ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ನಗರ ಸಭೆ: 12ಕೋಟಿ ಕಾಮಗಾರಿಗೆ ತಡೆ

Last Updated 18 ಜೂನ್ 2012, 7:50 IST
ಅಕ್ಷರ ಗಾತ್ರ

ಮಂಡ್ಯ: ಜಾತ್ಯಾತೀತ ಜನತಾ ದಳದಲ್ಲಿನ ಆಂತರಿಕ ಕಿತ್ತಾಟದಿಂದಾಗಿ ನಗರಸಭೆಯ ಸಾಮಾನ್ಯ ಸಭೆ ಕಳೆದ ನಾಲ್ಕು ತಿಂಗಳಿಂದ ನಡೆದಿಲ್ಲ. ಪರಿಣಾಮ ನಗರದಲ್ಲಿ ವಿವಿಧೆಡೆ ತೆಗೆದುಕೊಳ್ಳಲು ಉದ್ದೇಶಿಸಿದ್ದ 12 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿದೆ.

2011-12ನೇ ಸಾಲಿನ 1.23 ಕೋಟಿ ರೂ, ರೂ, 2012-13 ಸಾಲಿನ 10.88 ಕೋಟಿ ರೂಪಾಯಿ ಏಪ್ರಿಲ್‌ನಲ್ಲಿಯೇ ಬಿಡುಗಡೆ ಯಾಗಿದೆ. ಅದಕ್ಕೆ ಕ್ರಿಯಾ ಯೋಜನೆಯನ್ನೂ ತಯಾರಿಸಲಾಗಿದೆ. ಆದರೆ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಬೇಕಿರುವ ಸಾಮಾನ್ಯಸಭೆ ನಡೆದಿಲ್ಲ.

2011-12ನೇ ಸಾಲಿನ ಎಸ್‌ಎಫ್‌ಸಿ ಪ್ರೋತ್ಸಾಹ ಅನುದಾನವಾಗಿ 9.64 ಲಕ್ಷ ರೂ, ಮಳೆ ನೀರು ಸಂಗ್ರಹಕ್ಕಾಗಿ 5 ಲಕ್ಷ ರೂ ಹಾಗೂ ಹೆಚ್ಚುವರಿ ಅನುದಾನವಾಗಿ 10.62 ಹಾಗೂ ಸಮಗ್ರ ಆಡಳಿತಕ್ಕಾಗಿ 98.30 ಲಕ್ಷ ರೂಪಾಯಿ ಮಾರ್ಚ್ ಅಂತ್ಯದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಅಭಿವೃದ್ಧಿಗಾಗಿ 186.64 ಲಕ್ಷ ರೂ, ಹಿಂದುಳಿದ ವರ್ಗದ ಜನರ ಅಭಿವೃದ್ಧಿಗಾಗಿ 60.44, ಅಂಗವಿಕಲರಿಗಾಗಿ 25 ಲಕ್ಷ, ಕೆಯುಐಡಿಎಫ್‌ಸಿ ಸಾಲದ ಬಾಬ್ತಿನಲ್ಲಿ ಒಂದು ಕೋಟಿ ರೂ ಬಿಡುಗಡೆಯಾಗಿದೆ.

ಅಭಿವೃದ್ಧಿ ಕಾಮಗಾರಿಗಳಿಗಾಗಿ 461.50 ಕೋಟಿ ರೂ, 2012-13ನೇ ಸಾಲಿನ ಅನುದಾ ನವಾಗಿ 205.87 ಲಕ್ಷ ರೂ, ರಸ್ತೆ ಮತ್ತು ಸೇತುವೆಗಳ ನಿರ್ವಹಣೆಗಾಗಿ 49 ಲಕ್ಷ ರೂಪಾಯಿಯನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ನಗರಸಭೆ ಅಧಿಕಾರಿಗಳು ಈ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿದ್ದಾರೆ. ಆದರೆ ಅದಕ್ಕೆ ಸಾಮಾನ್ಯಸಭೆ ಒಪ್ಪಿಗೆ ನೀಡಬೇಕು. ಬದಲಾವಣೆಗಳನ್ನು ಸೂಚಿಸಿದರೆ ಮತ್ತೊಮ್ಮೆ ಕ್ರಿಯಾ ಯೋಜನೆಯನ್ನು ತಯಾರಿಸಲು ತಿಂಗಳಗಟ್ಟಲೇ ಸಮಯ ಹಿಡಿಯುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಯೊಬ್ಬರು.

ಆದರೆ ಫೆಬ್ರುವರಿ ತಿಂಗಳಿನಿಂದ ಇತ್ತೀಚೆಗೆ ಸಾಮಾನ್ಯಸಭೆ ನಡೆದಿಲ್ಲ. ಏಪ್ರಿಲ್‌ನಲ್ಲಿ ಬಜೆಟ್ ಸಭೆ ನಡೆದಿದೆಯಾದರೂ ಅಲ್ಲಿ ಇದಕ್ಕೆ ಒಪ್ಪಿಗೆ ಪಡೆಯುವಂತಿರಲಿಲ್ಲ. ಹೀಗಾಗಿ ಅನುದಾನವು ಹಾಗೆಯೇ ಉಳಿದಿದೆ.
ನಗರಸಭೆ ಸದಸ್ಯ, ಜೆಡಿಎಸ್ ಪಕ್ಷದ  ಎಂ.ಪಿ. ಅರುಣಕುಮಾರ್ ನಗರಸಭೆಯ ಅಧ್ಯಕ್ಷ ರಾಗಿದ್ದಾರೆ. ಪಕ್ಷದೊಳಗೆ ಆಗಿದ್ದ ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದ ಸದಸ್ಯರೇ ಯತ್ನಿಸುತ್ತಿದ್ದಾರೆ. ಇದಕ್ಕೆ ಪಕ್ಷದ ಹೈಕಮಾಂಡ್ ಕೂಡಾ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಅರುಣಕುಮಾರ್ ಪಕ್ಷೇತರರ ನೆರವಿನೊಂದಿಗೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.

ಜೆಡಿಎಸ್‌ನ ಕೆಲ ಸದಸ್ಯರು ಸೇರಿಕೊಂಡು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಯತ್ನಿಸಿದ್ದಾರೆ. ಅದೂ ಸಾಧ್ಯ ವಾಗಿಲ್ಲ. ಈ ಆಂತರಿಕ ಕಚ್ಚಾಟದ ಪರಿಣಾಮ ವಾಗಿಯೇ ಅಧ್ಯಕ್ಷರು ಸಾಮಾನ್ಯಸಭೆಯನ್ನು ಕರೆಯಲು ಮುಂದಾಗುತ್ತಿಲ್ಲ. ಪರಿಣಾಮವನ್ನು ನಗರದ ಜನರು ಅನುಭವಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT