ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕಾಮಗಾರಿಗೂ ಬಿಲ್!

Last Updated 16 ಜುಲೈ 2012, 5:15 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ನಡೆದಿರುವ ರಸ್ತೆ ಕಾಮಗಾರಿಗಳಲ್ಲಿ ಹೇರಾಪೇರಿ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿರುವ ಬಲಮುರಿ ಸಂಪರ್ಕ ರಸ್ತೆಯನ್ನು (221 ಮೀಟರ್) ರೂ.4 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಎಂ.ಬಿ.ಪುಸ್ತಕದಲ್ಲಿ ದಾಖಲಿಸಲಾಗಿದೆ. `ಬಲಮುರಿ ರಸ್ತೆಯಿಂದ ಹರಿಜನ ಕಾಲೋನಿ~ ವರೆಗೆ 180 ಮೀಟರ್ ರಸ್ತೆ ಅಭಿವೃದ್ಧಿ ಎಂದು ಅದೇ ಪುಸ್ತಕದಲ್ಲಿ ಮತ್ತೆ ತಿರುವು ಮುರುವಾಗಿ ನಮೂದಾಗಿದೆ. ವಾಸ್ತವದಲ್ಲಿ ಸದರಿ ರಸ್ತೆಯ ಕಳೆಯನ್ನು ಕೂಡ ಕಿತ್ತಿಲ್ಲ.

ಮತ್ತೊಂದೆಡೆ ಗಾಣಿಗರ ಸಮುದಾಯ ಭವನದ ವರೆಗಿನ ರಸ್ತೆ ಅಭಿವೃದ್ಧಿಯಾಗಿದೆ ಎಂದು ತೋರಿಸಲಾಗಿದೆ. ಇದೇ ರಸ್ತೆಯನ್ನು `ಬೋರಣ್ಣನ ಮನೆ ವರೆಗಿನ ರಸ್ತೆ~ ಹೆಸರಿನ ಕಾಮಗಾರಿಯಲ್ಲಿ ಅಭಿವೃದ್ಧಿ ಮಾಡ ಲಾಗಿದೆ. ಜನರ ದಿಕ್ಕು ತಪ್ಪಿಸಿರುವ ಪ್ರಕರಣ ಇದಾಗಿದೆ.

ಭಾಗ್ಯಲಕ್ಷ್ಮಿ ಟ್ರೇಡರ್ಸ್‌ನಿಂದ ಚಿಕ್ಕಜವರಣ್ಣನ ಮನೆವರೆಗಿನ 180 ಮೀಟರ್ ರಸ್ತೆಯನ್ನು ರೂ.2ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಿರುವುದಾಗಿ ದಾಖಲೆ ಹೇಳುತ್ತದೆ. ಆದರೆ ಇಲ್ಲಿ ಮೊಳದುದ್ದವೂ ಕಾಮಗಾರಿ ನಡೆದಿಲ್ಲ. `ಸೊಸೈಟಿ ಹಿಂಭಾಗದ ರಸ್ತೆ~ಯನ್ನು `ಕೇಬಲ್ ನಾಗೇಂದ್ರ ಮನೆಯ ರಸ್ತೆ~ಯ ಹೆಸರಿನಲ್ಲಿ ಕೂಡ ಅಭಿವೃದ್ಧಿ ಮಾಡಿರುವುದು ಅಚ್ಚರಿ ಹುಟ್ಟಿಸುತ್ತದೆ.

  ಒಂದು ರಸ್ತೆ ಎರಡು ಹೆಸರಿನಲ್ಲಿ ಅಭಿವೃದ್ಧಿ ಕಂಡಿರುವ ಹಾಗೂ ಕಾಮಗಾರಿ ನಡೆಯದೇ ಇದ್ದರೂ ಪುಸ್ತಕದಲ್ಲಿ ಅಭಿವೃದ್ಧಿ ಮಾಡಿರುವ ಪ್ರಕರಣ ಗ್ರಾಮದ ವಿಷಕಂಠು ಎಂಬವರು ಮಾಹಿತಿ ಹಕ್ಕು ಅಧಿನಿಯಮ-2005ರ ಅಡಿಯಲ್ಲಿ ಪಡೆದುಕೊಂಡಿರುವ ಮಾಹಿತಿಯಿಂದ ಬಹಿರಂಗ ಗೊಂಡಿವೆ.

ಬೆಳಗೊಳ ಗ್ರಾಮದ ಸುವರ್ಣ ಗ್ರಾಮೋದಯ ಯೋಜನೆಯಡಿ ನಡೆದಿರುವ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು~ ಎಂದು ವಿಷಕಂಠು ಒತ್ತಾಯಿಸಿದ್ದಾರೆ.

`ಬೆಳಗೊಳ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ನಡೆದಿರುವ ಎಲ್ಲ ಕಾಮಗಾರಿಗಳಿಗೆ ಬಿಲ್ ಪಾವತಿಸಿಲ್ಲ. ಪೂರ್ಣಗೊಂಡಿರುವ ಹಾಗೂ ಗುಣಮಟ್ಟದ ಕಾಮಗಾರಿಗಳಿಗೆ ಮಾತ್ರ ಬಿಲ್ ಪಾವತಿಸಲಾಗಿದೆ.

ಎಂ.ಬಿ.ಪುಸ್ತಕದಲ್ಲಿ ನಮೂದಾಗಿರುವ ಕಾಮಗಾರಿಯಲ್ಲಿ ಲೋಪ ಆಗಿಲ್ಲ. ಗುತ್ತಿಗೆದಾರರು ಮೋಸ ಮಾಡದಂತೆ ಎಚ್ಚರ ವಹಿಸಿದ್ದೇವೆ. ಗ್ರಾಮದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾಮಗಾರಿಗಳು ನಡೆಯುತ್ತಿವೆ~ ಎಂದು ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಂತಯ್ಯ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
-ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT