ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕ ಶ್ರೀನಿವಾಸ್ ಬಂಧನ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತುರುವೇಕೆರೆ: ಮಗಳಿಗೆ ನಾಯಕಿ ಪಾತ್ರ ನೀಡಿ ವಿವಾದಾತ್ಮಕ `ಮುಸ್ಸಂಜೆ ಗೆಳತಿ~ ಚಿತ್ರ ನಿರ್ಮಿಸಿದ್ದ ನಟ, ನಿರ್ಮಾಪಕ ಬಿ.ಪಿ.ಶ್ರೀನಿವಾಸ್ ಅವರನ್ನು ವಂಚನೆ ಆರೋಪದ ಮೇಲೆ ರಾಜಸ್ತಾನ ಪೊಲೀಸರು ತಾಲ್ಲೂಕಿನ ಮನಿಯೂರು ಗ್ರಾಮದ ಸ್ವಗೃಹದಲ್ಲಿ ಗುರುವಾರ ಬೆಳಗಿನ ಜಾವ ಬಂಧಿಸಿದರು.

ಶ್ರೀನಿವಾಸ್ ತಮ್ಮಿಂದ ರೂ 20 ಲಕ್ಷ ಪಡೆದು ವಂಚಿಸಿದ್ದಾರೆಂಬ ರಾಜಸ್ತಾನದ ಎಸ್.ಕೆ.ಗೌತಮ್ ಅವರ ದೂರಿನ ಮೇಲೆ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಶ್ರೀನಿವಾಸ್ ಬೆಂಗಳೂರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ 2006ರಿಂದ `ಸೀನ್ ವರ್ಲ್ಡ್ ಗ್ರೂಪ್ ಆಫ್ ಕಂಪೆನೀಸ್~ ಹಾಗೂ `ಹಾಂಕಾಂಗ್ ಲಿಮಿಟೆಡ್~ ಎಂಬ ಕಂಪೆನಿಗಳನ್ನು ನಡೆಸುತ್ತಿದ್ದರು. ತಮ್ಮ ಕಂಪೆನಿ ಬೃಹತ್ ಯೋಜನೆಗಳಿಗೆ ಸಾಲ ನೀಡುತ್ತದೆಂದು ಪ್ರಕಟಣೆ ನೀಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿದ್ದರು.
 
ಹಲವು ಹೂಡಿಕೆದಾರರು ಸಾಲ ಪಡೆಯುವ ಉದ್ದೇಶದಿಂದ ಲಕ್ಷಾಂತರ ರೂಪಾಯಿಗಳನ್ನು ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಕಂಪೆನಿಯ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಹೂಡಿಕೆದಾರರು ಸಾಲ ಪಡೆಯಲಾಗದೆ, ಹೂಡಿಕೆಯನ್ನೂ ವಾಪಸ್ ಪಡೆಯಲಾಗದ ತ್ರಿಶಂಕು ಸ್ಥಿತಿಗೆ ಸಿಲುಕಿದ್ದರು. ಶ್ರೀನಿವಾಸ್ ಈ ಹಣವನ್ನು ಚಲನಚಿತ್ರ ನಿರ್ಮಾಣಕ್ಕೆ ಉಪಯೋಗಿಸುತ್ತಿದ್ದರು ಎಂದು ಹೇಳಲಾಗಿದೆ.

2009ರ ನಂತರ ಶ್ರೀನಿವಾಸ್ ನಡೆಸುತ್ತಿದ್ದ ಎರಡೂ ಕಂಪೆನಿಗಳು ಮುಚ್ಚಿದ್ದು ಹಲವಾರು ಗ್ರಾಹಕರು ತಮ್ಮ ಹಣಕ್ಕಾಗಿ ಶ್ರೀನಿವಾಸ್ ಬೆನ್ನು ಹತ್ತಿದ್ದರು. ಗೋವಾದ ಎಲ್.ಕೆ.ದಿವಾಕರ್ ಎಂಬುವರು ಗೋವಾದ ತಮ್ಮ ಶಾಲಾ ಕಟ್ಟಡಕ್ಕೆ ರೂ 10 ಕೋಟಿ ಸಾಲ ಪಡೆಯುವ ಸಲುವಾಗಿ ರೂ 12.7 ಲಕ್ಷ ಹಣವನ್ನು ಕಂಪೆನಿಗೆ ಪಾವತಿಸಿದ್ದರು. ಸಾಲ, ಹಣ ಎರಡೂ ಸಿಗದೆ ಶ್ರೀನಿವಾಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಈ ಮಧ್ಯೆ ರಾಜಸ್ತಾನದ ಗೌತಮ್ ದೂರಿನ ಆಧಾರದ ಮೇಲೆ ನ್ಯಾಯಾಲಯದಿಂದ ಬಂಧನದ ವಾರೆಂಟ್‌ನೊಂದಿಗೆ ಬಂದ ರಾಜಸ್ತಾನ ಪೊಲೀಸರು ಬೆಂಗಳೂರಿನ ನಾಗರಬಾವಿ ನಿವಾಸದಲ್ಲಿ ಶ್ರೀನಿವಾಸ್ ಪತ್ತೆಯಾಗದಿದ್ದಾಗ ಅವರ ಸ್ವಗ್ರಾಮ ಮುನಿಯೂರಿಗೆ ಬುಧವಾರ ಸಂಜೆ ಆಗಮಿಸಿದರು.

ಸ್ಥಳೀಯ ಪಿಎಸ್‌ಐ ಅಜರುದ್ದೀನ್ ಸಹಕಾರದೊಂದಿಗೆ ಶ್ರೀನಿವಾಸ್ ಅವರನ್ನು ಗುರುವಾರ ಬೆಳಗಿನ ಜಾವ ಬಂಧಿಸುವಲ್ಲಿ ಯಶಸ್ವಿಯಾದರು. ಶ್ರೀನಿವಾಸ್ ನಡೆಸುತ್ತಿದ್ದ ಕಂಪೆನಿಗಳಿಂದ ಎಷ್ಟು ಜನ ವಂಚನೆಗೊಳಗಾಗಿದ್ದಾರೆ ಎಂಬ ನಿಖರ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.
 
ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದರೆ ಸ್ಪಷ್ಟ ಅಂಕಿ-ಅಂಶ ಬಹಿರಂಗಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹಾಂಕಾಂಗ್, ನೇಪಾಳದಲ್ಲಿಯೂ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಗುರುವಾರ ಬೆಳಿಗ್ಗೆ ಶ್ರೀನಿವಾಸ್ ಅವರನ್ನು ಸ್ಥಳೀಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ ರಾಜಸ್ತಾನ ಪೋಲೀಸರು, ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT