ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಹಂತದಲ್ಲೇ ತುಂಬಿ ಹರಿದ ಕೆರೆ

ಚನ್ನಪಟ್ಟಣದಲ್ಲಿ ಎರಡು ಕೆರೆಗಳ ನಿರ್ಮಾಣ
Last Updated 7 ಸೆಪ್ಟೆಂಬರ್ 2013, 7:01 IST
ಅಕ್ಷರ ಗಾತ್ರ

ರಾಮನಗರ:  ಮಳೆ ಅಭಾವ, ಬರಗಾಲ, ಅರಣ್ಯ ನಾಶ, ಅಕ್ರಮ ಮರಳು ದಂಧೆ, ಭೂ ಒತ್ತುವರಿ ಸೇರಿದಂತೆ ಹಲವಾರು ಕಾರಣಗಳಿಂದ ಜಿಲ್ಲೆಯ ಕೆರೆಗಳು ಒಂದೆಡೆ ನಶಿಸುತ್ತಿವೆ. ನಿರ್ವಹಣೆ ಕೊರತೆ ಮತ್ತು ಮನುಷ್ಯನ ದುರಾಸೆಯಿಂದಾಗಿ ಹಲವಾರು ಕೆರೆಗಳು ಮಾಯವಾಗುತ್ತಿವೆ. ಈ ನಡುವೆಯೂ ಜಿಲ್ಲೆಯ ಚನ್ನಪಟ್ಟಣದಲ್ಲಿ ಎರಡು ಕೆರೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಮೆಣಸಿನಹಳ್ಳಿ ಮತ್ತು ವಿಠಲೇನಹಳ್ಳಿಯಲ್ಲಿ ಈ ಎರಡು ಕೆರೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಇದರಲ್ಲಿ ಮೆಣಸಿನಹಳ್ಳಿ ಕೆರೆಗೆ ಈಗಾಗಲೇ ನೀರು ಹರಿದು ಕೋಡಿಯೂ ಬಿದ್ದಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.

ಮೆಣಸಿನಹಳ್ಳಿಯ ಸುತ್ತಮುತ್ತ ಬರುವ ಪೊದಿನ ಕಲ್ಲು ಬೆಟ್ಟ, ಎಳ್ಳುಗುಡ್ಡೆ ಕಾಡಿನ ಬೆಟ್ಟ, ಬಸವನ ಕಲ್ಲು ಗುಡ್ಡೆಗಳ ನಡುವೆ ನಿರ್ಮಿಸಲಾಗುತ್ತಿರುವ ಕೆರೆಗೆ ಕಳೆದ ಶನಿವಾರ ಒಂದೂವರೆ ಗಂಟೆ ಸುರಿದ ಧಾರಾಕಾರ ಮಳೆಯಿಂದಾಗಿ ನೀರು ಹರಿದು ಬಂದಿದೆ. ಮೂರು ಬೆಟ್ಟಗಳ ತೊಪ್ಪಲಿನಿಂದ ಹರಿದ ನೀರು, ಅಳ್ಳಗಳ ಮೂಲಕ ನಿರ್ಮಾಣ ಹಂತದಲ್ಲಿರುವ ಕೆರೆಯನ್ನು ಸೇರಿ, ಕೋಡಿ ಹರಿಸಿದೆ.

ಸಣ್ಣಪುಟ್ಟ ಕುಂಟೆಗಳನ್ನು ಮಾತ್ರ ಹೊಂದಿರುವ ಮೆಣಸಿನಹಳ್ಳಿಯಲ್ಲಿ ಐದು- ಆರು ತಿಂಗಳ ಹಿಂದೆ ಶಾಸಕ ಸಿ.ಪಿ.ಯೋಗೇಶ್ವರ್ ಅವರು (ಅರಣ್ಯ ಸಚಿವರಾಗಿದ್ದಾಗ) ಕೆರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಲ್ಲದೆ ಈ ವರ್ಷವೇ ಮಳೆ ಬಂದು ಕೆರೆ ತುಂಬುವಂತಾಗಲಿ ಎಂದು ಹಾರೈಸಿದ್ದರು. ಕಾಕತಾಳೀಯ ಎಂಬಂತೆ ಕೆರೆ ಕಾಮಗಾರಿ ಮುಗಿಯುವ ಮುನ್ನವೇ ಕೆರೆಗೆ ನೀರು ಬಂದು, ತುಂಬಿದೆ.

ಅಂದ ಹಾಗೆ, ಸಣ್ಣ ನೀರಾವರಿ ಇಲಾಖೆ ಅಂದಾಜು ರೂ.1.55 ಕೋಟಿ ವೆಚ್ಚದಲ್ಲಿ ಈ ಕೆರೆ ನಿರ್ಮಾಣ ಕಾಮಗಾರಿ ಕೈಗೊಂಡಿದೆ. ಪ್ರಸ್ತುತ ಶೇ 80ರಷ್ಟು ಕೆರೆ ಕಾಮಗಾರಿ ಮುಗಿದಿದ್ದು, ಬಾಕಿ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಇಲಾಖೆ ಸಹಾಯಕ ಎಂಜಿನಿಯರಿಂಗ್ ಕೊಟ್ರೇಶ್ `ಪ್ರಜಾವಾಣಿ'ಗೆ ತಿಳಿಸಿದರು.

ಮೂರು ಬೆಟ್ಟಗಳ ಅಂಚಿನಲ್ಲಿ ಬರುವ ಈ ಕೆರೆಗೆ ಅಡ್ಡಲಾಗಿ 72 ಮೀಟರ್ ಉದ್ದದ `ಬಾಡಿ ವಾಲ್' ನಿರ್ಮಿಸಲಾಗುತ್ತಿದೆ. ಕೆರೆ ತಳಪಾಯದಿಂದ 7.8 ಮೀಟರ್ ಆಳ ಹೊಂದಿದೆ. `ಬಾಡಿ ವಾಲ್' ಕಾಮಗಾರಿ ಪೂರ್ಣಗೊಂಡ ನಂತರ ಕೆರೆ ನೀರಿನ ಸಾಮರ್ಥ್ಯ ಹೆಚ್ಚಲಿದೆ. ನೀಲಿ ನಕಾಶೆ ಪ್ರಕಾರ ಈ ಕೆರೆಗೆ 40 ಎಂಸಿಎಫ್‌ಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.

ಈ ಕೆರೆಯಲ್ಲಿ ನೀರು ತುಂಬಿಕೊಂಡರೆ ವರ್ಷದಲ್ಲಿ ಇಲ್ಲಿಂದ ಸುಮಾರು 10 ಕಿ.ಮೀ ಸುತ್ತಳತೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಏರಿಕೆ ಕಾಣಬಹುದು. ಅಲ್ಲದೆ ಈ ಭಾಗದಲ್ಲಿ ನೀರಿಲ್ಲದೆ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ನೀರು ಬರುವ ಸಾಧ್ಯತೆ ಇದೆ ಎಂದು ಅವರು ಪ್ರತಿಕ್ರಿಯಿಸಿದರು.

ಈ ಕೆರೆಗೆ ಮೂರು ತಾಲ್ಲೂಕು ಭಾಗದಿಂದ ನೀರು ಹರಿದು ಬರಲಿದೆ. ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳ ಗಡಿಭಾಗದಲ್ಲಿ ಈ ಕೆರೆ ಸಮಾಗಮವಾಗಿದೆ. ಮೂರು ತಾಲ್ಲೂಕು ವ್ಯಾಪ್ತಿಯಲ್ಲಿನ ಬೆಟ್ಟಗುಡ್ಡಗಳು ಹಾಗೂ ಈ ಭಾಗದ ಅರಣ್ಯ ಪ್ರದೇಶದಿಂದ ಮಳೆಯಾದ ಸಂದರ್ಭದಲ್ಲಿ ಕೆರೆಗೆ ನೀರು ಬರಲಿದೆ. ಈ ನೀರು ಅರಣ್ಯದಲ್ಲಿರುವ ವನ್ಯ ಪ್ರಾಣಿಗಳಿಗೆ, ಪಕ್ಷಿಗಳಿಗೇ ಅಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೂ ಉಪಯೋಗಕ್ಕೆ ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇನ್ನೂ ವಿಠಲೇನಹಳ್ಳಿಯಲ್ಲಿ 2001ರಲ್ಲಿ ನಡೆದ ನೀರಾ ಚಳವಳಿ ಸಂದರ್ಭದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರು ರೈತರ ಸ್ಮರಣಾರ್ಥ ಕೆರೆ ನಿರ್ಮಾಣ ಕಾರ್ಯಕ್ಕೆ ಯೋಗೇಶ್ವರ್ ಚಾಲನೆ ನೀಡಿದ್ದರು. ಅದರ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದ್ದು, ಇನ್ನಷ್ಟು ಮಳೆಯಾದರೆ ಈ ಕೆರೆಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ.

`ಕಾಡು ಪ್ರಾಣಿಗಳ ಉಪಟಳ ತಪ್ಪಬಹುದು'
`ಅರಣ್ಯದ ಬದಿಯಲ್ಲಿಯೇ ನಮ್ಮ ಗ್ರಾಮಗಳು ಬರುವುದಿರಿಂದ ಇಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚು. ಸರಿಯಾಗಿ ಮಳೆಯಾಗದ ಕಾರಣ ಕಾಡು ಪ್ರಾಣಿಗಳು ನೀರು, ಆಹಾರ ಹುಡುಕಿಕೊಂಡು ಗ್ರಾಮ ಮತ್ತು ಹೊಲಗಳಿಗೆ ನುಗ್ಗುತ್ತಿದ್ದವು. ಇದರಿಂದ ಸಾಕಷ್ಟು ಬಾರಿ ಬೆಳೆಹಾನಿಯಾಗಿದೆ. ಇದೀಗ ಅರಣ್ಯದ ಬಳಿಯೇ ಕೆರೆ ನಿರ್ಮಾಣವಾಗಿದ್ದು, ಮಳೆ ನೀರು ಅಲ್ಲಿಯೇ ಸಂಗ್ರಹವಾಗುವುದರಿಂದ ಕಾಡು ಪ್ರಾಣಿಗಳಾದ ಆನೆ, ಹುಲಿ, ಹಂದಿ, ಕರಡಿಗಳು ಗ್ರಾಮಗಳಿಗೆ ಬರುವುದು ಕಡಿಮೆಯಾಗಬಹುದು. ಅಲ್ಲದೆ ಈ ನೀರು ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಲು ಸಹಕಾರಿಯಾಗಿ, ಕೃಷಿಗೂ ನೆರವಾಗುತ್ತದೆ'
- ಕೆಂಪೇಗೌಡ, ಮೆಣಸಿನಹಳ್ಳಿ

`ಕಣ್ಣು ಬಂದಂತೆ'

`ನಮ್ಮೂರಿನಲ್ಲಿ ಇಲ್ಲಿಯವರೆಗೆ ಕೆರೆಯೇ ಇರ ಲಿಲ್ಲ. ಈಗ ಅರಣ್ಯದಂಚಿನಲ್ಲಿ ಕೆರೆ ನಿರ್ಮಾಣ ಆಗುತ್ತಿದೆ. ಮಳೆ ಬಂದಿದ್ದು, ಈ ಕೆರೆ ತುಂಬಿರುವುದರಿಂದ ಸಂತಸವಾಗಿದೆ. ಇದು ಒಂದು ರೀತಿ ಕುರುಡನಿಗೆ ಕಣ್ಣು ಬಂದಂತಾಗಿದೆ. ಈ ಭಾಗದಲ್ಲಿ ವೀಳ್ಯದ ಎಲೆ, ತೆಂಗು, ಮಾವು ಬೆಳೆಗಳಿಗೆ ನೀರಿನ ಕೊರತೆ ನೀಗುತ್ತದೆ. ಬರಿದಾದ ಕೊಳವೆ ಬಾವಿಗಳಲ್ಲಿ ನೀರು ಮತ್ತೆ ಬರಬಹುದು. ಇದಕ್ಕೆ ಕಾರಣಕರ್ತರಾದ ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ನಮನ ಸಲ್ಲಿಸುತ್ತೇನೆ'
- ಮುತ್ತಪ್ಪ, ಮೆಣಸಿನಹಳ್ಳಿ

`ಕೆರೆಯಂ ಕಟ್ಟಿಸು...'

`ಕೆರೆ ಎಂಬುದು ಪ್ರತಿ ಗ್ರಾಮದ ಜೀವಾಳ. ವಿಜಯನಗರದ ಶಾಸನವೊಂದರಲ್ಲಿ `ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಗಾರಮಂ ಮಾಡಿಸು' ಎಂಬ ಉಕ್ತಿ ಇದೆ. ಇದು ಕೆರೆ ಕಟ್ಟಿಸುವುದರ ಮಹತ್ವವನ್ನು ಸಾರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆರೆಗಳು ವಿವಿಧ ರೀತಿಯಲ್ಲಿ ಕಬಳಿಕೆಯಾಗುತ್ತಿದ್ದು, ಮಾಯವಾಗುತ್ತಿವೆ. ಈ ನಡುವೆಯೂ ಹೊಸ ಕೆರೆಗಳ ನಿರ್ಮಾಣ ಕಾರ್ಯ ಆಗುತ್ತಿರುವುದು ಪ್ರಶಂಸನೀಯ. ಇರುವ ಕೆರೆಗಳನ್ನು ಉಳಿಸಿಕೊಂಡು, ಪುನರುಜ್ಜೀವನಗೊಳಿಸುವುದರ ಜತೆಗೆ ಹೊಸ ಕೆರೆಗಳ ನಿರ್ಮಾಣ ಕಾರ್ಯವೂ ಹೆಚ್ಚಾಗಿ ಆಗಬೇಕು'
- ಡಾ. ಎಂ. ಮುನಿರಾಜಪ್ಪ, ಇತಿಹಾಸ ಪ್ರಾಧ್ಯಾಪಕರು, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT