ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಪರಾಧಿಯಾದರೂ ಸಿಕ್ಕಿದ್ದು ‘ದಂಡ’ದ ನ್ಯಾಯ!

Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಊರೊಂದರ ವೈದ್ಯರೊಬ್ಬರ ಕಥೆ ಇದು. ಅವರ ಹೆಸರು ಡಾ. ಸಂಜು. ಆ ಊರು ಹಾಗೂ ಅಕ್ಕಪಕ್ಕದಲ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ವೈದ್ಯರಿವರು. 1995ರ ಮಾರ್ಚ್ ತಿಂಗಳ ಒಂದು ದಿನ ಡಾ. ಸಂಜು ಅವರ ಪತ್ನಿ ಉಮಾ ಅವರ ಕೊಲೆಯಾಗುತ್ತದೆ. ಚಾಕುವಿನಿಂದ ಇರಿದು ಅವರ ಕೊಲೆ ಮಾಡಲಾಗುತ್ತದೆ. ಪ್ರಖ್ಯಾತ ವೈದ್ಯರೊಬ್ಬರ ಪತ್ನಿಯ ಕೊಲೆ ಇದಾದುದರಿಂದ ಇಡೀ ಊರಲ್ಲಿ ಭಾರಿ ಸುದ್ದಿ ಆಗುತ್ತದೆ.

ಈ ಕೊಲೆಗೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರುವುದಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಾರೆ. ಅದಾಗಲೇ ಈ ಕೊಲೆ ಊರಿನ ತುಂಬ ಕೋಲಾಹಲ ಸೃಷ್ಟಿಸಿದ್ದರಿಂದ  ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗುತ್ತದೆ.

ತನಿಖೆ ಚುರುಕುಗೊಳಿಸಿದ ಪೊಲೀಸರು ಒಂದಿಷ್ಟು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಾರೆ. ಅಂತೂ ಕೊಲೆ ಆರೋಪಿ ಪೊಲೀಸರಿಗೆ ಸಿಕ್ಕೇ ಬಿಡುತ್ತಾರೆ. ಅವರು ಮತ್ತಾರೂ ಅಲ್ಲ. ಉಮಾ ಅವರ ಪತಿ ಡಾ. ಸಂಜು!

ಘಟನೆ ನಡೆಯುವುದಕ್ಕಿಂತ ಮುಂಚೆ ದಂಪತಿ ನಡುವೆ ನಡೆದಿತ್ತು ಎನ್ನಲಾದ ಜಗಳವೇ ಡಾ. ಸಂಜು ಅವರ ವಿರುದ್ಧ ಸಾಕ್ಷ್ಯವಾಗಿ ಪರಿಣಮಿಸುತ್ತದೆ. ಮನೆಯಲ್ಲಿ  ಉಮಾ ಅವರ ಚಿನ್ನಾಭರಣಗಳು  ನಾಪತ್ತೆಯಾಗಿರುವುದು ಪೊಲೀಸರಿಗೆ ತನಿಖೆ ವೇಳೆ ಕಂಡುಬಂದು, ಇದರ ಹಿಂದೆಯೂ ಡಾ.ಸಂಜು ಅವರ ಕೈವಾಡ ಇದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಹೀಗೆ ಒಂದಿಷ್ಟು ಸಾಕ್ಷ್ಯಗಳು, ಮತ್ತೊಂದಿಷ್ಟು ಸಾಕ್ಷಿಗಳನ್ನು ಕಲೆ ಹಾಕಿದ ಪೊಲೀಸರು ಸಂಜು ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ಚಿಕ್ಕಮಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಸಲ್ಲಿಸುತ್ತಾರೆ. ಈ ಕೊಲೆಯನ್ನು ತಾವು ಮಾಡಿಲ್ಲ ಎಂದು ಡಾ. ಸಂಜು ಪೊಲೀಸರಲ್ಲಿ ಪರಿಪರಿಯಾಗಿ ಹೇಳಿದರೂ, ತಮ್ಮ ಪತ್ನಿ ಹಾಗೂ ತಮ್ಮ ನಡುವೆ ಯಾವುದೇ ರೀತಿಯಲ್ಲಿ ವೈಮನಸ್ಸು ಇರಲಿಲ್ಲ, ಯಾವ ಜಗಳವೂ ತಮ್ಮ ನಡುವೆ ನಡೆದಿರಲಿಲ್ಲ, ತಾವು ಅನ್ಯೋನ್ಯವಾಗಿ ಇದ್ದೆವು... ಹೀಗೆ ಅವರು ಹೇಳಿದರೂ ಪೊಲೀಸರಿಗೆ ಅವೆಲ್ಲ ಬೇಕಿರಲಿಲ್ಲ.  ಏಕೆಂದರೆ ಎಲ್ಲ ಅಪರಾಧಿಗಳು ಹೇಳುವುದು ಇದನ್ನೇ ತಾನೆ...? ಅಂತೂ ಡಾ. ಸಂಜು ಅವರನ್ನು ಬಂಧಿಸಲಾಗುತ್ತದೆ.

ಈ ಮಧ್ಯೆ, ಬೇರೊಂದು ಅಪರಾಧ ಪ್ರಕರಣದಲ್ಲಿ ಮೂವರು ಆರೋಪಿಗಳು ಸಿಕ್ಕಿಬೀಳುತ್ತಾರೆ. ಆ ಪ್ರಕರಣದ ಆಳಕ್ಕೆ ಹೋದಾಗ ಡಾ. ಸಂಜು ಅವರ ಪತ್ನಿಯ ಕೊಲೆ ಮಾಡಿದ್ದು ಈ ಮೂವರೇ ಎಂದು ಪೊಲೀಸರಿಗೆ ತಿಳಿಯುತ್ತದೆ. ಉಮಾ ಅವರ ಆಭರಣಗಳು ಈ ಆರೋಪಿಗಳ ಬಳಿ ಪೊಲೀಸರಿಗೆ ಸಿಗುತ್ತವೆ.

ಡಾ. ಸಂಜು ಮನೆಯಲ್ಲಿ ಇಲ್ಲದ ವೇಳೆ ‘ಸೇಲ್ಸ್‌ಮೆನ್’ಗಳ ನೆಪದಲ್ಲಿ ಮನೆಗೆ ನುಗ್ಗಿದ ಆರೋಪಿಗಳು ಉಮಾ ಅವರ ಕೊಲೆ ಮಾಡಿ ಆಭರಣ, ಹಣವನ್ನೆಲ್ಲ ಕದ್ದೊಯ್ದಿದ್ದರು ಎಂಬುದು ಪೊಲೀಸರಿಗೆ ಸಾಕ್ಷ್ಯಾಧಾರಗಳಿಂದ ತಿಳಿಯುತ್ತದೆ. ಈ ಮೂವರ ವಿರುದ್ಧ ಉಮಾ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ಸಿದ್ಧಪಡಿಸಿದ ಪೊಲೀಸರು ಅದನ್ನು ಕೋರ್ಟ್‌ಗೆ ಸಲ್ಲಿಸುತ್ತಾರೆ.

ಅಲ್ಲಿಗೆ ಡಾ. ಸಂಜು ಅವರು ನಿರಪರಾಧಿ ಎನ್ನುವುದು ಸಾಬೀತಾಗುತ್ತದೆ. ಡಾ. ಸಂಜು ಅವರ ವಿರುದ್ಧ ಸಲ್ಲಿಕೆಯಾಗಿದ್ದ ಚಾರ್ಜ್‌ಶೀಟ್‌ ಅನ್ನು ರದ್ದುಗೊಳಿಸಲಾಗುತ್ತದೆ. ಆದರೆ ದುರಾದೃಷ್ಟ ಎಂದರೆ ಇಷ್ಟೆಲ್ಲಾ ಆಗುವವರೆಗೆ ಅಂದರೆ 45 ದಿನಗಳ ಕಾಲ ಡಾ. ಸಂಜು ಅವರು ಜೈಲಿನಲ್ಲಿಯೇ ಕಳೆದಿರುತ್ತಾರೆ! (ನಂತರದಲ್ಲಿ, ಈ ಮೂವರು ಆರೋಪಿಗಳ ವಿರುದ್ಧ ವಿಚಾರಣೆ ನಡೆದು ಅವರಿಗೆ ಸೆಷನ್ಸ್‌ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಯೂ ಆಗುತ್ತದೆ).

ಇಷ್ಟಾದ ಮೇಲೆ ಉಮಾ ಅವರ ಕೊಲೆ ಪ್ರಕರಣದ ಅಪರಾಧಿಗಳೇನೋ ಸಿಕ್ಕಿಬಿದ್ದಂತಾಯಿತು. ಆದರೆ ಆ ಮೂವರು ಸಿಗದೇ ಹೋಗಿದ್ದರೆ...? ಡಾ. ಸಂಜು ಅವರಿಗೆ ಶಿಕ್ಷೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿರಲಿಲ್ಲ. ಏಕೆಂದರೆ ಇವರೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳನ್ನು ಪೊಲೀಸರು ಸೃಷ್ಟಿಮಾಡಿಬಿಟ್ಟಿದ್ದರು.

ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ಮಾತನ್ನು ಪದೇ ಪದೇ ಕೇಳುತ್ತಲೇ ಬಂದಿದ್ದೇವೆ. ಆದರೆ ಕೊಲೆಯಂಥ ಪ್ರಕರಣಗಳಲ್ಲೂ ನಿರಪರಾಧಿಗಳನ್ನು ಪೊಲೀಸರು ಸಿಲುಕಿಸುತ್ತಿರುವ ಘಟನೆ ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಅದೂ ಸಾರ್ವಜನಿಕರ ಗಮನವನ್ನು ಸೆಳೆದಂಥ ಪ್ರಕರಣಗಳಾದರಂತೂ ಮುಗಿದೇ ಹೋಯ್ತು. ಕೆಲವು ಪೊಲೀಸರು ಮೇಲಿನ ಅಧಿಕಾರಿಗಳ ಒತ್ತಡಕ್ಕೆ ಮಣಿದೋ ಇಲ್ಲವೇ ಇನ್ನಾವುದೋ ಕಾರಣಕ್ಕೆ ಇಂಥ ನಿರಪರಾಧಿಗಳನ್ನು ಹಿಡಿದು ಅವರ ವಿರುದ್ಧ  ಸಾಕ್ಷ್ಯ, ಸಾಕ್ಷಿ ಎಲ್ಲವನ್ನೂ ಸೃಷ್ಟಿ ಮಾಡಿ ಜೈಲಿಗೆ ತಳ್ಳುತ್ತಾರೆ.

ಕೆಲವು ಆರೋಪಿಗಳು ಸಶಕ್ತ ವಕೀಲರನ್ನು ಹಿಡಿದು ತಾವು ನಿರಪರಾಧಿಗಳು ಎಂದು ಸಾಬೀತು ಮಾಡುತ್ತಾರೆ. ಉಳಿದವರ ಗತಿಯೇನು? ಒಮ್ಮೆ ಕೊಲೆ ಆಪಾದನೆ ಹೊತ್ತ ಮೇಲೆ ಅವರು ನಿರಪರಾಧಿ ಎಂದು ಜೈಲಿನಿಂದ ಬಿಡುಗಡೆಗೊಂಡರೂ ಅವರನ್ನು ಸಮಾಜ ಹೇಗೆ ಕಾಣುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದು ಒಂದೆಡೆಯಾದರೆ, ಯಾವುದೋ ಒಂದು ಅಪರಾಧ ಪ್ರಕರಣ ನಡೆದಾಗ ಕೆಲವರು ತಾವೇ ಆ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾರೆ.

ನಿಜವಾದ ಅಪರಾಧಿಗಳು ಘಟನೆಗೆ ಸಂಬಂಧಿಸದೇ ಇರುವವರನ್ನು ಬಳಸಿಕೊಂಡು ಶರಣಾಗುವಂತೆ ತಿಳಿಸುತ್ತಾರೆ. ಹಲವು ಸಂದರ್ಭಗಳಲ್ಲಿ ನಿಜವಾದ ಅಪರಾಧಿಗಳು ಯಾರೆಂದು ಪೊಲೀಸರಿಗೆ ತಿಳಿದಿದ್ದರೂ ಶರಣಾದವರನ್ನೇ ಆರೋಪಿಗಳು ಎಂಬಂತೆ ಬಿಂಬಿಸಿ ಆರೋಪಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿಬಿಡುತ್ತಾರೆ. ಶರಣಾದವರ ವಿರುದ್ಧ ವಿಚಾರಣೆ ನಡೆದಾಗ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಕೋರ್ಟ್‌ಗೆ ಕಂಡುಬರುವುದಿಲ್ಲ (ಅವರು ಕೊಲೆ ಮಾಡಿದ್ದರಲ್ಲವೇ ಸಾಕ್ಷ್ಯಗಳು ಸಿಗುವುದು!).

ಆದ್ದರಿಂದ ಅವರು ಖುಲಾಸೆಗೊಳ್ಳುತ್ತಾರೆ. ಆರೋಪಿಗಳು ಖುಲಾಸೆಗೊಂಡ ಮೇಲೆ ಅಲ್ಲಿಗೆ ಆ ಕೇಸ್‌ ಕೋರ್ಟ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಅಪರಾಧ ನಡೆದಿರುವುದು ನಿಜವಾದರೂ  ನಿಜವಾದ ಅಪರಾಧಿಗಳನ್ನು ಕಂಡುಹಿಡಿಯುವ ಕಾನೂನು ನಮ್ಮಲ್ಲಿ ಇಲ್ಲವಾಗಿರುವ ಕಾರಣ, ಇಂಥ ‘ನಾಟಕ’ಗಳು ನಡೆಯುತ್ತಲೇ ಇವೆ. ಪೊಲೀಸ್‌ ಇಲಾಖೆಯಲ್ಲಿ ಇರುವ ಎಲ್ಲರೂ ಹೀಗೇ ಮಾಡುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ನನ್ನ ವೃತ್ತಿ ಜೀವನದಲ್ಲಿ ಇಂಥ ಉದಾಹರಣೆಗಳನ್ನು ಸಾಕಷ್ಟು ಕಂಡಿದ್ದೇನೆ, ನೊಂದಿದ್ದೇನೆ.

ಅದು ಬಿಡಿ. ಈಗ ಈ ಪ್ರಕರಣದತ್ತ ಬರೋಣ. ಡಾ. ಸಂಜು ಅವರ ಮೇಲೆ ಕೊಲೆಗಾರನೆಂಬ ಪಟ್ಟವನ್ನು ಪೊಲೀಸರು ಕಟ್ಟಿಯೇ ಬಿಟ್ಟಿದ್ದರು. ಹೆಂಡತಿ ಸಾವಿನ ನೋವು ಒಂದೆಡೆಯಾದರೆ, ತಾವು ಮಾಡದ ತಪ್ಪಿಗೆ ಜೈಲು, ಕೋರ್ಟ್ ಎಂದು ಅಲೆದಾಟ ಇನ್ನೊಂದೆಡೆ. ಇವರು ನಿರಪರಾಧಿ ಎಂದೇನೋ ಸಾಬೀತಾಯಿತು. ಆದರೆ ಜೈಲಿಗೆ ಹೋಗಿ ಬಂದ ವೈದ್ಯರ ಬಳಿ ಜನರು ಬರಲು ಹಿಂದೇಟು ಹಾಕತೊಡಗಿದರು. ಆರೋಪಮುಕ್ತಗೊಂಡರೂ ಕೊಲೆಗಾರನಂತೆಯೇ ಜನರು ಕಾಣತೊಡಗಿದರು.

ಇವೆಲ್ಲಾ ಮಾನಸಿಕ ಹಿಂಸೆಯಿಂದ ಬೇಸತ್ತು ಹೋದ ಡಾ. ಸಂಜು, ತಮ್ಮ ವಿರುದ್ಧ ಈ ರೀತಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿ ಮಾಡಿದ ಅಂದಿನ ಸಿಓಡಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಹಾಗೂ ಇತರ ಪೊಲೀಸರನ್ನು ಹಾಗೆಯೇ ಬಿಡಬಾರದು ಎಂದುಕೊಂಡು ಅವರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. 

ಅರ್ಜಿಯಲ್ಲಿ ಎಡಿಜಿಪಿ ಅವರನ್ನೂ ಪ್ರತಿವಾದಿಯನ್ನಾಗಿಸಿ ತಮಗಾಗಿರುವ ಮಾನಸಿಕ ಹಿಂಸೆಯ ಕುರಿತು ಅದರಲ್ಲಿ ವಿವರಿಸಿದರು. ಈ ರೀತಿ ಮಾಡಿದುದಕ್ಕಾಗಿ ಪ್ರತಿವಾದಿಗಳು ತಮಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲು ನ್ಯಾಯಾಲಯವನ್ನು ಕೋರಿದರು. ಯಾವುದೇ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸುವ ಮುನ್ನ ಕೆಲವು ನೀತಿ-ನಿಯಮಗಳನ್ನು ಪೊಲೀಸರು ಪಾಲಿಸಬೇಕಿದ್ದು, ಈ ಸಂಬಂಧ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಆದೇಶಿಸುವಂತೆಯೂ ಅವರು ಕೋರಿದರು.

ಡಾ. ಸಂಜು ಪರವಾಗಿ ನಾನು ವಕಾಲತ್ತು ವಹಿಸಿದ್ದೆ. ಅವರಿಗಾದ ಅವಮಾನ, ಹಾನಿ ಎಲ್ಲವುಗಳ ಬಗ್ಗೆ ಕೋರ್ಟ್ ಗಮನಕ್ಕೆ ತಂದೆ. ಕೊಲೆ ನಡೆದ ದಿನದಿಂದ ಡಾ. ಸಂಜು ಅವರನ್ನು ಹಿಂಬಾಲಿಸುತ್ತಿದ್ದ ಪೊಲೀಸರ ನಡವಳಿಕೆಯಿಂದ ಅವರಿಗೆ ಆದ ಅವಮಾನ, ಆನಂತರ ಪೊಲೀಸರು ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ನ್ಯಾಯಮೂರ್ತಿಗಳಿಗೆ ಎಳೆಎಳೆಯಾಗಿ ವಿವರಿಸಿದೆ. ಡಾ. ಸಂಜು ಅವರಂಥ ಅಮಾಯಕರನ್ನು ಈ ರೀತಿಯ ಹಿಂಸೆಯಿಂದ ಕಾಪಾಡುವ ಸಂಬಂಧ ನಿಯಮ ರೂಪಿಸುವ ಅವಶ್ಯಕತೆ ಇದೆ ಎಂದೂ ವಾದಿಸಿದೆ.

ಆದರೆ ದುರಾದೃಷ್ಟ ನೋಡಿ. ಹೈಕೋರ್ಟ್ ಏಕಸದಸ್ಯ ಪೀಠವು ಈ ಪ್ರಕರಣದ ವಾದ, ಪ್ರತಿವಾದ ಆಲಿಸಿ ಆರು ತಿಂಗಳು ತೀರ್ಪನ್ನು ಕಾದಿರಿಸಿತು. ಆಮೇಲೆ ಬಂದ ತೀರ್ಪು ನೋಡಿ ನಮಗೆಲ್ಲಾ ಶಾಕ್! ಏಕೆಂದರೆ ಅರ್ಜಿ ವಜಾಗೊಂಡಿದ್ದು ಮಾತ್ರವಲ್ಲದೆ ಡಾ. ಸಂಜು ಅವರ ವಿರುದ್ಧವೇ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿರುತ್ತದೆ! ‘ಡಾ. ಸಂಜು ಅವರು ವಿನಾಕಾರಣ ಎಡಿಜಿಪಿ ಹಾಗೂ ಇತರ ಪೊಲೀಸರನ್ನು ಕೋರ್ಟ್‌ಗೆ ಎಳೆದುತಂದಿದ್ದಾರೆ.  ಎಡಿಜಿಪಿ ಅವರನ್ನೇ ಗುರಿಯಾಗಿಸಿಕೊಂಡು ಆರೋಪ ಮಾಡಲಾಗಿದೆ.

ಪೊಲೀಸರು ಯಾವುದೇ ರೀತಿಯ ಅನ್ಯಾಯವನ್ನು ಸಂಜು ಅವರಿಗೆ ಮಾಡಿಲ್ಲ. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಎಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅವರು ಮಾಡಿಲ್ಲ. ಸಂಜು ಅವರನ್ನು ಅಮಾನುಷ  ರೀತಿಯಲ್ಲಿ ನಡೆಸಿಕೊಂಡಿಲ್ಲ. ಮೂವರು ಆರೋಪಿಗಳು ಸೆರೆ ಸಿಕ್ಕಾಗ ಡಾ. ಸಂಜು ಅವರ ಮೇಲಿರುವ ಆರೋಪಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಇಂಥ ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್‌ ಅಧಿಕಾರಿಗಳ ಮೇಲೆ ಡಾ. ಸಂಜು ವಿನಾಕಾರಣ ಆಪಾದನೆ ಹೊರಿಸುತ್ತಿದ್ದಾರೆ.

ಇಂಥವರ ಪರವಾಗಿ ಕೋರ್ಟ್‌ ಏನಾದರೂ ತೀರ್ಪು ನೀಡಿದರೆ ಪೊಲೀಸರಿಗೆ ಇನ್ನು ಮುಂದೆ ಕರ್ತವ್ಯ ನಿರ್ವಹಣೆ ಮಾಡಲು ಕಷ್ಟವಾಗಬಹುದು. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲರೂ ಕೋರ್ಟ್‌ಗೆ ಬರಬಹುದು’ ಎಂದು ತೀರ್ಪಿನಲ್ಲಿ ಉಲ್ಲೇಖವಾಗುತ್ತದೆ. ಇಷ್ಟೇ ಅಲ್ಲದೆ, ಎಡಿಜಿಪಿ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದಕ್ಕೆ
ಡಾ. ಸಂಜು ಅವರು ದಂಡಕ್ಕೆ ಅರ್ಹರು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಸಂಜು ಅವರಿಗೆ 15 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತು! ಪರಿಹಾರ ಕೋರಿ ಹೋಗಿದ್ದ ಡಾ. ಸಂಜು ಅವರೇ ದಂಡ ತೆರುವಂತಾಯಿತು.

ಡಾ. ಸಂಜು ಇಲ್ಲಿಗೇ ಸುಮ್ಮನಾಗಲಿಲ್ಲ. ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದರು. ಆದರೆ ಅಲ್ಲೂ ಇವರಿಗೆ ಬೇಕಿದ್ದ ‘ನ್ಯಾಯ’ ಸಿಗಲಿಲ್ಲ. ಮೇಲ್ಮನವಿ ವಜಾಗೊಂಡಿತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ತಾವು ಹೈಕೋರ್ಟ್ ಆದೇಶದ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದ ಸುಪ್ರೀಂ ಕೋರ್ಟ್, ಇವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾ ಮಾಡಿತು.

ವೈದ್ಯರಿಗೆ ಬೇರೆ ದಾರಿ ಇರಲಿಲ್ಲ. ಕೋರ್ಟ್‌ಗೆ 15 ಸಾವಿರ ರೂಪಾಯಿ ದಂಡ ತೆತ್ತು ಬಂದರು. ಬಂಧನಕ್ಕೆ ಪೂರ್ವದಲ್ಲಿ ಕೆಲವು ನಿಯಮಾವಳಿ ರೂಪಿಸುವಂತೆ ಕೋರಿದ್ದ ಮನವಿಯನ್ನೂ ನ್ಯಾಯಮೂರ್ತಿಗಳು ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಿದರು. ಅಲ್ಲಿಗೆ ಎಲ್ಲವೂ ಮುಗಿಯಿತು.  ಕೊಲೆ ಆಪಾದನೆಯಿಂದ ಮುಕ್ತಗೊಂಡು ‘ಗೆದ್ದ’ ಡಾ. ಸಂಜು ಅವರು ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳುವಲ್ಲಿ ಮಾತ್ರ ಸೋತುಹೋದರು.

ಇಲ್ಲೊಂದು ಮಾತು ಹೇಳಲೇಬೇಕು. ನಾನು ಇಲ್ಲಿ ನ್ಯಾಯಾಲಯದ ವಿರುದ್ಧ ಅಥವಾ ತೀರ್ಪು ನೀಡಿದ ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಬದಲಿಗೆ ತೀರ್ಪಿನ ಬಗ್ಗೆ ವಿಮರ್ಶೆ ಮಾಡಿದ್ದೇನೆ. ತೀರ್ಪಿನ ಕುರಿತು ವಿಮರ್ಶೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನೀಡಿರುವ ಕಾರಣ, ವೈದ್ಯರಿಗೆ ಆಗಿರುವ ಅನ್ಯಾಯದ ಕುರಿತು ವಿಷದಪಡಿಸಿದ್ದೇನೆ. ಈ ತೀರ್ಪನ್ನೇ ಉದಾಹರಣೆಯಾಗಿಟ್ಟುಕೊಂಡು ಇನ್ನು ಮುಂದೆ ಬರುವ ತೀರ್ಪುಗಳಲ್ಲಿ ಇನ್ನೊಬ್ಬ ನಿರಪರಾಧಿ ‘ಸಂಜು’ ಸಿಲುಕಬಹುದಲ್ಲ ಎಂಬ ಕಳಕಳಿ ನನ್ನದು.

(ದಂಪತಿ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT