ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುಪಯುಕ್ತವಾಗಿರುವ ಹೊಸ ವಾಹನಗಳು!

Last Updated 25 ಫೆಬ್ರುವರಿ 2012, 5:25 IST
ಅಕ್ಷರ ಗಾತ್ರ

ಹಿರಿಯೂರು: ಇಲ್ಲಿನ ಪುರಸಭೆ ಆಡಳಿತಕ್ಕೆ ಕಾಯಕಲ್ಪ ಆಗಬೇಕಿದೆ. ಕಾರಣವಿಷ್ಟೆ, ಪುರಸಭೆಗೆ ಬೇಕಾಗಿರುವುದೇನು? ಬೇಕಿಲ್ಲವಾದುದು ಯಾವುದು, ಯಾವುದನ್ನು ಉಳಿಸಿಕೊಂಡು ಯಾವುದನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು ಚಿಂತಿಸುವ ಗೊಡವೆಗೆ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗಿಲ್ಲ ಎಂಬ ಟೀಕೆ ನಾಗರಿಕರಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.

ನಿವಾಸಿಗಳು ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಸರ್ಕಾರದಿಂದ ಪ್ರತಿ ವಾರ್ಡ್‌ಗೂ ಮೂರ‌್ನಾಲ್ಕು ಕಡೆ ಇಡಲು ಉಕ್ಕಿನ ತೊಟ್ಟಿಗಳನ್ನು ತರಿಸಲಾಗಿದೆ. ಅಲ್ಲದೆ ಇದರಲ್ಲಿನ ಕಸವನ್ನು ಯಂತ್ರದ ಮೂಲಕವೆ ತುಂಬಿಕೊಳ್ಳುವ ವ್ಯವಸ್ಥೆ ಇರುವ ಕಾರಣ ಬೇಗನೆ ಕಸ ತುಂಬಿ ಒಯ್ಯಬಹುದು.

ಆದರೆ, ಈಚೆಗೆ ಕಸದ ತೊಟ್ಟಿಗಳಿಗೆ ಹಗಲು- ರಾತ್ರಿ ಎನ್ನದೆ ಬೆಂಕಿ ಹಚ್ಚುತ್ತಿರುವ ಕಾರಣ ಬಡಾವಣೆ ಹೊಗೆಯಲ್ಲಿ ಮುಳುಗಿ ಹೋಗುತ್ತದೆ. ತೊಟ್ಟಿಗಳಿಗೆ ಬೆಂಕಿ ಹಚ್ಚುತ್ತಿರುವ `ಕಿಡಿ~ಗೇಡಿಗಳು ಯಾರು ಎಂಬುದು ಪತ್ತೆಯಾಗಬೇಕಿದೆ.

ನಗರದ ಸೌಂದರ್ಯ ಕಾಪಾಡಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟಿರುವುದು ಮೆಚ್ಚುಗೆಯ ವಿಚಾರ. ಆದರೆ, ತೊಟ್ಟಿಗಳಿಗೆ ಬೆಂಕಿ ಹಚ್ಚುವುದರಿಂದ ತೊಟ್ಟಿಗಳು ಹಾಳಾಗುವ ಜತೆಗೆ ಪರಿಸರವೂ ಹಾಳಾಗುತ್ತದೆ. ಈ ರೀತಿ ಬೆಂಕಿ ಹಚ್ಚುವ ಪ್ರಯತ್ನ ನಿಲ್ಲಬೇಕು ಎನ್ನುವುದು ಪೌರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜೆ. ರಾಮಯ್ಯ ಅವರ ಒತ್ತಾಯ.

ಇನ್ನು ಪುರಸಭೆ ಹಾಗೂ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಸ ಹೀರುವ ಯಂತ್ರಗಳು ಬಳಸುವವರಿಲ್ಲದೆ ಅನಾಥವಾಗಿ ಬಿದ್ದಿವೆ. ಪುರಸಭೆ ಆವರಣದಲ್ಲಿ ನಿಗದಿತ ಪ್ರಮಾಣದಲ್ಲಿ ಚಾಲಕರಿಲ್ಲದ ಕಾರಣಕ್ಕೆ ಇನ್ನೊಂದಿಷ್ಟು ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ನಾವು ಹೊಣೆಯಲ್ಲ: ಪುರಸಭೆ ಸಿಬ್ಬಂದಿಯೊಬ್ಬರು `ಪ್ರಜಾವಾಣಿ~ ಜತೆ ಮಾತನಾಡಿ, ಈ ಯಂತ್ರಗಳು ಬಳಸದೆ ಬಿದ್ದಿರುವುದಕ್ಕೆ ಪುರಸಭೆಯವರು ಹೊಣೆಯಲ್ಲ. ಏಕೆಂದರೆ ಇಲ್ಲಿರುವ ಯಾವುದೇ ಯಂತ್ರ ಪುರಸಭೆಗೆ ಬೇಕು ಎಂದು ಮೇಲಧಿಕಾರಿಗೆ ಅಥವಾ ಸರ್ಕಾರಕ್ಕೆ ಪತ್ರ ಬರೆದಿಲ್ಲ. ಆದರೂ ಇವುಗಳನ್ನು ಬಲವಂತವಾಗಿ ಸ್ವೀಕರಿಸುವಂತೆ ಒತ್ತಾಯಿಸಲಾಗಿದೆ. ಹೀಗಾಗಿ ಚಾಲಕರಿಲ್ಲದ, ಬೇಕಿಲ್ಲದ ವಸ್ತುಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ.

 ರೂ. 25ರಿಂದ 26 ಲಕ್ಷ ವೆಚ್ಚದಲ್ಲಿ ತಂದಿರುವ `ಕಸದ ಲಾರಿ~ಗೆ ಇಂಧನ ತುಂಬಿಸಲು ಬಹಳಷ್ಟು ಖರ್ಚು ಬರುತ್ತದೆ. ವಾಹನದ ಬದಲು ಕೂಲಿಯವರಿಂದ ಮಾಡಿಸುವುದೇ ಲೇಸು ಎಂಬಂತಾಗಿದೆ. ಆರ್ಥಿಕವಾಗಿ ನಷ್ಟದಾಯಕವಾಗಿರುವ ಯಂತ್ರಗಳನ್ನು ಬಳಸದಿರಲು ಇದು ಪ್ರಮುಖ ಕಾರಣ ಎನ್ನುತ್ತಾರೆ.

ಪುರಸಭೆ ವತಿಯಿಂದ ಉಪಯೋಗಿಸದ ಯಂತ್ರಗಳನ್ನು ತಕ್ಷಣ ಯಾವ ಇಲಾಖೆಯಿಂದ ಬಂದಿದ್ದವೋ ಅದೇ ಇಲಾಖೆಗೆ ಮರಳಿಸಲಿ ಎಂದ ಮುಖಂಡ ರಾಮಯ್ಯ ಆಗ್ರಹಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT