ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ಕಾಂಗ್ರೆಸ್‌, ಜೆಡಿಎಸ್‌ ಜಂಗೀಕುಸ್ತಿ

Last Updated 17 ಸೆಪ್ಟೆಂಬರ್ 2013, 8:51 IST
ಅಕ್ಷರ ಗಾತ್ರ

ತುಮಕೂರು: ಯಾವುದೇ ಪಕ್ಷಕ್ಕೂ ಬಹುಮತವಿಲ್ಲದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆಯಾದರೂ ಸೋಮವಾರ ತಡರಾತ್ರಿವರೆಗೆ ಕಾಂಗ್ರೆಸ್‌, ಜೆಡಿಎಸ್‌ ಅಧಿಕಾರ ಹಿಡಿಯುವ ತಂತ್ರದಲ್ಲಿ  ತೊಡಗಿಕೊಂಡಿದ್ದವು. ಕಾಂಗ್ರೆಸ್‌ ಜೊತೆ ಸೇರಿ ಅಧಿಕಾರದ ಕನಸುಕಂಡಿದ್ದ ಜೆಡಿಎಸ್‌ಗೆ ಭಂಗ ಉಂಟಾಗಿದೆ. ಕಾಂಗ್ರೆಸ್‌ ಮತ್ತು ಕೆಜೆಪಿ ಸೇರಿ ಅಧಿಕಾರಕ್ಕೇರುವ ಸಾಧ್ಯತೆಯೇ ನಿಚ್ಚಳವಾಗಿದೆ.

ಪಕ್ಷೇತರ ಸದಸ್ಯೆಯಾಗಿ ಗೆಲವು ಸಾಧಿಸಿ ಕಾಂಗ್ರೆಸ್‌ ಸೇರಿರುವ ಗೀತಾ ರುದ್ರೇಶ್‌  ಅಧ್ಯಕ್ಷೆ­ಯಾಗಿ (ಸಾಮಾನ್ಯ–ಮಹಿಳೆ) ಹಾಗೂ ಉಪಾಧ್ಯಕ್ಷೆ­ಯಾಗಿ ಧನಲಕ್ಷ್ಮೀ (ಪರಿಶಿಷ್ಟ) ಆಯ್ಕೆಯಾಗುವ ಸಂಭವವಿದೆ. ಕಾಂಗ್ರೆಸ್‌, ಕೆಜೆಪಿ ಸದಸ್ಯರು ಈಗಾಗಲೇ ರೆಸಾರ್ಟ್ ಒಂದರಲ್ಲಿ ಅಡಗಿ ಕುಳಿತಿದ್ದು, ಮಂಗಳವಾರ  ನಗರಸಭೆಗೆ ನೇರವಾಗಿ ಬರಲಿ­ದ್ದಾರೆ ಎಂದು ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್– ಬಿಜೆಪಿ ನಡುವೆ ಮೈತ್ರಿ ನಡೆದಿದೆ. ಪಕ್ಷೇತರ ಸದಸ್ಯೆಯ ಜೊತೆಗೂಡಿ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಿವೆ. ಆದರೂ ಇದು ಕಷ್ಟ ಎನ್ನಲಾಗುತ್ತಿದೆ. ಅಧಿಕಾರಕ್ಕಾಗಿ ತೀವ್ರ ಹಣಾಹಣಿ ಕಾರಣ ನಾಲ್ಕು ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್‌ ಜಾರಿಗೊಳಿಸಿವೆ. ಸಂಸದ ಜಿ.ಎಸ್‌.ಬಸವರಾಜ್‌ ತಾಂತ್ರಿಕವಾಗಿ ಇನ್ನೂ ಬಿಜೆಪಿಯಲ್ಲಿರುವ ಕಾರಣ ಅವರಿಗೂ ವಿಪ್‌ ಜಾರಿಯಾಗಿದೆ.

ಪಕ್ಷೇತರಾಗಿದ್ದ ಗೀತಾ ರುದ್ರೇಶ್‌ಗೆ ಪಟ್ಟ ಕಟ್ಟುವುದಕ್ಕೆ ಕಾಂಗ್ರೆಸ್‌ನ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಶಾಸಕ ಡಾ. ರಫೀಕ್‌ ಅಹಮ್ಮದ್‌ ಕಾರಣ ಎಲ್ಲರೂ ಮೌನವಹಿಸಿದ್ದಾರೆ ಎಂದೂ ತಿಳಿದುಬಂದಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಸಂಸದ ಜಿ.ಎಸ್‌.ಬಸವರಾಜ್ ಕಾಂಗ್ರೆಸ್‌ ಸೇರುವ ಕಾರಣ ಕೆಜೆಪಿ ಬೆಂಬಲದೊಂದಿಗೆ ಅಧಿಕಾರ ರಚಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಬದಲಾದ ನಿರ್ಧಾರದಿಂದ ದಿಕ್ಕು ತಪ್ಪಿದಂತಾದ ಜೆಡಿಎಸ್‌ ಈಗ ಬಿಜೆಪಿ ಜೊತೆ ಕೈ ಜೋಡಿಸಿ ಅಧಿಕಾರ ಹಿಡಿಯಲು ಸೋಮವಾರ ಇಡೀ ದಿನ ಯತ್ನ ನಡೆಸಿತು. ಪಕ್ಷೇತರ ಸದಸ್ಯೆ ಫರಜಾನ್ ಖಾನಂ ಮನವೊಲಿಸಿ ತನ್ನತ್ತ ಸೆಳೆಯಲು ಕಸರತ್ತಿನಲ್ಲಿ ತಡರಾತ್ರಿಯಾದರೂ ತೊಡಗಿಕೊಂಡಿತ್ತು. ಅಲ್ಲದೇ ಕಾಂಗ್ರೆಸ್‌ನೊಳಗಿನ ಬಂಡಾಯದ ಲಾಭ ಪಡೆಯುವ ಪ್ರಯತ್ನವೂ ನಡೆದಿದೆ ಎಂದು ಜೆಡಿಎಸ್‌ನ ಮುಖಂಡರೊಬ್ಬರು ತಿಳಿಸಿದರು.

ಕಾಂಗ್ರೆಸ್‌ ವಿರೋಧಿ ನಿಲುವು ಕಾರಣ ಜೆಡಿಎಸ್‌ ಬೆಂಬಲಿಸಲು ಬಿಜೆಪಿ ನಿರ್ಧರಿಸಿದೆ. ಜೆಡಿಎಸ್‌ ಅಗತ್ಯ ಸಂಖ್ಯೆ ಮುಟ್ಟಲು ಯಶಸ್ವಿ­ಯಾದರೆ ಜೆಡಿಎಸ್‌ ಪರ ಮತ ಹಾಕಲು ಸದಸ್ಯರಿಗೆ ಸೂಚಿಸಿದೆ. ಹೀಗಾಗಿ ತನ್ನ ಮೂವರು ಸದಸ್ಯರು ಸೇರಿದಂತೆ ಸಂಸದ ಜಿ.ಎಸ್‌.­ಬಸವರಾಜ್‌ಗೂ ವಿಪ್‌ ಜಾರಿ ಮಾಡಲು ತಡರಾತ್ರಿ ಅಂತಿಮ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್‌ 13 ಸದಸ್ಯರಿದ್ದು ಅತಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್‌ 12,  ಕೆಜೆಪಿ 5. ಬಿಜೆಪಿ 3 ಹಾಗೂ ಇಬ್ಬರು ಪಕ್ಷೇತರರಿದ್ದಾರೆ. ಕಾಂಗ್ರೆಸ್‌, ಕೆಜೆಪಿ ಹಾಗೂ ಇಬ್ಬರು ಸದಸ್ಯರು (ಇವರಲ್ಲಿ ಒಬ್ಬರು ಗೀತಾ ರುದ್ರೇಶ) ಹಾಗೂ ಶಾಸಕರು ಸೇರಿದರೆ 20ರ ಬಲ ಬರಲಿದೆ. ಫರಜಾನ್‌ ಖಾನಂ ಕೈ ಕೊಟ್ಟರೂ ಅಧಿಕಾರ ರಚಿಸಲು ಬೇಕಾದ 19ರ ಸಂಖ್ಯಾಬಲ ಕಾಂಗ್ರೆಸ್‌ಗೆ ದೊರೆಯಲಿದೆ. ಆದರೆ ಇಲ್ಲಿ ಸಂಸದ ಜಿ.ಎಸ್‌.ಬಸವರಾಜ್‌ ನಡೆ ಮುಖ್ಯ ಆಗಲಿದೆ.

ಇತ್ತ ಜೆಡಿಎಸ್‌ನಲ್ಲಿ ಅಧ್ಯಕ್ಷ  ಸ್ಥಾನಕ್ಕೆ ಜಯಲಕ್ಷ್ಮೀ ವೆಂಕಟೇಶ್‌, ಉಪಾಧ್ಯಕ್ಷ ಸ್ಥಾನಕ್ಕೆ  ರವಿ ಅವರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ. ಕಡೇ ಗಳಿಗೆಯಲ್ಲಿ ಪಕ್ಷೇತರ ಸದಸ್ಯೆ ಫರಜಾನ್‌ ಖಾನಂಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಕೂಡ ಜೆಡಿಎಸ್‌ ಸಿದ್ಧವಿದೆ ಎಂದೂ ಹೇಳಲಾಗುತ್ತಿದೆ. ಆದರೆ ಜೆಡಿಎಸ್‌–ಬಿಜೆಪಿ ಅಧಿಕಾರ ಕಷ್ಟಸಾಧ್ಯ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT