ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನಾಕರ್ಷಕ ಭಂಗಿ: ಪ್ರೌಢ ಅಭಿನಯ

Last Updated 8 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಪ್ರತಿಭಾನ್ವಿತ ಭರತನಾಟ್ಯ ಪ್ರವೀಣೆ ಹಾಗೂ ನಾನಾವಿಧದ ಪರಿಣತಿಯನ್ನು ಸಾಧಿಸಿಕೊಂಡಿದ್ದ ಪೊನ್ನಯ್ಯ ಲಲಿತಕಲಾ ಅಕಾಡೆಮಿಯ ದಿವಂಗತ ಗುರು ಪದ್ಮಿನಿ ರಾವ್ ಅವರ ಸ್ಮರಣಾರ್ಥ ಅವರ ಕನಸಿನ ಕೂಸಾದ ಪರಂಪರಾ ಸಭಾಂಗಣದಲ್ಲಿ ಎರಡು ಭರತನಾಟ್ಯ ಕಾರ್ಯಕ್ರಮಗಳು ನಡೆದವು.

ಮೊದಲಿಗೆ ಅವರ ಪ್ರಿಯ ಶಿಷ್ಯೆಯರಾದ ಶ್ವೇತಾ ಲಕ್ಷ್ಮಣ್, ವಿಶಾಖಾ, ಪ್ರಿಯಾ, ರಂಜನಾ, ದೀಕ್ಷಾ, ಭವ್ಯ, ಸುಷ್ಮಾ, ಪೂಜಾ ಮತ್ತು ಸ್ವರ್ಣ ತಮ್ಮ ಗುರುವಿನ ಅಚ್ಚುಮೆಚ್ಚಿನ ಹಾಗೂ ಜನಪ್ರಿಯ ಎರಡು ನೃತ್ಯ ಸಂಯೋಜನೆಗಳನ್ನು ಸಮೂಹ ನೃತ್ಯದಲ್ಲಿ ನಿರೂಪಿಸಿದರು.

ಪದ್ಮಿನಿ ಅವರ ಪುತ್ರ ಶ್ರೇಯಸ್‌ನ ನಟುವಾಂಗ ಮತ್ತು ಗಾಯನ, ಗಿರಿಧರ್ (ಮೃದಂಗ) ಮತ್ತು ಕಾರ್ತಿಕ್ (ಕೊಳಲು) ಅವರ ಸಫಲ ಪಕ್ಕವಾದ್ಯದೊಂದಿಗೆ ಗಣೇಶ, ತ್ರಿಮೂರ್ತಿಗಳು ಮತ್ತು ಸರಸ್ವರಿ, ಲಕ್ಷ್ಮಿ, ಪಾರ್ವತಿಯನ್ನು ಕನ್ನಡ ರಚನೆ (ತಂದೆಯ ನೃತ್ಯ ವಿಡಂಬನೆಮಾಡುವ, ರಾಗಮಾಲಿಕೆ) ಯೊಂದರ ಸಾಹಿತ್ಯ ಬಳಸಿಕೊಂಡು ವಂದಿಸಿದರು.
 
ಅವರ ಸಾಮೂಹಿಕ ಶಿಸ್ತು, ಪಾದರಸದಂತಹ ಚಲನೆಗಳು, ಕಣ್ಸೆಳೆವ ಭಂಗಿಗಳು, ಆಕರ್ಷಕ ಲಯ ಇತ್ಯಾದಿಗಳಿಂದ ಸಜ್ಜುಗೊಂಡಿದ್ದ ಅಷ್ಟಲಕ್ಷ್ಮಿಯರ ಚಿತ್ರಣ ಮೋದಪ್ರದವಾಗಿತ್ತು. ಲಕ್ಷ್ಮಿದೇವಿಯ ಎಂಟು ರೂಪಗಳನ್ನು ಅವರು ತೋರಿದ್ದು ಮೆಚ್ಚಿಸಿತು. ಅದರಲ್ಲಿ ಅಡಕವಾಗಿದ್ದ ನೃತ್ತ ಅಡುವು, ಜತಿ ಮತ್ತು ಕೈಕಾಲುಗಳ ವೈವಿಧ್ಯಮಯ ಚಲನೆಗಳಿಂದ ತುಂಬಿತ್ತು.
 
ಪ್ರೌಢ ಭರತನಾಟ್ಯ
ಬಹಳಷ್ಟು ವರ್ಷಗಳ ನಂತರ ಮತ್ತೆ ಭರತನಾಟ್ಯ ಪ್ರದರ್ಶನ ನೀಡಿದ ಹಿರಿಯ ಕಲಾವಿದೆ ಗುರು ಪದ್ಮಿನಿ ರವಿ ಅವರು ನರ್ತಕಿಗೆ ಸೂಕ್ತವಾದ ತಮ್ಮ ಶರೀರ ಸಂಪತ್ತು ಮತ್ತು ಸಾಂಪ್ರದಾಯಕ ಮೌಲ್ಯಗಳ ಬಗೆಗಿನ ನಿಷ್ಠೆಯನ್ನು ತೋರಿ ರಸಿಕರಿಂದ ಅಭಿನಂದನೆಗೆ ಪಾತ್ರರಾದರು.

ಅವರ ಉಡುಗೆ ತೊಡುಗೆಗಳು ಸ್ವಲ್ಪ ವಿಚಿತ್ರವೆನಿಸಿದರೂ ಅವರ ಲಯಪ್ರಭುತ್ವ, ಅಂಗಶುದ್ಧಿ, ಖಚಿತತೆ ಮತ್ತು ಕ್ರಿಯಾಶೀಲತೆ ಮನಗೆದ್ದವು. ಸಾರ್ಥಕ ಮುಖಿಜಗಳೊಂದಿಗೆ ಉತ್ಕೃಷ್ಟ ಅಭಿನಯವೂ ಪ್ರೌಢವಾಗಿತ್ತು.

ಧ್ವನಿಮುದ್ರಿತ ಸಂಗೀತ ಸಹಕಾರದೊಂದಿಗೆ ಅವರು ಮಧುರಾಷ್ಟಕವನ್ನು ವಿಸ್ತರಿಸಿದರು. ಕೃಷ್ಣನ ಬಗೆಗೆ ಎಲ್ಲವೂ ಮಧುರವೇ. ಆ ಮಧುರತೆಯ ವಿನ್ಯಾಸವನ್ನು ತಮ್ಮ ಕಲಾತ್ಮಕ ಅಭಿನಯದಲ್ಲಿ ಪ್ರತಿಬಿಂಬಿಸಿದರು.

ನಟರಾಜನನ್ನು ಕುರಿತಾದ ಪಾಪನಾಶಂ ಶಿವನ್‌ಅವರ `ಎಡಂ ಪದಂ ತೂಕಿ~ ಪದಕ್ಕೆ ಮೂಡಿದ ಅವರ ಅಭಿನಯ ಅಪಾರ ಅನುಭವವನ್ನು ಮಥಿಸಿ ಬಂದಿತು. ಒಬ್ಬ ಸಾಮಾನ್ಯ ನಾಯಕಿಯನ್ನು ಸುಪರಿಚಿತ `ಪರುಲನ್ನ ಮಾಟ~ (ಖಮಾಚ್) ಜಾವಳಿಯ ಮೂಲಕ ಅಭಿವ್ಯಕ್ತಗೊಳಿಸಿದರು.

ಭರವಸೆ ಬೆಳಕು
ವಿದುಷಿ ಯೋಗಿತಾ ಅವರ ಶಿಷ್ಯೆ ಯುವ ಭರತನಾಟ್ಯ ಕಲಾವಿದೆ ಅಕ್ಷರಾ ಭರದ್ವಾಜ್ ಅವರು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳಿಂದ ಭರವಸೆ ಮೂಡಿಸುವಂತಹ ನೃತ್ಯ ಪ್ರದರ್ಶನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿದರು.

ಆತ್ಮವಿಶ್ವಾಸದಿಂದ ನರ್ತಿಸಿ ಗಣೇಶನ ಎಂಟು ರೂಪಗಳನ್ನು ತೋರುವುದರೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಪಂಚಜಾತಿಯ ಅಲರಿಪ್ಪುವಿನಲ್ಲಿ ವಿವಿಧ ಅಡುವುಗಳು ಮತ್ತು ಜತಿಗಳು ರಂಜಿಸಿದವು.

ಯೋಗಿತಾ (ನಟುವಾಂಗ), ಶ್ರಿವತ್ಸ (ಗಾಯನ), ಸಿ.ವಿ.ಮಥುರಾ (ಕೊಳಲು) ಅವರನ್ನೊಳಗೊಂಡಿದ್ದ ಸಮರ್ಥ ಸಂಗೀತ ಸಹಕಾರದ ಹಿನ್ನೆಲೆಯಲ್ಲಿ  ಬಿಲಹರಿರಾಗದ ಶ್ರಿಚಾಮುಂಡೇಶ್ವರಿ ಕೃತಿಯನ್ನು ಸುಂದರವಾಗಿ ವಿಸ್ತರಿಸಿದರು.

ಕೃಷ್ಣಜನ್ಮಪ್ರಸಂಗದ ನಿರೂಪಣೆ ರಸಿಕರಲ್ಲಿ ಸಂತಸ ಮೂಡಿಸಿತು. ತಂಜಾವೂರು ಸೋದರರ ಕಲ್ಯಾಣಿ ವರ್ಣ(ಕಣ್ಣೈ ಅಳೈತುವಾಡಿ ಎಂದನ್)ದಲ್ಲಿ ವಿರಹೋತ್ಕಂಠಿತ ನಾಯಕಿಯ ರೂಪ ಸಾರ್ಥಕವಾಗಿ ನೆರವೇರಿ ಅದಕ್ಕೆ ಸಂಬಂಧಿಸಿದ ನೃತ್ತ, ನೃತ್ಯ ಮತ್ತು ಅಭಿನಯ ಅಂಶಗಳು ಗೀತೋಪದೇಶ, ದ್ರೌಪದಿ ಮತ್ತು ವಾಮನನ ಪ್ರಸಂಗಗಳ ಅನುವರ್ತನೆಯಲ್ಲಿ ಬೆಳಗಿದವು.

ನಟನಾ ಕುಶಲತೆ
ಭರತನಾಟ್ಯದ ಕಲೆ ಮತ್ತು ತಾಂತ್ರಿಕ ಭಾಗಗಳ ಸಮಬಗೆಯ ಸಾಮರಸ್ಯದ ಚಿತ್ರಣವನ್ನು ಎಡಿಎ ರಂಗಮಂದಿರದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಅಪರ್ಣ ಕೃಷ್ಣನ್ ಅವರು ಸುಲಲಿತವಾಗಿ ಮಾಡಿದರು. ಸದ್ದುಗದ್ದಲವಿಲ್ಲದೆ ಶಿಷ್ಯರನ್ನು ತರಬೇತಿಗೊಳಿಸುವುದು, ನೃತ್ಯ ಸಂಯೋಜನೆಗಳನ್ನು ಮಾಡುವುದು, ಕಾರ್ಯಕ್ರಮಗಳನ್ನು ಸಂಘಟಿಸುವುದು ಹೀಗೆ ಅನೇಕ ಮಹತ್ತಾದ ಸಾಧನೆಗೈಯುತ್ತಿರುವ ಗುರು ಪದ್ಮಾ ಮುರಳಿ ಅವರ ಕೀರ್ತಿಯನ್ನು ಹೆಚ್ಚಿಸುವಂತಹ ಪ್ರತಿಭೆಯನ್ನು ತೋರ್ಪಡಿಸಿದರು.

ವಸಂತ ಜತಿಸ್ವರವನ್ನು ರೂಪಕತಾಳದ ಚೌಕಟ್ಟಿನಲ್ಲಿ ಹರಡಿದಾಗ ಅವರ ನೃತ್ತದ ಬಿಗುವು ಮತ್ತು ಚೆಲುವು ದರ್ಶಿತವಾಯಿತು. ಧನ್ಯಾಸಿ ವರ್ಣ(ಆದಿತಾಳ) ಪ್ರಸ್ತುತಿ ಅಚ್ಚುಕಟ್ಟಾಗಿದ್ದ ನೃತ್ತ ಮತ್ತು ಅಭಿನಯಗಳಿಂದ ಭೇಷ್ ಅನಿಸಿಕೊಂಡಿತು.

`ಬೃಂದಾವನದದೊಳು ಆಡುವನಾರೆ~ (ತಿಲ್ಲಂಗ್) ಪದಾಭಿನಯದಲ್ಲಿ ಅವರ ನಟನಾ ಕುಶಲತೆ ಕಾಣಬಂದಿತು. ತನ್ನ ಪ್ರಭುವಿನೊಂದಿಗೆ ಆಗುವ ಪರಿಣಯದ ಕನಸು, ಭವ್ಯ ಮೆರವಣಿಗೆ ಮುಂತಾದವುಗಳನ್ನು ಆಂಡಾಳ್‌ಳ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ರಸಮಯವಾಗಿ ಸಾದರಪಡಿಸಿದರು.

ತಮಿಳು ರಚನೆಯ ಮೂಲಕ ಕೃಷ್ಣನ ಬಾಲೋಚಿತ ಚೇಷ್ಟೆಗಳನ್ನು ನರ್ತಕಿಯು ಸುಂದರವಾಗಿ ತೋರಿದರು. ಬೃಂದಾವನ ಸಾರಂಗ ತಿಲ್ಲಾನ ರುಚಿಸಿತು. ಗುರು ಪದ್ಮಾಮುರಳಿ (ನಟುವಾಂಗ), ಶರಣ್ಯಾ (ಗಾಯನ) ಅವರ ನೇತೃತ್ವದ ಸಂಗೀತ ನೆರವು ಪರಿಣಾಮಕಾರಿಯಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT