ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪಾಲಿನ ಹೆಮ್ಮೆಯ ವಿಷಯ: ಜೀಶನ್

ಡೇವಿಸ್ ಕಪ್: ಅಂದು ತಂದೆ ಕೋಚ್; ಇಂದು ಪುತ್ರನಿಗೆ ಅವಕಾಶ
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಅಪ್ಪ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ನಾನು ಗ್ಯಾಲರಿಯಲ್ಲಿ ನಿಂತು ವೀಕ್ಷಿಸುತ್ತಿದ್ದೆ. ಈಗ ನನಗೆ ಆ ಅವಕಾಶ ಲಭಿಸಿದೆ. ಟೆನಿಸ್ ಜಗತ್ತಿನಲ್ಲಿ ಈ ಸಾಧನೆಗೆ ಕಾರಣರಾದ ಮೊದಲ ಅಪ್ಪ ಹಾಗೂ ಮಗ ಎಂಬ ವಿಷಯ ನಮಗೆ ಲಭಿಸಿದ ಶ್ರೇಷ್ಠ ಗೌರವ'

-ಈ ರೀತಿ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜೀಶನ್ ಅಲಿ ಮೊಗದಲ್ಲಿ ಮಂದಹಾಸ ನೆಲೆದಾಡುತಿತ್ತು. ವಿಶೇಷ ಸಾಧನೆಯೊಂದಕ್ಕೆ ಕಾರಣರಾದ ಸಂಭ್ರಮವಿತ್ತು. ಏಕೆಂದರೆ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯಲ್ಲಿ (ಕೆಎಸ್‌ಎಲ್‌ಟಿಎ) ನಡೆಯುತ್ತಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ತಂಡದ ಕೋಚ್ ಜೀಶನ್ . ಕೆಲ ವರ್ಷಗಳ ಹಿಂದೆ ಜೀಶನ್ ಅವರ ತಂದೆ ಅಖ್ತರ್ ಅಲಿ ಕೂಡ ಭಾರತ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

ವಿಶೇಷವೆಂದರೆ ಅಖ್ತರ್ ಹಾಗೂ ಜೀಶನ್ ಭಾರತ ಡೇವಿಸ್ ಕಪ್ ತಂಡದಲ್ಲಿ ಆಡಿದ ಆಟಗಾರರು. 1967ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡದಲ್ಲಿ ಅಖ್ತರ್ ಇದ್ದರು. 1993ರಲ್ಲಿ ನಡೆದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಮಣಿಸಿದಾಗ ಅವರು ತಂಡದ ತರಬೇತುದಾರರಾಗಿದ್ದರು. 2008ರಲ್ಲಿ `ಆಟವಾಡದ ನಾಯಕ'ರಾಗಿದ್ದರು. ಸುಮಾರು ಎರಡು ದಶಕ ಕಾಲ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಅಖ್ತರ್ ಪುತ್ರ ಜೀಶನ್ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. 1994ರಲ್ಲಿ ಅಮೆರಿಕ ಎದುರು ನಡೆದ ಡೇವಿಸ್ ಕಪ್ ಟೂರ್ನಿ ಇವರ ಪಾಲಿಗೆ ಕೊನೆಯದ್ದು. 17 ವರ್ಷಗಳಿಂದ ಅವರು ಹಲವು ದೇಶಗಳ ಅಕಾಡೆಮಿಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುಎಇ ಡೇವಿಸ್ ಕಪ್ ತಂಡಕ್ಕೆ ಮೂರು ವರ್ಷ ಕೋಚ್ ಆಗಿದ್ದರು. ಈಗ ಭಾರತ ತಂಡಕ್ಕೆ ತರಬೇತಿ ನೀಡುವ ಅವಕಾಶ ಲಭಿಸಿದೆ. ಅಪ್ಪ-ಮಕ್ಕಳ ಈ ಸಾಧನೆ ಟೆನಿಸ್ ಜಗತ್ತಿನಲ್ಲಿ ವಿಶೇಷವಾದದ್ದು.

`ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. ಈಗ ಕೋಚ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಲಭಿಸಿದೆ. ತಂದೆ ನಿರ್ವಹಿಸಿದ ಹುದ್ದೆಯನ್ನು ನಿಭಾಯಿಸಲು ನನಗೆ ಹೆಮ್ಮೆ ಎನಿಸುತ್ತಿದೆ. ನನ್ನ ಪಾಲಿಗೆ ಇದೊಂದು ಸ್ಮರಣೀಯ ಕ್ಷಣ' ಎಂದು 42 ವರ್ಷ ವಯಸ್ಸಿನ ಜೀಶನ್ ನುಡಿದರು.

ಈ ಹಿಂದೆ ದುಬೈನಲ್ಲಿ ನೆಲೆಸಿದ್ದ ಜೀಶನ್ ಹೋದ ವರ್ಷ ಬೆಂಗಳೂರಿಗೆ ಸ್ಥಳಾಂತರಗೊಂಡರು. ವೈಟ್‌ಫೀಲ್ಡ್‌ನಲ್ಲಿ `ಜೀಶನ್ ಅಲಿ ಟೆನಿಸ್ ಅಕಾಡೆಮಿ' ಸ್ಥಾಪಿಸಿದ್ದಾರೆ. ಅಖಿಲ ಭಾರತ ಟೆನಿಸ್ ಸಂಸ್ಥೆಯ ಆಯ್ಕೆ ಸಮಿತಿ ಸದಸ್ಯ ಕೂಡ. ಹೆಚ್ಚಿನ ಆಟಗಾರರು ಇವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಜೀಶನ್ ಸೋಲ್‌ನಲ್ಲಿ ನಡೆದ 1988ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರು 1987ರಿಂದ 1994ರವರೆಗೆ ಡೇವಿಸ್ ಕಪ್‌ನಲ್ಲಿ ಆಡಿದ್ದರು. 1987ರಲ್ಲಿ ಫೈನಲ್ ತಲುಪಿದ್ದ ತಂಡದಲ್ಲಿದ್ದರು.

`ಭಾರತ ತಂಡ ಈಗ ಯುವ ಆಟಗಾರರಿಂದ ಕೂಡಿದೆ. ಆದರೆ ಇವರಿಗೆಲ್ಲಾ ದೊಡ್ಡ ವೇದಿಕೆಗಳಲ್ಲಿ ಆಡಲು ಹೆಚ್ಚಿನ ಅವಕಾಶ ಸಿಗಬೇಕು. ಸೂಕ್ತ ರೀತಿಯಲ್ಲಿ ಅಭ್ಯಾಸ ನಡೆಸಬೇಕು. ತಾಂತ್ರಿಕವಾಗಿ ಸುಧಾರಣೆ ಕಾಣಬೇಕು' ಎಂದು ಅವರು ಹೇಳಿದರು.

`ಇಂಡೊನೇಷ್ಯಾ ವಿರುದ್ಧದ ಡೇವಿಸ್ ಕಪ್ ಪಂದ್ಯಗಳಿಗೆ ಸಿದ್ಧರಾಗಲು ನಮಗೆ ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ ಸಿಕ್ಕಿದ ಸಮಯದಲ್ಲಿ ಕಠಿಣ ಪ್ರಯತ್ನ ನಡೆಸಿದ್ದೇವೆ. ಮೊದಲ ಪಂದ್ಯದಲ್ಲಿ ಸೋಮದೇವ್  ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಈ ಹಣಾಹಣಿಯಲ್ಲಿ ಜಯದ ವಿಶ್ವಾಸವಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT