ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಉದ್ಯಮಗಳಿಗೆ ಪರಿಸರ ಪ್ರಶಸ್ತಿ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸಾಧನೆ ಮಾಡಿರುವ ರಾಜ್ಯದ ನಾಲ್ಕು ಉದ್ಯಮಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೇ ಪ್ರಥಮ ಬಾರಿಗೆ `ಪರಿಸರ ಉತ್ಕೃಷ್ಟತಾ ಪ್ರಶಸ್ತಿ~ ಘೋಷಿಸಿದೆ. ಇದೇ 21ರಂದು ನಡೆಯುವ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, `ಸಿಮೆಂಟ್ ಕೈಗಾರಿಕಾ ಕ್ಷೇತ್ರದಲ್ಲಿ ಸೇಡಂನ ವಾಸವದತ್ತ ಸಿಮೆಂಟ್ ಕಾರ್ಖಾನೆ, ಸಕ್ಕರೆ ಮತ್ತು ಡಿಸ್ಟಿಲರಿ ವಿಭಾಗದಲ್ಲಿ ನಂಜನಗೂಡಿನ ಬನ್ನಾರಿಯಮ್ಮನ್ ಶುಗರ್ಸ್‌, ಕಾಫಿ ಸಂರಕ್ಷಣಾ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ಲಲಿತಾದ್ರಿ ಕಾಫಿ ಎಸ್ಟೇಟ್ ಹಾಗೂ ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂರಕ್ಷಣಾ ವಿಭಾಗದಲ್ಲಿ ಕನಕಪುರ ತಾಲ್ಲೂಕಿನ ಮರಡಿ ಎಕೋ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ~ ಎಂದರು.

`ಮಾಧ್ಯಮ ಹಾಗೂ ವೆಬ್‌ಸೈಟ್ ಮೂಲಕ ಒಟ್ಟು 12 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಡಿಸ್ಟಿಲರಿ, ಸ್ಪಾಂಜ್ ಐರನ್, ಡೇರಿ ಉದ್ಯಮ, ಗಣಿಗಾರಿಕೆ, ಸಾಮೂಹಿಕ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್‌ಬಳಕೆ, ಎಲೆಕ್ಟ್ರೋ ಪ್ಲೇಟಿಂಗ್, ಕಾಂಪೊಸಿಟ್ ಟೆಕ್ಸ್‌ಟೈಲ್ಸ್, ಡಿಸ್ಟಿಲರಿ ರಹಿತ ಸಕ್ಕರೆ ವಿಭಾಗದಲ್ಲಿ ನಿಗದಿತ ನಿಬಂಧನೆಗಳನ್ನು ಉದ್ಯಮಗಳು ಪೂರೈಸದ ಕಾರಣ ಆ ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಿಲ್ಲ~ ಎಂದು ಅವರು ತಿಳಿಸಿದರು.

`ಈ ಬಾರಿ ಒಟ್ಟು 24 ಅರ್ಜಿಗಳು ಸ್ವೀಕೃತವಾಗಿದ್ದವು. ಪ್ರಾಥಮಿಕ ಪರಿಶೀಲನೆ ಬಳಿಕ 9 ಉದ್ಯಮಗಳ ಅರ್ಜಿಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಯಿತು. ತ್ರಿ ಸದಸ್ಯರ ಸಮಿತಿಯು ನಾಲ್ಕು ಉದ್ಯಮಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು. ಚಿಂತಾಮಣಿ ನಗರಸಭೆಗೆ ಈ ಬಾರಿ ಅತ್ಯುತ್ತಮ ಘನತ್ಯಾಜ್ಯ ನಿರ್ವಹಣಾ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷ ಈ ಪ್ರಶಸ್ತಿಗೆ ರಾಜ್ಯದ ಪುರಸಭೆ ನಗರಸಭೆಗಳಿಂದ ಅರ್ಜಿ ಆಹ್ವಾನಿಸಲಾಗುವುದು~ ಎಂದು ಮಾಹಿತಿ ನೀಡಿದರು.

`ಅಂತರರಾಷ್ಟ್ರೀಯ ಓಜೋನ್ ದಿನವಾದ 16ರಂದು ಮಂಡಳಿಯಲ್ಲಿ ಓಜೋನ್ ಸಂರಕ್ಷಣೆ ಕುರಿತ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸೇಂಟ್ ನಾರ್ಬರ್ಟ್ ಸಿಬಿಎಸ್‌ಇ ಶಾಲೆ ಪ್ರಥಮ ಬಹುಮಾನ ಹಾಗೂ ರಾಜಾಜಿನಗರದ ಶ್ರೀವಾಣಿ ವಿದ್ಯಾಸಂಸ್ಥೆ ದ್ವಿತೀಯ ಬಹುಮಾನ ಪಡೆದಿವೆ~ ಎಂದು ತಿಳಿಸಿದರು. 

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ದಿನೇಶ್ ಗುಂಡೂರಾವ್ ವಹಿಸಲಿದ್ದಾರೆ~ ಎಂದರು. ಎಸ್.ಎಂ.ಪುಟ್ಟಬುದ್ದಿ, ಮುಖ್ಯ ಪರಿಸರ ಸಂರಕ್ಷಣಾಧಿಕಾರಿ ಎಂ.ಡಿ.ಎನ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT