ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗುವುದೇ ಮೊದಲ ಜಯದ ಕನಸು?

ರಣಜಿ ಕ್ರಿಕೆಟ್: ಮುಂಬೈ ಎದುರು ಇಂದಿನಿಂದ ಪಂದ್ಯ, ಕ್ವಾರ್ಟರ್‌ ಫೈನಲ್‌ ಮೇಲೆ ಕರ್ನಾಟಕ ಕಣ್ಣು
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯದ ಅಪ್ಪುಗೆಗಾಗಿ ನಿರೀಕ್ಷೆ ಅತಿಯಾಗಿದೆ. ಹಾಲಿ ಚಾಂಪಿಯನ್‌ ಮುಂಬೈ ತಂಡದ ಎದುರು ಜಯವೆಂಬ ಗೆಳತಿಯನ್ನು ಒಲಿಸಿಕೊಳ್ಳಲು ಕರ್ನಾಟಕ ಕಾತರದಿಂದ ಕಾಯುತ್ತಿದೆ. ಈ ಕನಸು ನನಸಾಗುವುದೇ?

ಹೀಗೊಂದು ಪ್ರಶ್ನೆಯನ್ನು ಎದುರಿಗೆ ಇಟ್ಟು ಕೊಂಡು ಕರ್ನಾಟಕ ತಂಡ ರಣಜಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಮುಂಬೈ ಎದುರು ಹೋರಾಟ ನಡೆಸಲಿದೆ. ಇದಕ್ಕೆ ಭಾನು ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಮುಹೂರ್ತ.

ಕರ್ನಾಟಕ ಮತ್ತು ಮುಂಬೈ ತಂಡಗಳು 1941–42ರ ರಣಜಿಯಲ್ಲಿ ಮೊದಲ ಸಲ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಮುಂಬೈ (ಅಂದಿನ ಬಾಂಬೆ) ಗೆಲುವು ಪಡೆದಿತ್ತು. ನಂತರ ಉಭಯ ತಂಡಗಳು 21 ಸಲ ಪೈಪೋಟಿ ನಡೆಸಿವೆ. ಆದರೂ, ಕರ್ನಾಟಕಕ್ಕೆ ಒಂದೇ ಒಂದು ಗೆಲುವು ಸಾಧ್ಯವಾಗಿಲ್ಲ!
ವಿನಯ್‌ ಕುಮಾರ್‌ ಸಾರಥ್ಯದ ಕರ್ನಾಟಕ ತಂಡ  ಮುಂಬೈ ಎದುರು ನನಸಾಗದೇ ಉಳಿದ ಗೆಲುವಿನ ಕನಸನ್ನು ಈ ಸಲ ಸಾಕಾರ ಮಾಡಿ ಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದೆ. ಶನಿವಾರ ಕ್ರೀಡಾಂಗಣದಲ್ಲಿ ಆಭ್ಯಾಸ ನಡೆಸುವಾಗ ಆಟ ಗಾರರ ಮೊಗದಲ್ಲಿ ನಲಿದಾಡುತ್ತಿದ್ದ ಆತ್ಮವಿಶ್ವಾಸ ಇದಕ್ಕೆ ಸಾಕ್ಷಿ.

ಯಾರಿಗೆ ಮೇಲುಗೈ?: 40 ಸಲ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಮತ್ತು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಕರ್ನಾಟಕ ಇವುಗಳಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎನ್ನುವ ಕುತೂಹಲವಿದೆ.

ಹಿಂದಿನ ಪಂದ್ಯಗಳಲ್ಲಿ ಜಾರ್ಖಂಡ್‌, ಗುಜರಾತ್‌ ಹಾಗೂ ವಿದರ್ಭ ತಂಡಗಳ  ಎದುರು ಡ್ರಾ ಸಾಧಿಸಿದ್ದ ಆತಿಥೇಯರು ನಂತರ ಒಡಿಶಾ, ಹರಿಯಾಣ ಮತ್ತು ಪಂಜಾಬ್‌ ತಂಡಗಳ ಎದುರು ಗೆಲುವು ಸಾಧಿಸಿದ್ದರು. ಈಗ ಸತತ ನಾಲ್ಕನೇ ಗೆಲುವು ಪಡೆಯುವ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶದ ಹಾದಿ ಸುಗಮ ಮಾಡಿಕೊಳ್ಳುವ ಲೆಕ್ಕಾಚಾರ ಹೊಂದಿದ್ದಾರೆ.

ಆರು ಪಂದ್ಯಗಳಿಂದ 612 ರನ್ ಕಲೆ ಹಾಕಿರುವ ಕೆ.ಎಲ್‌. ರಾಹುಲ್‌, 455 ರನ್ ಗಳಿಸಿರುವ ಮನೀಷ್‌ ಪಾಂಡೆ, ಗಣೇಶ್‌ ಸತೀಶ್ ಕರ್ನಾಟಕದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ರಾಹುಲ್‌  ನಿರೀಕ್ಷೆಗೂ ಮೀರಿ ಪ್ರದರ್ಶನ ತೋರಿದ್ದಾರೆ. ಹರಿಯಾಣ ಎದುರು 98 ಮತ್ತು ಪಂಜಾಬ್‌ ವಿರುದ್ಧ 92 ರನ್‌ ಕಲೆ ಹಾಕಿದ್ದು ಇದಕ್ಕೆ ಸಾಕ್ಷಿ.

ರಣಜಿಯಲ್ಲಿ ಮೊದಲ ಶತಕ ಗಳಿಸಿರುವ ವಿನಯ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಾಮರ್ಥ್ಯ ತೋರಿದ್ದಾರೆ. ಕರ್ನಾಟಕ ಬೌಲಿಂಗ್‌ನಲ್ಲಿ ವೇಗಿಗಳ ಮೇಲೆ ಅವಲಂಬಿತವಾಗಿದೆ. ಒಟ್ಟು 26 ವಿಕೆಟ್‌ಗಳನ್ನು ಪಡೆದಿರುವ ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌ (17 ವಿಕೆಟ್‌), ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ ಅವರ ಮುಂದೆ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಮುಂಬೈ ತಂಡವನ್ನು ಕಟ್ಟಿಹಾಕಬೇಕಾದ ಸವಾಲಿದೆ.

2009–10ರಲ್ಲಿ ಫೈನಲ್‌ ಪಂದ್ಯವನ್ನಾಡಲು ಮುಂಬೈ ತಂಡ ಮೈಸೂರಿಗೆ ಬಂದಿತ್ತು. ಮೂರು ವರ್ಷಗಳ ನಂತರ ಮತ್ತೆ ಕರ್ನಾಟಕಕ್ಕೆ ಬಂದಿದೆ. 2011–12ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯವು ಡ್ರಾ ಆಗಿತ್ತು. ಆ ಪಂದ್ಯದಲ್ಲಿ ಕರ್ನಾಟಕದ ಮನೀಷ್‌ ದ್ವಿಶತಕ ಹಾಗೂ ಅಮಿತ್‌ ವರ್ಮ ಶತಕ ಬಾರಿಸಿದ್ದರು. ಗಾಯಗೊಂಡಿರುವ ಅಬ್ರಾರ್‌ ಖಾಜಿ ಬದಲು ಸ್ಥಾನ ಗಳಿಸಿರುವ ಅಮಿತ್‌ ಅವರನ್ನು ಈ ಪಂದ್ಯದಲ್ಲಿ ಆಡಿಸುವ ಸಾಧ್ಯತೆಯಿದೆ. ಅನುಭವಿ ಅಮಿತ್‌ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದರೆ, ಕರುಣ್‌ ನಾಯರ್‌ ಹೊರಗುಳಿಯಬೇಕಾಗುತ್ತದೆ.

ಮುಂಬೈಗೂ ಜಯದ ಆಸೆ:
ಹಿಂದಿನ ಪಂದ್ಯದಲ್ಲಿ ಒಡಿಶಾ ಎದುರು ಡ್ರಾ ಸಾಧಿಸಿರುವ ವಾಸಿಮ್‌ ಜಾಫರ್‌ ಸಾರಥ್ಯದ ಮುಂಬೈ ಬಳಗ ಗೆಲುವು ಪಡೆದು ಎಂಟರ ಘಟ್ಟ ಪ್ರವೇಶಿಸುವ ಆಸೆ ಹೊಂದಿದೆ. ಆದರೆ, ಧವಳ್‌ ಕುಲಕರ್ಣಿ, ಅಕ್ಬರ್‌ ಖಾನ್‌ ಮತ್ತು ಆಲ್‌ರೌಂಡರ್‌ ಅಭಿಷೇಕ್‌ ನಾಯರ್‌ ಗಾಯಗೊಂಡಿರುವುದು ಚಿಂತೆಗೆ ಕಾರಣವಾಗಿದೆ.

ಒಡಿಶಾ ಎದುರು ಜಾಫರ್‌ ಮತ್ತು ಹಿಕೆನ್‌ ಷಾ ಶತಕ ಗಳಿಸಿದ್ದರು. ವೇಗಿ ಜಾವೇದ್‌ ಖಾನ್‌, ಶಾರ್ದುಲ್‌ ಠಾಕೂರ್‌ ಅವರನ್ನೊಳಗೊಂಡ ಮುಂಬೈನ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಈ ತಂಡ ಆರು ಪಂದ್ಯಗಳನ್ನಾಡಿ 23 ಪಾಯಿಂಟ್‌ ಗಳನ್ನು ಹೊಂದಿದೆ. ಕರ್ನಾಟಕದ್ದು 26 ಪಾಯಿಂಟ್‌. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಹೊಂದಿರುವ ದಿಗ್ಗಜರ ನಡುವಿನ ಹೋರಾಟ ದಲ್ಲಿ ಮೇಲುಗೈ ಯಾರಿಗೆ ಎನ್ನುವುದೇ ಈಗ ಗರಿಗೆದರಿರುವ ಕುತೂಹಲ.


                                                    ತಂಡಗಳು ಇಂತಿವೆ

ಕರ್ನಾಟಕ
ವಿನಯ್‌ ಕುಮಾರ್‌ (ನಾಯಕ), ಕೆ.ಎಲ್‌. ರಾಹುಲ್‌, ಮಯಂಕ್‌ ಅಗರವಾಲ್‌, ಗಣೇಶ್‌ ಸತೀಶ್‌, ಮನೀಷ್‌ ಪಾಂಡೆ, ಅಮಿತ್‌ ವರ್ಮ, ಸ್ಟುವರ್ಟ್‌್ ಬಿನ್ನಿ, ಸಿ.ಎಂ. ಗೌತಮ್‌ (ವಿಕೆಟ್‌ ಕೀಪರ್), ಅಭಿಮನ್ಯು ಮಿಥುನ್‌, ಕೆ.ಪಿ. ಅಪ್ಪಣ್ಣ, ಎಚ್‌.ಎಸ್‌. ಶರತ್‌್, ರೋನಿತ್‌ ಮೋರೆ, ಕರುಣ್‌ ನಾಯರ್‌, ಆರ್‌. ಸಮರ್ಥ್‌ ಮತ್ತು ಶ್ರೇಯಸ್‌ ಗೋಪಾಲ್‌.

ಮುಂಬೈ
ವಾಸಿಮ್‌ ಜಾಫರ್‌ (ನಾಯಕ), ಆದಿತ್ಯ ತಾರೆ (ವಿಕೆಟ್‌ ಕೀಪರ್‌), ಕೌಸ್ತುಬ್‌ ಪವಾರ್‌, ಹಿಕೆನ್‌ ಷಾ, ಸೂರ್ಯ ಕುಮಾರ್‌ ಯಾದವ್‌, ಬಲ್ವೀಂದರ್‌ ಸಿಂಗ್‌ ಸಂಧು, ವಿಶಾಲ್‌ ದಭೋಳ್ಕರ್‌, ಸಿದ್ದೇಶ್‌ ಲಾಡ್‌, ಜಾವೇದ್‌ ಖಾನ್‌, ಶಾರ್ದುಲ್‌  ಠಾಕೂರ್‌, ಮನೀಷ್‌ ರಾವ್‌, ಪ್ರವೀಣ್‌ ತಾಂಬೆ, ಕೆ. ಸಾಗರ್‌, ಎನ್‌. ಸೌರಭ್‌ ಮತ್ತು ಸುಬ್ರಮಣಿಯನ್‌ ದೊರೆಸ್ವಾಮಿ. 

ಅಂಪೈರ್‌ಗಳು: ಅನಿಲ್‌ ಕುಮಾರ್‌ ಚೌಧರಿ (ದೆಹಲಿ), ನಿತಿನ್ ಪಂಡಿತ್‌ (ವಿದರ್ಭ).
ಮೂರನೇ ಅಂಪೈರ್‌: ಆರ್‌. ಮದನ್‌ ಗೋಪಾಲ್‌ (ತಮಿಳುನಾಡು). ರೆಫರಿ: ಆರ್‌. ಸಂಜಯ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT