ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನಾಕರ್ಷಕ ಸಮೂಹ ನೃತ್ಯ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನೃತ್ಯ ಸಂಯೋಜಕಿ ಹಾಗೂ ಹಿರಿಯ ಗುರು ಪದ್ಮಿನಿ ರಾಮಚಂದ್ರನ್ ಅವರ ನಾಟ್ಯಪ್ರಿಯ ಸಂಸ್ಥೆಯ 37ನೇ ವಾರ್ಷಿಕೋತ್ಸವವನ್ನು ಎರಡು ದಿನಗಳ ಸಾಂಸ್ಕೃತಿಕ ಹಬ್ಬದೊಂದಿಗೆ ಆಚರಿಸಲಾಯಿತು.
 
ಇದೇ ಸಂದರ್ಭದಲ್ಲಿ ನಗರದ ಪೂರ್ವ ಭಾಗದಲ್ಲಿರುವ ಹೊಯ್ಸಳ ನಗರದಲ್ಲಿ ನಿರ್ಮಿಸಲಾಗಿರುವ 60 ಮತ್ತು100ರ ಅಳತೆಯ ಅಚ್ಚುಕಟ್ಟಾದ ಬಯಲು ರಂಗಮಂದಿರವನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿಸಿಂಗ್ ಅರ್ಪಿಸಿದರು.  ದರ್ಪಣ  ಎಂಬ ಸ್ಮರಣ ಸಂಚಿಕೆಯೊಂದನ್ನೂ ಪ್ರಕಟಿಸಲಾಯಿತು.

ಇದರೊಂದಿಗೆ ಗುರು ಪದ್ಮಿನಿ ಅವರ ಬಹುದಿನಗಳ ಕನಸು ನನಸಾಗಿದೆ. ಆ ಭಾಗದ ಕಲಾಪ್ರೇಮಿಗಳಿಗೆ ಕಲಾಕಾರ್ಯಕ್ರಮಗ ಳಲ್ಲಿ ಭಾಗವಹಿಸಲು ಅನುವಾಗಿದೆ.

ಪದ್ಮಿನಿ ಅವರು 110ಕ್ಕೂ ಮಿಗಿಲಾದ ರಂಗಪ್ರವೇಶ ಕಾರ್ಯಕ್ರಮ ನಡೆಸಿ ಭರತನಾಟ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ಅಲ್ಲದೇ ನೂರಾರು ಶಿಷ್ಯರನ್ನು ತರಬೇತಿಗೊಳಿಸುತ್ತಿದ್ದಾರೆ.
 
ಅನೇಕ ನೃತ್ಯ ನಾಟಕಗಳು ಮತ್ತು ರೂಪಕಗಳ ಮೂಲಕ ಅವರ ನೃತ್ಯ ಸಂಯೋಜನಾ ಕೌಶಲ್ಯ ಯಶಸ್ವಿಯಾಗಿ ಅಭಿವ್ಯಕ್ತಗೊಂಡಿದೆ. ಅವರ ಮೌಲಿಕ ಸೃಜನಶೀಲತೆ ಸಾಂಪ್ರದಾಯಿಕ ದೈಹಿಕ ಚಲನೆಗಳಿಗೆ ಹೊಸತನದ ಲೇಪನ ನೀಡಿದೆ.
 
ತಮ್ಮ ಮಾಧ್ಯಮವನ್ನು ಸಮೂಲಾಗ್ರವಾಗಿ ಬಳಸಿಕೊಳ್ಳುವ ಜಾಣ್ಮೆ ಮತ್ತು ಪರಿಣತಿ ಅವರದ್ದಾಗಿದೆ. ದೃಶ್ಯ ಸುಖ ಮತ್ತು ಪರಿಣಾಮಗಳಿಗೆ ಹೊಸ ಹೊಸ ಆಯಾಮ, ಆ ಸಂಯೋಜನೆಗಳಲ್ಲಿ ಜ್ಯಾಮಿತಿಯ ಕೊಲಾಜ್‌ಗಳ ನಿರ್ಮಾಣದಲ್ಲಿ ಅವರು ಅದ್ವಿತೀಯರೆಂತಲೇ ಹೇಳಬಹುದು.

ನಾಟ್ಯಪ್ರಿಯದ ಹಿರಿಯ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ, ಮಿನು ಮೋಹನ್, ಶರ್ಮಿಲಾ ಗುಪ್ತಾ, ಸುರಭಿ ಸಂತೋಷ್, ವಿನೀತ, ಅನುಷಾ ವೆಂಕಟೇಶ್, ಐಶ್ವರ್ಯ, ಅಲೆಕ್ಸಾಂಡರಾ ದಾಸ್ ಮತ್ತು ಪ್ರವಾಳಿಕಾ ಅವರು ದೇವಿಯ ವಾರಾಹಿ, ವೈಷ್ಣವಿ, ಚಂಡಿ, ಚಾಮುಂಡಿ ಮುಂತಾದ ನವಶಕ್ತಿ ರೂಪಗಳನ್ನು ಸಮೂಹ ನೃತ್ಯದಲ್ಲಿ ಕಡೆದರು. 

ಆಯಾ ದೇವಿಯ ಚಿಂತನೆ, ಭಾವನೆ, ಸಂವೇದನೆ, ಕ್ರಿಯೆ ಮುಂತಾದುವುಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು. ಅವರ ಸಮೂಹ ಶಿಸ್ತು ಮತ್ತು ಹೆಜ್ಜೆ ಅಭಿನಂದನೆಗೆ ಅರ್ಹ.

ಕಾರ್ಯಕ್ರಮಕ್ಕೆ ಮಿಥುನ್ ಶಾಂ, ವಿಪಿನ್ ಶಾಂ ಮತ್ತು ಕನ್ಯಾ ತಯಾಲಿಯಾ ಅವರು ತಮ್ಮ ಗಣೇಶಸ್ತುತಿ `ಪರಿಪರಿ ನೀ ಪಾದಮೆ~ಯೊಂದಿಗೆ ಅತ್ಯುಪಯುಕ್ತ ಚಾಲನೆ ನೀಡಿದರು.
ಶಿವ, ಆತ್ಮಲಿಂಗ, ರಾವಣ ಇತ್ಯಾದಿ ಪಾತ್ರಗಳನ್ನು ಒಳಗೊಂಡ ರಾವಣನ ಕತೆಯನ್ನು ಬೇರೆ ಬೇರೆ ರಚನೆಗಳು ಮತ್ತು ಸಂಸ್ಕೃತ ಶ್ಲೋಕಗಳ ಆಧಾರದ ಮೇಲೆ ಸೊಗಸಾಗಿ ನಿರೂಪಿಸಿದರು. ತಾಂಡವ ಮತ್ತು ಕ್ಲಿಷ್ಟ ಆದರೆ ಅರ್ಥಪೂರ್ಣ ಕರಣಗಳಿಂದ ತುಂಬಿದ್ದ ಶಾಂ ಸೋದರರ ನೃತ್ಯ, ಕನ್ಯಾ ಮತ್ತು ಮಿಥುನ್ ಶಾಂ ಅವರ ಶಿಷ್ಯರುಗಳ ನಿರೂಪಣೆಗಳು ರಂಜಿಸಿದವು.

ಒಡಿಸ್ಸಿಯ ಬೆಳಕು
ಅನುಭವಿ ಲೇಖಕ ಆಶಿಷ್ ಮೋಹನ್ ಖೋಕರ್ ಅವರು ಬರೆದಿರುವ ಲಲಿತ-ಲಾಸ್ಯ ಪ್ರಧಾನವಾದ ಒಡಿಸ್ಸಿ ನೃತ್ಯದ ಸಮಗ್ರ ಮಾಹಿತಿಯ `ಡಾನ್ಸ್ ಒರಿಸ್ಸಿ~ ಅಲಯನ್ಸ್ ಫ್ರಾನ್ಸೆಯಲ್ಲಿ ಲೋಕಾರ್ಪಣೆಗೊಂಡಿತು. ಒಡಿಸ್ಸಿ ನೃತ್ಯದ ಬೆಳವಣಿಗೆಯ ಬಗೆಗೆ ಪ್ರಸಿದ್ಧ ಕಲಾವಿದೆ ಸಂಜುಕ್ತಾ ಪಾಣಿಗ್ರಾಹಿ ಅವರ ಸಾಕ್ಷ್ಯ ಚಿತ್ರವನ್ನೂ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
 
ನಂತರ ಒಡಿಸ್ಸಿ ನರ್ತಕಿ ಮಧುಲಿತಾ ಮಹಾಪಾತ್ರ ಅವರ ನೃತ್ಯಾಂತರದ ಶಿಷ್ಯೆಯರು `ಕೊನಾರ್ಕ್ ಕಂಟ್ರಿ~ ಎಂಬ ಶೀರ್ಷಿಕೆಯಲ್ಲಿ ಕೋನಾರ್ಕ್ ದೇವಾಲಯದ ಶಿಲ್ಪಗಳ ಸೌಂದರ್ಯವನ್ನು ಜೀವಂತಗೊಳಿಸಿದರು.

ಭರತನಾಟ್ಯಕ್ಕೆ ತಂಜಾವೂರು ಸೋದರರಿದ್ದಂತೆ ಕಟಕ್ ಚತುಷ್ಟಯರಾದ ಗುರು ಪಂಕಜಚರಣ ದಾಸ್, ಗುರು ಕೇಳುಚರಣ ಮಹಾಪಾತ್ರ, ಗುರು ದೇಬಪ್ರಸಾದ ದಾಸ್ ಮತ್ತು ಗುರು ಮಾಯಾಧರ್ ರೌತ್ ಅವರುಗಳು ಒಡಿಸ್ಸಿ ನೃತ್ಯವನ್ನು ಪುನರ‌್ರಚಿಸಿ ಮಹತ್ವದ ಕೆಲಸವನ್ನು ಮಾಡಿದ್ದಾರೆ. ಅದರ ತುಣುಕುಗಳನ್ನು ಮುಂದಿನ ಕಾರ್ಯಕ್ರಮಗಳಲ್ಲಿ ಸವಿಯಬಹುದಾಗಿತ್ತು.

 ಪಂಕಜಚರಣ ದಾಸ್ ಅವರ ಶಿಷ್ಯೆ ಸುಹಾಗ್ ನಳಿನಿದಾಸ್‌ಅವರು ತಮ್ಮ ಗುರುಗಳ ಹಿರಿಮೆಯನ್ನು ಪಂಚಕನ್ಯಾ ಶೀರ್ಷಿಕೆಯಡಿಯಲ್ಲಿ ಪ್ರಸ್ತುತಪಡಿಸಿದರು. ಪಂಚಕನ್ಯೆಯರಲ್ಲಿ ಅಹಲ್ಯಾ ಪ್ರಸಂಗವನ್ನು ಅಭಿನಯಿಸಲಾಯಿತು. ಉತ್ಕೃಷ್ಟವಾದ ಪದಾರ್ಥಾಭಿನಯಕ್ಕೆ ಅದೊಂದು ಉಚಿತ ಉದಾಹರಣೆಯಾಗಿತ್ತು.

ಶರ್ಮಿಳಾ ಮುಖರ್ಜಿಅವರ ಶಿಷ್ಯೆಯರು ಗುರು ಕೇಳುಚರಣ್ ಮಹಾಪಾತ್ರ ಅವರ ವಿಶಿಷ್ಟತೆಯನ್ನು  `ಶ್ರಿತಕಮಲಕುಚ~ ರಚನೆಯ ಮೂಲಕ ಪ್ರಕಟಗೊಳಿಸಿದರು. ಒಡಿಸ್ಸಿಯ ಸ್ಥಾಯಿ ಬಂಧವನ್ನು ನಿರ್ದಿಷ್ಟವಾಗಿ ನರ್ತಿಸಿ ಗುರು ದುರ್ಗಾಚರಣ್‌ದಾಸ್ ಅವರ ಪುತ್ರಿ ಮತ್ತು ಶಿಷ್ಯೆ ಗಾಯತ್ರಿ ರಣಬೀರ್ ಅವರು ಅದರ ನೃತ್ತ ವಿಶೇಷವನ್ನು ಸಾದರಪಡಿಸಿದರು. ಸರಸ್ವತಿಯನ್ನು ಕುರಿತಾದ ಗುರು ಮಾಯಾಧರ್ ರೌತ್ ಅವರ `ಮಂಗಳಾಚರಣ್~ ಮೇಘನಾ ದಾಸ್ ಅವರ ನೃತ್ಯದಲ್ಲಿ ಮಿಂಚಿತು.

ಪ್ರೌಢಾಭಿನಯ
ಬೆಂಗಳೂರಿನಲ್ಲಿ ನೆಲೆಸಿರುವ ಮಧುಲಿತಾ ಮಹಾಪಾತ್ರ ಅವರು ತಮ್ಮ ಶಿಷ್ಯೆ ಅಂಜಲಿರಾಜ ಅರಸ್ ಅವರೊಡನೆ ರಾಧಾ-ಕೃಷ್ಣರ ಕತೆಯನ್ನು ಕಲಾತ್ಮಕವಾಗಿ ನಿರ್ವಹಿಸಿದರು. ತನ್ಮೂಲಕ ತಮ್ಮ ಗುರುಗಳಾದ ಗಂಗಾಧರ್ ಪ್ರಧಾನ್ ಮತ್ತು ಅರುಣ್ ಮೊಹಂತಿ ಅವರ ಕೊಡುಗೆಯನ್ನು ನೆನಪಿಗೆ ತಂದುಕೊಟ್ಟರು. ಅವರ ಅಭಿನಯ ಪ್ರೌಢವಾಗಿದ್ದು ಮುದ ನೀಡಿದ ಚಲನೆಗಳು ಆಕರ್ಷಿಸಿದವು.

ಭುವನೇಶ್ವರದ ಲಿಂಗರಾಜ ಪ್ರಧಾನ್ ಅವರು ಜಗನ್ನಾಥ ಪ್ರಭುವನ್ನು ಕುರಿತು ಮುಸ್ಲಿಂ ಕವಿ ಸಾಲಬೇಗ್ ರಚಿಸಿದ `ಅಹೆ ನೀಲ ಶೈಲಾ~ ರಚನೆಯನ್ನು ರಂಗಸತ್ವವನ್ನಾಗಿ ಪರಿವರ್ತಿಸಲು ತಮ್ಮ ನುರಿತ ಅಭಿನಯದ ಎಲ್ಲಾ ತಂತ್ರಗಳನ್ನು ಅರ್ಥಪೂರ್ಣವಾಗಿ ಬಳಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT