ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಗೇಗೌಡರ ಜ್ಞಾನದ ಹಸಿವು ಮತ್ತು ಕಾಲು ಕೋಟಿ ಗೆಲುವು!

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಟೀವಿಯಲ್ಲಿ ನನ್ನ ಕಾರ್ಯಕ್ರಮ ಪ್ರಸಾರವಾಗುತ್ತಿರುವಾಗಲೂ ಮೈಯೆಲ್ಲ ನಡುಗುತ್ತಿತ್ತು. ನಿಜ ಹೇಳ್ಲಾ? ನನ್ನೆದೆ ಬಡಿತ ಇನ್ನೂ ನಾರ್ಮಲ್‌ಗೆ ಬಂದಿಲ್ಲ' ಎಂದು ಭಾವುಕರಾಗಿಯೇ ಮಾತು ಶುರುಮಾಡಿದರು ನಿಂಗೇಗೌಡರು.

`ಸುವರ್ಣ ಟೀವಿ'ಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಬರೋಬ್ಬರಿ 25 ಲಕ್ಷ ರೂ. ಗೆದ್ದಿರುವ ನಿಂಗೇಗೌಡರಿಗೆ ಭಾವನೆಗಳು ಮತ್ತು ರೋಮಾಂಚನ ತಹಬಂದಿಗೆ ಬಂದಿಲ್ಲವಂತೆ. ಪ್ರತಿ ಮಾತು ತುಂಡರಿಸಿ `ಅಯ್ಯೋ ಏನು ಮಾತಾಡ್ಬೇಕೋ ಗೊತ್ತಾಗ್ತಿಲ್ಲ' ಅಂತನ್ನುವ ಮೂಲಕ ತಮ್ಮ ಭಾವೋದ್ವೇಗವನ್ನು ವ್ಯಕ್ತಪಡಿಸುತ್ತಿದ್ದ ರೀತಿ ಅವರ ಪರಿಸ್ಥಿತಿಗೆ ಸಾಕ್ಷಿಯಂತಿತ್ತು.

ನಿಂಗೇಗೌಡರು ಹೀಗೆ ಭಾವುಕರಾಗಲು ಕಾರಣ ಒಂದೆರಡಲ್ಲ. ಹತ್ತಾರು.ಅವರು ಹುಟ್ಟಿ ಬೆಳೆದದ್ದು ಹಾಸನ ಜಿಲ್ಲೆ ಆಲೂರು ಬಳಿಯ ಕಾಡುಭಕ್ತರಹಳ್ಳಿ ಎಂಬ ಪಕ್ಕಾ ಹಳ್ಳಿಯಲ್ಲಿ; ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕಾಲ್ನಡಿಗೆಯಲ್ಲಿ ಹೋದವರು (ಆ ಹಳ್ಳಿಯ ಪರಿಸ್ಥಿತಿ ಹೇಗಿತ್ತೆಂದರೆ, ನಾಲ್ಕೂವರೆಯ ಬದಲು  ಮಧ್ಯಾಹ್ನ 3ಕ್ಕೇ ಶಾಲೆ ಬಾಗಿಲು ಮುಚ್ಚುತ್ತಿದ್ದರಂತೆ.

ಕಾರಣ ಸಂಜೆಯಾಗುತ್ತಲೇ ಎದುರಾಗುತ್ತಿದ್ದ ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ!); ಮನೆ ಸೇರುವಾಗಲೇ ಕತ್ತಲಾಗುತ್ತಿದ್ದುದರಿಂದ ಮನೆಯಲ್ಲಿ ಆಟಪಾಠಕ್ಕೆ ಅವಕಾಶವೇ ಸಿಗುತ್ತಿರಲಿಲ್ಲವಂತೆ; (ಅವರ ಹಳ್ಳಿಗೆ ವಿದ್ಯುತ್ ಸಂಪರ್ಕ ಬಂದಿರೋದು ಐದು ವರ್ಷದ ಹಿಂದೆ!) ಶನಿವಾರ ಮಧ್ಯಾಹ್ನದ ನಂತರ ಮತ್ತು ಭಾನುವಾರವಿಡೀ ಕರೆದಲ್ಲಿ ಕೂಲಿ ಕೆಲಸ; ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದರೂ ಇಂಗ್ಲಿಷ್‌ನಿಂದಾಗಿ ದಡ ದಾಟಲಾಗಲಿಲ್ಲ;

... ಹೀಗೆ ಎಲ್ಲ ಇಲ್ಲಗಳ ಪರಿಸರದಲ್ಲಿ ಬೆಳೆದ ನಿಂಗೇಗೌಡರನ್ನು ಕೋಟ್ಯಾಧಿಪತಿಯ ಅಂಗಳಕ್ಕೆ ಕರೆತಂದಿದ್ದು ಅವರಲ್ಲಿದ್ದ ಆತ್ಮವಿಶ್ವಾಸ ಮತ್ತು ಗೆಲ್ಲುವ ಛಲ.

25 ಲಕ್ಷದ ಮಾತು...
`ಎಲ್ಲ ಪ್ರಶ್ನೆಗಳಿಗೆ ಕರಾರುವಕ್ ಉತ್ತರ ನೀಡಲು ಹೇಗೆ ಸಾಧ್ಯವಾಯಿತು? ಎಂದೋ ಮಾಡಿದ ಪಿಯುಸಿ ಶಿಕ್ಷಣವೇ ಇಷ್ಟೆಲ್ಲ ಸಾಮಾನ್ಯ ಜ್ಞಾನವನ್ನು ಕಟ್ಟಿಕೊಟ್ಟಿತೇ?' ಎಂದು ಕೇಳಲೇಬೇಕಾಯಿತು. ಮತ್ತೆ ಜೋರಾಗಿ ನಕ್ಕ ನಿಂಗೇಗೌಡರು ವಾಸ್ತವವನ್ನು ಬಿಚ್ಚಿಟ್ಟರು.

`ಯಾವುದೇ ಪೂರ್ವತಯಾರಿ ಮಾಡಿಕೊಂಡಿಲ್ಲ ನಾನು. ಪಿಯುಸಿ ನಂತರ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದೆ. ಆಮೇಲೆ ಬೆಂಗಳೂರಿನ ಜೆ.ಪಿ. ನಗರದ ಬ್ರಿಗೇಡ್ ಮಿಲೇನಿಯಂ ಬಳಿಯಿರುವ ಬೇಕರಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಬೇಕರಿಯಲ್ಲಾಗಲಿ ಎಲ್ಲೇ ಆಗಲಿ ಅಂಗೈಯಗಲದ ಪತ್ರಿಕೆಯ ಚೂರು ಸಿಕ್ಕಿದರೂ ಅದನ್ನು ಒಂದಕ್ಷರ ಬಿಡದೆ ಓದುತ್ತೇನೆ. ಬೇಕರಿ ಅಥವಾ ಮನೆಯಲ್ಲಿ ವಿರಾಮ ಸಿಕ್ಕಿತೆಂದರೆ ನಿದ್ದೆ ಮಾಡೋದು, ಸುಮ್ಮನೆ ಕೂರೋದು ನನ್ನ ಜಾಯಮಾನವಲ್ಲ. ನ್ಯೂಸ್ ಚಾನೆಲ್ ನೋಡುತ್ತೇನೆ. ನನ್ನಲ್ಲಿ ಸಾಮಾನ್ಯ ಜ್ಞಾನ ಅನ್ನೋದೇನಾದರೂ ಇದ್ದರೆ ಅದನ್ನು ದಕ್ಕಿಸಿಕೊಂಡದ್ದು ಟಿ.ವಿ. ಮತ್ತು ಪತ್ರಿಕೆಗಳಿಂದ' ಎಂಬ ಸುದೀರ್ಘ ಉತ್ತರ ಅವರದು.

`ಪುನೀತ್ ರಾಜ್‌ಕುಮಾರ್ ಅವರಂತಹ ಒಬ್ಬ ದೊಡ್ಡ ವ್ಯಕ್ತಿ ಜೊತೆ ಜೀವನದಲ್ಲಿ ಎಂದಾದರೂ ಕೂರುತ್ತೇನೆ, ಹರಟೆ ಹೊಡೆಯುತ್ತೇನೆ ಎಂದು ಎಂದೂ ಕಲ್ಪಿಸಿಕೊಂಡಿರಲೂ ಇಲ್ಲ. ಆದರೆ ಅಂತಹ ಒಂದು ಕ್ಷಣ ನನ್ನ ಬದುಕಿನಲ್ಲಿ ಬಂದೇ ಬಿಟ್ಟಿತ್ತು.ಆ ಹಾಟ್ ಸೀಟ್‌ನಲ್ಲಿ  ಕುಳಿತರೂ ಏನಿದೆಲ್ಲ ಎಲ್ಲಿದ್ದೇನೆ ಎಂಬಂಥ ಅಯೋಮಯ ಸ್ಥಿತಿ. ಕ್ರಮೇಣ ಸರಿಹೋಯ್ತು. ಆದರೆ 50 ಲಕ್ಷ ರೂಪಾಯಿಯ ಪ್ರಶ್ನೆಗೆ ಉತ್ತರ ಗೊತ್ತಿದೆಯೇ? ಇಲ್ವೇ? ಕೊಟ್ಟರೆ ಮೂರು ಲಕ್ಷಕ್ಕೆ ಇಳಿದುಬಿಡುತ್ತೇನಲ್ಲ? ಎಂಬಿತ್ಯಾದಿ ಗೊಂದಲಗಳು ಕಾಡತೊಡಗಿದವು. ಅದಕ್ಕೆ ಜಾಣತನದಿಂದ `ಕ್ವಿಟ್' ಮಾಡಿಬಿಟ್ಟೆ. ಈಗ 25 ಲಕ್ಷ ರೂಪಾಯಿ ಗೆದ್ದಿದ್ದೇನೆ'.

ಮೇಡಂ, ಈಗಲೂ ಮಾತನಾಡಲು ಆಗುತ್ತಿಲ್ಲ. ನಾನು 25 ಲಕ್ಷ ಗೆದ್ದಿದ್ದು ನಿಜವಾ? ಅದು ಪೂರ್ತಿ ನನ್ನದೇನಾ? ಒಂದೊಂದು ರೂಪಾಯಿಗೂ ಪರದಾಡುತ್ತಿದ್ದ ನಾನೇನಾ ಈ ಮೊತ್ತ ಗೆದ್ದ್ದ್ದಿದು? ಅಂತ ಸಂಶಯ ಕಾಡುತ್ತಲೇ ಇದೆ. ಏಪ್ರಿಲ್ 4ರಂದು ನನ್ನ ಸಂಚಿಕೆ ಪ್ರಸಾರವಾಯಿತು. ಸೋಮವಾರ (ಏ.8) ಮತ್ತೆ ಪ್ರಸಾರವಾಗುತ್ತದೆ. ಸಂಚಿಕೆಯನ್ನು ನೋಡಿದರೂ ನನಗೆ ನಂಬಲಾಗಲಿಲ್ಲ' ಎಂದು ಮತ್ತೆ ಗೊಂದಲವನ್ನು ತೋಡಿಕೊಂಡರು ನಿಂಗೇಗೌಡರು.

ಮನೆಯೋ? ಬೇಕರಿಯೋ?
`ಎಲ್ಲ ಸರಿ ಗೌಡರೇ ಏನು ಮಾಡುತ್ತೀರಿ ಅಷ್ಟೊಂದು ದುಡ್ಡನ್ನು' ಅಂತ ಕೇಳಿದ್ರೆ ಥಟ್ಟನೆ ಬರುವ ಉತ್ತರ `ಬೇಕರಿ' ಅಥವಾ `ನನ್ನ ಹೆಂಡತಿಗೊಂದು ಮನೆ' ಎಂದು.

ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಪೂರ್ಣಪ್ರಮಾಣದ ಬೇಕರಿ ತೆರೆದರೆ ಮಾತ್ರ ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಎದುರಿಸಬಹುದು ಎಂಬ ದೂರದೃಷ್ಟಿಯ ಉತ್ತರ ಕೊಡುತ್ತಾರೆ.

`ನಮಗೊಂದು/ನನಗೊಂದು ಮನೆ ಅಂತ ಹೇಳುವ ಬದಲು `ನನ್ನ ಹೆಂಡತಿಗೊಂದು ಮನೆ' ಅಂತೀರಲ್ಲ?' ಅಂತ ಚುಡಾಯಿಸಿದರೆ ಅವರ ವಿವಾಹ ವೃತ್ತಾಂತವನ್ನು ನೆನಪಿಸಿಕೊಳ್ಳುತ್ತಾರೆ.

ಮನೆಯವರಿಗೆ ಒಂದು ಮಾತೂ `ತಿಳಿಸದೆ ನಾನು ಪ್ರೀತಿಸಿದಾಕೆಯನ್ನು ವಿವಾಹವಾದವನು ನಾನು. ಆಗ ನಾನು ಬಹಳ ಕಷ್ಟದಲ್ಲಿದ್ದೆ. ಮದುವೆಯಾಗಿ ಬಹಳ ದಿನಗಳ ನಂತರ ಮನೆಗೆ ತಿಳಿಸಿದೆ. ಎಲ್ಲರ ಕೋಪಕ್ಕೆ ತುತ್ತಾದೆ. ಮನೆಯಿಂದ ಹೊರಬಂದೆ. ಖಾಲಿ ಕೈಯಲ್ಲಿ ಸಂಸಾರ ಕಟ್ಟುವ, ಬೆಳೆಸುವ ಸವಾಲು. ಅವಳೂ ಕೆಲಸಕ್ಕೆ ಸೇರಿಕೊಂಡಳು. ಈಗ ಅವಳು ಯೋಗ ಶಿಕ್ಷಕಿ. ನನ್ನ ಎಲ್ಲಾ ಕಷ್ಟದ ದಿನಗಳನ್ನು ಸಲೀಸಾಗಿ ಎದುರಿಸಿ ನಿಜಅರ್ಥದಲ್ಲಿ ಅರ್ಧಾಂಗಿಯಾದ ಹೆಂಡತಿಗೇ ನನ್ನ ಮನೆಯನ್ನು ಸಮರ್ಪಣೆ ಮಾಡುತ್ತೇನೆ' ಎಂದು ವಿವರಿಸುತ್ತಾರೆ.

ನಿಂಗೇಗೌಡರು, ಇಡೀ ಕುಟುಂಬವೇ ಕಂಡಿರದಷ್ಟು ದೊಡ್ಡ ಮೊತ್ತವನ್ನು ಗೆದ್ದಿದ್ದರೂ ಅದನ್ನು ಸಂಭ್ರಮಿಸಲು ಅಪ್ಪ, ಅಣ್ಣ ಮತ್ತು ತಮ್ಮ ಇಲ್ಲ ಎಂಬ ನೋವು ಅವರಿಗಿದೆ. ಆದರೆ ತಾಯಿಯಾದರೂ ಜೀವಂತವಿದ್ದಾರೆ ಎಂಬ ಸಮಾಧಾನವೂ ಅವರಿಗಿದೆ. ಮಗ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದರೆ ಇಂಜಿನಿಯರಿಂಗ್ ಶಿಕ್ಷಣ ಕೊಡಿಸುವಾಸೆಯೂ ಅವರದು.

ಹೀಗೆ, ಜ್ಞಾನಾರ್ಜನೆಯ ಹಸಿವು ಮತ್ತು ಅದಕ್ಕೆ ಪೂರಕವಾದ ಅನ್ವೇಷಕ ಬುದ್ಧಿಯೇ ನಿಂಗೇಗೌಡ ಅವರಂತಹ ಒಬ್ಬ ಬೇಕರಿ ನೌಕರನನ್ನು 25 ಲಕ್ಷ ಗೆಲ್ಲುವ ಸಾಹಸಕ್ಕೆ ಅನುವ ಮಾಡಿದೆ. ಇದು, ಎಲ್ಲಾ ಶ್ರಮಿಕ ವರ್ಗಕ್ಕೇ ಮಾದರಿ. ಏನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT