ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಬೀದಿಯಲ್ಲಿ ಆರೋಪಿಗಳಿಗೆ ಥಳಿತ

ಮಹಿಳಾ ಡಿಎಸ್‌ಪಿ ವಿರುದ್ಧ ತನಿಖೆಗೆ ಆದೇಶ
Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಮಹಿಳಾ ಡಿಎಸ್‌ಪಿ  ನೇತೃತ್ವದ ಪೊಲೀಸರ ತಂಡವೊಂದು ಹತ್ಯೆ ಪ್ರಕರಣದ ಆರೋಪಿಗಳಿಗೆ ಸಾರ್ವ­ಜನಿಕವಾಗಿ ಹೊಡೆಯುತ್ತಿರುವ ದೃಶ್ಯ ಆಂಧ್ರಪ್ರದೇಶದಲ್ಲಿ ಭಾರಿ ಸುದ್ದಿ ಮಾಡಿದೆ. ಸ್ಥಳೀಯ ಮಾಧ್ಯಮಗಳಲ್ಲಿ ಈ ದೃಶ್ಯಗಳು ಪ್ರಸಾರವಾಗಿದ್ದು, ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಪೊಲೀಸ್‌ ಇಲಾಖೆ ಪ್ರಕರಣದ ತನಿಖೆಗೆ ಆದೇಶಿಸಿದೆ.

ಅನಂತಪುರದ ಡಿಎಸ್‌ಪಿ  ಇ. ಸುಪ್ರಜಾ ನೇತೃತ್ವದ ತಂಡ, ಗುಂತ­ಕಲ್‌ ಪಟ್ಟಣದ ಮಾರುಕಟ್ಟೆಯಲ್ಲಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳನ್ನು ಭಾನುವಾರ ಸಾರ್ವಜನಿಕವಾಗಿ ಹೊಡೆ­ಯುತ್ತಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ, ಇತರ ಅಪರಾಧಿ­ಗಳನ್ನು ಹೆದರಿಸುವುದಕ್ಕಾಗಿ ಮತ್ತು ಮಾಡಿದ ತಪ್ಪಿಗೆ ಶಿಕ್ಷೆ ನೀಡುವುದಕ್ಕಾಗಿ ಪೊಲೀಸರು ಆರೋಪಿಗಳಿಗೆ ಸಾರ್ವ­ಜನಿಕವಾಗಿ ಭಾನುವಾರ ಹೊಡೆದಿದ್ದರು. ಆದರೆ, ಈ ಕ್ರಮಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

‘ಕೌಟುಂಬಿಕ ಕಲಹಕ್ಕೆ ಸಂಬಂಧಿಸಿ­ದಂತೆ ತನ್ನ ಮಾವನನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ ಶೇಖರ್‌, ಆತನ ಸಹೋದರ ಮತ್ತು ಇಬ್ಬರು ಸ್ನೇಹಿತ­ರನ್ನು ಪೊಲೀಸರು ಭಾನುವಾರ ಸಾರ್ವ­ಜನಿಕ­ವಾಗಿ ಥಳಿಸಿದ್ದಾರೆ’ ಎಂದು ಜ್ಞಾನ ವಿಜ್ಞಾನ ವೇದಿಕೆಯು ಹೇಳಿಕೆಯಲ್ಲಿ ತಿಳಿಸಿದೆ. ಪೊಲೀಸರ ಈ ಕ್ರಮವು ‘ಮಧ್ಯ ಕಾಲೀನ ಯುಗದ ಕೃತ್ಯ’ ಎಂದು ಅದು ಹೇಳಿದೆ.

ಘಟನೆ ಹಿನ್ನೆಲೆ: ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿದ್ದ ಶೇಖರ್‌ ಹಾಗೂ ಇತರರನ್ನು ವಶಕ್ಕೆ ತೆಗೆದುಕೊಂಡ ಪೊಲೀ ಸರು, ಕೈಗಳನ್ನು ಕಟ್ಟಿ, ಮಂಡಿಯೂರಿ ಕುಳಿತು­ಕೊಳ್ಳುವಂತೆ ಸೂಚಿಸಿದರು. ನಂತರ ಡಿಎಸ್‌ಪಿ ಸುಪ್ರಜಾ, ಇನ್‌ಸ್ಪೆಕ್ಟರ್‌ ಶ್ರೀನಿವಾಸಲು ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಇಸ್ಮಾಯಿಲ್‌ ಕೋಲಿನಿಂದ ಆರೋಪಿ­ಗಳಿಗೆ ಹೊಡೆ­ಯುತ್ತಿರುವ, ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ನಾಲ್ವರ ಕೆನ್ನೆಗೆ ಬಾರಿಸುತ್ತಿರುವ ಹಾಗೂ ಶೇಖರ್‌ನ ಪತ್ನಿಯಿಂದಲೇ ಆತನಿಗೆ ಹೊಡೆಸುವ ದೃಶ್ಯಗಳು ವಿಡಿಯೊ­ದಲ್ಲಿವೆ.

ಘಟನೆಯ ನಡೆದ ಸ್ಥಳದ ಸುತ್ತ ಸೇರಿದ್ದ ಜನರು ಕೂಡ ಪೊಲೀಸರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇನ್ನೂ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಸ್ಥಳೀಯ ಪೊಲೀಸರು ಕೆಲ ವಾರಗಳ ಹಿಂದೆ ಇತರ ಕೆಲವು ಶಂಕಿತ ಆರೋಪಿ­ಗಳಿಗೂ ಇದೇ ರೀತಿ ಶಿಕ್ಷೆ ನೀಡಿದ್ದರು ಎಂದು ಮೂಲಗಳು ಹೇಳಿವೆ.

ತನಿಖೆಗೆ ಆದೇಶ: ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್‌ ಮುಖ್ಯಸ್ಥ ಬಿ. ಪ್ರಸಾದ ರಾವ್‌, ಅನಂತ ಪುರ ಜಿಲ್ಲೆಯಲ್ಲಿ ನಡೆದಿರುವ ಇಂತಹ ಪ್ರಕರಣಗಳ ತನಿಖೆಗೆ ಆದೇಶಿಸಿದ್ದಾರೆ. ಸಿನೀಮಿಯ ಶೈಲಿಯಲ್ಲಿ ಸಾರ್ವಜನಿಕವಾಗಿ ಆರೋಪಿಗಳಿಗೆ ಹೊಡೆದ ಪ್ರಕರಣಗಳ ಕುರಿತಾಗಿ ವರದಿ ನೀಡುವಂತೆ ಡಿಐಜಿ ಅವರಿಗೆ ರಾವ್‌ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT