ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೂ ಇದ್ದೇವೆ ನಿಮ್ಮ ನಡುವೆ...ಕಾಣುತ್ತಿಲ್ಲವೇ?

ಸ್ವಾವಲಂಬನೆಯ ಬಿಲ್ ಕ್ಲಿಂಟನ್, ಭಿಕ್ಷೆಯೇ ಬದುಕಾಗಿಸಿ ಕೊಂಡ ವೆಂಕಟೇಶಪ್ಪ, ಶಾಲೆ ಭಾಗ್ಯವಿಲ್ಲದ ಶುಭಾ..
Last Updated 3 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ಕೋಲಾರ: ಇವರು ನಮ್ಮ ನಡುವೆಯೇ ಇದ್ದಾರೆ, ಆದರೆ ಇದ್ದೂ ಇಲ್ಲದಂತೆ, ಕಂಡರೂ ಕಾಣದಂತೆ. ನಮ್ಮ ಪಕ್ಕದಲ್ಲೇ ಇವರು ನಿಧಾನಕ್ಕೆ ಸಾಗಿ ಹೋಗುತ್ತಾರೆ. ಜೊತೆಗಿರುವವರ ಕೈ ಹಿಡಿದು ಅಥವಾ ಕೋಲು ಹಿಡಿದು. ನಡೆಯಲಾಗದವರು ನಮ್ಮ ಕಾಲ ಬುಡದ ಸಮೀಪವೇ ಇಷ್ಟಿಷ್ಟೇ ಜರುಗುತ್ತಾ ಹಾದಿ ಸವೆಸುತ್ತಾರೆ, ಹಾಗೆಯೇ ಜೀವನವನ್ನೂ...

ಕೆಲವರು ಆದಷ್ಟು ಕೆಲಸ ಮಾಡುತ್ತಾ, ಕೆಲವರು ತಮಗಾಗಿಯೇ ಇರುವ ಶಾಲೆಗಳಲ್ಲಿ ಕಲಿಯುತ್ತಾ, ಮತ್ತೂ ಕೆಲವರು ಅಂಥ ಅವಕಾಶವೂ ಇಲ್ಲದೆ, ಮನೆಮಂದಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಾ...

ನಮ್ಮ ಸಂವೇದನೆಯ ಸಂಪರ್ಕಕ್ಕೆ ಇಂಥವರು ಅರೆಕ್ಷಣ ಬಂದರೂ ಸ್ಪಂದಿಸುವ ಸೂಕ್ಷ್ಮತೆ ಕೂಡಲೇ ಗೈರುಹಾಜರಿಯಾಗಿಬಿಡುತ್ತದೆ. ಅವರಿಗೆ ನೆರವು ನೀಡುವುದಿರಲಿ ಮಾತಿನ ಅನುಕಂಪ ಸೂಚಿಸುವ ಅವಕಾಶವೂ ಅದೇ ಕ್ಷಣ ಮಾಯವಾಗಿಬಿಡುತ್ತದೆ!
ಇಲ್ಲೊಬ್ಬ ಬಿಲ್ ಕ್ಲಿಂಟನ್...

ಬಿಲ್ ಕ್ಲಿಂಟನ್ ಎಂದ ಕೂಡಲೇ ಯಾರಿಗೇ ಆದರೂ ಅಮೆರಿಕಾದ ಮಾಜಿ ಅಧ್ಯಕ್ಷರು ನೆನಪಾಗುತ್ತಾರೆ. ಆದರೆ ಇಲ್ಲಿ ಹೇಳಲು ಹೊರಟಿರುವುದು ಅವರ ಬಗೆಗಲ್ಲ. ಕೋಲಾರದ ಖಾದ್ರಿಪುರದಲ್ಲೇ ಇರುವ ಯುವಕ ಬಿಲ್ ಕ್ಲಿಂಟನ್ ಬಗ್ಗೆ.

ಹುಟ್ಟಿದಾಗಿನಿಂದಲೇ ಪೋಲಿಯೋ ಪೀಡಿತನಾದ 20ರ ಹರೆಯದ ಈ ಯುವಕನಿಗೆ ಈಗ ಮೂರು ಚಕ್ರದ ಸೈಕಲ್ ಜೀವನ ಸಂಗಾತಿ. ಅದರೊಂದಿಗೆ ಇನ್ನೊಂದಿದೆ. ಅದು ಆತ್ಮವಿಶ್ವಾಸ. ಅದರ ಜೊತೆಗೆ ಸ್ವಾವಲಂಬನೆಯ ಮಂತ್ರ. ಹೀಗಾಗಿಯೇ ಕೂಲಿಕೆಲಸ ಮಾಡುವ ಪೋಷಕರಿಗೆ ಈತ ಹೊರೆಯಾಗಿಲ್ಲ. ಬದಲಿಗೆ ನೆರವಾಗಿದ್ದಾನೆ.

ಇತ್ತೀಚೆಗಷ್ಟೇ ನಗರದ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಂಗವಿಕಲರ ಕ್ರೀಡಾಕೂಟದ ತ್ರಿಚಕ್ರ ವಾಹನ ಓಟದ ಸ್ಪರ್ಧೆಯಲ್ಲಿ ಮೊದಲಿಗನಾಗಿ ಗಮನ ಸೆಳೆದ. ಗೆದ್ದ ಬಳಿಕ ಆತ ಇತರರಂತೆ ಬೀಗಲಿಲ್ಲ. ಎಂದಿನ ಮೌನ ಮತ್ತು ಕಂಡೂಕಾಣದ ಕಿರುನಗೆಯು ಮುಖದ ಮೇಲಿತ್ತು. 

ಜಿಲ್ಲಾ ಕ್ರೀಡಾಂಗಣದ ಸಮೀಪದಲ್ಲೇ ಕಾಗದದ ಲೋಟಗಳನ್ನು ಎಣಿಸಿ ಪ್ಯಾಕ್ ಮಾಡುವ ಕೆಲಸವನ್ನು ಮಾಡುತ್ತಿರುವ ಈತ ತಂದೆ–ತಾಯಿ ಮತ್ತು ಗೆಳೆಯರ ನೆರವು, ಪ್ರೋತ್ಸಾಹವಿಲ್ಲದೇ ಹೋಗಿದ್ದರೆ ಈ ಸ್ಥಿತಿಯಲ್ಲಿ ತಾನು ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಈ ಯುವಕನಿಗೆ ಐದಾರು ತಿಂಗಳಿಂದ ಅಂಗವಿಕಲರ ಕಲ್ಯಾಣ ಇಲಾಖೆಯ ಮಾಸಿಕ ವೇತನ ₨ 1 ಸಾವಿರ ದೊರಕುತ್ತಿದೆ. ಅದಕ್ಕೂ ಮುಂಚೆ ಈ ಪ್ರೋತ್ಸಾಹಧನದ ಬಗ್ಗೆ ಆತನಿಗೆ ಗೊತ್ತೇ ಇರಲಿಲ್ಲ.

ಭಿಕ್ಷೆಯೇ ಬದುಕಾಯಿತು...
20 ವರ್ಷದ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿಯ ವೆಂಕಟೇಶಪ್ಪ 40ರ ಏರುವಯಸ್ಸಿನಲ್ಲಿದ್ದಾಗ ತನ್ನ ಹಳ್ಳಿಯ ಇತರ ರೈತರಂತೆ ತನ್ನ 1 ಎಕರೆ ಜಮೀನಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು. ಐವರ ಪೈಕಿ ಕೆಲವು ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದ್ದರು. ಅದೊಂದು ದಿನ ನಡೆದ ಬಸ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡ ಬಳಿಕ ಅವರ ನಸೀಬು ಕೆಟ್ಟಿತು. ನಡೆಯಲು ಸಾಧ್ಯವಾಗದ ಅವರು ಚಿಕ್ಕ ಮಣೆಯೊಂದರ ಮೇಲೆ ಕುಳಿತು ಕೈಯಲ್ಲಿ ಮರದ ಚಕ್ಕೆಯನ್ನು ಹಿಡಿದು ರಸ್ತೆಯಲ್ಲಿ ಮೀಟುತ್ತಾ ಮುಂದೆ ಸಾಗಬೇಕು. ಅದಷ್ಟೇ ಅವರಿಂದ ಆಗುವ ಕೆಲಸ.

ಅಂಗವಿಕಲರಾದ ಅವರ ಸ್ವಾವಲಂಬನೆಯ ಬದುಕು ಕೂಡ ಕೊನೆಗೊಂಡಿತು. ಕೃಷಿ ಚಟುವಟಿಕೆಯಲ್ಲಿ ತೊಡಗಲಾಗದೆ ದುಡಿಯಲೂ ಆಗದೇ ಬದುಕು ಅತಂತ್ರಗೊಂಡಿತು. ಆಗ ಅವರು ಆರಿಸಿಕೊಂಡಿದು ಭಿಕ್ಷೆ ಬೇಡುವ ಕಾಯಕ. ನೆಲದ ಮೇಲೆ ಕುಳಿತು ಸಾಗುವ ಅವರನ್ನು ತಲೆತಗ್ಗಿಸಿ ನೋಡುವ ಮಂದಿಯೂ ಕಡಿಮೆ, ಹೀಗಾಗಿ ಭಿಕ್ಷೆಯೂ ಕೂಡ ಅವರಿಗೆ ದುಬಾರಿ ಬಾಬತ್ತು.

ಶ್ರೀನಿವಾಸಪುರದಿಂದ ದಿನವೂ ಕೋಲಾರಕ್ಕೆ ಬಸ್ಸಿನಲ್ಲಿ ಬರುವ ಈ ವೃದ್ಧ ಜೀವ ನಗರದ ಹಲವೆಡೆ ಸಂಚರಿಸುತ್ತಾರೆ. ಹೆಚ್ಚು ಜನ ಬರುವ ಹೋಟೆಲ್, ಅಂಗಡಿಗಳು, ಮಾರುಕಟ್ಟೆ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಾರೆ. ಎಲ್ಲ ಐವರು ಮಕ್ಕಳಿಗೂ ಮದುವೆ ಮಾಡಿರುವ ಅವರಿಗೆ ಪತ್ನಿ ಇಲ್ಲ. ಒಬ್ಬ ಮಗಳ ಮನೆಯಲ್ಲಿ ಆಶ್ರಯ ಪಡೆದು ಅವರು ಜೀವನ ನಡೆಸುತ್ತಿದ್ದಾರೆ.

ಅವರ ಬಳಿ ಅಂಗವಿಕಲರ ಕಾರ್ಡು ಇಲ್ಲ. ಅಂಗವಿಕಲರಿಗೆ ನೀಡುವ ಸೌಲಭ್ಯವಾಗಲೀ, ಹಿರಿಯ ನಾಗರಿಕರಿಗೆ ದೊರಕುವ ಸೌಲಭ್ಯವಾಗಲೀ ಅವರಿಗೆ ದೊರಕುತ್ತಿಲ್ಲ. ಅವುಗಳ ಬಗ್ಗೆ ಅವರಿಗೆ ಗೊತ್ತೂ ಇಲ್ಲ.

ಕೋಲಾರದ ಹೊಟೇಲ್ ಒಂದರ ಮುಂದೆ ಉರಿಬಿಸಿಲಿನ ಮಧ್ಯಾಹ್ನದಲ್ಲಿ ಭಿಕ್ಷೆ ಬೇಡುತ್ತಿದ್ದ ಅವರನ್ನು ಮಾತನಾಡಿಸುತ್ತಿದ್ದ ನನ್ನನ್ನು ನೋಡಿ ಗೆಳೆಯರೊಬ್ಬರು ಕೇಳಿದರು:  ಕೋಲಾರದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಎಂಬುದೊಂದು ಇದೆಯೇ? ಇದ್ದರೆ ಅದು ಏನು ಮಾಡುತ್ತಿದೆ?

ದೂರವೇ ಉಳಿದ ಶಾಲೆ..
ಈಕೆ 13ರ ಬಾಲೆ. ಮೆದುಳುವಾತಕ್ಕೆ ಗುರಿಯಾದ ಈಕೆ ಇನ್ನೂ ಶಾಲೆ ಮೆಟ್ಟಿಲು ಹತ್ತಿಲ್ಲ. ಮಾಲೂರು ತಾಲ್ಲೂಕಿನ ನೊಸಗೆರೆ ಗ್ರಾಮದ ಮುನಿರಾಜು ಮತ್ತು ಆಂಜನಮ್ಮ ದಂಪತಿಯ ಮೊದಲ ಮಗುವಾದ ಈಕೆಗೆ ಅಗತ್ಯವಿರುವ ಶಾಲೆ ಮಾಲೂರಿನಲ್ಲಿ ಇಲ್ಲ. ಬೇರೆ ಕಡೆಗೆ ಕರೆದೊಯ್ದು ಸೇರಿಸಬೇಕು ಎಂಬ ಪ್ರಯತ್ನಕ್ಕೆ ಮನೆಯ ಬಡತನ ಅಡ್ಡಿಯಾಗಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಮುನಿರಾಜು ಅದನ್ನು ಬಿಟ್ಟು ಮಗಳಿಗೆ ಬೇಕಾದ ಶಾಲೆಯನ್ನು ಹುಡುಕುತ್ತಾ ಹೊರಟರೆ ತುತ್ತಿಗೆ ತತ್ವಾರವಾಗುತ್ತದೆ. ಹೀಗಾಗಿಯೇ, ಜಿಲ್ಲೆಯ ಅಲ್ಲಲ್ಲಿ ಇರುವ ಇಂಥ ಮಕ್ಕಳ ಶಾಲೆಗೆ ಮಗಳನ್ನು ಸೇರಿಸುವ ಪ್ರಯತ್ನವೇ ನಡೆದಿಲ್ಲ. ಮಾಲೂರಿನಲ್ಲೇ ಇಂಥದ್ದೊಂದು ಶಾಲೆ ಇದ್ದಿದ್ದರೆ ತಮ್ಮ ಮಗಳು ಅಕ್ಷರ ಕಲಿಕೆ ಮಾಡಬಹುದಿತ್ತು, ನ್ಯೂನತೆಯನ್ನು ಮೀರಿ­ಕೊಳ್ಳಲು ದಾರಿಯಾಗುತ್ತಿತ್ತು ಎನ್ನುವ ಅವರು, ಮಗಳಿಗೆ ಮೂರು ತಿಂಗಳಿಗೊಮ್ಮೆ ಫಿಸಿಯೋ­ಥೆರಪಿ ಮಾಡಿಸಲು ಬೆಂಗಳೂರಿಗೆ ಕರೆದೊ­ಯ್ಯುತ್ತಾರೆ. ಮಗಳ ಎಲ್ಲ ಬೇಕು ಬೇಡಗಳನ್ನು ತಾಯಿಯೇ ನೋಡಿಕೊಳ್ಳು­ತ್ತಿ­ದ್ದಾರೆ. ಅಂಗವಿ­ಕಲರ ಕಲ್ಯಾಣ ಇಲಾಖೆಯಿಂದ ಈ ಮಗುವಿಗೆ 1 ಸಾವಿರ ಸಹಾಯಧನ ದೊರಕುತ್ತಿದೆ.

ಮಾಲೂರಿನಿಂದ ನಮ್ಮ ಹಳ್ಳಿ ಮೂರು ಕಿಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರದಲ್ಲಿ ಅಂಗ­ವಿಕ­ಲರಿಗಾಗಿ ಒಂದು ಶಾಲೆ ಏಕೆ ಇಲ್ಲ? ಎಂದು ಅವರು ಪ್ರಶ್ನಿಸುತ್ತಾರೆ. ಮಗಳಿಗೆ ಬೇಕಾದ ಶಾಲೆ ಊರಿನ ಸಮೀಪದಲ್ಲೇ ಇಲ್ಲ. ದೂರದ ಊರು­ಗಳಿಗೆ ಕರೆದೊಯ್ಯಲಾಗದ ಅಸಹಾಯಕತೆ ಅವರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT