ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಶಿಕ್ಷಕರ ಸೇವೆ ಮುಂದುವರೆಸಲು ಕ್ರಮ

Last Updated 25 ಸೆಪ್ಟೆಂಬರ್ 2013, 6:42 IST
ಅಕ್ಷರ ಗಾತ್ರ

ಕುಷ್ಟಗಿ: ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯಿಂದ ಪಾಠ ತೊಂದರೆಯಾಗುವುದನ್ನು ತಪ್ಪಿಸಲು ನಿವೃತ್ತಿಹೊಂದಲಿರುವ ಶಿಕ್ಷಕರನ್ನು ಸೇವೆಯನ್ನು ಮುಂದುವ­ರೆಸಲು ಸರ್ಕಾರ ತಾತ್ಕಾಲಿಕ ಕ್ರಮಕ್ಕೆ ತೆಗೆದುಕೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಂಗಳವಾರ ಇಲ್ಲಿ ಹೇಳಿದರು.

ಕೊಪ್ಪಳಕ್ಕೆ ತೆರಳುವ ಮಾರ್ಗಮಧ್ಯೆ ಇಲ್ಲಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟಂಬರ್‌ 1ರಿಂದ ಮಾರ್ಚ್‌ 31ರ ನಡುವಿನ ಅವಧಿಯಲ್ಲಿ ನಿವೃತ್ತಿಹೊಂದಲಿರುವ ಶಿಕ್ಷಕರನ್ನು 2014ರ ಶೈಕ್ಷಣಿಕ ಅವಧಿ ಪೂರ್ಣಗೊಳ್ಳುವವರೆಗೂ ಹಾಲಿ ವೇತನ ಶ್ರೇಣಿಯಲ್ಲಿಯೇ ಸೇವೆಯಲ್ಲಿ ಮುಂದುವರೆಸುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಲಾಗುತ್ತದೆ. ಅಲ್ಲದೇ ಮುಂದಿನ ವರ್ಷ ಜೂನ್‌ 1ರಿಂದ ಈ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದರು.

9 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗಿದ್ದು ಪಟ್ಟಿಯೂ ಸಿದ್ಧಗೊಂಡಿದೆ. ಆದರೆ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ (ಜೆ) ಕಲಂಗೆ ತಿದ್ದುಪಡಿ ತಂದ ನಂತರ ನಿಯಮಾವಳಿ ರಚನೆಗೊಳ್ಳುವವರೆಗೂ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಆದೇಶ ನೀಡುವುದಷ್ಟೇ ಬಾಕಿ ಇದ್ದು ಈ ಕೆಲಸ ಪೂರ್ಣಗೊಂಡರೆ ಖಾಲಿ ಹುದ್ದೆಯ ಸಮಸ್ಯೆ ಶೇ 80ರಷ್ಟು ಕಡಿಮೆಯಾಗಲಿದೆ. ಅಲ್ಲದೇ ಕಳೆದ ಹತ್ತ ವರ್ಷಗಳಿಂದಲೂ ಸಮರ್ಪಕ ರೀತಿಯಲ್ಲಿ ನೇಮಕಾತಿ ನಡೆಸದ ಕಾರಣ ಸುಮಾರು 24 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಹಾಗಾಗಿ ತಾತ್ಕಾಲಿಕ ಕ್ರಮವಾಗಿ 12 ಸಾವಿರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಪ್ರತಿ ಜಿಲ್ಲೆಗಳಲ್ಲಿ ಕನಿಷ್ಟ 500–1000 ಅತಿಥಿ ಶಿಕ್ಷಕರು ನೇಮಕಗೊಳ್ಳಲಿದ್ದಾರೆ ಎಂದರು.

ಅತಿಥಿ ಶಿಕ್ಷಕರ ನೇಮಕಾತಿಯ ಈ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿ ಮಟ್ಟದಲ್ಲಿ ನಡೆಯುತ್ತಿತ್ತು, ಆಯಾ ಶಾಲೆಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವ ಅಥವಾ ಅರ್ಹ ಅಭ್ಯರ್ಥಿಗಳು ಇದ್ದರೆ ಅವರಿಗೆ ಅವಕಾಶ ದೊರೆಯಲಿ ಎಂಬ ಉದ್ದೇಶದಿಂದ ಮೊದಲಿನ ಸೂಚನೆ­ಯನ್ನು ಬದಲಾಯಿಸಲು ಶಾಲಾ ಮಟ್ಟದಲ್ಲಿ ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ. ಇದರಿಂದ ಬಿಇಒ ಕಚೇರಿಯಲ್ಲಿ ನೇಮಕಾತಿಗೆ ಸಂಬಂಧಿಸಿದ ದಂಧೆಗೆ ಕಡಿವಾಣ ಬೀಳುತ್ತದೆ ಎಂದು ತಿಳಿಸಿದರು.

ಅಂತರಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಿಂದ ವರ್ಗವಾಗಿರುವವರನ್ನು ಬಿಡುಗಡೆ ಮಾಡದಿದ್ದರೆ ಕ್ರಮ ತೆಗೆದುಕೊಳ್ಳುವು­ದಾಗಿ ಶಿಕ್ಷಣ ಸಚಿವರು ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತಗೊಂಡಂತೆ ಆದೇಶ ಹೊರಡಿಸಿರುವುದು ಮತ್ತು ಬಿಡುಗಡೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಾಕೀತು ಮಾಡಿರುವುದರಿಂದ ಇಲಾಖೆ ಅಧಿಕಾರಿಗಳು ಸಂದಿಗ್ಧ ಸಿ್ಥಿತಿಗೆ ಒಳಗಾಗುವುದಿಲ್ಲವೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ಕಿಮ್ಮನೆ ರತ್ನಾಕರ, ಅನಾರೋಗ್ಯ ಮತ್ತಿತರೆ ಕಾರಣಗಳಿಂದ ತೀರಾ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡುವುದಕ್ಕೆ ಸಚಿವರಿಗೆ ಅಧಿಕಾರವಿದೆ. ಆಡಳಿತಾತ್ಮಕ ಕಾರಣಗಳ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ಪ್ರಶ್ನೆಗೆ ಉತ್ತರಿಸಿದರು.
ನೋಂದಣಿ: ಅಲ್ಲದೇ ಸುಮಾರು 55 ಸಾವಿರ ಪಾಠಶಾಲೆಗಳ ಕಟ್ಟಡಗಳು ಇರುವ ಪ್ರದೇಶ ಯಾರ ಒಡೆತನದಲ್ಲಿದೆ ಎಂಬುದನ್ನು ತಿಳಿಯಲು ಮಾಹಿತಿ ಪಡೆದು ನಂತರ ಅವುಗಳನ್ನು ಸರ್ಕಾರದ ಹೆಸರಿನಲ್ಲಿ ನೋಂದಣಿ ಮಾಡಿಸುವುದಕ್ಕೆ ಇರುವ ಪರ್ಯಾಯ ಕ್ರಮಗಳನ್ನು ಶೀಘ್ರದಲ್ಲಿಯೇ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ, ಸದಸ್ಯ ಉದಯಾನಂದ, ಪ್ರಮುಖರಾದ ದೇವೇಂದ್ರಪ್ಪ ಬಳೂಟಗಿ, ಡಾ.ಬಿ.ಎಂ.ಗೌಡರ, ದೊಡ್ಡಯ್ಯ ಗದ್ದಡಕಿ, ಸೋಮಶೇಖರ ವೈಜಾಪುರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT