ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ ಉಂಟಾಗದಂತೆ ಕ್ರಮ

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯುಗಾದಿ ಹಬ್ಬದ ದಿನ ಜನರಿಗೆ  ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಭಾನುವಾರ ಬೆಂಗಳೂರು ಜಲಮಂಡಲಿಯ ಕಾಲ್‌ಸೆಂಟರ್ ‘ಆಕ್ಸೆಸ್’ಗೆ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಿದ ಬಳಿಕ ಅವರು  ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಬ್ಬದ ದಿನ ಜನ ತೊಂದರೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಉತ್ತಮ ಸೇವೆ ಒದಗಿಸಲು ಜಲಮಂಡಲಿ ಪ್ರಯತ್ನಿಸುತ್ತಿದೆ. ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ 26 ಹಿರಿಯ ಅಧಿಕಾರಿಗಳು ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗದಂತೆ ಎಚ್ಚರ ವಹಿಸಲಿದ್ದಾರೆ’ ಎಂದರು.

‘ಇತ್ತೀಚೆಗೆ ಕೆಲವರು ವಿದ್ಯುತ್ ಕೇಬಲ್‌ಗಳನ್ನು ಅಗೆದದ್ದರಿಂದ ಪಂಪ್‌ಗಳಿಗೆ ವಿದ್ಯುತ್ ಪೂರೈಕೆಯಾಗದೇ ವ್ಯತ್ಯಯ ಉಂಟಾಯಿತು. ಈ ಹಿನ್ನೆಲೆಯಲ್ಲಿ ಇಂಧನ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದ್ದು ಕಾಮಗಾರಿಗಾಗಿ ಕೇಬಲ್‌ಗಳನ್ನು ಅಗೆಯುವ ಯಾವುದೇ ಸಂಸ್ಥೆ ಇದ್ದರೂ ಅದರ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಹೇಳಿದರು.

‘ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭವಾದ ಜಲಮಂಡಲಿ ಕಾಲ್‌ಸೆಂಟರ್ ಈವರೆಗೆ ಸುಮಾರು 12 ಸಾವಿರ ದೂರುಗಳನ್ನು ಸ್ವೀಕರಿಸಿದೆ. ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಎಂದರೆ 2016 ದೂರುಗಳು ದಾಖಲಾಗಿವೆ. ನೀರಿನ ಕೊರತೆ  ಬಗ್ಗೆ ಅತಿ ಹೆಚ್ಚು ದೂರುಗಳು ದಾಖಲಾಗಿವೆ. ಇದುವರೆಗೆ 534 ದೂರುಗಳಿಗೆ ಸಂಬಂಧಿಸಿದಂತೆ ಪರಿಹಾರ ಒದಗಿಸುವುದು ಸಾಧ್ಯವಾಗಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಮಾತನಾಡಿ ‘ನಗರದ 106 ಕೇಂದ್ರಗಳನ್ನು ಕಾಲ್‌ಸೆಂಟರ್‌ನೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಇದರಿಂದಾಗಿ ಸೇವಾ ಕೇಂದ್ರಗಳಿಗೆ ಬರುವ ದೂರುಗಳು ನೇರವಾಗಿ ಜಲಮಂಡಲಿ ಅಧಿಕಾರಿಗಳನ್ನು ತಲುಪಲಿವೆ’ ಎಂದು ಹೇಳಿದರು.

‘ಸಾರ್ವಜನಿಕರು ಯಾವುದೇ ಪ್ರದೇಶದಲ್ಲಿ ಸಂಚರಿಸುವಾಗ ನೀರು ಸೋರಿಕೆ, ಒಳಚರಂಡಿ ಅವ್ಯವಸ್ಥೆ ಕಂಡು ಬಂದರೆ ದೂರುಗಳನ್ನು ನೇರವಾಗಿ ಕಾಲ್‌ಸೆಂಟರ್‌ಗೆ ಕರೆ ಮಾಡಿ ತಿಳಿಸಬಹುದು. ಇದರಿಂದ ಕ್ಷಿಪ್ರಗತಿಯಲ್ಲಿ ಸೇವೆ ಒದಗಿಸಲು ಸಾಧ್ಯವಾಗಲಿದೆ’ ಎಂದರು.

ಜಲಮಂಡಲಿ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಜಲಮಂಡಲಿ ಕಾಲ್‌ಸೆಂಟರ್ ದೂರವಾಣಿ ಸಂಖ್ಯೆ 22238888. ಅಥವಾ ಜಲಮಂಡಲಿ ಅಧ್ಯಕ್ಷರ ಇಮೇಲ್ ವಿಳಾಸ chairman@bwssb.org  ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT