ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ; ಪರಿಸ್ಥಿತಿ ಹತೋಟಿಗೆ

Last Updated 10 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಗಣೇಶ ಕ್ಯಾಂಪ್ ಬಳಿ ತುಂಗಭದ್ರಾ ಎಡದಂಡೆ ನಾಲೆಯ 31/6ನೇ ಉಪಕಾಲುವೆಗೆ ನೀರುವ ಹರಿಸಿಕೊಳ್ಳುವ ವಿಷಯದಲ್ಲಿ ಮೇಲ್ಭಾಗ ಮತ್ತು ಕೆಳಭಾಗದ ರೈತರ ಮಧ್ಯೆ ಶನಿವಾರ ನಡೆದ ಗುಂಪು ಘರ್ಷಣೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿ ಈಗ ಹತೋಟಿಗೆ ಬರುತ್ತಿದೆ.

ಶನಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ಲಿಂಗಸುಗೂರು ಸಹಾಯಕ ಆಯುಕ್ತ ಉಜ್ವಲಕುಮಾರ ಘೋಷ್ ಕೆಳಭಾಗದ ಗ್ರಾಮಗಳಾದ ಗಣೇಶಕ್ಯಾಂಪ್, ಚನ್ನಳ್ಳಿ, ಸಿದ್ರಾಂಪುರ ಮತ್ತು ಮಾವಿನಮಡು ಗ್ರಾಮಗಳಿಗೆ ಹೋಗುವ ಕಾಲುವೆಗೆ ಕಾನೂನು ಬದ್ಧವಾಗಿ ಹರಿಸಬೇಕಾದ 15.52 ಕ್ಯೂಸೆಕ್ ನೀರನ್ನು ಬಿಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಕೆಳಭಾಗದ ಕಾಲುವೆಗೆ ನೀರು ಹರಿಸಲಾಗುತ್ತಿದೆ.

ತಮ್ಮ ಹೊಲಗಳಿಗೆ ಸಮರ್ಪಕ ನೀರು ಹರಿಯುತ್ತಿರುವುದರಿಂದ ಕೆಳಭಾಗದ ಯಾರೊಬ್ಬ ರೈತರು ಕಾಲುವೆಯತ್ತ ಸುಳಿದಿಲ್ಲವೆಂದು ನಿಷೇಧಾಜ್ಞೆ ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದರು.

ಮುಂದುವರಿದ ನಿಷೇಧಾಜ್ಞೆ: ಶನಿವಾರ ಸಂಜೆ 144ನೇ ಕಲಂ ಅನ್ವಯ ಹೊರಡಿಸಲಾದ ನಿಷೇಧಾಜ್ಞೆಯನ್ನು ಸೋಮವಾರ ರಾತ್ರಿ 8ರವರೆಗೆ ಮುಂದುವರೆಸಲಾಗಿದೆ ಎಂದು ಡಿವೈಎಸ್‌ಪಿ ಬಿ.ಡಿ.ಡಿಸೋಜಾ `ಪ್ರಜಾವಾಣಿ~ಗೆ ತಿಳಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ ಮಾಳಿಗೇರ ನೇತೃತ್ವದಲ್ಲಿ 4 ಜನ ಪಿಎಸ್‌ಐಗಳು, 60 ಜನ ಪೊಲೀಸ್ ಪೇದೆಗಳು ಮತ್ತು 3 ಜಿಲ್ಲಾ ಮೀಸಲು ಪಡೆಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸಂಧಾನಕ್ಕೆ ಒಲವು: ಈ ಮಧ್ಯೆ ಶನಿವಾರ ಸಂಭವಿಸಿದ ರೈತರ ನಡುವಿನ ಘರ್ಷಣೆ ಆಚಾತುರ್ಯದಿಂದ ನಡೆದದ್ದಾಗಿರುವುದರಿಂದ ಘಟನೆಯಲ್ಲಿ ಗಾಯಗೊಂಡಿರುವ ರೈತರು ಪೊಲೀಸ್ ಪ್ರಕರಣ ದಾಖಲಿಸದೆ ಪರಸ್ಪರ ರಾಜಿ ಸಂಧಾನ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಕರಿಯಪ್ಪ ತಿಳಿಸಿದರು.

ಆಕ್ರೋಶ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೀರಾವರಿ ಅಧಿಕಾರಿಗಳ ಅಲಕ್ಷ್ಯತನದ ವಿರುದ್ಧ ಹರಿಹಾಯ್ದರು. ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಭಾಗದಲ್ಲಿ 70 ಸಾವಿರ ಹೆಕ್ಟೇರ್‌ಗೂ ಅಧಿಕ ಜಮೀನಿಗೆ ಅನಧಿಕೃತ ನೀರು ಪಡೆಯಲಾಗುತ್ತಿದೆ, ಈ ಸೋರಿಕೆಯನ್ನು ತಡೆಯುವಲ್ಲಿ ನೀರಾವರಿ ಅಧಿಕಾರಿಗಳು ವಿಫಲತೆ ಕಂಡಿದ್ದಾರೆ.

ಅಧಿಕಾರಿಗಳ ತಪ್ಪಿನಿಂದಾಗಿ ರೈತರ ನಡುವೆ ಕಾದಾಟಗಳು ನಡೆಯುತ್ತಿರುವುದು ಖಂಡನೀಯ. ಕೆಳಭಾಗದ ರೈತರ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ವಡ್ಡರಹಡ್ಡಿ ವಿಭಾಗದ ನೀರಾವರಿ ಅಧಿಕಾರಿ ವೆಂಕಟೇಶ ಅವರನ್ನು ಬಾದರ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT