ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಕ್ಕಳೊಂದಿಗೆ ಆಟವಾಡುತ್ತೀರಾ?

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಪ್ರೀತಿ ಹಾಗೂ ಆಹಾರದಷ್ಟೇ ಅತ್ಯಾವಶ್ಯಕವಾದುದು ಆಟ. ಮನರಂಜನೆ ಜೊತೆ ಸೃಜನಶೀಲತೆ, ಕಲ್ಪನಾಶಕ್ತಿ, ಅನುಕರಣೆ, ಕೌಶಲದ ಕಲಿಕೆ, ದೈಹಿಕ ಬೆಳವಣಿಗೆ, ಮನೋಭಾವ... ಹೀಗೆ ಎಲ್ಲಾ ಅಂಶಗಳ ಮೇಲೂ ಅದು ಪ್ರಭಾವ ಬೀರುತ್ತದೆ.

ಮಕ್ಕಳಿಗೆ ಆಟಿಕೆ ಕೊಡಿಸಿದರೆ ಸಾಲದು. ಹೆತ್ತವರು ಸ್ವತಃ ಕೂತು ಮಕ್ಕಳ ಆಟದಲ್ಲಿ ಪಾಲ್ಗೊಳ್ಳಬೇಕು.  ಮಕ್ಕಳು ಆಟಕ್ಕೆ ಕರೆದಾಗ ` ನಾನು ಪೇಪರ್ ಓದಬೇಕು, ಅಡುಗೆ ಕೆಲಸವಿದೆ, ಸಮಯವಿಲ್ಲ~ ಎಂದು ಹೇಳಿ ನಿರಾಕರಿಸಬೇಡಿ. ಕನಿಷ್ಠ 10 ನಿಮಿಷವಾದರೂ ಅವರೊಂದಿಗೆ  ಆಟವಾಡಲು ಸಮಯ ಹೊಂದಿಸಿಕೊಳ್ಳಿ.

ಮಕ್ಕಳ ವಯಸ್ಸಿನ ಮಟ್ಟದಲ್ಲಿಯೇ ಆಟವಾಡಿರಿ. ತುಂಬ ಕಷ್ಟಕರ, ವಯಸ್ಸಿಗೆ ಅನುಗುಣವಾಗದ ಆಟ ಕಲಿಸಬೇಡಿ.

ಉದಾ:ಒಂದು ವರ್ಷದ ಮಗುವಿಗೆ ಶಬ್ದ ಮಾಡುತ್ತಾ ಓಡಾಡುವ ರೈಲು ಗಾಡಿ ಬೇಡ. ಈ ಆಟ ಹೆದರಿಕೆಗೆ ಕಾರಣವಾಗಿ ಆಟದ ಬಗ್ಗೆ ನಿರಾಸಕ್ತಿ ಸಾಧ್ಯ. ಇದರ ಬದಲಾಗಿ ಒಂದರ ಮೇಲೆ ಒಂದರಂತೆ ಜೋಡಿಸುವ ಕಟ್ಟಿಗೆ ಅಥವಾ ಪ್ಲಾಸ್ಟಿಕ್‌ನ ಚೌಕಾಕಾರದ ತುಂಡುಗಳ (ಬ್ಲಾಕ್ಸ್) ಆಟ ಸೂಕ್ತ.

ಆಟದಲ್ಲಿ ಮಾತನಾಡುತ್ತ ನಗುತ್ತ ಇರಿ. ಆಗಾಗ ಸೋಲು ನಿಮ್ಮದಾಗಲಿ. ಆಟದ ಮತ್ತು ಆಟಿಕೆಯ ಹೆಸರನ್ನು ಮಗುವಿಗೆ ಹೇಳಿರಿ. ಸಾಧ್ಯವಾದಷ್ಟು ಮಕ್ಕಳು ಹೇಳಿದಂತೆ ಆಟವಾಡಿರಿ. ತಪ್ಪಿದಾಗ ಸರಿಪಡಿಸಿರಿ. ಮಕ್ಕಳು ಇಚ್ಛಿಸಿದ ಆಟಿಕೆ, ಆಟವನ್ನು ಮಾನ್ಯ ಮಾಡಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚಿ, ಆಟದಿಂದ ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ.

ಅಳು ಮತ್ತು ಹಟ ಮಾಡಿದರೆ ಸಹನೆ ಇರಲಿ. ಗಂಡು ಮಗು ಹೆಣ್ಣು ಮಗುವಿನ ಆಟವಾಡಿದರೆ ತಡೆಯಬೇಡಿ. ಹೆಣ್ಣು-ಗಂಡು ಮಗು ಜೊತೆಯಾಗಿ ಆಟವಾಡಿದರೆ, ಇದನ್ನು ಪ್ರೋತ್ಸಾಹಿಸಿರಿ. ಇದರಿಂದ ಗಂಡು ಹೆಣ್ಣಿನ ನಡುವೆ ಸಮಾನತೆ, ಮುಕ್ತ ವಾತಾವರಣ ಹೆಚ್ಚುತ್ತದೆ. ಹೊಸ ಆಟಿಕೆ ಬಳಸುವಾಗ ಮತ್ತು ಪರಿಚಯವಿಲ್ಲದವರ ಜೊತೆಗಿನ ಆಟದಿಂದ ಮಕ್ಕಳು ಬೇಗ ಆಯಾಸಗೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಮಗು ಆಟಕ್ಕೆ ಇಷ್ಟಪಡದಿದ್ದರೆ ಒತ್ತಾಯ ಬೇಡ.

ವಯಸ್ಸಿಗೆ ತಕ್ಕಆಟ/ಆಟಿಕೆ?
ಮಗುವಿನ ಗ್ರಹಣಶಕ್ತಿ, ಆರ್ಥೈಸುವಿಕೆ ವಯಸ್ಸಿಗೆ ಅನುಗುಣವಾಗಿ ಬೇರೆ-ಬೇರೆ ಆಗಿರುವುದರಿಂದ, ವಯಸ್ಸಿಗೆ ತಕ್ಕಂತೆ ಆಟಿಕೆಗಳು ಹೀಗಿರಲಿ.

6ತಿಂಗಳೊಳಗಿನ ಮಕ್ಕಳಿಗೆ: ಆಕರ್ಷಕ, ಬಣ್ಣದ (ಕೆಂಪು, ಹಸಿರು, ಹಳದಿ) ನೇತಾಡುವ ಮತ್ತು ಅತ್ತಿಂದಿತ್ತ ಅಲುಗಾಡುವ, ಮೃದು ಶಬ್ದ ಮಾಡುವ ಆಟಿಕೆ ಇರಲಿ. ಉದಾ: ತೊಟ್ಟಿಲಿನ ಮೇಲ್ಭಾಗದಲ್ಲಿ ನೇತಾಡುವ ಬಣ್ಣದ ಗೊಂಬೆ,

6ರಿಂದ 12 ತಿಂಗಳು: ಈ ವಯಸ್ಸಿನ ಮಕ್ಕಳು ಆಟಿಕೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಲು, ಎಸೆದಾಡಲು, ಕೈಯಿಂದ ಹಿಚುಕಲು, ಮೇಲಿಂದ ಎಸೆಯಲು ಇಷ್ಟಪಡುತ್ತಾರೆ. ಈ ಕಾರಣದಿಂದ ಆಟಿಕೆಗಳು ಹರಿತ ಮತ್ತು ಚೂಪಾಗಿರಬಾರದು. ಬಣ್ಣ ಕಿತ್ತು ಹೋಗಬಾರದು. ಉದಾ: ಗಿಲಿಗಿಂಜಿ. ರಟ ರಟ ಶಬ್ದ ಮಾಡುವ ವಸ್ತುಗಳು (ರ‌್ಯಾಟಲ್ಸ್) ಪ್ಲಾಸ್ಟಿಕ್ ಗೊಂಬೆ, ಅಥವಾ ರಿಂಗುಗಳು, ಚಿಕ್ಕ ಚೆಂಡುಗಳು, ಮಣಿ ಇರುವ ತಂತಿಗಳ ಸರ, ಹತ್ತಿ ಅಥವಾ ರಬ್ಬರ್ ತುಂಬಿದ ಗೊಂಬೆಗಳು.

1 ರಿಂದ 1/2 ವರ್ಷದ ಆಸುಪಾಸು:
ಒಂದರಲ್ಲಿ ಇನ್ನೊಂದು ಆಟಿಕೆಯನ್ನು ಸೇರಿಸುವುದು, ಎಳೆಯುವುದು, ದೂಡುವ ಆಟಿಕೆಗಳು ಈ ಮಕ್ಕಳಿಗೆ ಇಷ್ಟ. ಉದಾ:ಕಾರು, ಟ್ರೇನ್, ಎಳೆದುಕೊಂಡು ಹೋಗಬಹುದಾದ ಅಟಿಕೆ, ಪ್ಲಾಸ್ಟಿಕ್   ಡಬ್ಬಿಗಳು.

2ರಿಂದ 3ವರ್ಷಗಳಿಗೆ: ಈ ಮಕ್ಕಳಿಗೆ ನಕಲು ಮಾಡಲು ಇಷ್ಟ. ಅಣ್ಣ, ಅಕ್ಕ ಬರೆಯುವುದನ್ನು ಗೋಡೆ, ಕಾಗದದ ಮೇಲೆ ನಕಲು ಮಾಡುತ್ತಾರೆ. ಬರೆಯಲು ಸುರಕ್ಷಿತ ಪೆನ್ನು, ಪುಸ್ತಕ, ವಿವಿಧ ಬಣ್ಣದ ಪೆನ್ಸಿಲ್(ಕ್ರೇಯಾನ್ಸ್) ಮತ್ತು ಕಾಗದ ನೀಡಿರಿ.

4ರಿಂದ 8ವರ್ಷ: ಸೃಜನಶೀಲತೆ, ಊಹಾಶಕ್ತಿ ಈ ಮಕ್ಕಳಲ್ಲಿ ಹೆಚ್ಚು. ಮೂರು ಗಾಲಿಯ ಸೈಕಲ್, ವಿವಿಧ ಗಾತ್ರ/ಆಕಾರದ ಪ್ಲಾಸ್ಟಿಕ್/ಕಟ್ಟಿಗೆಗಳು (ಬಿಲ್ಡಿಂಗ್ ಬ್ಲಾಕ್ಸ್) ವಿವಿಧ ಆಕೃತಿ ರಚಿಸಲು ಕೃತಕ ಜೇಡಿ ಮಣ್ಣು, ವಿದ್ಯುತ್ ರಹಿತದ ಅಟಿಕೆ ವಸ್ತುಗಳು, ಅಡುಗೆ ಮನೆ ಆಟಿಕೆಗಳು ಸೂಕ್ತ.

9ರಿಂದ 12ವರ್ಷ: ಕಂಪ್ಯೂಟರ್, ವೈಜ್ಞಾನಿಕ ಪ್ರಯೋಗದ ಸಾಮಾನು (ಸೈನ್ಸ್ ಕಿಟ್ಸ್), ತಂಡದ ಆಟಗಳು (ಹಾಕಿ, ಕ್ರಿಕೆಟ್, ಟೆನಿಸ್) ಮೈಕ್ರೋಸ್ಕೋಪ್, ದೂರದರ್ಶಕ ಆಧಾರಿತ ಕ್ರಿಯೆಗಳು. ಶಿಲೆ, ನಾಣ್ಯ, ಅಪರೂಪದ ವಸ್ತುಗಳ ಸಂಗ್ರಹಣ ಹವ್ಯಾಸಗಳನ್ನು ಪ್ರೋತ್ಸಾಹಿಸಿರಿ. ಪ್ರಯೋಗ, ಆಟದ ವಿಧಾನದ ಬಗ್ಗೆ ಹೆತ್ತವರು ಮಾರ್ಗದರ್ಶನ ನೀಡಬೇಕು.ಆಟದ ಮಧ್ಯೆ ಪ್ರಶ್ನೆ ಕೇಳಿರಿ. ಇದರಿಂದ ಕುತೂಹಲ ಕೆರಳಿಸಿ ಸೃಜನಾತ್ಮಕತೆ ಹೆಚ್ಚುತ್ತದೆ.

ಆಟಿಕೆಗಳು ಹೀಗಿರಲಿ
ಸರಳ, ಸುರಕ್ಷಿತ, ಹಗುರ, ತುದಿಗಳು ದುಂಡಾಗಿರಲಿ. ಸುಲಭವಾಗಿ ಸ್ವಚ್ಚಗೊಳಿಸಲು, ಹೆಚ್ಚು ಬಾಳಿಕೆಯುಳ್ಳವಾಗಿರಲಿ. ಬಾಯಿಯಲ್ಲಿ ಹಾಕಿಕೊಂಡಾಗ ನುಂಗುವಷ್ಟು ಸಣ್ಣ ಬೇಡ.

ಸುಲಭವಾಗಿ ಮುರಿಯುವಂತಿರಬಾರದು. ಏಕೆಂದರೆ ಮುರಿದ ತುಂಡುಗಳಿಂದ ಗಾಯ. ಅಥವಾ ನುಂಗುವ ಸಾಧ್ಯತೆ ಇದೆ. ಗಂಡು, ಹೆಣ್ಣು ಮಗುವಿಗೆಂದು ಪ್ರತ್ಯೇಕ ಅಟಿಕೆ ಬೇಡ.

ಆಟಿಕೆ ಖರೀದಿಸುವ ಮುಂಚೆ:
ಬೀದಿ ಬಳಿಯ, ಅನಧಿಕೃತ ಮಳಿಗೆಯಿಂದ ಖರೀದಿಸಬೇಡಿ. ದುಬಾರಿಯಾದರೂ ಅಂಗೀಕೃತ ತಯಾರಕರ ಅಟಿಕೆ ಖರೀದಿಸಿರಿ. 

* ಬ್ರಾಂಡೆಡ್ ಆಟಿಕೆಗೆ ಆದ್ಯತೆ ನೀಡಿರಿ. ಆಕರ್ಷಕ ಬಣ್ಣದ ಅಟಿಕೆಗೆ ಮರುಳಾಗದಿರಿ.

*  ಕಳಪೆ ಕಟ್ಟಿಗೆಯ ಅಥವಾ ಲೋಹದ ಆಟಿಕೆ ಬೇಡ. ಏಕೆಂದರೆ ಇವುಗಳ ಮೇಲಿನ ಲೇಪನ ಸುಲಭವಾಗಿ ಕಿತ್ತುಬರುವ ಅಪಾಯವಿದೆ.

* ಆಟಿಕೆ ಅಥವಾ ಆಟಿಕೆ ಡಬ್ಬದ ಮೇಲೆ ಸೀಸ ಮುಕ್ತ ಹಾಗೂ ಸಿ.ಈ.ಮತ್ತು ಸಿ.ಆಯ್. ಎಂಬ ಮುದ್ರೆಯಿರುವ ಮತ್ತು ಮಕ್ಕಳಿಗೆ ಸುರಕ್ಷಿತ ಎಂಬ ಪ್ರಮಾಣ ಪತ್ರವಿರುವ ಬಗ್ಗೆ ಗಮನಿಸಿರಿ.

* ಕಟ್ಟಿಗೆ ಆಟಿಕೆಗಳು ಆಲೆಮರದಿಂದ ತಯಾರಿಸಿದ ಹಾಗೂ ಇವುಗಳಿಗೆ ಸಸ್ಯಮೂಲದ ಲೇಪನ ಇರಲಿ.

* ಬಣ್ಣಮಿಶ್ರಿತ ಪ್ಲಾಸ್ಟಿಕ್ ಅಟಿಕೆ ಸುರಕ್ಷಿತ. ಏಕೆಂದರೆ ಇವುಗಳಲ್ಲಿನ ಬಣ್ಣ ಸುಲಭವಾಗಿ ಕಿತ್ತುಬರುವುದಿಲ್ಲ.

ಆಟಿಕೆಗಳಿಲ್ಲದ ಆಟ
ಆಟವಾಡಲು ಯಾವಾಗಲೂ ಆಟಿಕೆಗಳು ಬೇಕಿಲ್ಲ. ಮಕ್ಕಳ ಕೈ, ಮುಖ, ಮೈ ಮುಟ್ಟಿ ನಗಿಸಿ, ಮಾತನಾಡಿರಿ. ಪ್ರಾಣಿ ಸಂಗ್ರಹಾಲಯಕ್ಕೆ ಮಕ್ಕಳ ಜೊತೆ ಭೇಟಿ ನೀಡಿ ಅಲ್ಲಿನ ಪ್ರಾಣಿ, ಪಕ್ಷಿ ತೋರಿಸಿ ಅವುಗಳ ಚಲನ ವಲನಗಳನ್ನು ಅನುಕರಣೆ ಮಾಡುತ್ತ ಆಟವಾಡಿರಿ. ನೀರಿನಲ್ಲಿ ಮಕ್ಕಳ ಜೊತೆ ಈಜಾಡಿರಿ. ಉದ್ಯಾವನದ ಹುಲ್ಲುಗಾವಲಿನಲ್ಲಿ ಕಣ್ಣು ಮುಚ್ಚಾಲೆ(ಪೀ-ಕೆ-ಭೂ)ಆಡಿರಿ. ಇವುಗಳಿಂದ ಮೆದುಳಿನ ಪ್ರಚೋದನೆ ಮತ್ತು ಬಾಂಧವ್ಯ ಹೆಚ್ಚುತ್ತದೆ.
(ಲೇಖಕರು ಮಕ್ಕಳ  ತಜ್ಞರು ಮೊ :  94485 79390).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT