ಗೆ ಸಾರ್ವಜನಿಕರು ಪದೇಪದೇ ದೂರುತ್ತಿದ್ದಾರೆ. ಅವೆಲ್ಲವನ್ನೂ ತನಿಖೆಗೊಳಪಡಿಸಿ ಲೋಪ ಸರಿಪಡಿಸಬೇಕು.

8 ನಿರಾಶ್ರಿತರಿಗೊಂದು ನೆಲೆ: ನಗರದ ಗವಿಸಿದ್ದೇಶ್ವರ ಮಠದ ರಸ್ತೆ ಸಮೀಪವೇ ಹರಿಣ್‌ ಶಿಕಾರ್‌ ಜನಾಂಗ, ಸಿದ್ದೇಶ್ವರ ನಗರದಲ್ಲಿ (ಕಾಳಿದಾಸ ಶಾಲೆಯ ಬಳಿ) ವೇಷಗಾರ ಜನಾಂಗದವರು, ಬನ್ನಿಕಟ್ಟಿ ಸಮೀಪ ಗೊಂದಲಿಗರು, ಕೊರಚ ಕೊರಮ ಸಮುದಾಯದವರು ಸೇರಿದಂತೆ ಹಲವಾರು ಅಲೆಮಾರಿ ಜನಾಂಗದವರು, ದಲಿತರು ತಲೆಮಾರುಗಳಿಂದ  ಸೂಕ್ತ ನೆಲೆ ಇಲ್ಲದೇ ಇದ್ದಾರೆ. ಅವರಿಗೆ ವಸತಿ ಯೋಜನೆ ಅಡಿ ನಿವೇಶನ, ಮನೆ ನೀಡಿ ನೆಲೆ ಕಲ್ಪಿಸಬೇಕು. ಅಕ್ರಮ ಡೋರ್‌ ನಂಬರ್‌, ಅನರ್ಹರಿಗೆ ಮನೆ ನೀಡಿದ್ದರೆ ಅದರ ವಿರುದ್ಧ ಕ್ರಮ ಜರುಗಬೇಕು.

9 ಅನುದಾನ ಬಳಕೆ: ನಗರದ ರಸ್ತೆ ಅಭಿವೃದ್ಧಿಗೆ ರೂ 30 ಕೋಟಿ, ಸೇರಿದಂತೆ ನಗರಾಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ಹರಿದು ಬರುತ್ತಿದೆ. ಅದರ ಸದ್ಬಳಕೆ ಆಗಬೇಕು. ಸದಸ್ಯರು ಚುನಾವಣೆಯಲ್ಲಿ ‘ಹೂಡಿದ’ ಮೊತ್ತ ‘ವಾಪಸ್‌’ ಪಡೆಯಲು ಈ ಅನುದಾನದ ಬಳಕೆ ಆಗಬಾರದು. ಅಂತೆಯೇ ನಗರಸಭೆಯ ಆದಾಯ ವೃದ್ಧಿ ಕಡೆಗೂ ನಿಗಾ ಇರಬೇಕು.

10 ಗಂಡಂದಿರ ದರ್ಬಾರ್‌ಗೆ ಕಡಿವಾಣ: ನಗರಸಭೆಯಲ್ಲಿ 10 ಮಹಿಳಾ ಸದಸ್ಯರಿದ್ದಾರೆ. ಅಧ್ಯಕ್ಷರು ಸೇರಿದಂತೆ ಈ ಎಲ್ಲ ಸದಸ್ಯರು ಸ್ವಂತ ನಿರ್ಧಾರದ ಶಕ್ತಿ ಹೊಂದಬೇಕು. ಸಹಿ ಹಾಕಲಷ್ಟೇ ಸೀಮಿತವಾಗುವ ಸೂತ್ರದ ಗೊಂಬೆಗಳಾಗಬಾ­ರದು. ಗಂಡಂದಿರ ದರ್ಬಾರ್‌ಗೆ ಕಡಿವಾಣ ಬೀಳಬೇಕು.

ಅಧ್ಯಕ್ಷ– ಉಪಾಧ್ಯಕ್ಷರು ಹೀಗಂತಾರೆ

ಮಹಿಳೆಯರಿಗೆ ನೆರವು
ಅಧ್ಯಕ್ಷೆ: ಲತಾ ವೀರಣ್ಣ ಸಂಡೂರು
ವಾರ್ಡ್‌ ನಂ: 1
ಶಿಕ್ಷಣ: ದ್ವಿತೀಯ ಪಿಯು
ಮೊಬೈಲ್‌ ಸಂಖ್ಯೆ: 78990 55766

ರಾಜಕೀಯ: ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದು.

ನಗರ ಅಭಿವೃದ್ಧಿ ಪರಿಕಲ್ಪನೆ: ಊರು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕಿಳಿದಿದ್ದೇನೆ. ಇಲ್ಲಿ ಸ್ವಚ್ಛತೆ ಕಾಪಾಡಬೇಕು. ಬಡವರಿಗೆ ಮನೆ ಕೊಡಿಸಬೇಕು. ಜನಸಾಮಾನ್ಯನಿಗೆ ಒಳ್ಳೆಯ ನೆರವು ನೀಡಬೇಕು ಎಂಬ ಆಸೆಯಿದೆ. ನಗರಸಭೆಯಲ್ಲಿರುವ ಎಲ್ಲ ಯೋಜನೆಗಳನ್ನು ಬಳಸಿಕೊಂಡು ಅರ್ಹರಿಗೆ ಅದರಲ್ಲೂ ಮಹಿಳೆಯರಿಗೆ  ನೆರವು ನೀಡಲು ಬದ್ಧವಾಗಿದ್ದೇನೆ.

ಅನುಭವದ ಹಿನ್ನೆಲೆಯಲ್ಲಿ ಅಭಿವೃದ್ಧಿ
ಉಪಾಧ್ಯಕ್ಷ: ಅಮ್ಜದ್‌ ಪಟೇಲ್‌
ವಾರ್ಡ್‌ ನಂ: 3
ಶಿಕ್ಷಣ: ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಮೊಬೈಲ್‌ ಸಂಖ್ಯೆ: 94806 66786

ರಾಜಕೀಯ: 1989ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶ. 1998ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ. ಅದಕ್ಕೂ ಮುನ್ನ 1994–95ರಲ್ಲಿ ಬಹದ್ದೂರ್‌ಬಂಡಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋಲು. 2001ರಿಂದ 2003 ರವರೆಗೆ 18ನೇ ವಾರ್ಡ್‌, 2010–2013ರಲ್ಲಿ , 2013ರಲ್ಲಿ ಸತತ 3ನೇ ವಾರ್ಡ್‌ನಿಂದ ನಗರಸಭೆಗೆ ಸ್ಪರ್ಧಿಸಿ ಗೆದ್ದು ಉಪಾಧ್ಯಕ್ಷರಾದವರು.

ಅಭಿವೃದ್ಧಿ ಪರಿಕಲ್ಪನೆಗಳು: ಮೂರು ಬಾರಿ ಉಪಾಧ್ಯಕ್ಷನಾಗಿರುವ ಅನುಭವದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಇರುವ ಯೋಜನೆಗಳು, ಅನುದಾನ ಬಳಕೆ ಇತ್ಯಾದಿ ಬಗ್ಗೆ ಸಮಗ್ರ ಮಾಹಿತಿಯಿದೆ. ಅವುಗಳನ್ನು ಸರಿಯಾಗಿ ಬಳಕೆ ಮಾಡಲಾಗುವುದು. ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರಕ್ಕೂ ನಗರಸಭೆ ಆಡಳಿತಕ್ಕೂ ಹೊಂದಾಣಿಕೆ ಇರುತ್ತಿರಲಿಲ್ಲ. ಈ ಬಾರಿ ಅದು ನಿವಾರಣೆ ಆಗಿದೆ. ಒಳರಸ್ತೆಗಳ ಅಭಿವೃದ್ಧಿಗೆ ರೂ 30 ಕೋಟಿ ಬಿಡುಗಡೆ ಆಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ನಗರ ಸೌಂದರ್ಯಕ್ಕೆ ಆದ್ಯತೆ ಕೊಡುತ್ತೇವೆ.

ನಿರೀಕ್ಷೆ ಹುಸಿಯಾಗದಿರಲಿ
ಜನತೆ ನಗರಸಭೆಯ ಹೊಸ ಆಡಳಿತದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಒಳಚರಂಡಿ ಕಾಮಗಾರಿಯಿಂದ ಎಲ್ಲ ರಸ್ತೆಗಳು ಕೆಟ್ಟು ಹೋಗಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆಯಿದೆ. ಶುದ್ಧೀಕರಣ ಘಟಕದ ಫಿಲ್ಟರ್ ಬೆಡ್‌ ಸರಿಪಡಿಸಬೇಕು.  ಕಲುಷಿತ ನೀರಿನಿಂದ ವೈರಲ್‌ ಜ್ವರ ಬಾಧಿಸುತ್ತಿರುವುದನ್ನೂ ಗಮನಿಸಿದ್ದೇನೆ. ವಿರೋಧ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
–ಡಾ.ಕೆ.ಜಿ.ಕುಲಕರ್ಣಿ, ಹಿರಿಯ ವೈದ್ಯ

ಪಕ್ಷಬೇಧ ಮರೆತು ಕೆಲಸ ಮಾಡಿ
ಮೂಲಸೌಲಭ್ಯ ಬೇಕು. ಫುಟ್‌ಪಾತ್‌ ನಿರ್ಮಾಣ ಆಗಬೇಕು. ಕುಡಿಯುವ ನೀರು ವ್ಯವಸ್ಥಿತವಾಗಿ ಪ್ರತಿದಿನ ಪೂರೈಸಿದರೆ ಉತ್ತಮ. ರಸ್ತೆ ಸರಿಪಡಿಸಬೇಕು. ಪಕ್ಷಬೇಧ ಮರೆತು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿ. ಜನರ ಹತಾಶೆ ನಿವಾರಣೆ ಆಗಲಿ.
- ಸರ್ವಮಂಗಳಾ ಜಿ. ಪಾಟೀಲ್‌ ಹಿರಿಯ ಸಾಹಿತಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT