ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮಗು ಹಠಮಾರಿ! ಯಾಕೆ?

Last Updated 24 ಜೂನ್ 2011, 19:30 IST
ಅಕ್ಷರ ಗಾತ್ರ

`ಇವನು ಹೇಳಿದ ಮಾತು ಸ್ವಲ್ಪವೂ ಕೇಳೋದಿಲ್ಲ. ಏನಾದರೂ ಬೇಕೆಂದರೆ ಕೊಡಿಸೋವರೆಗೂ ಬಿಡೋದಿಲ್ಲ. ತುಂಬ ಹಠ ಮಾಡ್ತಾನೆ. ಹೇಳಿದ ಮಾತು ಸ್ವಲ್ಪಾನೂ ಕೇಳೋದಿಲ್ಲ. ನನಗಂತೂ ಸಾಕಾಗಿ ಹೋಗಿದೆ.~

ಇದು  ಅನೇಕ ತಂದೆ ತಾಯಂದಿರ ಅಳಲು. ಇದು ಬಹುಶಃ ನಮ್ಮ ದೇಶದ ಸಾವಿರಾರು ಮಹಿಳೆಯರ ದಿನನಿತ್ಯದ ಸಮಸ್ಯೆಯಾಗಿದೆ.

ತಮ್ಮ ಮಕ್ಕಳು ಹೇಳಿದ ಮಾತನ್ನು ಕೇಳಿಕೊಂಡು, ಹಠಮಾಡದೆ, ವಿಧೇಯರಾಗಿ ಇರಬೇಕೆಂಬುದು ಎಲ್ಲಾ ತಂದೆ ತಾಯಂದಿರ ಆಸೆ. ಆದರೆ ಅವಿಧೇಯತೆ ಹಾಗೂ ಹಠಮಾರಿತನ ಮಕ್ಕಳಲ್ಲಿ ಕಂಡುಬರುವ ಅತಿ ಸಾಮಾನ್ಯವಾದ ಸಮಸ್ಯೆಯಾಗಿದ್ದು, ಅನೇಕ ಬಾರಿ ಇದು ಇಡೀ ಮನೆಯ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಮಾತು ಕೇಳದ, ಹಠಮಾರಿ ಮಕ್ಕಳನ್ನು ನಿಯಂತ್ರಿಸಲು ತಂದೆತಾಯಂದಿರು ಸಾಮಾನ್ಯವಾಗಿ ಬಳಸುವ ಅಸ್ತ್ರ - ಶಿಕ್ಷೆ.
 
ಇದು ಮಿತಿ ಮೀರಿದಾಗ ಮಗು ತಿರುಗಿ ನಿಲ್ಲುವುದು, ಪೋಷಕರ ಮೇಲೆಯೇ ಕೈ ಮಾಡುವುದು, ಮನೆ ಬಿಟ್ಟು ಓಡುವುದು ಅಥವಾ ಸಮಾಜ ವಿರೋಧಿ ಪ್ರವೃತ್ತಿಯಲ್ಲಿ ತೊಡಗುವ ಸಾಧ್ಯತೆಗಳೂ ಇವೆ. ಈ ಜಟಿಲ ಸಮಸ್ಯೆಯ ಕಾರಣಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಈಗ ಸ್ವಲ್ಪ ಅವಲೋಕಿಸೋಣ.

ಆಯ್ಕೆ ಸ್ವಾತಂತ್ರ್ಯ: ಮಗುವಿಗೆ ಒಂದು ವರ್ಷ ತುಂಬುತ್ತಿದ್ದಂತೆ ಕಂಡುಬರುವ ಅತಿ ಮುಖ್ಯ ಮಾನಸಿಕ ಬದಲಾವಣೆಯೆಂದರೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕೆಂಬ ಬಯಕೆ (ಉದಾ: ಬಟ್ಟೆ ಧರಿಸಿಕೊಳ್ಳುವುದು, ಊಟ, ಸ್ನಾನ ಇತ್ಯಾದಿ). ಆದರೆ ಪೋಷಕರು ಮಗುವಿಗೆ ಆ ಸ್ವಾತಂತ್ರ್ಯವನ್ನು ಕೊಡುವ ಬದಲು, ಅವನಿಗೆ ಸರಿಯಾಗಿ ಮಾಡಿಕೊಳ್ಳಲು ಬರೋದಿಲ್ಲ ಎಂದು ಹೇಳಿ ಎಲ್ಲ ತಾವೇ, ಒತ್ತಾಯ ಪೂರ್ವಕವಾಗಿ ಮಾಡಲು ಯತ್ನಿಸುತ್ತಾರೆ.

ಮಗುವಿಗೆ ಇದು ಹಿಡಿಸದೆ ಹಠ ಮಾಡಲು ಶುರುಮಾಡುತ್ತದೆ. ತಂದೆ ತಾಯಂದಿರು ಇದನ್ನು ಅರ್ಥಮಾಡಿಕೊಂಡು ದಿನದ ನಿತ್ಯ ಕಾರ್ಯಗಳನ್ನು ಮಗುವಿಗೇ ಮಾಡಿಕೊಳ್ಳಲು ಬಿಡಬೇಕು. ಮೊದಮೊದಲು ಮಗು ತಡವರಿಸಿದರೂ ಕ್ರಮೇಣ ಕಲಿಯುತ್ತದೆ. ಅತಿಯಾದ ನಿರ್ಬಂಧ ಒಳ್ಳೆಯದಲ್ಲ.

ಬಯಕೆಗಳ ಪೂರೈಕೆ:
ಮಗು ಬೆಳೆಯುತ್ತಾ ಹೋದಂತೆ ಹೊರ ಪ್ರಪಂಚದ ಪರಿಚಯವಾಗುತ್ತದೆ. ತಿಂಡಿ, ತಿನಿಸು, ಆಟದ ವಸ್ತುಗಳನ್ನು ಕಂಡಾಗ ಸಹಜವಾಗಿಯೇ ಆಸೆಯಾಗುತ್ತದೆ. ಮಗು ಏನಾದರೂ ಬೇಕು ಎಂದಾಗ ಪೋಷಕರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಕೇಳಿದ್ದನ್ನೆಲ್ಲ ಕೊಡಿಸಿ ಅಭ್ಯಾಸ ಮಾಡಿಸುತ್ತಾರೆ. ಇನ್ನು ಕೆಲವರು ಮಗು ಏನು ಕೇಳಿದರೂ ಮೊದಲು ಬೇಡವೆಂದು ನಂತರ ಹಠ ಮಾಡಿದಾಗ ಮಾತ್ರ ಕೊಡಿಸುತ್ತಾರೆ.

ಆಗ ಮಗುವಿಗೆ ಹಠಮಾಡಿದರೆ ಮಾತ್ರ ಕಾರ್ಯಸಾಧನೆಯಾಗುವುದೆಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಕೆಲವೊಮ್ಮೆ ತಾಯಿ ಬೇಡವೆಂದರೂ ತಂದೆ, ಅಜ್ಜಿ ಅಥವಾ ತಾತ  `ಹೋಗಲಿ ಬಿಡು ಪಾಪ~  ಎಂದು ಕೊಡಿಸಿ ಶಿಸ್ತು ಮುರಿಯುತ್ತಾರೆ.  `ಪಾಪ ಯಾಕೆ ಅಳಿಸ್ತೀಯ?, ಕೊಡಿಸಿಬಿಡು, ನಾವು ದುಡಿಯೋದು ಯಾರಿಗಾಗಿ?~  ಎಂಬುದು ಇವರ ಸಮಜಾಯಿಶಿ.

ಕೆಲ ಮಕ್ಕಳು ಹಠವನ್ನು ಗಮನ ಸೆಳೆಯುವ ತಂತ್ರವನ್ನಾಗಿ ಉಪಯೋಗಿಸುತ್ತಾರೆ (ಉದಾ: ಪೇಟೆಯಲ್ಲಿ ಅಂಗಡಿಯ ಮುಂದೆ ಅಥವಾ ಮನೆಯಲ್ಲಿ ನೆಂಟರು ಬಂದಾಗ, ಇತ್ಯಾದಿ).  ಕೆಲವು ತಂದೆ ತಾಯಿಗಳು ಮಗುವಿನ ಬೇಡಿಕೆ ಪೂರೈಕೆಗೆ ಅತಿ ಉತ್ಸುಕರಾಗಿರುತ್ತಾರೆ. ಇದು ಸರಿಯಲ್ಲ. ಮೊದಲಿಗೆ ಯಾವ ವಸ್ತುವನ್ನು ಕೊಡಿಸಬಹುದು, ಯಾವುದನ್ನು ಕೊಡಿಸಬಾರದು ಎಂಬುದನ್ನು ನೀವು ಸ್ಪಷ್ಟಪಡಿಸಿಕೊಳ್ಳಿ.
 
ಮಗುವಿನ ಬೇಡಿಕೆ ಸಮಂಜಸವಾಗಿದ್ದರೆ ಕೂಡಲೇ ಈಡೇರಿಸಿ. ಅನುಚಿತ ಬೇಡಿಕೆಗಳನ್ನು ದೃಢವಾಗಿ ನಿರಾಕರಿಸಿ. ಜೊತೆಗೆ ತಾಳ್ಮೆಯಿಂದ ನಿರಾಕರಣೆಗೆ ಕಾರಣವನ್ನು ತಿಳಿಸಿ. ಮಗು ಹಠ ಮಾಡಲು ಆರಂಭಿಸಿದರೆ ಸಂಪೂರ್ಣವಾಗಿ ನಿರ್ಲಕ್ಷಿಸಿ. ನೀವು ತಾಳ್ಮೆಯನ್ನು ಕಳೆದುಕೊಂಡು ಬೈದು, ಹೊಡೆದರೆ ಹಠ ಇನ್ನೂ ಜೋರಾಗಬಹುದು.
 
ಅಲ್ಲದೆ ಇಂತಹ ತಪ್ಪು ನಡತೆಗೆ ನೀವೇ ಮಾದರಿಯಾಗುವಿರಿ. ಬದಲಿಗೆ ಹೀಗೆ ಮಾಡುವುದಾದರೆ ನನ್ನ ಹತ್ತಿರ ಬರಬೇಡ, ನನ್ನನ್ನು ಮಾತನಾಡಿಸಬೇಡ ಎಂದು ಹೇಳಿ ಕೆಲವು ಗಂಟೆಗಳ ಕಾಲ ಮಗುವಿನ ಜೊತೆ ಮಾತನಾಡುವುದನ್ನು ನಿಲ್ಲಿಸಿಬಿಡಿ. ಇದಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಈ ವಿಷಯದ ಬಗ್ಗೆ ಮನೆಯ ಎಲ್ಲಾ ಸದಸ್ಯರೂ ಒಮ್ಮತದಿಂದ ಇರಬೇಕು. ಅಮ್ಮ ಬೇಡವೆಂದಿದ್ದನ್ನು ಅಪ್ಪ ಕೊಡಿಸಿದರೆ ಕೆಲಸ ಕೆಡುತ್ತದೆ.

ಅನೇಕ ಮಕ್ಕಳಿರುವ ಕುಟುಂಬಗಳಲ್ಲಿ (ಅವಿಭಕ್ತ ಕುಟುಂಬಗಳು) ಇತರ ಮಕ್ಕಳನ್ನು ನೋಡಿ ಮಗು ಹಠವನ್ನು ಕಲಿಯಬಹುದು. ಇಲ್ಲಿ ಇಡೀ ಕುಟುಂಬಕ್ಕೆ ಅನ್ವಯಿಸುವಂತೆ ಸ್ಪಷ್ಟ ನಿಯಮಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವುದು ಅತ್ಯಗತ್ಯ. ಈ ಹೊಣೆಯನ್ನು ಕುಟುಂಬದ ಹಿರಿಯರು ನಿರ್ವಹಿಸಬಹುದು.

ಕಲಿಕೆಯ ಸಮಸ್ಯೆ:  ಶಾಲೆಯಲ್ಲಿನ ಕಲಿಕೆ ಮಗುವಿನ ಕುತೂಹಲ ಮತ್ತು ಆಸಕ್ತಿಯನ್ನು ಅವಲಂಬಿಸಿರುತ್ತದೆ. ಪಾಠ ಅರ್ಥವಾದಾಗ ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತಾರೆ.

ಒಳ್ಳೆಯ ಅಂಕಗಳನ್ನು ಗಳಿಸುವುದರಿಂದ ತಂದೆತಾಯಂದಿರ ಪ್ರೋತ್ಸಾಹವೂ ಅವರಿಗೆ ದೊರೆಯುತ್ತದೆ. ಆದರೆ ಕೆಲವು ಮಕ್ಕಳು ಕಲಿಕೆಯ ವಿಕಲತೆಗಳಿಂದ ಅಥವಾ ಪೋಷಕರು ಮತ್ತು ಶಿಕ್ಷಕರಿಂದ ಸೂಕ್ತ ಮಾರ್ಗದರ್ಶನ ದೊರೆಯದ ಕಾರಣ ಕಲಿಕೆಯಲ್ಲಿ ಹಿಂದುಳಿದು ಬಿಡುತ್ತಾರೆ. ಎಷ್ಟು ಪ್ರಯತ್ನಿಸಿದರೂ ಪಾಠ ಅರ್ಥವಾಗದಿದ್ದಾಗ ಮಕ್ಕಳು ಹತಾಶೆಯಿಂದ ಓದುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ಜೊತೆಗೆ ಶಿಕ್ಷಕರ ಮತ್ತು ಪೋಷಕರ ನಿಂದನೆ, ಶಿಕ್ಷೆ, ಇತರ ಮಕ್ಕಳೊಂದಿಗೆ ಹೋಲಿಕೆಯಿಂದಾಗಿ ಮಗುವಿನಲ್ಲಿ ಪ್ರತಿರೋಧಾತ್ಮಕ ಪ್ರವೃತ್ತಿ ಬೆಳೆಯುತ್ತದೆ. ಸಿಡುಕುವುದು, ಹಠ ಮಾಡುವುದು, ಎದುರುತ್ತರ ಕೊಡುವುದು ಮುಂತಾದ ವರ್ತನೆಗಳಿಗೆ ದಾರಿಮಾಡಿಕೊಡುತ್ತದೆ.

ಮಕ್ಕಳಿಗೆ ಶಾಲೆಯ ಪಾಠದ ಜೊತೆಗೆ ಮನೆಯಲ್ಲಿ ಪೋಷಕರ ಮಾರ್ಗದರ್ಶನ ಅತ್ಯಗತ್ಯ. ಟ್ಯೂಷನ್‌ಗೆ ಕಳಿಸುವುದು ಈ ಸಮಸ್ಯೆಗೆ ಪರಿಹಾರವಲ್ಲ. ಮನೆಯಲ್ಲಿ ಓದಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿ.
 
ಓದುವ ಸಮಯದಲ್ಲಿ ಟಿವಿಯನ್ನು ಆರಿಸಿ. ನೀವೂ ಮಗುವಿನ ಜೊತೆ ಕುಳಿತುಕೊಂಡು ಮಗುವಿನ ಕಲಿಕೆಯಲ್ಲಿ ನೆರವಾಗಿ. ತಪ್ಪು ಮಾಡಿದಾಗ ತಾಳ್ಮೆಯಿಂದ ತಿಳಿಸಿ ಹೇಳಿ. `ದಡ್ಡರು, ಕೆಲಸಕ್ಕೆ ಬಾರದವರು~ ಎಂದು ಮಗುವನ್ನು ಹೀಯಾಳಿಸ ಬೇಡಿ. ಕಲಿಕೆಯ ಸಮಸ್ಯೆ ತೀವ್ರವಾಗಿದೆ ಎಂದೆನಿಸಿದರೆ ಸೂಕ್ತ ತಜ್ಞರನ್ನು ಸಂಪರ್ಕಿಸಿ.

ಮಾದರೀಕರಣ ಮತ್ತು ಸಕಾರಾತ್ಮಕ ಪುನರ್ಬಲನ:  ಮಕ್ಕಳ ನಡತೆ ಪೋಷಕರ ನಡತೆಯನ್ನು ಪ್ರತಿಬಿಂಬಿಸುತ್ತದೆ. ಮಗುವಿನಲ್ಲಿ ನೀವು ನಿರೀಕ್ಷಿಸುವ ವರ್ತನೆಗಳನ್ನು, ಗುಣಗಳನ್ನು ಮೊದಲು ನೀವು ಬೆಳೆಸಿಕೊಳ್ಳಿ.

ಸುಲಭವಾಗಿ ತಾಳ್ಮೆ ಕಳೆದುಕೊಂಡು ಕೂಗಾಡುವ, ಬೈಯುವ, ಹೊಡೆಯುವ ತಂದೆತಾಯಂದಿರ ಮಕ್ಕಳಲ್ಲಿ ಅದೇ ಪ್ರವೃತ್ತಿ ಬೆಳೆಯುತ್ತದೆ. ಮಕ್ಕಳು ಎಷ್ಟೇ ರೇಗಿಸಿದರೂ ನೀವು ತಾಳ್ಮೆಯಿಂದಿದ್ದಾಗ ಮಕ್ಕಳು ಕ್ರಮೇಣ ಆ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಶಿಕ್ಷೆಯಿಂದ  ಮಗುವಿನ ನಡತೆಯನ್ನು ತಿದ್ದಲು ಸಾಧ್ಯವಿಲ್ಲ.

ಮಗು ಒಳ್ಳೆಯ ನಡತೆ ಪ್ರದರ್ಶಿಸಿದಾಗ ಹೊಗಳಿಕೆ, ಬಹುಮಾನ, ಅಪ್ಪಿಕೊಳ್ಳುವಿಕೆಯಿಂದ  ಅದನ್ನು ಪ್ರೋತ್ಸಾಹಿಸಿ. ತಪ್ಪು ಮಾಡಿದಾಗ ತರ್ಕಬದ್ಧವಾದ ವಿವರಣೆಗಳು, ನಿಜಜೀವನದ ಉದಾಹರಣೆಗಳು ಮತ್ತು ದೃಷ್ಟಾಂತಗಳನ್ನು ಬಳಸಿ ತಿದ್ದಲು ಪ್ರಯತ್ನಿಸಿ.

ಇದೆಲ್ಲದರ ಜೊತೆಗೆ ಮನೆಯಲ್ಲಿ ಶಾಂತ ಹಾಗೂ ಮುಕ್ತ ವಾತಾವರಣವನ್ನು ಸೃಷ್ಟಿಸಿ. ನಿಮ್ಮ ಕೆಲಸದ ಒತ್ತಡವನ್ನು ಮನೆಗೆ ತರಬೇಡಿ, ಹೊರ ಪ್ರಪಂಚದ ಮೇಲಿನ ನಿಮ್ಮ ಕೋಪ, ಆಕ್ರೋಶಗಳನ್ನು ಮಕ್ಕಳ ಮೇಲೆ ತೀರಿಸಿಕೊಳ್ಳಬೇಡಿ.  ಸಾಯಂಕಾಲವೆಲ್ಲಾ ಟಿವಿಯ ಮುಂದೆ ಕಳೆಯುವ ಬದಲು ಆ ಸಮಯವನ್ನು ಮಗುವಿನ ಜೊತೆ ಮಾತನಾಡಲು, ಆಟವಾಡಲು ಬಳಸಿ. ಮಗುವಿನ ಅನಿಸಿಕೆಗಳನ್ನು, ಭಾವನೆಗಳನ್ನು, ಭಯಗಳನ್ನು ಮುಕ್ತ ಮನಸ್ಸಿನಿಂದ ಆಲಿಸಿ.

ಮಗುವಿನಲ್ಲಿ ಹಠಮಾರಿತನ, ಅವಿಧೇಯತೆ ದೊಡ್ಡ ಸಮಸ್ಯೆಯಾಗಿ ಕಂಡರೂ ಅದರ ಪರಿಹಾರ ಬಹಳ ಸುಲಭ. ಇಲ್ಲಿ ಅರಿತುಕೊಳ್ಳಬೇಕಾದ ಅಂಶವೆಂದರೆ ಸಮಸ್ಯೆ ಇರುವುದು ಮಗುವಿನಲ್ಲಲ್ಲ, ತಂದೆತಾಯಂದಿರಲ್ಲಿ ಎಂಬುದು. ಅವರು ಬದಲಾದರೆ ಮಗುವಿನ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ.

(ಲೇಖಕರ ಸಂಪರ್ಕ ಸಂಖ್ಯೆ:  9448131768;  9986181967)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT