ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಮಾಧ್ಯಮಗಳ ಮೂಲಕ ಹೊಸ ಮತದಾರರಿಗೆ `ಗಾಳ'

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕೂವರೆ ವರ್ಷಗಳ ಆಡಳಿತ ಪೂರೈಸಿರುವ ಭಾರತೀಯ ಜನತಾ ಪಕ್ಷ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುವ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದೆ. ಇಂಟರ್ನೆಟ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ, ಸುಶಿಕ್ಷಿತ ವರ್ಗದ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಎದುರಿಸಿದ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದ ಆರೋಪಗಳನ್ನು ನವ ಮಾಧ್ಯಮಗಳ ಮೂಲಕವೂ ಎದುರಿಸಲು ಪಕ್ಷ ಮುಂದಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ 25ರಿಂದ 30 ಮಂದಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿದೆ. ಚುನಾವಣಾ ಪ್ರಚಾರದ ವೇಳೆ ನವ ಮಾಧ್ಯಮಗಳ ಮೂಲಕ ನಿರ್ದಿಷ್ಟ ವರ್ಗವೊಂದರ ಜನರಲ್ಲಿ `ಹಿತಾನುಭವ' ಮೂಡಿಸಲು ಇವರು ಕೆಲಸ ಮಾಡಲಿದ್ದಾರೆ.

`ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಮತ್ತು ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸತೀಶ್ ಅವರು ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಹೊಸ ಕಾಲದ ಮಾಧ್ಯಮಗಳಾದ ಫೆಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ ಬಳಸಿಕೊಂಡು, ಪಕ್ಷದ ಕುರಿತು ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಗುರಿ ನಮ್ಮದು' ಎಂದು ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಎಸ್. ಪ್ರಕಾಶ್ `ಪ್ರಜಾವಾಣಿ'ಗೆ ತಿಳಿಸಿದರು.

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ಗಳನ್ನು ಹೆಚ್ಚಾಗಿ ಬಳಸುವ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು, ಪಕ್ಷದ ಕುರಿತು ಜನರಲ್ಲಿ ಸದಭಿಪ್ರಾಯ ಮೂಡಿಸುವ ಬಗ್ಗೆ ಕೂಡ ಮಾಹಿತಿ ನೀಡಲಾಗುವುದು ಎಂದು ಮುಖಂಡರೊಬ್ಬರು ತಿಳಿಸಿದರು.

`ತ್ರಿ-ಡಿ ಮೋಡಿ': ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾಣೆಯಲ್ಲಿ, ನರೇಂದ್ರ ಮೋದಿಯ 3-ಡಿ ಭಾಷಣಗಳು ಬಿಜೆಪಿ ಬೆಂಬಲಿಗರನ್ನು ಮೋಡಿ ಮಾಡಿದ್ದನ್ನು ಗಮನಿಸಿರುವ ರಾಜ್ಯ ಬಿಜೆಪಿ ಮುಖಂಡರು, ಅದೇ ಮಾದರಿಯನ್ನು ಕರ್ನಾಟಕದಲ್ಲೂ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೋದಿ ಅವರು, ಸ್ಟುಡಿಯೋದಿಂದ ಮಾಡುವ ಚುನಾವಣಾ ಭಾಷಣವನ್ನು ತ್ರಿ-ಡಿ ಪರದೆಯ ಮೂಲಕ ಏಕಕಾಲದಲ್ಲಿ ರಾಜ್ಯದ ವಿವಿಧೆಡೆ ಪ್ರಸಾರ ಮಾಡಲಾಗುತ್ತಿತ್ತು. ಇದೇ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ಪ್ರಕಾಶ್ ಹೇಳಿದರು.

ಪಕ್ಷದ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ನೇರ ಸಂವಾದಕ್ಕೆ ಇಂಟರ್ನೆಟ್ ಮೂಲಕ ವೇದಿಕೆ ಕಲ್ಪಿಸಲಾಗುವುದು. ದೆಹಲಿಯ ಮುಖಂಡರೂ ಪಕ್ಷದ ಆಯ್ದ ಸ್ಥಳೀಯ ಕಾರ್ಯಕರ್ತರ ಜೊತೆ ಇಂಟರ್ನೆಟ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಕೆಲವು ಮುಖಂಡರು ರಾಜ್ಯದ ಪ್ರಮುಖ ಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಕರ್ತರಿಗೆ ನವ ಮಾಧ್ಯಮಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರಿಗೆ ಇ-ಮೇಲ್ ಮೂಲಕ ಪಕ್ಷದ ಕಾರ್ಯಕ್ರಮಗಳ ಕುರಿತು ನಿರಂತರ ಮಾಹಿತಿ ನೀಡಲಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಪಕ್ಷದ `ಸಾಧನೆ'ಗಳನ್ನು ಜನರ ಮುಂದಿಡುವುದು ಹಾಗೂ ವಿರೋಧ ಪಕ್ಷಗಳ ದೌರ್ಬಲ್ಯಗಳನ್ನು ವಿವರಿಸುವ ಬಗ್ಗೆಯೂ ಇ-ಮೇಲ್ ಮೂಲಕವೇ ಮಾಹಿತಿ ನೀಡಲಾಗುತ್ತದೆ ಎಂದರು.

`ರಸ್ತೆ ಬದಿಯ ಹೋರಾಟವಿಲ್ಲ!': `ನವ ಮಾಧ್ಯಮಗಳನ್ನು ಎಲ್ಲ ರೀತಿಯಿಂದ ಬಳಸಿಕೊಂಡು ಪಕ್ಷದ ಪರ ಪ್ರಚಾರ ಮಾಡಲು ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಇದ್ದಾರೆ. ಪಕ್ಷದ ವಿರುದ್ಧ ಕೇಳಿಬರುವ ಎಲ್ಲ ಟೀಕೆ-ಟಿಪ್ಪಣಿಗಳಿಗೆ ಇಂಟರ್ನೆಟ್ ಮೂಲಕ ಎದಿರೇಟು ನೀಡಲು ಈ ವ್ಯವಸ್ಥೆ. ಇಲ್ಲಿ, ಬೀದಿ ಬದಿಯ ಹೋರಾಟ ಅಥವಾ ಭಾಷಣ ಇರುವುದಿಲ್ಲ' ಎಂದು ಪಕ್ಷದ ಸಂವಹನ ವಿಭಾಗದ ಮುಖಂಡರೊಬ್ಬರು ತಿಳಿಸಿದರು.

ಹಗರಣಗಳ ಕಳಂಕ ತೊಳೆದುಕೊಂಡ ಸಂದೇಶ
ಅಕ್ರಮ ಗಣಿಗಾರಿಕೆ, ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರಿಗೆ ಸುತ್ತಿಕೊಂಡಿರುವ ಡಿನೋಟಿಫಿಕೇಷನ್ ಪ್ರಕರಣಗಳು ಹಾಗೂ ಶಾಸಕ ಎಚ್. ಹಾಲಪ್ಪ ವಿರುದ್ಧದ ಅತ್ಯಾಚಾರ ಆರೋಪವನ್ನು ಇದುವರೆಗೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಆಯುಧಗಳಂತೆ ಬಳಸಿಕೊಂಡಿವೆ.

ಈ ಮೂರು ಪ್ರಮುಖ ಕಳಂಕಗಳನ್ನು ಪಕ್ಷ ತೊಳೆದುಕೊಂಡಿದೆ ಎಂಬ ಸಂದೇಶವನ್ನು ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ನವ ಮಾಧ್ಯಮಗಳ ಮೂಲಕ ಮತದಾರರಿಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಬಳ್ಳಾರಿಯ ರೆಡ್ಡಿ ಸಹೋದರರು ಈಗ ಬಿಜೆಪಿಯಲ್ಲಿ ಇಲ್ಲ.

ಡಿನೋಟಿಫಿಕೇಷನ್ ಹಗರಣಗಳ ಸುಳಿಯಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ಪಕ್ಷ ತೊರೆದು ಕರ್ನಾಟಕ ಜನತಾ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಹಾಲಪ್ಪ ಅವರೂ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿದ್ದಾರೆ. ಅವ್ಯವಹಾರಗಳಿಗೆ ಕಾರಣರಾದವರು ಈಗ ಪಕ್ಷದ ಜೊತೆ ಇಲ್ಲ ಎಂಬ ಸಂದೇಶವನ್ನು ನವ ಮಾಧ್ಯಮಗಳ ಮೂಲಕ ಹರಿಯಬಿಡಲಾಗುತ್ತದೆ ಎಂದು ಅವರು ವಿವರಿಸಿದರು.

`ಈ ತಂತ್ರಗಾರಿಕೆ ನಿಜಕ್ಕೂ ಫಲ ನೀಡುತ್ತದೆಯೇ? ನವ ಮಾಧ್ಯಮಗಳು ಜನರ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆಯೇ?' ಎಂಬ ಪ್ರಶ್ನೆಗೆ, `ಯಾಕಿಲ್ಲ? ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಮಾಡಿದ ಕೋಮು ಪ್ರಚೋದನಕಾರಿ ಭಾಷಣದ ಅಂಶಗಳನ್ನು ಜನರಿಗೆ ಮೊದಲು ತಿಳಿಸಿದ್ದೇ ನವ ಮಾಧ್ಯಮಗಳು. ಒವೈಸಿ ಭಾಷಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರವಷ್ಟೇ, ಮುಖ್ಯ ವಾಹಿನಿಯ ಮಾಧ್ಯಮಗಳು ಅದನ್ನು ಪ್ರಸಾರ ಮಾಡಿದ್ದು' ಎಂದರು.

ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಭ್ರಷ್ಟಾಚಾರ ಆರೋಪದ ಅಡಿ ಜೈಲಿಗೆ ಹೋಗಿ ಬಂದಿರುವುದು, ಕೆಜಿಎಫ್ ಶಾಸಕ ವೈ. ಸಂಪಂಗಿ, ಲಂಚ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಪ್ರಕರಣಗಳ ಬಗ್ಗೆ ಪಕ್ಷ ಜನರಿಗೆ ಯಾವ ಉತ್ತರ ನೀಡುತ್ತದೆ ಎಂಬ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT