ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಗಿದ ಪ್ರೇಕ್ಷಕರ ಬರ!

Last Updated 2 ಜನವರಿ 2012, 6:45 IST
ಅಕ್ಷರ ಗಾತ್ರ

ಶಿವಮೊಗ್ಗದಲ್ಲಿ ನಡೆದ ರಣಜಿ ಕ್ರಿಕೆಟ್ ಪಂದ್ಯದಿಂದ ಹೆಚ್ಚಿನ ಖುಷಿ ಅನುಭವಿಸಿದವರು ಉತ್ತರ ಪ್ರದೇಶ ತಂಡದ ನಾಯಕ ಸುರೇಶ್ ರೈನಾ. ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರಾಗಿರುವ ರೈನಾ, ರಣಜಿ ಪಂದ್ಯ ನೋಡಲು ಬಂದ ಪ್ರೇಕ್ಷಕ ಮಹಾಪೂರದಿಂದ ಭರ್ತಿ ಖುಷಿಯಾಗಿದ್ದರು. ಅದಕ್ಕಿಂತ ಹೆಚ್ಚಾಗಿ ಆ ಪ್ರೇಕ್ಷಕರೆಲ್ಲ ತಮ್ಮ ಅಭಿಮಾನಿಗಳು ಎಂಬುದು ಅವರ ಹರ್ಷವನ್ನು ಇಮ್ಮಡಿಗೊಳಿಸಿತ್ತು.

ಟೆಸ್ಟ್ ಪಂದ್ಯಗಳೂ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿರುವ ಈ ದಿನಗಳಲ್ಲಿ ರಣಜಿ ಪಂದ್ಯ ವೀಕ್ಷಣೆಗೆ ಸಾವಿರ, ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನದ ಕಡೆಗೆ ಧಾವಿಸಿದ್ದು, ರೈನಾ ಅವರಂತೆಯೇ ಇತರ ಆಟಗಾರರಲ್ಲೂ ಸೋಜಿಗ ಉಂಟುಮಾಡಿತ್ತು. ಕ್ರಿಕೆಟ್ ಆಟವನ್ನು ಗ್ರಾಮಾಂತರ ಭಾಗದತ್ತ ಒಯ್ಯಬೇಕು ಎಂಬ ಒತ್ತಾಸೆಗೆ ಶಿವಮೊಗ್ಗ ಪಂದ್ಯವೂ ಕೂಡ ತನ್ನ ದನಿ ಸೇರಿಸಿತು.

ಪ್ರಸಕ್ತ ರಣಜಿ ಋತುವಿನ ತನ್ನ ಆರಂಭಿಕ ಪಂದ್ಯವನ್ನು ಕರ್ನಾಟಕ ತಂಡ ರಾಜಸ್ತಾನದ ಉದಯಪುರದಲ್ಲಿ ಆಡಿತ್ತು. ಅಲ್ಲಿಯ ಫೀಲ್ಡ್ ಕ್ಲಬ್ ಮೈದಾನಕ್ಕೂ ಪ್ರೇಕ್ಷಕರೂ ಲಗ್ಗೆ ಇಟ್ಟಿದ್ದರು. ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಪಂದ್ಯವೂ ಅಭಿಮಾನಿಗಳನ್ನು ದೊಡ್ಡ ಸಂಖ್ಯೆಯಲ್ಲೇ ಸೆಳೆದಿತ್ತು. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಜರುಗಿದ ರಣಜಿ ಟ್ರೋಫಿ ಫೈನಲ್ ಪಂದ್ಯ ಪ್ರೇಕ್ಷಕರ      ಮೇಲೆ ಮಾಡಿದ ಮೋಡಿ ಸಹ ಸಾಕಷ್ಟು ಗಮನ ಸೆಳೆದಿತ್ತು.

`ರಣಜಿ ಟ್ರೋಫಿ ಪಂದ್ಯಗಳನ್ನು ಗ್ರಾಮಾಂತರ ಭಾಗದಲ್ಲೇ ನಡೆಸಬೇಕು. ಇದರಿಂದ ಪ್ರೇಕ್ಷಕರ ಬರವೂ ನೀಗುತ್ತದೆ. ಕ್ರಿಕೆಟ್ ಆಟವೂ ಬೆಳೆಯುತ್ತದೆ. ನನಗಂತೂ ಶಿವಮೊಗ್ಗ ಆತಿಥ್ಯ ಭರ್ತಿ ಖುಷಿ ತಂದಿದೆ~ ಎಂದಿದ್ದರು ರೈನಾ. ಕೌಂಟಿ ಕ್ರೀಡಾಂಗಣವನ್ನೇ ಹೋಲುತ್ತಿದ್ದ ಜೆಎನ್‌ಎನ್‌ಸಿಇ ಮೈದಾನ ಸುತ್ತಲೂ ಹೊಂದಿದ್ದ ಮರಗಳ ರಾಶಿಯಿಂದಾಗಿ ಪಂದ್ಯ ನೋಡಲು ಬಂದ ಜನರಿಗೆ ನೈಸರ್ಗಿಕವಾಗಿ ನೆರಳಿನ ಆಸರೆ ಒದಗಿಸಿತ್ತು.

ಕ್ರಿಕೆಟ್ ಮೇಲೆ ಅಭಿಮಾನ ಇಟ್ಟು ಬಂದವರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲು ಆತಿಥ್ಯದ ಜವಾಬ್ದಾರಿ ಹೊತ್ತ ಅಧಿಕಾರಿಗಳ ತಂಡ ವಿಶೇಷವಾಗಿ ಶ್ರಮ ಹಾಕಿತ್ತು. ಪ್ರೇಕ್ಷಕರಿಗೆ ಎಲ್ಲಾ ರೀತಿಯ  ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದ ಪಕ್ಕವೇ ಆಹಾರ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ನಾಲ್ಕು ದಿನಗಳ ಆಟದಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಹೋಗಿತ್ತು.

ದೇಶದಲ್ಲಿ ಎಲ್ಲಿಯೇ ಏಕದಿನ ಪಂದ್ಯಗಳು ನಡೆದರೂ ಟಿಕೆಟ್ ಪಡೆಯಲು ಲಾಠಿ ಏಟು ತಿನ್ನಬೇಕಾದ ದಿನಗಳನ್ನು ಕಂಡಿದ್ದ ಪ್ರೇಕ್ಷಕ ದೊರೆಗಳು, ಕ್ರಿಕೆಟ್ ಆಟ ಹೀಗೆ ತಮ್ಮ ಬಳಿಗೆ ಬಂದು ಸ್ನೇಹಹಸ್ತವನ್ನು ಚಾಚುತ್ತದೆ ಎಂಬ ನಿರೀಕ್ಷೆಯನ್ನೇ ಮಾಡಿರಲಿಲ್ಲವೇನೊ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಗ್ರಾಮಾಂತರ ಭಾಗದಲ್ಲಿ ರಣಜಿ ಪಂದ್ಯಗಳನ್ನು ನಡೆಸಲು ಅಧಿಕ ಆರ್ಥಿಕ ಹೊರೆ ಬೀಳುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಹಮ್ಮಿಕೊಂಡರೆ ದೊಡ್ಡ ಪ್ರಮಾಣದ ಹಣ ಉಳಿತಾಯ ಆಗುತ್ತದೆ. ಗ್ರಾಮಾಂತರ ಭಾಗದಲ್ಲಿ ಪಂದ್ಯ ನಡೆಸುವ ಪ್ರಕ್ರಿಯೆಯಿಂದ ಎಲ್ಲ ಕ್ರಿಕೆಟ್ ಸಂಸ್ಥೆಗಳು ದೂರ ಉಳಿಯಲು ಇದೇ ಪ್ರಧಾನ ಕಾರಣವಾಗಿದೆ.

`ಮುಂದಿನ ವರ್ಷ ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಸಂಘಟಿಸಲು ಚಿಂತಿಸಲಾಗುತ್ತಿದೆ. ಅಲ್ಲಿಯ ನಮ್ಮ ಮೈದಾನ ಸಿದ್ಧಗೊಳ್ಳುತ್ತಿದ್ದು, ಮುಂದಿನ ಋತುವಿನ ಆರಂಭದ ವೇಳೆಗೆ ಕ್ರೀಡಾಂಗಣ ಸನ್ನದ್ಧವಾಗಿರಲಿದೆ. ಶಿವಮೊಗ್ಗ ಪಂದ್ಯದ ಯಶಸ್ಸು ನಮ್ಮನ್ನು ಇನ್ನಷ್ಟು ಇಂತಹ ಸಾಹಸಗಳಿಗೆ ಕೈಹಾಕುವಂತೆ ಪ್ರೇರೇಪಿಸಿದೆ. ಹುಬ್ಬಳ್ಳಿಯಲ್ಲೂ ಅಪಾರ ಕ್ರಿಕೆಟ್ ಅಭಿಮಾನಿಗಳಿದ್ದು, ಅಲ್ಲಿಯ ಪಂದ್ಯ ವೀಕ್ಷಣೆಗೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ~ ಎಂದು ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯ ವಿಜಯ್ ಭಾರದ್ವಾಜ್ ಹೇಳುತ್ತಾರೆ.

ಗ್ರಾಮಾಂತರ ಭಾಗದ ಪ್ರೇಕ್ಷಕರನ್ನು ಸೆಳೆಯುವ ಜೊತೆಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಯೋಚನೆಯನ್ನೂ ಕೆಎಸ್‌ಸಿಎ ಹೊಂದಿದೆ. ಗ್ರಾಮಾಂತರ ಭಾಗದಲ್ಲಿ ಈ ಹಿಂದೆಯೂ ಪಂದ್ಯಗಳು ನಡೆದಿವೆ. ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು, ಭದ್ರಾವತಿ, ಬೆಳಗಾವಿ, ವಿಜಾಪುರಗಳಲ್ಲಿ ಈ ಹಿಂದೆ ಪಂದ್ಯಗಳು ನಡೆದ ಉದಾಹರಣೆಗಳು ಇವೆ. ಈಚಿನ ದಿನಗಳಲ್ಲಿ ಮೈಸೂರು ಮಾತ್ರ ಆ ಅದೃಷ್ಟವನ್ನು ಪಡೆದಿತ್ತು. ಕೆಎಸ್‌ಸಿಎಯ ಹೊಸ ಕ್ರಮ ಉಳಿದ ಗ್ರಾಮಾಂತರ ಕೇಂದ್ರಗಳು ಕ್ರಿಕೆಟ್ ಆಟವನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ಸನ್ನದ್ಧವಾಗುವಂತೆ ಮಾಡಿದೆ.  ಹೆದ್ದಾರಿಯಿಂದ ಕವಲು ದಾರಿಗಳ ಕಡೆಗೂ ಮುಖ ಮಾಡಿರುವ ಕ್ರಿಕೆಟ್, ಬೇರುಗಳನ್ನು ಹುಡುಕಿಕೊಂಡು ಹೊರಟಂತೆ ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT