ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಿಂದಲೇ ಸಮಸ್ಯೆಗಳಿಗೆ ಪರಿಹಾರ: ಹಂದೆ

ಹೊಸಕಾಲದ ವೈರುಧ್ಯಗಳ ಚಿಂತನ ಮಂಥನ
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಸುತ್ತಮುತ್ತಲಿನ ಸಮಸ್ಯೆಗಳ ಬಗ್ಗೆ ಟೀಕೆ ಮಾಡುವುದನ್ನು, ಬೇರೆಯವರನ್ನು ದೂರುವುದನ್ನು ಕಡಿಮೆ ಮಾಡಬೇಕು. ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆ ಪರಿಹರಿಸುವುದೇ ಬಹು ದೊಡ್ಡ ಪ್ರತಿಭಟನೆ' ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ತಂತ್ರಜ್ಞ ಹರೀಶ್ ಹಂದೆ ಪ್ರತಿಪಾದಿಸಿದರು. 

ಸ್ವಾಮಿ ವಿವೇಕಾನಂದ 150ನೇ ಜನ್ಮವರ್ಷಾಚರಣೆ ಸಮಿತಿಯ ವತಿಯಿಂದ ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ನಡೆದ `ಹೊಸಕಾಲದ ವೈರುಧ್ಯಗಳು' ವಿಚಾರಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಇಂತಹ ಮನೋಭಾವವನ್ನು ಅಳವಡಿಸಿಕೊಂಡಾಗ ದೇಶದಲ್ಲಿ ಸಾವಿರ ವಿವೇಕಾನಂದರನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ. ದೇಶದ ಚಿತ್ರಣವೇ ಬದಲಾಗುತ್ತಿದೆ. ಜನರ ಮನೋಭಾವ ಬದಲಾಗದೆ ಇದ್ದಲ್ಲಿ ಐದು ವರ್ಷಗಳಲ್ಲಿ ದೇಶ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸಲಿದೆ' ಎಂದು ಎಚ್ಚರಿಸಿದರು.

`ಎಲ್ಲ ಕಾರ್ಯಗಳನ್ನೂ ಸರ್ಕಾರವೇ ಮಾಡಬೇಕು ಎಂದು ಭಾವಿಸುತ್ತಿದ್ದೇವೆ. ನಾವು ಮನೆಯಲ್ಲೇ ಕಸ ವಿಂಗಡಣೆ ಮಾಡುತ್ತಿಲ್ಲ. ಸೋಮವಾರ ಬೆಳಿಗ್ಗೆ ಹೊರಡುವ 10 ಕಾರುಗಳ ಪೈಕಿ ಐದು ಕಾರುಗಳ ಚಾಲಕರು ಖಾಲಿ ಜಾಗದಲ್ಲಿ ಕಸ ಎಸೆದು ಹೋಗುತ್ತಾರೆ. ಮನೆಯಲ್ಲೇ ಕಸ ವಿಂಗಡಿಸಿದರೆ ಬಹುಪಾಲು ಸಮಸ್ಯೆ ನಿವಾರಣೆಯಾಗುತ್ತದೆ' ಎಂದರು.

`ಪ್ರತಿ 30 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ಅಪಘಾತದಲ್ಲಿ ಮೃತಪಟ್ಟರೆ ದೊಡ್ಡ ಸುದ್ದಿಯಾಗುತ್ತದೆ. ನಮ್ಮಲ್ಲಿ ಸಂವೇದನೆಯೇ ಮಾಯವಾಗುತ್ತಿದೆ. ನಾವು ಸಂವೇದನಾಶೀಲರಾಗದೆ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ' ಎಂದು ಅವರು ಅಭಿಪ್ರಾಯಪಟ್ಟರು.

`ಸರಳತೆ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಹಿಂದೆ ಹಳ್ಳಿಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಹೆಚ್ಚು ಇತ್ತು. ಈಗ ಎರಡು ವರ್ಷಗಳಿಂದ ಪರಿವರ್ತನೆ ಆರಂಭವಾಗಿದೆ. ಯುವಜನರು ಹಳ್ಳಿಗಳನ್ನು ಇಷ್ಟಪಡಲು ಆರಂಭಿಸಿದ್ದಾರೆ. ಶೇ 1ರಷ್ಟು ಪರಿವರ್ತನೆ ಆಗಿದೆ. 10 ವರ್ಷಗಳಲ್ಲಿ ಈ ಪ್ರಮಾಣ ಶೇ 10ಕ್ಕೆ ಹೆಚ್ಚಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಕರ್ನಾಟಕದಲ್ಲಿ ವಾಸಿಸುವವರು ಕನ್ನಡ ಕಲಿಯ ಬೇಕು. ಕನ್ನಡ ಭಾಷೆಯಲ್ಲಿ ನಾವು ಅವಕಾಶಗಳನ್ನು ಸೃಷ್ಟಿಸುತ್ತಿಲ್ಲ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಸ್ಥಳೀಯ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ವ್ಯಕ್ತಿ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರಾಗುತ್ತಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಸಮಾಜಮುಖಿ ಕಾರ್ಯಗಳಿಗೆ ಕನ್ನಡದಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಒಪ್ಪಿಗೆ ದೊರಕುವುದಿಲ್ಲ. ಜಿಲ್ಲಾಧಿಕಾರಿ ಸಹ ಇಂಗ್ಲಿಷ್ ಭಾಷೆಯ ಪ್ರಸ್ತಾವನೆಯನ್ನೇ ನಿರೀಕ್ಷೆ ಮಾಡುತ್ತಾರೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ನಮ್ಮ ಮನೋಭಾವ ಬದಲಾಗಬೇಕಿದೆ. ಎರಡು ವರ್ಷಗಳ ಕಾಲ ಚಾಲಕನಾಗಿ ಸೇವೆ ಸಲ್ಲಿಸಿದವನಿಗೆ ಬಡ್ತಿ ನೀಡಲು ಮನಸ್ಸು ಒಪ್ಪುವುದಿಲ್ಲ. ಅವನನ್ನು ಕೆಲಸಗಾರನ ರೀತಿಯಲ್ಲೇ ನೋಡುತ್ತೇವೆ. ಸ್ನೇಹಿತನಾಗಿ ಕಾಣಬೇಕು. ಸೆಲ್ಕೊ ಸಂಸ್ಥೆಯಲ್ಲಿ ಅರ್ಧದಲ್ಲೇ ಶಾಲೆ ಬಿಟ್ಟ ಅನೇಕ ಉದ್ಯೋಗಿಗಳು ಇದ್ದಾರೆ. ಅವರಲ್ಲಿ ಕೆಲವರು ಈಗ ವಿಭಾಗಗಳ ಮುಖ್ಯಸ್ಥರಾಗಿದ್ದಾರೆ' ಎಂದು ಅವರು ನೆನಪಿಸಿಕೊಂಡರು.
ಭೂಮಿ ಕಾಲೇಜಿನ ಪ್ರಾಧ್ಯಾಪಕ ರಾಜೇಶ್ ಠಕ್ಕರ್ ಉಪಸ್ಥಿತರಿದ್ದರು.

ಐದು ನಿಮಿಷದಲ್ಲೇ ಗೆಳೆಯರ ಕಳೆದುಕೊಂಡೆ
ಕೆಲವು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಸೌರವಿದ್ಯುತ್ ಪ್ರದರ್ಶನದಲ್ಲಿ ನನ್ನದು ಮಳಿಗೆ ಇತ್ತು. ಕೆಲವು ದಿನಗಳ ಕಾಲ ನಡೆದ ಮೇಳದಲ್ಲಿ ನಾನೇ ಖುದ್ದಾಗಿ ಭಾಗವಹಿಸಿದ್ದೆ. ಉಳಿದ ಮಳಿಗೆಗಳಲ್ಲಿ ಹಗಲು ಹೊತ್ತಿನಲ್ಲಿ ಮಾಲೀಕರು ಇರುತ್ತಿದ್ದರು. ರಾತ್ರಿ ವೇಳೆ ಕೆಲಸಗಾರರು ಮಾತ್ರ ಇರುತ್ತಿದ್ದರು. ಅವರೊಂದಿಗೆ ನನಗೆ ಉತ್ತಮ ಬಾಂಧವ್ಯ ಬೆಳೆಯಿತು. ಒಂದು ದಿನ ನನ್ನ ಗೆಳೆಯರಿಬ್ಬರು ಬಂದರು. ನಾನು ಐಐಟಿಯಲ್ಲಿ ಕಲಿತ ವಿಷಯವನ್ನು ಕೆಲಸಗಾರರಿಗೆ ತಿಳಿಸಿದರು. ಇದರಿಂದಾಗಿ ಐದು ನಿಮಿಷಗಳಲ್ಲೇ ಆ ಕೆಲಸಗಾರರ ಸ್ನೇಹ ಕಳೆದುಕೊಂಡೆ.
-ಹರೀಶ್ ಹಂದೆ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ

`ತೋರಿಕೆಯ ಉತ್ಸಾಹ'
ಹೆಚ್ಚಿನ ಜನರಲ್ಲಿ ತೋರಿಕೆಯ ಉತ್ಸಾಹ ಇದೆ. ಶಾಲೆಗಳಿಗೆ ತೆರಳಿ ಆರೋಗ್ಯದ ಬಗ್ಗೆ ಉಪನ್ಯಾಸ ನೀಡುತ್ತೇವೆ. ಮನೆಯಲ್ಲೇ ವ್ಯಾಯಾಮ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರೆ ಅದನ್ನು ಅನುಷ್ಠಾನಕ್ಕೆ ತರಲ್ಲ. ವೃದ್ಧಾಶ್ರಮಕ್ಕೆ ತೆರಳಿ ಸೇವೆ ಮಾಡುತ್ತೇವೆ. ಆದರೆ, ಮನೆಯಲ್ಲಿ ಅಪ್ಪ-ಅಮ್ಮನ ಸೇವೆ ಮಾಡುವುದಿಲ್ಲ.
-ವೆಂಕಟೇಶಮೂರ್ತಿ, ಯೂತ್ ಫಾರ್ ಸೇವಾ ಸಂಸ್ಥೆ 

`ಲಾಭದಾಯಕವಲ್ಲ'
ಜಮೀನಿನಲ್ಲಿ ಕೃಷಿ ಮಾಡಿದರೆ ಲಾಭದಾಯಕ ಅಲ್ಲ. ಜಮೀನನ್ನು ಮಾರಾಟ ಮಾಡಿದರೆ ಹೆಚ್ಚು ಲಾಭದಾಯಕ ಎಂಬ ಮನೋಭಾವ ಹೆಚ್ಚಿದೆ. ಇದು ಆಧುನಿಕ ಕಾಲದ ಪ್ರಮುಖ ವೈರುಧ್ಯಗಳಲ್ಲಿ ಒಂದು.
-ದಿವಾಕರ ಹೆಗಡೆ,ಧಾರವಾಡ ಆಕಾಶವಾಣಿ

`ಬರಲು ಮನಸ್ಸು ಬರಲ್ಲ'
ನಾಲ್ಕು ಗೋಡೆಗಳೊಳಗೆ ಶಿಕ್ಷಣ ಪಡೆದ ಬಳಿಕ ನಮಗೆ ಬಯಲು ರಂಗಮಂದಿರಕ್ಕೆ ಬರಲು ಮನಸ್ಸು ಬರಲ್ಲ. ನೆರೆಹೊರೆಯವರಿಗಿಂತ ಶ್ರೇಷ್ಠರು ಎನಿಸಿಕೊಳ್ಳಲು ಶಿಕ್ಷಣ ಪಡೆಯುತ್ತೇವೆ. ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಲಿತು ಅಮೆರಿಕಕ್ಕೆ ಹೋದರೆ ಜಗತ್ತು ಗಮನಿಸುತ್ತದೆ ಎಂಬ ಭ್ರಮೆಯಲ್ಲಿ ಇದ್ದೇವೆ. ನಮ್ಮ ಸುತ್ತಮುತ್ತ ಅದ್ಭುತ ಸಂಗತಿಗಳು ಇವೆ. ಅವುಗಳನ್ನು ಆಸ್ವಾದಿಸುತ್ತಿಲ್ಲ.
-ಡಾ.ಪ್ರದೀಪ್ ಸಿ.ಆರ್, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT