ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೂ ಮನುಷ್ಯರು, ನಮ್ಮ ಸಮಸ್ಯೆಗೆ ಸ್ಪಂದಿಸಿ

Last Updated 19 ಸೆಪ್ಟೆಂಬರ್ 2011, 5:35 IST
ಅಕ್ಷರ ಗಾತ್ರ

ಬಳ್ಳಾರಿ: ಅದೊಂದು ಸರಳ ಸಮಾರಂಭ. ನ್ಯಾಯಾಧೀಶರು, ವೈದ್ಯರು, ಕಾನೂನು ತಜ್ಞರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದ ಆ ಸಮಾರಂಭ ಎರಡೂವರೆ ಗಂಟೆಗಳ ಕಾಲ ನಡೆಯಿತು.

ಸೆಂಟರ್ ಫಾರ್ ಅಡ್ವೋಕೆಸಿ ಅಂಡ್ ರಿಸರ್ಚ್ (ಸಿಫಾರ್) ಸಂಸ್ಥೆಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಇತರ ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದ ಅದು.

ಹತಾಶೆ, ನೋವು, ದುಃಖ, ಅವಮಾನ, ಅಸಹಾಯಕತೆಯನ್ನೇ ಹೊಂದಿರುವ ಒಂದು ವರ್ಗ ಅಲ್ಲಿ ಭಾಗವಹಿಸಿ, ತನ್ನಲ್ಲಿ ಅಡಗಿದ್ದ ದುಗುಡ- ದುಮ್ಮಾನವನ್ನು ಹೊರಹಾಕಿತು.

ಸೌಹಾರ್ದ, ಸಹಬಾಳ್ವೆ ಮತ್ತು ಮಾನವೀಯತೆಯ ನೆಲೆಗಟ್ಟಿನಲ್ಲಿ ತಮ್ಮನ್ನೂ ನೋಡುವಂತಾಗಬೇಕು ಎಂಬ ಕೋರಿಕೆಯೊಂದಿಗೆ ಸಮಾನತೆಯನ್ನೂ ನೀಡಬೇಕು ಎಂಬ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ ದುಃಖಿಗಳು ಕಣ್ಣೀರು ಸುರಿಸಿದರು. ತಮ್ಮ ಹಕ್ಕನ್ನು ಪ್ರತಿಪಾದಿಸಿದರು.

ಸಮಾಜದ ತಿರಸ್ಕಾರಕ್ಕೆ ಒಳಗಾಗಿ ನೋವಿನ ಅಗ್ನಿಕುಂಡದಲ್ಲಿ ಬೇಯುತ್ತಿರುವವರನ್ನು `ನಿತ್ಯಜೀವನ~, `ವಿಮುಕ್ತಿ~, `ಸೌಖ್ಯ ಬೆಳಕು~, `ಪ್ರಗತಿ ಬೆಳಕು~ ಎಂಬ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಅಲ್ಲಿಗೆ ಕರೆತಂದಿದ್ದರು.

ಲೈಂಗಿಕ ಅಲ್ಪಸಂಖ್ಯಾತರು, ದೇವದಾಸಿಯರು, ಎಚ್‌ಐವಿ ಏಡ್ಸ್‌ನೊಂದಿಗೆ ಜೀವನ ನಡೆಸುತ್ತಿರುವವರು, ಲೈಂಗಿಕ ಕಾರ್ಯಕರ್ತರು ತಮ್ಮೆದೆಯಲ್ಲಿ ಮನೆಮಾಡಿರುವ ಅಸಮಾಧಾನವನ್ನು ಅನಾವರಣ ಮಾಡಿದರು.

`ನನ್ನ ಗಂಡ ಸತ್ತು ಹೋಗಿದ್ದಾನೆ. ಇಬ್ಬರು ಮಕ್ಕಳಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸ. ಅತ್ತೆ, ಮಾವ, ತಂದೆ- ತಾಯಿ ಯಾರೂ ಇಲ್ಲ. ಬಾವ, ಮೈದುನರು ದೂರ ಮಾಡಿದ್ದಾರೆ. ಪಕ್ಕದ ಮನೆಯ ಹೆಣ್ಣು ಮಗಳೊಬ್ಬಳು, ನನಗಿರುವ ಎಚ್‌ಐವಿ ಏಡ್ಸ್ ಕಾಯಿಲೆಯ ಬಗ್ಗೆ ಅಪಪ್ರಚಾರ ಮಾಡುತ್ತ, ಇತರರೆಲ್ಲ ತಿರಸ್ಕಾರದಿಂದ ನೋಡುವಂತೆ ಮಾಡಿದ್ದಾಳೆ. ಆಕೆ ನಾನು ಕೆಲಸ ಮಾಡುವ ಮಾಲೀಕನಿಗೂ ಈ ವಿಷಯ ತಿಳಿಸಿದ್ದರಿಂದ ಆತ ಕೆಲಸದಿಂದ ತೆಗೆದುಹಾಕಿದ್ದಾನೆ. ಹೀಗಾದರೆ ನಾನು ಎಲ್ಲಿ ಹೋಗಲಿ? ಏನು ಮಾಡಲಿ? ಚಿಕ್ಕ ಮಕ್ಕಳಿದ್ದಾರೆ ಎಂಬ ಕಾರಣದಿಂದ ಸಾಯದೇ ಉಳಿದಿದ್ದೇನೆ. ನನಗೆ ಸಹಾಯ ಮಾಡಿ~ ಎಂದು ಹೇಳುತ್ತಿದ್ದಂತೆಯೇ, ಆ ಮಹಿಳೆಯ ದುಃಖದ ಕಟ್ಟೆ ಒಡೆದು ಕಣ್ಣೀರು ಸುರಿಯಲಾರಂಭಿಸಿತು. ಅದೇ ಮಾದರಿಯ ಸಮಸ್ಯೆ ಎದುರಿಸುತ್ತ ಅಲ್ಲಿ ಕುಳಿತಿದ್ದವರ ಗಂಟಲೂ ಉಬ್ಬಿಬಂತು.

ವಿಮೆ ಹಣ ಕೊಡಿಸಿ: `ಎಚ್‌ಐವಿ ಪೀಡಿತನಾಗಿದ್ದ ಗಂಡ ಇತ್ತೀಚೆಗಷ್ಟೇ ಕಣ್ಣುಮುಚ್ಚಿಕೊಂಡರು. ಕಿಡ್ನಿಗಳೂ ಹಾಳಾಗಿದ್ದವು. ಬಳ್ಳಾರಿಯಲ್ಲಿ ಎಚ್‌ಐವಿ ಇದ್ದವರಿಗೆ ಡಯಾಲಿಸಿಸ್ ಸೌಲಭ್ಯ ನೀಡಲು ನಿರಾಕರಿಸಲಾಯಿತು.

ಬೆಂಗಳೂರಿಗೆ ಹೋಗಿ ಡಯಾಲಿಸಿಸ್ ಮಾಡಿಸುವ ಶಕ್ತಿ ನಮಗಿರಲಿಲ್ಲ. ಗಂಡ ಕಿಡ್ನಿ ವೈಫಲ್ಯದಿಂದ ಮೃತಪಟ್ಟರೂ, ವೈದ್ಯರು ಪ್ರಮಾಣಪತ್ರದಲ್ಲಿ ಎಚ್‌ಐವಿ ಏಡ್ಸ್‌ನಿಂದ ಸತ್ತಿದ್ದಾರೆ ಎಂದು ಬರೆದಿದ್ದಾರೆ. ಇದರಿಂದಾಗಿ ಅವಲಂಬಿತರಾದ ನಮಗೆ ವಿಮಾ ಹಣವೂ ದೊರೆಯುತ್ತಿಲ್ಲ. ನಮ್ಮ ಬಗ್ಗೆ ದಯೆ ತೋರಿ~ ಎಂಬ ಇನ್ನೊಬ್ಬ ಮಹಿಳೆಯ ಗೋಳು ಅಲ್ಲಿದ್ದವರ ಕರುಳೂ ಚುರ್ ಎನ್ನಲು ಕಾರಣವಾಯಿತು.

ತಾರತಮ್ಯ: `ಎಚ್‌ಐವಿ ಇದೆ ಎಂಬ ಕಾರಣದಿಂದ ಮನೆಯವರು ಆಸ್ತಿ ನೀಡಲು ನಿರಾಕರಿಸುತ್ತಿದ್ದಾರೆ. ಇಂದಲ್ಲ ನಾಳೆ ಸಾಯೋರಿಗೇಕೆ ಆಸ್ತಿ? ಅಂತ ಕೇಳುತ್ತಾರೆ. ನಿಜವಾಗಿಯೂ ಹಣದ ಅವಶ್ಯಕತೆ ಇರುವವರಿಗೆ ಆಸ್ತಿ ನೀಡದಿದ್ದರೆ ಹೇಗೆ? ಇದಕ್ಕೆ ಪರಿಹಾರ ಸೂಚಿಸಿ~ ಎಂದು ತಿಳಿಸಿದ ಮತ್ತೊಬ್ಬ ಮಹಿಳೆಯ ಕಣ್ಣಾಲಿಗಳು ತುಂಬಿಬಂದವು.

ಪಠ್ಯದಲ್ಲಿ ಅಳವಡಿಸಿ: `ನಮಗಿಷ್ಟ ಆದವರನ್ನು ಮದುವೆ ಮಾಡಿಕೊಳ್ಳಲು ಅವಕಾಶವಿಲ್ಲ. ಯಾರೂ ಮನೆ ಬಾಡಿಗೆಗೆ ಕೊಡುವುದಿಲ್ಲ, ಕೊಟ್ಟರೂ ಒಂದು ಸಾವಿರ ಮನೆಗೆ ಮೂರು ಸಾವಿರ ಬಾಡಿಗೆ ಹೇಳುತ್ತಾರೆ. ಕೆಲಸಕ್ಕೆ ಹೋದರೆ ನಮ್ಮ ದೇಹದ ಮೇಲೆ ಕಣ್ಣು ಹಾಕುವವರೇ ಹೆಚ್ಚು. ಭಿಕ್ಷೆ ಬೇಡಿದರೆ ದುಡಿಯೋದಕ್ಕೇನು ಧಾಡಿ? ಅಂತ ಕೇಳಿ ಹೀಯಾಳಿಸುತ್ತಾರೆ. ಚಕ್ಕಾ, ಖೋಜಾ ಎಂದೆಲ್ಲ ಕರೆಯುತ್ತಾರೆ. ಚಿಕ್ಕಮಕ್ಕಳೂ ಕಲ್ಲು ಎಸೆಯುತ್ತವೆ~ ಎಂಬ ನೋವನ್ನು ತೋಡಿಕೊಂಡವರು ಲೈಂಗಿಕ ಅಲ್ಪಸಂಖ್ಯಾತರ ಸಂಘದ ಚಾಂದನಿ.

`ನಮ್ಮಲ್ಲಿ ಹೆಣ್ಣಿನ ಭಾವನೆಗಳು, ಕಾಮನೆಗಳು ಉದ್ಭವ ಆಗಿರುವುದರಿಂದ ಸೀರೆ ಉಟ್ಟು ಓಡಾಡುತ್ತೇವೆ. ನಮ್ಮ ಬಗ್ಗೆ ಪ್ರಾಥಮಿಕ ಶಾಲಾ ಮಟ್ಟದ ಪಠ್ಯ ಪುಸ್ತಕದಲ್ಲಿ ವಿವರ ನೀಡಿ. ಪಠ್ಯದಲ್ಲಿ ನಮ್ಮ ಜೀವನಶೈಲಿ ಬಗ್ಗೆ ತಿಳಿಸಿ, ನಮ್ಮನ್ನು ತಿರಸ್ಕಾರದಿಂದ ನೋಡದಂತೆ ಮಾಡಿ~ ಎಂಬ ಮನವಿ ಅವರದಾಗಿತ್ತು.

`ನಮಗೆ ಆಶ್ರಯ ಮನೆಗಳಿಲ್ಲ. ಮಾಸಾಶನ ನೀಡುತ್ತಿಲ್ಲ. ನಮ್ಮ ಸ್ಥಿತಿ ಮಕ್ಕಳಿಗೆ ಬರುವುದು ಬೇಡ. ಮುಂದಿನ ಪೀಳಿಗೆಗೆ ಬೇಡವೇಬೇಡ. ಆದರೂ ಇತ್ತೀಚೆಗೆ ಒಬ್ಬ ಮಹಿಳೆ ತನ್ನ ಮಗಳಿಗೆ ಮುತ್ತು ಕಟ್ಟಿಸಿದ್ದಾಳೆ. ಈ ಬಗ್ಗೆ ಸಂಘದವರೆಲ್ಲ ಸೇರಿಕೊಂಡು ಈ ಅನಿಷ್ಟ ಪದ್ಧತಿ ವಿರೋಧಿಸಿದೆವು~ ಎಂದು ದೇವದಾಸಿಯೊಬ್ಬರು ಜಿಲ್ಲಾ ನ್ಯಾಯಾಧೀಶೆ ಎಂ.ಜೆ. ಉಮಾ ಅವರೆದುರು ತಮ್ಮ ಅಳಲು ತೋಡಿಕೊಂಡರು.

ಎಚ್‌ಐವಿಯೊಂದಿಗೆ ಜೀವನ ನಡೆಸುತ್ತಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು, ಅಂತಹ ಮಹಿಳೆಯರ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ನಿರಾಕರಿಸುವ ವೈದ್ಯಕೀಯ ಸಿಬ್ಬಂದಿ ಬಗ್ಗೆ ಕೆಲವು ದೂರನ್ನು ಹೇಳಲಾಯಿತು.

ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಹಬಾಳ್ವೆಗೆ ಪ್ರೇರೇಪಿಸಲು ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾನೂನು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸ್ವಯಂ ಸೇವಾ ಸಂಘಟನೆಯವರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಬೈಲೂರು ಶಂಕರರಾಮ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT