ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಬೆಲೆ ರೂ.5: ಲೇವಡಿ

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೈದರಾಬಾದ್ ಸಾರ್ವಜನಿಕ ಸಮಾರಂಭಕ್ಕೆ ಹಾಜರಾಗುವವರಿಗೆ ರೂ. 5 ಶುಲ್ಕ ನಿಗದಿ ಮಾಡಿರುವ ಆಂಧ್ರಪ್ರದೇಶ ಬಿಜೆಪಿ ಘಟಕದ ತೀರ್ಮಾನವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್, ಇದರಿಂದ ಮೋದಿ ಅವರ `ನಿಜವಾದ ಮೌಲ್ಯ' ಏನು ಎಂಬುದು ಸಾಬೀತಾದಂತಾಗಿದೆ ಎಂದಿದೆ.

`ಬಾಬಾ ಪ್ರವಚನಕ್ಕೆ ನೂರರಿಂದ ಒಂದು ಲಕ್ಷ, ಸಿನಿಮಾ ಟಿಕೆಟ್‌ಗೆ 200 ರಿಂದ 500 ರೂಪಾಯಿ ಇದೆ. ಪರಿಸ್ಥಿತಿ ಹೀಗಿರುವಾಗ, ಒಬ್ಬ ಮುಖ್ಯಮಂತ್ರಿ ಭಾಷಣ ಕೇಳಲು ಐದು ರೂಪಾಯಿ ದರ ನಿಗದಿ ಮಾಡಲಾಗಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ಮೋದಿ ಅವರ ಅಸಲಿ ಬೆಲೆ  ನಿಗದಿಯಾದಂತೆ ಆಗಿದೆ' ಎಂದು ಕೇಂದ್ರ ವಾರ್ತಾ ಸಚಿವ ಮನೀಷ್ ತಿವಾರಿ ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದಾರೆ.

ಆಗಸ್ಟ್ 11 ರಂದು ಹೈದರಾಬಾದ್‌ಲಾಲ ಬಹದ್ದೂರ್ ಕ್ರೀಡಾಂಗಣದಲ್ಲಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು ಪಾಲ್ಗೊಳ್ಳುವ ಪ್ರತಿಯೊಬ್ಬರೂ ರೂ.5 ನೋಂದಣಿ ಶುಲ್ಕ ನೀಡಬೇಕು. ಸಂಗ್ರಹವಾಗುವ ಒಟ್ಟು ಮೊತ್ತವನ್ನು ಉತ್ತರಾಖಂಡ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ನೀಡಲಾಗುವುದು ಎಂದು ಬಿಜೆಪಿ ತಿಳಿಸಿದೆ.

ಕಾಂಗ್ರೆಸ್‌ಗೆ ಕಷ್ಟ: ನರೇಂದ್ರ ಮೋದಿ ಸಭೆಗೆ ರೂ.5 ಶುಲ್ಕ ನಿಗದಿಪಡಿಸಿರುವುದರ ಬಗ್ಗೆ ಕಾಂಗ್ರೆಸ್ ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ, `ಕಾಂಗ್ರೆಸ್‌ಗೆ ಗುಜರಾತ್ ಮುಖ್ಯಮಂತ್ರಿಯ ಜನಪ್ರಿಯತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದಿದೆ.

ಈ ಕುರಿತು ಮಂಗಳವಾರ ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಎಂ. ವೆಂಕಯ್ಯ ನಾಯ್ಡು, `ಮೋದಿಯಿಂದಾಗಿ ತತ್ತರಿಸಿರುವ ಕಾಂಗ್ರೆಸ್‌ಗೆ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಅವರ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿದೆ' ಎಂದರು.

ಮೋದಿ ಅವರ ಸಭೆ `ನೀರಸ ಸಭೆಯಾಗಲಿದೆ' ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ. ಆದಾರೆ 50 ವರ್ಷಗಳಿಂದ ದೇಶದಲ್ಲಿ ನೀರಸ ಸಭೆಗಳನ್ನೇ ನಡೆಸಿಕೊಂಡು ಬಂದಿದೆ ಎಂದು ಅವರು ಚುಚ್ಚಿದರು. ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಪಕ್ಷವು ಮೋದಿ ಸಭೆಗೆ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ವೆಂಕಯ್ಯ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT