ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಅರ್ಥದ ಕಮ್ಯುನಿಸ್ಟ್ ನಾಯಕ:ಬಡವರ ಊಟವೇ ಅವರ ಊಟ...

Last Updated 4 ಜೂನ್ 2012, 19:30 IST
ಅಕ್ಷರ ಗಾತ್ರ

ಬಿ.ವಿ.ಕಕ್ಕಿಲ್ಲಾಯ ಅವರ ಬಡವರ ಪ್ರೀತಿ ಅದೆಷ್ಟು ಗಹನವಾದುದು ಎಂದರೆ ಅವರ ಊಟ, ಉಪಚಾರವನ್ನೂ ತಮ್ಮದನ್ನಾಗಿ ಮಾಡಿಕೊಂಡಿದ್ದರು. ತಾವು ಹುಟ್ಟಿದ್ದು ಬ್ರಾಹ್ಮಣ ಕುಲದಲ್ಲಾದರೂ ಒಡನಾಟದ ಜನರ ಊಟ, ಉಪಚಾರವನ್ನೇ ತಾವೂ ಮೈಗೂಡಿಸಿಕೊಂಡಿದ್ದರು. ಹೀಗಾಗಿ ಬಡವರ ಮನೆಯ ಮಾಂಸದ ಊಟವನ್ನೂ ಅವರು ತಿರಸ್ಕರಿಸುತ್ತಿರಲಿಲ್ಲ. ಎಲ್ಲರೊಂದಿಗೂ ಎಲ್ಲಾ ರೀತಿಯಲ್ಲೂ ಒಂದಾಗಿದ್ದ ನಾಯಕ ಅವರು.

ನನಗೆ ಈಗ 79 ವರ್ಷ. 1953ರಲ್ಲಿ ನಾನು ಸಿಪಿಐ ಸಕ್ರಿಯ ಕಾರ್ಯಕರ್ತನಾದೆ. ಆಗಲೇ ಕಕ್ಕಿಲ್ಲಾಯ ಅವರದು ಪಕ್ಷದಲ್ಲಿ ಬಹಳ ದೊಡ್ಡ ಹೆಸರು. ಸ್ವಾತಂತ್ರ್ಯ ಲಭಿಸಿದ ಮರು ವರ್ಷ ಅಂದರೆ 1948ರಲ್ಲಿ ಸಿಪಿಐಯನ್ನು ನಿಷೇಧಿಸಿದಾಗ ಭೂಗತರಾಗಿ ಪಕ್ಷವನ್ನು ಬೆಳೆಸಿದ ನಾಯಕರಲ್ಲಿ ಕಕಿಲ್ಲಾಯ ಅವರೂ ಒಬ್ಬರು. ಹೀಗಾಗಿ ಕಾಸರಗೋಡು ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಕಕ್ಕಿಲ್ಲಾಯ ಅವರ ಪಾತ್ರ ಬಹಳ ದೊಡ್ಡದು.

ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಅವರು ಸಂಘಟನೆ, ಸ್ವಾತಂತ್ರ್ಯ ಹೋರಾಟದತ್ತ ಧುಮುಕಿದವರು. ನಾನು ಗಣಪತಿ ಹೈಸ್ಕೂಲ್‌ನಲ್ಲಿ ಓದಿದವ. ಅವರು ಧನಿಕರು, ಆಸ್ತಿವಂತರು. ಅವರಿಗೆ ಅದರ ಅಮಲು ಹತ್ತಿರಲಿಲ್ಲ. ಬಡವರಿಗಾಗಿ ಹೋರಾಡುವ ಅವರ ಮನೋಭಾವ ಅವರ ಮನೆಯ ಶ್ರೀಮಂತಿಕೆಯನ್ನು ಮರೆಸಿಬಿಟ್ಟಿತ್ತು.

ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹರೆಯದಲ್ಲೇ ಅವರ ರಕ್ತದಲ್ಲಿ ಹರಿಯುತ್ತಿತ್ತು. `ಕ್ವಿಟ್ ಇಂಡಿಯಾ~ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿ ಜೈಲು ಸೇರಿದ್ದರು. ಬಳಿಕ ಸಿಪಿಐ ಸೇರಿ ಮತ್ತೆ ಹಲವು ಬಾರಿ ಜೈಲು ಸೇರಿದರು. ಆದರೆ ದೇಶ, ಪಕ್ಷದ ನಿಷ್ಠೆ ಅವರಿಂದ ಸ್ವಲ್ಪವೂ ದೂರವಾಗಲಿಲ್ಲ.

ಆಗ ನಾವೆಲ್ಲ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿದ್ದವರು. ನೇಯ್ಗೆ ಆಗ ಈ ಭಾಗದ ದೊಡ್ಡ ಉದ್ಯಮವಾಗಿತ್ತು. ಜತೆಗೆ ಹೆಂಚು, ಗೋಡಂಬಿ, ಬೀಡಿ ಕಾರ್ಮಿಕರೂ ದೊಡ್ಡ ಸಂಖ್ಯೆಯಲ್ಲಿದ್ದರು. ಅವರ ಪರವಾಗಿ ನಮ್ಮ ನೇತೃತ್ವದಲ್ಲಿ ನಡೆದ ಹೋರಾಟಗಳಿಗೆ ಲೆಕ್ಕವಿಲ್ಲ.

ಆಗ ಮಂಗಳೂರಿನ ಉರ್ವದಲ್ಲಿ ನಮ್ಮ ಪಕ್ಷದ ಕಚೇರಿ ಇತ್ತು. ಕಚೇರಿ ಸಮೀಪದ ಮನೆಯ ಹೆಣ್ಣುಮಗಳು ಅಹಲ್ಯಾ ಮೇಲೆ ಅವರಿಗೆ ಮನಸ್ಸಾಯಿತು. ಅದು ಪ್ರೇಮವಿವಾಹವಾಗಿ ಬದಲಾಯಿತು. ಅವರಿಗೆ ನಾಲ್ವರು ಪುತ್ರರೂ ಜನಿಸಿದರು. ಅವರ ಕೌಟುಂಬಿಕ ಜೀವನವೂ ಹಾಲು-ಜೇನು ಸಂಗಮದಂತಿತ್ತು.

1964ರಲ್ಲಿ ಸಿಪಿಐ ವಿಭಜನೆಯಾದಾಗ ನಾವೆಲ್ಲ ಸಿಪಿಎಂ ಸೇರಿದೆವು. ಆದರೆ ಬಿ.ವಿ.ಕಕ್ಕಿಲ್ಲಾಯ, ಶಾಂತಾರಾಮ ಪೈ, ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ ಅವರೆಲ್ಲ ಮೂಲ ಪಕ್ಷದಲ್ಲೇ ಉಳಿದುಬಿಟ್ಟರು.ಅಂದು ರಾಷ್ಟ್ರಮಟ್ಟದಲ್ಲೇ ಸಿಪಿಐ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ 1972ರಲ್ಲಿ ಕಕ್ಕಿಲ್ಲಾಯ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಬಂಟ್ವಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು.

1978ರಲ್ಲೂ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಅವರು ಕಾಂಗ್ರೆಸ್ ಬೆಂಬಲದಿಂದ ಗೆದ್ದರೂ ತಮ್ಮ ಪಕ್ಷದ ತತ್ವ, ಸಿದ್ಧಾಂತವನ್ನು ಎಂದಿಗೂ ಕೈಬಿಡಲಿಲ್ಲ. ಶಾಸಕರಾಗಿದ್ದಾಗ ಬಡವರು, ಕಾರ್ಮಿಕರಿಗಾಗಿ ಅಪಾರ ಕೆಲಸ ಮಾಡಿದರು.

ಕಕ್ಕಿಲ್ಲಾಯರದು ತುಂಬ ದಿಟ್ಟ ವ್ಯಕ್ತಿತ್ವ. ಅತ್ಯುತ್ತಮ ಭಾಷಣಕಾರ. ಉತ್ತಮ ಲೇಖಕರೂ ಆಗಿದ್ದರು. ಎಲ್ಲಾ ವರ್ಗದ ಜನರೊಂದಿಗೆ ವ್ಯವಹರಿಸುವ, ಅವರ ವಿಶ್ವಾಸ ಗೆಲ್ಲುವ ಚಾಕಚಕ್ಯತೆ ಅವರಲ್ಲಿತ್ತು. ಸಿಪಿಐ ವಿಭಜನೆಯಿಂದ ಅವರು ಬಹಳ ನೊಂದಿದ್ದರು. ಎಡಪಕ್ಷಗಳು ಮತ್ತೆ ಒಂದಾಗಬೇಕು, ಅವುಗಳು ಒಂದಾದರೆ ದೇಶದಲ್ಲಿ ಪರ್ಯಾಯ ಪಕ್ಷವೊಂದು ರೂಪುಗೊಳ್ಳಲು ಸಾಧ್ಯ ಎಂಬುದು ಅವರ ಚಿಂತನೆಯಾಗಿತ್ತು.

ಅವರ ಕೊನೆಯ ಬಯಕೆ ಈಡೇರದೆ ಹೋದರೂ ಅವರು ತೋರಿಸಿಕೊಟ್ಟ ಹಾದಿ ಮಾರ್ಗ ಮಾತ್ರ ಅತ್ಯಂತ ಸ್ಪಷ್ಟ. ಅವರೊಬ್ಬ ನಿಜವಾದ ಅರ್ಥದಲ್ಲಿ ಕಮ್ಯುನಿಸ್ಟ್ ನಾಯಕ.

(ಲೇಖಕರು ಸಿಪಿಎಂನ ಹಿರಿಯ ನಾಯಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT