ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಶಕ ಕಳೆದರೂ ಕಾಮಗಾರಿ ಅಪೂರ್ಣ

ಮೊಳಕಾಲ್ಮುರಿನ ರಂಗಯ್ಯನದುರ್ಗ ಜಲಾಶಯ
Last Updated 9 ಡಿಸೆಂಬರ್ 2013, 9:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನೀರಿನ ಮೂಲ ಸರಿಯಾಗಿ ಗುರುತಿಸದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ನಿರೀಕ್ಷಿತ ಸೇವೆಯಿಂದ ಪೂರ್ಣವಾಗಿ ವಿಮುಖ ಹಾದಿಯಲ್ಲಿ ಸಾಗುತ್ತಿದೆ.

1974–75ರಲ್ಲಿ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್‌ ಅವಧಿಯಲ್ಲಿ ಶಂಕುಸ್ಥಾಪನೆ ಆಗಿರುವ ಈ ಜಲಾಶಯ ನಿರ್ಮಾಣ ಕಾಮಗಾರಿ 40 ವರ್ಷ ಕಳೆದರೂ ಪೂರ್ಣವಾಗಿಲ್ಲ. ಇದರಿಂದ ಜಲಾಶಯಕ್ಕೆ ಸರ್ಕಾರದಿಂದ ಮಂಜೂರಾಗಬೇಕಿದ್ದ ನಿರ್ವಹಣಾ ವೆಚ್ಚಕ್ಕೆ ಕತ್ತರಿ ಬೀಳುವ ಮೂಲಕ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಜಲಾಶಯ ಸಾಮರ್ಥ್ಯ 540 ಎಂಎಫ್‌ಎಸ್‌ (0.5 ಟಿಎಂಸಿ ), 900 ಮೀಟರ್ ಉದ್ದವಿದ್ದು, 38 ಅಡಿ ಎತ್ತರವಿದೆ. 6,350 ಎಕರೆ ಅಚ್ಚುಕಟ್ಟಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.
ಕಾಮಗಾರಿ ಪೂರ್ಣವಾಗಿಲ್ಲ: 40 ವರ್ಷ ಕಳೆಯುತ್ತಾ ಬಂದರೂ ಜಲಾಶಯ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ.

ಬೆಂಗಳೂರು ಮೂಲದ ಗುತ್ತಿಗೆದಾರರು ಹಣ ಪಾವತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ
ಪ್ರಕರಣ ದಾಖಲು ಮಾಡಿದ್ದಾರೆ. ಈಗ ಮೂಲ ಗುತ್ತಿಗೆದಾರರು ನಿಧನ ಹೊಂದಿದ್ದಾರೆ. 18.8 ಕಿ.ಮೀ. ಎಡದಂಡೆ ನಾಲೆ ಪೈಕಿ 13 ಕಿ.ಮೀ. ಮಾಡಲಾಗಿದೆ. 14 ಕಿ.ಮೀ. ಬಲದಂಡೆ ಪೈಕಿ 13 ಕಿ.ಮೀ. ಮಾಡಲಾಗಿದೆ ಎಂದು ಎಂಜಿನಿಯರ್ ರಮೇಶ್‌ ಹೇಳುತ್ತಾರೆ.

ಜಲಾಶಯ ಪೂರ್ಣ ವರದಿ ಸಲ್ಲಿಸದ ಕಾರಣ ಸರ್ಕಾರದಿಂದ ನಿರ್ವಹಣಾ ವೆಚ್ಚ ಸಹ ನೀಡುತ್ತಿಲ್ಲ. ಜಲಾಶಯಕ್ಕೆ ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ ಬೀದಿ ದೀಪಗಳು ಹಾಳಾಗಿವೆ. ಗೇಟ್‌ಗಳನ್ನು ಎತ್ತಿ ಇಳಿಸಲು ಜನರೇಟರ್‌ ಬಳಸಲಾಗುತ್ತಿದೆ.

ರಾತ್ರಿ ಕಾವಲುಗಾರ ಇಲ್ಲದ ಕಾರಣ ಹಲವು ಬಾರಿ ರಾತ್ರಿ ವೇಳೆ ನೀರು ಬಿಟ್ಟಿರುವ ಘಟನೆಗಳು ನಡೆದಿವೆ. ಈ ಬಗ್ಗೆ ಪತ್ರ ಬರೆದು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ದೂರುತ್ತಾರೆ.

ಜಲಾಶಯದಿಂದ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತಿರುವ ಕಾರಣ ಮೊಳಕಾಲ್ಮುರು ಪಟ್ಟಣ ಪಂಚಾಯ್ತಿ ಅಥವಾ ಲೋಕೋಪಯೋಗಿ ಇಲಾಖೆ ಸಂಪರ್ಕ ರಸ್ತೆ ನಿರ್ಮಿಸಬಹುದಾಗಿದೆ. ರಸ್ತೆ ಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಯಾರೊಬ್ಬರೂ ಜಲಾಶಯದತ್ತ ಸುಳಿಯದಂತೆ ಮಾಡಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ತುಂಬುವುದೇ ಅಪರೂಪ!: ಸೂಕ್ತ ನೀರಿನ ಮೂಲವಿಲ್ಲದೇ ನಿರ್ಮಿಸಿರುವುರಿಂದ ಜಲಾಶಯ ತುಂಬುವುದೇ ಅಪರೂಪ. 35 ವರ್ಷಗಳಲ್ಲಿ 5–6 ಬಾರಿ ಮಾತ್ರ ತುಂಬಿದೆ. ಜಲಾಶಯಕ್ಕೆ ನೀರು ಬರುವ ಪಾತ್ರದಲ್ಲಿ ಹಲವು ಚೆಕ್‌ಡ್ಯಾಂ,
ಬ್ಯಾರೇಜ್‌ ನಿರ್ಮಾಣ ಮಾಡಿರುವುದು ಸಹ ಒತ್ತು ನೀಡಿದೆ. ಈಗ ಚಿಕ್ಕುಂತಿ ಬಳಿ ಮಂಜೂರಾಗಿರುವ ಎರಡು ಬ್ಯಾರೇಜ್‌ ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದು ರಂಗಯ್ಯನದುರ್ಗ ಜಲಾಶಯ ಅಚ್ಚುಕಟ್ಟುದಾರರ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ ಹೇಳಿದರು.

ಜಲಾಶಯಕ್ಕೆ ತುಂಗಭದ್ರಾ ಹಿನ್ನೀರು ಅಥವಾ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ಆ ಮೂಲಕ ತಾಲ್ಲೂಕಿನ ಅರ್ಧ ಭಾಗದಷ್ಟು ಕೆರೆಗಳನ್ನು ತುಂಬಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೂಪುರೇಷೆಗಳ ಚರ್ಚೆಗೆ ಶೀಘವೇ ರೈತರ ಸಭೆ ಕರೆದು ಮಾತುಕತೆ ನಡೆಸುವ ಉದ್ದೇಶವಿದೆ ಎಂದರು.

ಅನುದಾನ ವ್ಯರ್ಥ: ಜಲಸಂವರ್ಧನ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಂತರ್ಜಲ ಸಂರಕ್ಷಣೆ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಜಿಗನಿಹಳ್ಳ ಪಾತ್ರದಲ್ಲಿ ಮರಳು ಮಾಫಿಯಾ ಇದಕ್ಕೆ ಎಳ್ಳುನೀರು ಬಿಡುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಲಕ್ಷ್ಮೀಪತಿ ದೂರಿದರು.

ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುವ ಜತೆಗೆ ನೀರಿನ ಮೂಲ ಸರ್ವೇ ಕೆಲಸಕ್ಕೆ ಮುಂದಾಗಬೇಕಾದ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT