ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಲು ನೂರು ಕಾರಣಗಳು

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಸಮಷ್ಟಿ ಹವ್ಯಾಸಿ ನಾಟಕ ತಂಡ ಈಚೆಗೆ ರಂಗಶಂಕರದಲ್ಲಿ ಪ್ರದರ್ಶಿಸಿದ ಕನ್ನಡ ನಾಟಕ `ಪ್ರಮೀಳಾರ್ಜುನೀಯಂ~ ನಾಟಕ ಷೇಕ್ಸ್‌ಪಿಯರ್‌ನ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್~ ನಾಟಕದಿಂದ ಪ್ರೇರಣೆಗೊಂಡದ್ದು. ನೀನಾಸಂನಲ್ಲಿ ಪದವಿ ಪಡೆದಿರುವ ಮಂಜುನಾಥ್ ಎಲ್.ಬಡಿಗೇರ್ ನಾಟಕ ನಿರ್ದೇಶನ ಮಾಡಿದ್ದಾರೆ.  

ಅರ್ಜುನ ಅಶ್ವಮೇಧ ಯಾಗ ಕೈಗೊಂಡಿರುತ್ತಾನೆ. ಯಾಗದ ಕುದುರೆ ಕೇರಳ ರಾಜ್ಯದಲ್ಲಿರುವ ಪ್ರಮಾದವನ ಪ್ರವೇಶಿಸುತ್ತದೆ. ಅಲ್ಲಿಯ ರಾಣಿ ಪ್ರಮೀಳೆ ತುಂಬಾ ಧೈರ್ಯಶಾಲಿ. ತನ್ನ ರಾಜ್ಯಕ್ಕೆ ಕಾಲಿಟ್ಟ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿ ಅರ್ಜುನನೊಂದಿಗೆ ಯುದ್ಧ ಮಾಡುತ್ತಾಳೆ. ಯುದ್ಧದಲ್ಲಿ ಅರ್ಜುನ ತೀವ್ರ ನಷ್ಟ ಅನುಭವಿಸುತ್ತಾನೆ. ಅಲ್ಲದೇ ಪ್ರಮೀಳೆಯ ಎದುರು ಸೋಲುವ ಹಂತ ತಲುಪುತ್ತಾನೆ.

ಸೋಲು ಸನ್ನಿಹಿತಗೊಂಡಾಗ ಅರ್ಜುನ ಪ್ರಮೀಳೆಯೊಂದಿಗೆ ಸಂಧಿ ಮಾಡಿಕೊಳ್ಳಲು ಮುಂದಾಗುತ್ತಾನೆ. ಕೊನಗೆ ಅವಳನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಪ್ರಮೀಳಾರ್ಜುನರ ಮದುವೆ ಹುಣ್ಣಿಮೆಯಂದು ನಡೆಯಬೇಕು ಎಂದು ನಿಶ್ಚಯಗೊಳ್ಳುತ್ತದೆ.

ಪ್ರೇಮ ಪಾಶಕ್ಕೆ ಸಿಲುಕಿದ ಅರ್ಜುನ ತಾವಿಬ್ಬರೂ ಮದುವೆ ಆಗಬೇಕು ಎಂದು ರಾಣಿ ಪ್ರಮೀಳೆಯ ಮುಂದೆ ಭಿನ್ನವಿಸಿಕೊಳ್ಳುತ್ತಿರುವ ದೃಶ್ಯದೊಂದಿಗೆ ನಾಟಕ ಆರಂಭಗೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಕೈರವಿ ತಂದೆ ಪ್ರಮೀಳೆ ಬಳಿಗೆ ಬರುತ್ತಾನೆ.

ತನ್ನ ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ರಾಣಿಯ ಬಳಿ ತನ್ನ ಕಷ್ಟವನ್ನು ನಿವೇದಿಸಿಕೊಳ್ಳುತ್ತಾನೆ. ತಾನು ಕೈರವಿಗೆಂದು ಹುಡುಕಿರುವ ಯುವಕ ವಸಂತನನ್ನೇ ಮದುವೆಯಾಗುವಂತೆ ತಾಕೀತು ಮಾಡಬೇಕೆಂದು ಸೂಚಿಸುತ್ತಾನೆ. ಅವನ ಮನವಿಗೆ ಸ್ಪಂದಿಸಿದ ಪ್ರಮೀಳೆ ತಾನು ಕೈರವಿ ಜೊತೆ ಮಾತನಾಡುವುದಾಗಿ ಅವನಿಗೆ ಭರವಸೆ ನೀಡುತ್ತಾಳೆ.

ಈ ವಿಷಯದ ಕುರಿತು ಕೈರವಿ ಜೊತೆ ಮಾತನಾಡುವ ಪ್ರಮೀಳಾ ಮನಸ್ಸು ಬದಲಾಯಿಸುವಂತೆ ಆಕೆಗೆ ಹೇಳುತ್ತಾಳೆ. ಇದಕ್ಕಾಗಿ ನಾಲ್ಕು ದಿನದ ಗಡುವನ್ನೂ ನೀಡುತ್ತಾಳೆ. ಆದರೆ, ಕೈರವಿಗೆ ವಸಂತನ ಮೇಲೆ ಪ್ರೀತಿ ಇರುವುದಿಲ್ಲ. ಅವಳು ಜಯಂತನನ್ನು ಮನಸಾರೆ ಪ್ರೀತಿಸುತ್ತಿರುತ್ತಾಳೆ. ಅವನನ್ನೇ ಮದುವೆಯಾಗಬೇಕು ಎಂದು ಮನದಲ್ಲಿ  ನಿಶ್ಚಯಿಸಿಕೊಂಡಿರುತ್ತಾಳೆ. ಈ ನಡುವೆ ಕೈರವಿ ಜಯಂತನೊಂದಿಗೆ ಓಡಿಹೋಗುತ್ತಾಳೆ.

ಈ ಸಂದರ್ಭದಲ್ಲಿ ನಾಟಕ ಊಹಾತೀತ ತಿರುವು ಪಡೆದುಕೊಳ್ಳುತ್ತದೆ. ಕೈರವಿ ಹಾಗೂ ಪದ್ಮಿನಿ ಗೆಳತಿಯರು. ತಾನು ಜಯಂತನೊಂದಿಗೆ ಓಡಿಹೋಗುವ ನಿರ್ಧಾರವನ್ನು ಕೈರವಿಯು ಪದ್ಮಿನಿಗೆ ಹೇಳಿರುತ್ತಾಳೆ.

ಮಜಾ ಎಂದರೆ, ಕೈರವಿ ತಂದೆಯು ಆಕೆಗೆ ಗೊತ್ತು ಮಾಡಿದ್ದ ವರ ವಸಂತ ಹಾಗೂ ಪದ್ಮಿನಿ ಹಳೇಪ್ರೇಮಿಗಳು. ಕಾರಣಾಂತರದಿಂದ ಅವರಿಬ್ಬರೂ ಬೇರೆಯಾಗಿರುತ್ತಾರೆ. ಕೈರವಿಯಿಂದ ವಿಷಯ ತಿಳಿದ ಪದ್ಮಿನಿ ವಸಂತನಿಗೆ ಈ ವಿಷಯ ತಿಳಿಸಿ ಮತ್ತೆ ಅವನಿಗೆ ಹತ್ತಿರವಾಗಲು ಬಯಸುತ್ತಾಳೆ. ಆಗ ವಸಂತ ಕೈರವಿ ಮತ್ತು ಜಯಂತನನ್ನು ಹಿಂಬಾಲಿಸಿಕೊಂಡು ಅರಣ್ಯಕ್ಕೆ ಹೋಗುತ್ತಾನೆ.

ಈ ಸಂದರ್ಭದಲ್ಲಿ ಕಾಡಿನ ನಡುವೆ ರತಿ- ಮನ್ಮಥ ಜೋಡಿ ಪ್ರವೇಶಿಸುತ್ತದೆ. ಇವರ ಜತೆಗೆ ಮನ್ಮಥನ ಸಾರಥಿ ಅಶುಗ ಕೂಡ ಇರುತ್ತಾನೆ. ನೀಲೋನ್ಮಥ ಗಿಡದ ಹೂವಿಗೆ ಪ್ರೇಮವನ್ನು ಅಂಕುರಿಸುವ ಶಕ್ತಿಯಿದೆ. ಈ ಹೂವಿನ ರಸವನ್ನು ಕಣ್ಣಿಗೆ ಬಿಟ್ಟುಕೊಂಡು ಯಾವ ವ್ಯಕ್ತಿಯನ್ನು ಮೊದಲು ನೋಡುತ್ತೇವೆಯೋ ಅವರ ಮೇಲೆ ಪ್ರೇಮಾಂಕುರವಾಗುತ್ತದೆನ್ನುತ್ತಾರೆ.

ಈ ಹೂವನ್ನು ಅರಣ್ಯದಲ್ಲಿ ಹುಡುಕಿ ತರುವಂತೆ ಮನ್ಮಥ ಅಶುಗನನ್ನು ಕಳುಹಿಸುತ್ತಾನೆ.
ಈ ಸಂದರ್ಭದಲ್ಲಿ ರತಿ- ಮನ್ಮಥರ ನಡುವೆ ಹೂವಿನ ವಿಚಾರವಾಗಿ ಜಗಳ ನಡೆಯುತ್ತದೆ.

ಹೂವನ್ನು ತಂದ ಅಶುಗ ಕೈರವಿ ಪ್ರಿಯತಮ ಜಯಂತನ ಕಣ್ಣಿಗೆ ರಸವನ್ನು ಬಿಡುತ್ತಾನೆ. ಆಗ ಆತನ ಎದುರಿಗೆ ಪದ್ಮಿನಿ ಬರುವಂತೆ ರತಿ ಹುನ್ನಾರ ಹೂಡುತ್ತಾಳೆ. ಪ್ರೇಮಪಾಶಕ್ಕೆ ಸಿಲುಕಿದ ಜಯಂತ ಪದ್ಮಿನಿಯ ಹಿಂದೆ ಹೋಗುತ್ತಾನೆ. ಆಗ ಮತ್ತೆ ಗೊಂದಲ ಶುರುವಾಗುತ್ತದೆ. ಪ್ರೇಮಿಗಳನ್ನು ಒಂದು ಮಾಡುವ ಉದ್ದೇಶದಿಂದ ಮನ್ಮಥ ಕಾರ್ಯಪ್ರವೃತ್ತನಾಗುತ್ತಾನೆ. ಇದರ ಹಿಂದೆ ರತಿಯ ಕೈವಾಡ ಇರುವುದು ಅರಿವಿಗೆ ಬಂದಾಗ ಆಕೆಗೆ ತಕ್ಕ ಪಾಠ ಕಲಿಸಬೇಕು ಎಂದು ಒಂದು ತಂತ್ರ ಹೂಡುತ್ತಾನೆ.

ನೀಲೋನ್ಮಥ ಹೂವಿನ ರಸವನ್ನು ರತಿಯ ಕಣ್ಣಿಗೆ ಬಿಡುತ್ತಾನೆ. ಆಕೆ ಕಣ್ಣು ತೆರೆದಾಗ ಮಡಿವಾಳ ಮಾಚಯ್ಯ ಕಾಣುತ್ತಾನೆ. ಅವನ ಮೇಲೆ ರತಿಗೆ ಪ್ರೇಮ ಉಂಟಾಗುತ್ತದೆ.
ಇದೇ ವೇಳೆ ಕಾಡಿನ ಇನ್ನೊಂದು ಸ್ಥಳದಲ್ಲಿ ಕೆಲಸಗಾರರ ಗುಂಪೊಂದು ಪ್ರಮೀಳ ಮತ್ತು ಅರ್ಜುನರ ಮದುವೆ ತಯಾರಿಯನ್ನು ಸಂಭ್ರಮದಿಂದ ಮಾಡುತ್ತಿರುತ್ತಾರೆ. ತೀವ್ರ ಗೊಂದಲ ಮೂಡಿಸುವ ಸನ್ನಿವೇಶವನ್ನು ಸರಿ ಮಾಡುವ ಸಲುವಾಗಿ ಮನ್ಮಥ ಮುಂದಾಗುತ್ತಾನೆ.

ರತಿಗೂ ತನ್ನ ತಪ್ಪಿನ ಅರಿವಾಗುತ್ತದೆ. ಕೊನೆಗೆ ಜಯಂತ ಕೈರವಿ, ವಸಂತ, ಪದ್ಮಿನಿ ಹಾಗೂ ಪ್ರಮಿಳಾ ಅರ್ಜುನರ ವಿವಾಹ ಒಂದೇ ಸ್ಥಳದಲ್ಲಿ ನಡೆದು, ನಾಟಕಕ್ಕೆ ತೆರೆಬೀಳುತ್ತದೆ.

ಈ ನಾಟಕದಲ್ಲಿ ಬರುವ ಅರ್ಜುನ, ಪ್ರಮೀಳೆ, ರತಿ, ಮನ್ಮಥ ಮತ್ತು ಅಶುಗ ಪೌರಾಣಿಕ ಪಾತ್ರಗಳು ಸೊಗಸಾಗಿವೆ. ಎಲ್ಲ ಪಾತ್ರಧಾರಿಗಳ ನಟನೆ ಕೂಡ ಸ್ವಾಭಾವಿಕವಾಗಿ ಮೂಡಿಬಂದಿವೆ. ಮನ್ಮಥ ಪಾತ್ರಧಾರಿ ರವಿಕುಮಾರ್ ಜೆ.ವಿ ಹಾಗೂ ಅಶುಗ ಪಾತ್ರಧಾರಿ ಪಿ.ಆನಂದ್ ಅವರ ನಟನೆ ಅಮೋಘವಾಗಿ ಮೂಡಿಬಂತು.

ಜಯಂತನ ಪಾತ್ರ ನಿರ್ವಹಿಸಿದ ಪರಮೇಶ್ವರ್ ಮತ್ತು ಪದ್ಮಿನಿ ಪಾತ್ರ ನಿರ್ವಹಿಸಿದ ಬೃಂದಾ ಅವರ ನಟನೆ, ಹಾಸ್ಯಪ್ರಜ್ಞೆ ಮನಸ್ಸಿನಲ್ಲಿ ಕೊನೆವರೆಗೂ ನಿಲ್ಲುತ್ತದೆ. ರಾಘವೇಂದ್ರ ಮಡಿವಾಳ ಮಾಚಯ್ಯನ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ನಟನೆಯು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಚಿದಾನಂದ ಕುಲಕರ್ಣಿ ನಾಟಕಕ್ಕೆ ಸಂಗೀತ ನೀಡಿದ್ದಾರೆ.

ಈ ನಾಟಕದಲ್ಲಿ ಬರುವ ಪಾತ್ರಗಳು ಪ್ರೇಕ್ಷಕನಿಗೆ ಕಚಗುಳಿ ಇಡುತ್ತದೆ. ನಾಟಕದಲ್ಲಿ ಬರುವ ವಿಚಿತ್ರ ತಿರುವುಗಳು ಹಾಗೂ ಹಾಸ್ಯ ಸನ್ನಿವೇಶಗಳ ಸುತ್ತ ಸುತ್ತುವ ಈ ನಾಟಕ ಪ್ರೇಕ್ಷಕರನ್ನು ಸಂಪೂರ್ಣ ನಗೆಗಡಲಿನಲ್ಲಿ ಮುಳುಗಿಸುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT