ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರಿಗೆ ಬೇಕಿದೆ ನೆಲೆ

Last Updated 24 ಜನವರಿ 2011, 11:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 10 ರಿಂದ 15 ಅಡಿಯಷ್ಟು ಕಿರಿದಾದ ಜಾಗ, ಅದರಲ್ಲೇ ಅಡುಗೆ ಮನೆ-ಸ್ನಾನದ ಕೋಣೆ, ಇಕ್ಕಟ್ಟಾದ ಮನೆಗಳಲ್ಲಿಯೇ ಸೊಳ್ಳೆ-ನಾಯಿಗಳಿಗೂ ಸಮಪಾಲು, ಒಂದೊಂದು ಕುಟುಂಬದಲ್ಲಿ 4 ರಿಂದ 5 ಮಕ್ಕಳು. ಗೋಡೆ-ಬಾಗಿಲುಗಳಿಲ್ಲದೇ ಯಾವುದೇ ಕ್ಷಣ ಕುಸಿದು ಬೀಳುವಂತಹ ಈ ರೀತಿಯ ಮನೆಗಳಲ್ಲಿ ಸರಿಸುಮಾರು 22 ಕುಟುಂಬಗಳು ವಾಸಿಸುತ್ತವೆ. ಒಂದೊಂದು ಕುಟುಂಬದಲ್ಲಿ 5 ರಿಂದ 6 ಜನರು ಸದಸ್ಯರಿದ್ದಾರೆ. ಒಂದಲ್ಲ-ಎರಡಲ್ಲ ಸುಮಾರು 30 ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿರುವ ಈ ಕುಟುಂಬಗಳಿಗೆ ಚಿಂದಿ ಆಯುವುದೇ ಪರಮ ಉದ್ಯೋಗ.

ಶಾಶ್ವತವಾದಂತಹ ಸೂರು ಇಲ್ಲದಿದ್ದರೂ ಪ್ಲಾಸ್ಟಿಕ್ ಶೀಟು, ತುಂಡು ತುಂಡು ಬಟ್ಟೆಗಳು ಎಲ್ಲವನ್ನೂ ಮೇಳೈಸಿಕೊಂಡು ಪುಟ್ಟಪುಟ್ಟದಾದ ಗುಡಿಸಲು ಮನೆಗಳನ್ನು ಕಟ್ಟಿಸಿಕೊಂಡಿರುವ ಅವರು ಕಳೆದ ಮೂರು ದಶಕಗಳಿಂದ ಸಂತೆ ಮಾರುಕಟ್ಟೆ ಬೀದಿ ಬಳಿಯಿರುವ ರೈಲ್ವೆ ನಿಲ್ದಾಣದ ರಸ್ತೆ ಬಳಿ ವಾಸವಿದ್ದಾರೆ. ರಸ್ತೆಯ ಮೂಲೆಮೂಲೆಯಲ್ಲಿ ಪುಟ್ಟದಾದ ಶೆಡ್‌ಗಳನ್ನು ಕಟ್ಟಿಕೊಂಡಿರುವ ಅವರು ಚಿಂದಿ ಆಯುವುದನ್ನೇ ಮುಖ್ಯ ಕಾಯಕವನ್ನಾಗಿಸಿದ್ದಾರೆ. ತಾವು ಅಲ್ಲದೇ ಅಕ್ಷರ ಕಲಿಯದ ಮಕ್ಕಳನ್ನೂ ಸಹ ಅದೇ ಕೆಲಸಗಳಲ್ಲಿ ನಿರತವಾಗಿಸಿದ್ದಾರೆ. ಆಯಾ ದಿನದ ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿರುವ ಅವರು ಇದ್ದಬಿದ್ದ ಅಲ್ಪಸೌಕರ್ಯಗಳಲ್ಲೇ ಜೀವನ ಮುಂದುವರೆಸಿದ್ದಾರೆ.

‘ಇದು ನಮ್ಮ ಹಣೆಬರಹ, ಈ ಗೋಳು ತಪ್ಪಿದ್ದಲ್ಲ’ ಎಂದು ಭಾವನೆಯಲ್ಲಿ ಬದುಕುತ್ತಿರುವ ಅವರು ಬೇರೆ ಉದ್ಯೋಗ ಕಂಡುಕೊಂಡಿಲ್ಲ. ಬಹುತೇಕ ಮಂದಿ ಅಕ್ಷರಗಳನ್ನು ಕಲಿತಿಲ್ಲ. ದಿನವಿಡೀ ಊರು ಪೂರ್ತಿ ಸುತ್ತಾಡಿ, ಚಿಂದಿಗಳನ್ನು ಆಯ್ದುಕೊಂಡು ಅದನ್ನು ಮಾರಾಟ, ಬಳಕೆ ಮಾಡಿಕೊಂಡು ಬಾಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಿಗುವ ಭರವಸೆಗಳು ಎಲ್ಲವೂ ತಾತ್ಕಾಲಿಕ ಎಂಬುದು ಗೊತ್ತಿದ್ದರೂ ಅವರು ಹಿರಿಹಿರಿ ಹಿಗ್ಗುತ್ತಾರೆ. ಕಷ್ಟಕಾಲದಲ್ಲಿ ಸ್ವಲ್ಪ ಹೊತ್ತಾದರೂ ನೆಮ್ಮದಿಯ ಕ್ಷಣಗಳನ್ನು ಕಳೆಯಬಹುದು ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

‘ನಮ್ಮ ತಂದೆ ಕಾಲದಿಂದಲೂ ನಾವು ಇಲ್ಲೇ ವಾಸವಿದ್ದೇವೆ. ಈ ರೀತಿಯ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುವುದು ಬಿಟ್ಟರೆ, ನಮಗೆ ಬೇರೆ ಮಾರ್ಗ ಗೊತ್ತಿಲ್ಲ. ಮನೆಗಳನ್ನು ಕಟ್ಟಿಸಿಕೊಡಲಾಗುವುದು, ಉದ್ಯೋಗ ವ್ಯವಸ್ಥೆ ಮಾಡಲಾಗುವುದು, ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ಸರ್ಕಾರದ ಭರವಸೆಗಳು ಹಲವು ಬಾರಿ ಕೇಳಿದ್ದೇವೆ. ಆರಂಭದ ದಿನಗಳಲ್ಲಿ ಸರ್ಕಾರದಿಂದ ಉತ್ತಮ ಕಾರ್ಯಗಳು ಆಗುತ್ತವೆ. ನಮ್ಮನ್ನು ಕೈಬಿಡುವುದಿಲ್ಲ ಎಂಬ ಭಾವನೆ ಇತ್ತು. ಆದರೆ ಕೆಲಸವಿಲ್ಲದಾಗ ಯೋಚಿಸುತ್ತ ಕೂತರೆ, ಚೆಂದದ ಮಾತುಗಳಿಗೆ ನಾವು ಮರುಳಾದೆವು ಎಂದು ಅನ್ನಿಸಿತೊಡಗುತ್ತದೆ’ ಎಂದು ನಿವಾಸಿ ಗಂಗಾಧರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂದವಾರದ ಬಳಿ ನಿರಾಶ್ರಿತರಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ ಎಂಬುದು ಗೊತ್ತಾದಾಗ, ನಾವೆಲ್ಲರೂ ಅಲ್ಲಿಗೆ ಹೋದೆವು. ಆದರೆ ಅವು ಬಸಪ್ಪ ಛತ್ರದ ನಿವಾಸಿಗಳಿಗೆ ನಿರ್ಮಿಸಲಾಗಿದೆ ಹೊರತು ನಮಗಲ್ಲ ಎಂದು ತಡವಾಗಿ ಗೊತ್ತಾಯಿತು. ನಾವು ಮತ್ತೆ ನಮ್ಮ ಹಳೆಯ ಮನೆಗಳಿಗೆ ಬಂದೆವು. ಆಗಾಗ್ಗೆ ಇಲ್ಲಿ ಬರುವ ಸರ್ಕಾರಿ ಅಧಿಕಾರಿಗಳು ಮನೆಗಳನ್ನು ನಿರ್ಮಿಸಿಕೊಡುವ ಬಗ್ಗೆ ಹೇಳುತ್ತಾರೆ. ಜನಪ್ರತಿನಿಧಿಗಳು ಸೌಕರ್ಯಗಳನ್ನು ಕಲ್ಪಿಸುವುದಾಗಿ ಹೇಳುತ್ತಾರೆ. ಆದರೆ ಈವರೆಗೆ ನಮಗೇನೂ ದೊರೆತಿಲ್ಲ’ ಎಂದು ಅವರು ನೊಂದು ನುಡಿದರು. 

ಇವರೊಂದಿಗೆ ಬಾಳ್ವೆ ನಡೆಸುತ್ತಿರುವ ಮಕ್ಕಳ ಭವಿಷ್ಯ ಕೂಡ ಅತಂತ್ರ. ಇವರಿಗೆ ತ್ಯಾಜ್ಯವಸ್ತುಗಳೇ ಆಟಿಕೆಗಳು. ಅಳಿದುಳಿದ ರೂಪದಲ್ಲಿ ಸಿಗುವ ಆಹಾರವೇ ಇವರಿಗೆ ಈಗಲೂ ಗತಿ. ಇವರಿಗೆ ಅಕ್ಷರಗಳ ಗಂಧ-ಗಾಳಿ ಗೊತ್ತಿಲ್ಲ, ಶಾಲೆಯ ವಾತಾವರಣದ ಪರಿಚಯವಿಲ್ಲ. ಮಲಿನ ಪರಿಸರದಲ್ಲಿ ರೋಗ-ರುಜಿನಗಳಿಗೆ ತುತ್ತಾಗುವ ಭೀತಿಯಲ್ಲೇ ಜೀವನ ನಡೆಸುತ್ತಿರುವ ಹಲವರು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗೂ ಗುರಿಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT