ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಣಿಗೆ ಗಾಯನ ಪ್ರಶಸ್ತಿ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಗಮಣಿ ಎಸ್ ಶ್ರೀನಾಥ್ ಮತ್ತು ಸುಗುಣ ಪುರುಷೋತ್ತಮನ್ (ಕರ್ನಾಟಕ ಸಂಗೀತ ಗಾಯನ) ಸೇರಿದಂತೆ ಸಂಗೀತ, ನೃತ್ಯ, ರಂಗಭೂಮಿ ಮತ್ತು ಸೂತ್ರದಬೊಂಬೆಯಾಟ ಕ್ಷೇತ್ರಗಳಲ್ಲಿ ಒಟ್ಟು 38 ಕಲಾವಿದರಿಗೆ ಸಂಗೀತ ನಾಟಕ ಅಕಾಡೆಮಿ ಗುರುವಾರ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಸಂಗೀತ ಕೃತಿ ರಚನೆಕಾರ ಅಶೋಕ್ ಡಿ. ರಾನಡೆ ಮತ್ತು ರಂಗಕರ್ಮಿ ಜೈದೇವ್ ತನೇಜಾ ಅವರು ತಮ್ಮ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕೊಡುಗೆಗಾಗಿ ಪ್ರಶಸ್ತಿ ಪಡೆದಿದ್ದಾರೆ.
ಹಿಂದೂಸ್ತಾನಿ ಸಂಗೀತ ಗಾಯಕಿ ಗಿರಿಜಾ ದೇವಿ ಮತ್ತು ಕೂಚುಪುಡಿ ನೃತ್ಯಪಟು ನಟರಾಜ್ ರಾಮಕೃಷ್ಣ ಅವರನ್ನು ಸಂಗೀತ ನಾಟಕ ಅಕಾಡೆಮಿಯ ಫೆಲೋಗಳು ಎಂದು ಆಯ್ಕೆ ಮಾಡಲಾಗಿದೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ 82 ವರ್ಷದ ಗಿರಿಜಾದೇವಿ  ಮತ್ತು  78 ವರ್ಷದ ರಾಮಕೃಷ್ಣ ಅವರು ತಮ್ಮ ಆಯ್ಕೆಯೊಂದಿಗೆ ಅಕಾಡೆಮಿಯ 34 ಫೆಲೋಗಳ ಕೂಟ ಸೇರಿದಂತಾಗಿದೆ.

 2010ನೇ ಸಾಲಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ತಲಾ ಒಂಬತ್ತು ಪ್ರಶಸ್ತಿಗಳನ್ನು ನೀಡಿದ್ದರೆ ಜಾನಪದ, ಗುಡ್ಡಗಾಡು ಜನರ ನೃತ್ಯ, ಸೂತ್ರದ ಬೊಂಬೆಯಾಟ ಮತ್ತು ರಂಗಭೂಮಿ ಕ್ಷೇತ್ರದಲ್ಲಿ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರಲ್ಲಿ ಮೈಸೂರು ನಾಗಮಣಿ ಶ್ರೀನಾಥ್ ಮತ್ತು ಸುಗುಣ ಪುರುಷೋತ್ತಮನ್ (ಕರ್ನಾಟಕ ಗಾಯನ ಸಂಗೀತ) ಅವರಲ್ಲದೆ ಛನ್ನುಲಾಲ್ ಮಿಶ್ರ ಮತ್ತು ಯಶ್‌ಪಾಲ್ (ಹಿಂದೂಸ್ತಾನಿ ಗಾಯನ ಸಂಗೀತ) ಹಾಗೂ ಬುಧಾದಿತ್ಯ ಮುಖರ್ಜಿ (ಸಿತಾರ್) ಮತ್ತು ನಿತ್ಯಾನಂದ ಹಳ್ದೀಪುರ್ (ಕೊಳಲು) ಅವರು ಹಿಂದೂಸ್ತಾನಿ ವಾದ್ಯ ಸಂಗೀತದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ವಾದ್ಯ ಸಂಗೀತದಲ್ಲಿ ಎನ್. ಆರ್. ಮುರಳೀಧರನ್ (ವಯೋಲಿನ್) ಮತ್ತು ಎಸ್.ವಿ. ರಾಜಾರಾವ್ (ಮೃದಂಗಂ) ಹಾಗೂ ವಿ. ಸಿಂಹಾಚಲ ಶಾಸ್ತ್ರಿ (ಹರಿಕತೆ) ಪ್ರಶಸ್ತಿ ಪಡೆದಿರುವ ಇತರರು.

ಪ್ರಶಸ್ತಿ ಪಡೆದಿರುವ ನೃತ್ಯಪಟುಗಳು:
ಎಸ್. ರಾಜೇಶ್ವರಿ (ನೃತ್ಯ ಸಂಗೀತ- ಭರತನಾಟ್ಯ) ಮಾಲಾಂಬಿಕ ಮಿತ್ರ (ಕಥಕ್), ಕಲಾಮಂಡಲಂ ಕೊಂಬಿಲ್ ಗೋವಿಂದನ್ ನಾಯರ್ (ಕಥಕ್ಕಳಿ), ರತ್ನಾಕುಮಾರ್ (ಕೂಚುಪುಡಿ), ಅರುಣ ಮೊಹಂತಿ (ಒಡಿಸ್ಸಿ), ಫನ್‌ಜೌಬಂ ಇಬೊತೊನ್ ಸಿಂಗ್(ಮಣಿಪುರಿ), ಮಾಣಿಕ್ (ಸಾಟ್ರಿಯಾ), ಉತ್ತರ ಆಶಾ ಕೂರ್ಲಾವಾಲಾ (ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ), ಕಲಾಮಂಡಲಂ ರಾಮ ಛಕ್ಯಾರ್ (ನೃತ್ಯದ ಇತರ ಪ್ರಮುಖ ಪರಂಪರೆ ಮತ್ತು ನೃತ್ಯ ರೂಪಕ- ಕೂಟಿಯಾಟ್ಟಂ).

ರಂಗಭೂಮಿಯಲ್ಲಿ ಎಂಟು ಮಂದಿ ಪ್ರಮುಖರಿಗೆ ಪ್ರಶಸ್ತಿ ಲಭಿಸಿದೆ. ಅವರೆಂದರೆ ಡಿ. ವಿಜಯ್ ಭಾಸ್ಕರ್ (ತೆಲುಗು) ಮತ್ತು ಆತ್ಮಜೀತ್‌ಸಿಂಗ್ (ಪಂಜಾಬಿ) ಅವರಿಗೆ ನಾಟಕರಚನೆಗಾಗಿ, ವೀಣಾಪಾಣಿ ಚಾವ್ಲಾ ಮತ್ತು ಊರ್ಮಿಳ್ ಕುಮಾರ್ ಅವರಿಗೆ ನಿರ್ದೇಶನಕ್ಕಾಗಿ ಹಾಗೂ ದಿಲೀಪ್ ಪ್ರಭಾವಾಲ್ಕರ್, ಬನ್ವಾರಿ ತನೇಜ, ಮಾಯಾ ಕೃಷ್ಣ ರಾವ್ ಮತ್ತು ಸ್ವಾತಿಲೇಖ ಸೇನ್‌ಗುಪ್ತ ಅವರಿಗೆ ಅಭಿನಯಕ್ಕಾಗಿ ಪ್ರಶಸ್ತಿ ದೊರಕಿದೆ.

ಜನಪದ ನೃತ್ಯಕ್ಕಾಗಿ ಟಿ. ಸೋಮಸುಂದರಂ (ಆಂಧ್ರಪ್ರದೇಶ), ಜಾನಪದ ರಂಗಭೂಮಿಗಾಗಿ ಚಂದ್ರ ಜಗದೀಶ್ (ಮಹಾರಾಷ್ಟ್ರ), ಕೆ. ಚಿನ್ನ ಅಂಜನಮ್ಮ (ಸೂತ್ರದ ಬೊಂಬೆಯಾಟ)  ಸೇರಿದಂತೆ ಹಲವರಿಗೆ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT