ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನದಿ ತೀರದ ಜನರಿಗೆ ಮುನ್ನೆಚ್ಚರಿಕೆ'

Last Updated 4 ಜುಲೈ 2013, 6:42 IST
ಅಕ್ಷರ ಗಾತ್ರ

ರಾಣೆಬೆನ್ನೂರು: `ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯತ್ತಿದ್ದು, ಭದ್ರಾ ಡ್ಯಾಂನಿಂದ ಹೆಚ್ಚಿನ ನೀರು ಬಿಡುವುದರಿಂದ ತುಂಗಭದ್ರಾ ನದಿಯ ನೀರಿನ ಹರವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಪ್ರದೇಶದ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂದು ಗ್ರಾಮ ಮಟ್ಟದ ಅಧಿಕಾರಿಗಳ 36 ತಂಡಗಳನ್ನು ರಚಿಸಿ ವಾಸ್ತವಿಕ ವರದಿ ನೀಡಲು ಸೂಚಿಸಲಾಗಿದೆ' ಎಂದು ಮಾಜಿ ಸಚಿವರು ಹಾಗೂ ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಹಾನಿಯಿಂದ ಮತ್ತು ಪ್ರವಾಹದಿಂದ ಬೆಳೆ ಹಾನಿ, ಜನ ಜಾನುವಾರುಗಳಿಗೆ ಯಾವುದೇ ತೊಂದರೆಗೆ ಒಳಗಾದಲ್ಲಿ ತಕ್ಷಣ ತಿಳಿಸಲು ತಹಶೀಲ್ದಾರ್ ಕಚೇರಿಯಲ್ಲಿ ಸಲಹಾ ಕೇಂದ್ರ ತೆರೆಯಲಾಗಿದೆ. 266405 ಕರೆ ಮಾಡಬಹುದು. ದಿನದ 24 ಗಂಟೆ ಕೂಡ ತೆರೆದಿರುತ್ತದೆ, ಸಾರ್ವಜನಿಕರು ದೂರು ನೀಡಿದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ತುಂಗಭದ್ರಾ ನದೀ ತೀರದ 23 ಗ್ರಾಮಗಳು ಮತ್ತು ಕುಮದ್ವತಿ ನದಿ ತೀರದ 19 ಗ್ರಾಮಗಳಲ್ಲಿ ಹೊಳೆ ದಂಡೆಯ ಸಮೀಪ ವಾಸಿಸುವ ಜನರಿಗೆ ಮುಂಜಾಗ್ರತೆ ಎತ್ತರದ ಪ್ರದೇಶಕ್ಕೆ ತೆರಳಲು ತಿಳಿಸಲಾಗಿದೆ. ಯಾವುದೇ ಹಾನಿಗೀಡಾದಲ್ಲಿ ಅಧಿಕಾರಿಗಳು ತಕ್ಷಣ ಸಂದಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೋಳಿವಾಡರು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಎಚ್.ಕೆ.ಶಿವಕುಮಾರ ಮಾತನಾಡಿ, ಈಗಾಗಲೇ ಮಳೆ, ಬೆಳೆ ಹಾನಿ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ನದಿ ತೀರದ 42 ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ  ನೀಡಲಾಗಿದೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಲು ಸೂಚಿಸಿದೆ ಎಂದರು.

ಬೆಳೆ ಹಾನಿ, ಜಾನುವಾರುಗಳಿಗೆ ತೊಂದರೆಯಾದಲ್ಲಿ ಮತ್ತು ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲು ಮುಂಜಾಗ್ರತಾ ಕ್ರಮವಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಸಲಹಾ ಕೇಂದ್ರ ಅಷ್ಟೇ ಅಲ್ಲದೇ ತಹಶೀಲ್ದಾರ್ ಎಚ್.ಕೆ. ಶಿವಕುಮಾರ ಮೊ. ನಂ: 9448357490 ಮತ್ತು ಗ್ರೇಡ್-2 ತಹಶೀಲ್ದಾರ್ ಬಸವರಾಜ ರಿತ್ತಿ ಮೊ. ನಂ: 9980447509 ಇವರಿಗೆ ತಕ್ಷಣ ದೂರವಾಣಿ ಮೂಲಕ ತಿಳಿಸಬಹುದು, ತಕ್ಷಣ ಪರಿಹಾರ ನೀಡಲಾಗುವುದು, ಇದಕ್ಕಾಗಿ 13.76 ಲಕ್ಷ ರೂಪಾಯಿ ಪರಿಹಾರ ಹಣ ಕಾಯ್ದಿರಿಸಲಾಗಿದೆ ಎಂದರು.

ಎಪಿಎಂಸಿ ಮೆಗಾ ಮಾರುಕಟ್ಟೆ, ಮೆಕ್ಕೆಜೋಳ ಪಾರ್ಕ್, ದೊಡ್ಡ ಕೆರೆ ಅಭಿವೃದ್ಧಿ ಸೇರಿದಂತೆ 30ಕ್ಕೂ ಹೆಚ್ಚು  ಯೋಜನೆಗಳ ಬಗ್ಗೆ ಸದನದಲ್ಲಿ ಈಗಾಗಲೇ ಚರ್ಚಿಸಲಾಗಿದೆ ಎಂದರು.

ತಾಲ್ಲೂಕಿನಾದ್ಯಂತ ಮತ್ತು ನಗರದಲ್ಲಿ ಅನಧಿಕೃತ ಕಟ್ಟಡ ಕಟ್ಟುವುದು, ಅನಧಿಕೃತ ಬಡಾವಣೆ ಮಾಡುವುದು, ಲೇಔಟ್, ಸೈಟ್ ಹಂಚಿಕೆ ನಡೆದಿದ್ದು, ಈ ಬಗ್ಗೆ ತಹಶೀಲ್ದಾರರು ಯಾರು ಅನಧಿಕೃತ ಬಡಾವಣೆ ನಿರ್ಮಿಸಿದ್ದಾರೆ ಅಂಥವರಿಗೆ ನೋಟಿಸು ನೀಡಿದ್ದಾರೆ, ಅವರು ಯಾರು ಎಂಬುದು ನಮ್ಮ ಗಮನಕ್ಕೂ ಬಂದಿದೆ ಎಂದರು. 

ಕಳೆದ ಎರಡು ತಿಂಗಳಲ್ಲಿ ತಾಲ್ಲೂಕಿನ ಪ್ರಗತಿ ಬಗ್ಗೆ ಎರಡು ಮೂರು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಒಂದೇ ಬಾರಿಗೆ ಎಲ್ಲ ಸರಿಪಡಿಸಲು ಆಗುವುದಿಲ್ಲ, ಹಂತಹಂತವಾಗಿ ಸರಿಪಡಿಸಲಾಗುವುದು ಎಂದು ಕೋಳಿವಾಡ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT