ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ರಸ್ತೆ, ಉದ್ಯೋಗ ಖಾತರಿ

Last Updated 10 ಫೆಬ್ರುವರಿ 2011, 9:15 IST
ಅಕ್ಷರ ಗಾತ್ರ

ಯಾದಗಿರಿ: ಇದೀಗ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಾಗಿದೆ. ಹೊಸ ಸದಸ್ಯರು ಜಿಲ್ಲಾ ಪಂಚಾಯಿತಿ ಸಭಾಂಗಣ ಪ್ರವೇಶಿಸಿದ್ದೂ ಆಗಿದೆ. ಇದೀಗ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವ ಹೊಣೆ ಜಿ.ಪಂ. ಸದಸ್ಯರ ಮೇಲಿದೆ. ಹೊಸ ಜಿಲ್ಲೆಯಾಗಿ ಒಂದು ವರ್ಷ ಕಳೆದರೂ ಜಿಲ್ಲೆಯಲ್ಲಿ ಅನೇಕ ಸೌಲಭ್ಯಗಳು ಈಗಲೂ ಮರಿಚಿಕೆಯಾಗಿಯೇ ಉಳಿದಿವೆ. ಗ್ರಾಮೀಣ ರಸ್ತೆಗಳಿರಲಿ, ಕುಡಿಯುವ ನೀರಿನ ಸಮಸ್ಯೆ ಇರಲಿ, ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ, ನೈರ್ಮಲ್ಯ ಹೀಗೆ ಹತ್ತಾರು ಸವಾಲುಗಳು ಜಿಲ್ಲಾ ಪಂಚಾಯಿತಿ ಸದಸ್ಯರ ಮುಂದಿವೆ.

2009 ರಲ್ಲಿ ಬಂದ ಪ್ರವಾಹದಿಂದಾಗಿ ಭೀಮಾ, ಕೃಷ್ಣಾ ನದಿಯ ತೀರದಲ್ಲಿರುವ ಗ್ರಾಮಗಳ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಬಿದ್ದ ಮನೆಗಳು ಇದುವರೆಗೂ ದುರಸ್ತಿಯಾಗಿಲ್ಲ. ಶಹಾಪುರ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಲೂ ರಸ್ತೆಗಳು ಎಲ್ಲಿವೆ ಎಂದು ಹುಡುಕುವಂತಾಗಿದೆ. ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಇರಲಿ, ಅಲ್ಲಿಗೆ ಹೋಗಿ ನೋಡುವ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಜಿಲ್ಲೆಯ ರಸ್ತೆಗಳ ಸ್ಥಿತಿಯ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಆಕ್ರೋಶ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಮತ್ತು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದಾರೆ. ಮೊದಲ ಸಭೆಯಲ್ಲಿ ಜನವರಿ ಅಂತ್ಯದೊಳಗಾಗಿ ಜಿಲ್ಲೆಯ ರಸ್ತೆಗಳ ತೆಗ್ಗು ಮುಚ್ಚುವ ಭರವಸೆ ನೀಡಿದ್ದ ಅಧಿಕಾರಿಗಳು, ಅದರಲ್ಲಿಯೂ ವಿಫಲರಾಗಿರುವುದು ಸಚಿವರ ಗಮನಕ್ಕೂ ಬಂದಿದೆ. ಮತ್ತೊಮ್ಮೆ ಫೆಬ್ರವರಿ ಅಂತ್ಯದೊಳಗೆ ಗುಂಡಿ ಮುಚ್ಚುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈಗಲಾದರೂ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಲಿದೆಯೇ ಎಂಬ ಸಂದೇಹ ಜನರನ್ನು ಕಾಡುತ್ತಿದೆ.

ಇನ್ನೊಂದೆಡೆ ಕೆಲ ಗ್ರಾಮಗಳ ರೈತರು ಹಳ್ಳಕ್ಕೆ ಸೇತುವೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆ ಅನುಭವಿ ಸಬೇಕಾಗಿದೆ. ಶಹಾಪುರ ತಾಲ್ಲೂಕಿನ ನಾಯ್ಕಲ್ ಬಳಿ ಇರುವ ಗುಬ್ಬೆಮ್ಮ ಹಳ್ಳ, ತೆಗ್ಗಳ್ಳಿ-ಶಾಖಾಪುರದಲ್ಲಿರುವ ಹಳ್ಳ ಸೇರಿದಂತೆ ಹಲವೆಡೆ ಹಳ್ಳದ ಆ ತುದಿಯಲ್ಲಿ ಇರುವ ಜಮೀನುಗಳಿಗೆ ಹೋಗಲು ರೈತರು ಸಾಕಷ್ಟು ಪರ ದಾಡುತ್ತಿದ್ದಾರೆ.

ಹಳ್ಳದ ನೀರಿನಲ್ಲಿಯೇ ದಾಟಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಈ ಹಳ್ಳಗಳಿಗೆ ಸೇತುವೆ ನಿರ್ಮಿಸಿದಲ್ಲಿ ರೈತರು ಜಮೀನು ತಲುಪಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಎನ್ನುವ ದೂರು ರೈತರದ್ದು.

ಇದು ರಸ್ತೆಗಳ ಸ್ಥಿತಿಯಾದರೆ, ಜಿಲ್ಲೆಯ ಬಹುತೇಕ ಜನರಿಗೆ ಶುದ್ಧವಾದ ಕುಡಿಯುವ ನೀರೇ ಸಿಗುತ್ತಿಲ್ಲ ಎಂಬ ಆತಂಕಕಾರಿ ವರದಿಯೂ ಇತ್ತೀ ಚೆಗಷ್ಟೇ ಬಹಿರಂಗವಾಗಿದೆ. ಜಿ.ಪಂ. ಎಂಜಿನಿಯರಿಂಗ್ ವಿಭಾಗದವರು ನಡೆಸಿದ ಅಧ್ಯಯನ ಪ್ರಕಾರ ಜಿಲ್ಲೆಯ ಸುಮಾರು 383 ಜಲಮೂಲಗಳಲ್ಲಿ ರಾಸಾಯನಿಕ ಅಂಶ ಇರುವುದು ಪತ್ತೆಯಾಗಿದೆ. ಈಗಾಗಲೇ ಕಿರದಳ್ಳಿ ತಾಂಡಾದಲ್ಲಿ ಅರ್ಸೇನಿಕ್ ಇರುವುದರಿಂದ ಅಲ್ಲಿನ ಜನರು ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಇನ್ನೊಂದೆಡೆ ಯಾದಗಿರಿ ತಾಲ್ಲೂಕಿನ ಆಶನಾಳ ಗ್ರಾಮದಲ್ಲಿಯೂ ಫ್ಲೋರೈಡ್‌ಯುಕ್ತ ನೀರು ಸೇವನೆ ಮಾಡುವುದು ಗ್ರಾಮದ ಜನರಿಗೆ ಅನಿವಾರ್ಯವಾಗಿದೆ. ಗ್ರಾಮದಲ್ಲಿನ ಡಿ-ಫ್ಲೋರೈಡ್ ಘಟಕ ಇದ್ದೂ ಇಲ್ಲದಂತಾಗಿದೆ. ಇದರ ಜೊತೆಗೆ ಯಾಳಗಿ ಗ್ರಾಮದಲ್ಲಿ ಆರಂಭವಾಗಿ ರುವ ವಾಂತಿ-ಭೇದಿ ಇದುವರೆಗೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಜಿಲ್ಲೆಯಲ್ಲಿ ಎರಡು ನದಿಗಳು ಹರಿ ದಿದ್ದರೂ, ಜನರು ಮಾತ್ರ ಯೋಗ್ಯ ವಾದ ನೀರು ಕುಡಿಯುವುದು ಸಾಧ್ಯ ವಾಗುತ್ತಿಲ್ಲ. ಕಲುಷಿತ ನೀರನ್ನೇ ಸೇವಿಸು ವುದು ಇವರಿಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತುರ್ತು ಗಮನ ನೀಡುವುದು ಅತ್ಯವಶ್ಯಕವಾಗಿದೆ ಎನ್ನುತ್ತಾರೆ ಸಂಕ್ಲಾಪುರದ ಈರಯ್ಯ. ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವೂ ಅಷ್ಟಕ್ಕಷ್ಟೇ ಎನ್ನು ವಂತಾಗಿದೆ.

ಕೇಂದ್ರ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗ ನೀಡುವ ಭರವಸೆ ಯನ್ನಾದರೂ ನೀಡಬೇಕು ಎಂಬುದು ಕೂಲಿಕಾರ್ಮಿಕ ಸಿದ್ಧಲಿಂಗಯ್ಯ ಅವರ ಅಭಿಪ್ರಾಯ. ಉದ್ಯೋಗ ಖಾತರಿ ಯೋಜನೆಯಡಿ ಕಳೆದ ವರ್ಷ ಸುಮಾರು ರೂ.120 ಕೋಟಿಯಷ್ಟು ಖೋತಾ ಆಗಿದೆ.
ಸರಿಯಾಗಿ ಎಂಐಎಸ್ ಆಗದೇ ಇರುವುದರಿಂದ ಯೋಜನೆಯ ಕಾಮ ಗಾರಿಗೆ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಇದರಿಂದ ಬಹುತೇಕ ಕೂಲಿ ಕಾರ್ಮಿಕರು ಉದ್ಯೋಗ ಖಾತರಿ ಮೇಲೆ ನಂಬಿಕೆ ಕಳೆದುಕೊಳ್ಳುವಂತಾ ಗಿದೆ ಎಂದು ಹೇಳುತ್ತಾರೆ.

ಇದೀಗ ಅಧಿಕಾರ ವಹಿಸಿ ಕೊಂಡಿರುವ ಹೊಸ ಅಧ್ಯಕ್ಷರು- ಉಪಾಧ್ಯಕ್ಷರು ಸಮಸ್ಯೆಗಳಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡುವ ಮೂಲಕ ಆಡಳಿತ ಯಂತ್ರವನ್ನು ಚುರುಕುಗೊಳಿಸ ಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗಮನ ನೀಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT