ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ

ಯೋಜನೆ ಜಾರಿಗೆ ಉಡುಪಿಯಲ್ಲಿ ಸಜ್ಜು
Last Updated 10 ಜುಲೈ 2013, 13:47 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಂತೆ ಕೆಜಿಗೊಂದು ರೂಪಾಯಿಯಂತೆ 30ಕೆಜಿ ಅಕ್ಕಿ ಯೋಜನೆಯು ಜುಲೈ 10ರಂದು ಜಾರಿಗೆ ಬರಲಿದ್ದು, ಅದರಂತೆ  ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಕ್ಕಿ ವಿತರಿಸಲಾಗುವುದು.

ಒಬ್ಬ ಸದಸ್ಯನಿಗೆ 10 ಕೆ.ಜಿ.ಅಕ್ಕಿ , ಇಬ್ಬರು ಸದಸ್ಯರಿಗೆ 20 ಕೆ.ಜಿ., ಮೂರು ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 30 ಕೆ.ಜಿ.ಅಕ್ಕಿ ಪ್ರತಿ ತಿಂಗಳು ವಿತರಿಸಲಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ ಒಂದು ಸದಸ್ಯರಿರುವ 879 , ಇಬ್ಬರು ಸದಸ್ಯರಿರುವ 4,383 ಹಾಗೂ ಮೂರು ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರಿರುವ 89,583 ಸೇರಿದಂತೆ ಒಟ್ಟು 94,845 ಬಿಪಿಎಲ್ ಪಡಿತರ ಚೀಟಿಗಳಿದೆ.

ನಿಗದಿತ ಪ್ರಮಾಣದಂತೆ 27,840 ಕ್ವಿಂಟಾಲ್ ಅಕ್ಕಿ  ಈ ತಿಂಗಳಿನಿಂದ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 18,466 ಅಂತ್ಯೋದಯ ಕಾರ್ಡುಗಳಿದ್ದು ಪ್ರತಿ ಕಾರ್ಡಿಗೆ 29 ಕೆ.ಜಿ.ಅಕ್ಕಿಯನ್ನೂ ಒಂದು ರೂಪಾಯಿ ದರದಲ್ಲಿ ವಿತರಿಸಲಾಗುವುದು. ಅಂತ್ಯೋದಯ ಕಾರ್ಡಿಗೆ ಎರಡು ರೂಪಾಯಿ ದರಲ್ಲಿ 6 ಕೆ.ಜಿ. ಗೋಧಿ ಕೂಡ ಕೊಡಲಾಗುವುದು. ಜಿಲ್ಲೆಗೆ ಪ್ರತಿ ತಿಂಗಳು ರೂ.2,32,00,000ರೂಪಾಯಿ (ಎರಡು ಕೋಟಿ ಮೂವತ್ತೆರಡು ಲಕ್ಷ) ಅನುದಾನವನ್ನು ಸರ್ಕಾರ ಭರಿಸಲಿದೆ.

ಜಿಲ್ಲೆಯಲ್ಲಿ ಒಟ್ಟು 1,34,386 ಅನಿಲ ರಹಿತ ಪಡಿತರ ಚೀಟಿಗಳಿದ್ದು ಜುಲೈ ತಿಂಗಳಿನಿಂದ ಗ್ರಾಮಾಂತರ ಪ್ರದೇಶ , ಪಟ್ಟಣ ಹಾಗೂ ನಗರ ಪ್ರದೇಶದ ಕಾರ್ಡುಗಳೆಂಬ  ಭೇದವಿಲ್ಲದೆ ಪ್ರತಿ ಕಾರ್ಡಿಗೆ 5 ಲೀಟರ್ ಸೀಮೆಎಣ್ಣೆ ನೀಡಲಾಗುತ್ತದೆ. ಈ ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ 4 ಲೀಟರ್ ಮಾತ್ರ ವಿತರಿಸಲಾಗುತ್ತಿತ್ತು. ಸಕ್ಕರೆಯನ್ನು ಲಭ್ಯತೆ ಆಧಾರದಲ್ಲಿ ಬಿಪಿಎಲ್.ಮತ್ತು ಅಂತ್ಯೋದಯ ಕಾರ್ಡುಗಳಿಗೆ ಒಂದು ಕೆ.ಜಿ.ಯಂತೆ ವಿತರಿಸಲಾಗುವುದು. ಹೆಚ್ಚುವರಿ ಬಿಡುಗಡೆ ಆಗಲಿರುವ ಅಕ್ಕಿ ದಾಸ್ತಾನು ಮಾಡಲು ಅಗತ್ಯವಿರುವ ಗೋದಾಮು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಈ ಯೋಜನೆಯ ಮೇಲ್ವಿಚಾರಣೆಗೆ ಪ್ರತಿ ನ್ಯಾಯಬೆಲೆ ಅಂಗಡಿ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ನಗರಸಭೆ, ಪುರಸಭೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾಗೃತಾ ಸಮಿತಿ ರಚಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಆಹಾರ ಧಾನ್ಯಗಳ ಅಳತೆಯಲ್ಲಿ ಮೋಸ ಮಾಡುವುದು, ನಿಗದಿತ ಬೆಲೆಗಿಂತ ಹೆಚ್ಚುವರಿ ಮೊತ್ತ ವಸೂಲಿ ಮಾಡುವುದನ್ನು ತಡೆಗಟ್ಟಲು ಇ-ಪಡಿತರ ಯಂತ್ರ ಅಳವಡಿಸುವ ಯೋಜನೆಯನ್ನು ಸರ್ಕಾರ ಹೊಂದಿದ್ದು, ಚಿಕ್ಕಮಗಳೂರು, ತುಮಕೂರು, ಮೈಸೂರು ಜಿಲ್ಲೆ, ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ವಲಯಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿದೆ. ಪಡಿತರ ಚೀಟಿದಾರರ ಬಯೋ/ಫೋಟೋ ಸಂಗ್ರಹಿಸುವ ಕಾರ್ಯ ಮುಕ್ತಾಯವಾದ ನಂತರ ರಾಜ್ಯಾದ್ಯಂತ  ಇ-ಪಡಿತರ ಯಂತ್ರ ಅಳವಡಿಸಲಾಗುವುದು.

ಸಾರ್ವಜನಿಕರು ಸಲ್ಲಿಸುವ ದೂರು ಸ್ವೀಕರಿಸಲು ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ನಿಯಂತ್ರಣ ಕೊಠಡಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.  ಈ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1800-425-9339 ಆಗಿದೆ. ಇದು ನಿಯಂತ್ರಣ ಕೊಠಡಿಗೆ ಬರುವಂತಹ ದೂರುಗಳಿಗೆ ಸಹಾಯವಾಣಿಯಾಗಿ ಹಾಗೂ ಗ್ರಾಹಕ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸಹಾಯ ಸಂಖ್ಯೆ ಎಲ್ಲಾ  ಪಡಿತರ ಚೀಟಿಗಳಲ್ಲೂ ಮುದ್ರಿತವಾಗಿರುತ್ತದೆ.

ಆನ್ ಲೈನ್ ಮೂಲಕ ಅರ್ಜಿ ಪಡೆದು ಪಡಿತರ ಚೀಟಿ ವಿತರಿಸುವ  ಯೋಜನೆ 2011ರಿಂದ ಆರಂಭವಾಗಿದ್ದು ಮೊದಲನೇ ಹಂತದಲ್ಲಿ  5,112  ಬಿಪಿಎಲ್ ಕಾರ್ಡು ಹಾಗೂ  9,566  ಎಪಿಎಲ್ ಕಾರ್ಡು ವಿತರಿಸಲಾಗಿದೆ. ಪ್ರಸ್ತುತ ಎರಡನೇ ಹಂತದಲ್ಲಿ  ಹೊಸ ಪಡಿತರ ಚೀಟಿಗೆ ಅರ್ಜಿ ಪಡೆಯುವ ಪ್ರಕ್ರಿಯೆ ಜ್ಯಾರಿಯಲ್ಲಿದ್ದು ಈವರೆಗೆ  ಬಿಪಿಎಲ್ 2,479, ಎಪಿಎಲ್ 3,191 ಸೇರಿ ಒಟ್ಟು 5,650 ಅರ್ಜಿಗಳು ಸ್ವೀಕೃತವಾಗಿದೆ. ಆ ಪೈಕಿ ಈ ವರೆಗೆ 381ಕಾರ್ಡುಗಳನ್ನು  ವಿತರಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿದ್ದು  ಎಲ್ಲಾ ಕುಟುಂಬಗಳಿಗೆ ಕಾರ್ಡು ನೀಡುವ ಉದ್ದೇಶ ಹೊಂದಲಾಗಿದೆ. ಕೆಲವು ಅರ್ಹ ಬಡಕುಟುಂಬಗಳಿಗೆ ಎಪಿಎಲ್ ಕಾರ್ಡು ವಿತರಣೆ ಆಗಿರುವ ಬಗ್ಗೆ ದೂರುಗಳಿದ್ದು ಎಪಿಎಲ್‌ನಿಂದ ಬಿಪಿಎಲ್‌ಗೆ ಪರಿವರ್ತಿಸುವ ಅಗತ್ಯತೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT