ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಹಾರಿಕಾ ಲೋಕ: ಆಗಸದಲ್ಲೊಂದು ಮುತ್ತಿನ ಹಾರ..!

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ದೊಡ್ಡ ದೂರದರ್ಶಕಗಳಿಂದ ದೂರ ದೂರದ ನೀಹಾರಿಕೆಗಳು ಪತ್ತೆಯಾಗುತ್ತಿವೆ. ಇವುಗಳಲ್ಲೊಂದು ಈಚೆಗೆ ಪತ್ತೆಯಾದ ಮುತ್ತಿನಹಾರ. ಇದು ‘ಸಜಿಟಾ’ (ಶರ, ಬಾಣ) ಎಂಬ ಪುಟ್ಟ ನಕ್ಷತ್ರಪುಂಜದಲ್ಲಿದೆ. ಗರುಡ ಮತ್ತು ರಾಜಹಂಸ ಪುಂಜಗಳ ನಡುವೆ ಇದೆ. ಇದು ಭೀಮ (ಹರ್ಕ್ಯುಲಿಸ್) ಗರುಡನಿಗೆ (ಅಕ್ವಿಲಾ) ಬಿಟ್ಟ ಬಾಣವಂತೆ. ಈ ಪುಟ್ಟ ಪುಂಜದ ದಿಕ್ಕಿನಲ್ಲಿ15000 ಜ್ಯೋತಿರ್ವರ್ಷಗಳ ದೂರದಲ್ಲಿ ಇದೆ ಈ ‘ಮುತ್ತಿನಹಾರ’

 ಸುಮಾರು ಹದಿನಾರು ವಿಜ್ಞಾನಿಗಳು ಇದರ ದೀರ್ಘ ಅಧ್ಯಯನ ಮಾಡಿದರು. ‘ನೆಕ್ಲೇಸ್ ನೆಬ್ಯುಲಾ’ ಎಂದು ಕರೆದರು. ಛಾಯಾಚಿತ್ರದಲ್ಲಿ ಕೆಂಪು ಬಣ್ಣದ ಮುತ್ತುಗಳ ಹಾಗೆ ವೃತ್ತಾಕಾರದಲ್ಲಿ ಹರಡಿರುವ ವಿನ್ಯಾಸ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.

ಹೈಡ್ರೋಜನ್ ಅಯಾಣುಗಳು, ಆಕ್ಸಿಜನ್ ಅಯಾಣುಗಳು ಮತ್ತು ಹಲವು ಎಲೆಕ್ಟ್ರಾನ್‌ಗಳನ್ನು ಕಳೆದುಕೊಂಡಿರುವ ನೈಟ್ರೋಜನ್ ಕಂಡುಬರುತ್ತದೆ. ಸೆಕೆಂಡಿಗೆ ಸುಮಾರು 28ಕಿಮೀ ವೇಗದಿಂದ ಇವು ವಿಸ್ತರಿಸುತ್ತಿವೆ ಎಂದೂ ತಿಳಿಯುತ್ತದೆ.

ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶ್ವೇತ ಕುಬ್ಜದ ರಚನೆ ಆಗಿರಬೇಕು ಎಂದೂ ತಿಳಿಯುತ್ತದೆ.
 ಹಾಗೆಯೇ ಈ ವೃತ್ತಾಕಾರದ ಲಂಬವಾದ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ವೇಗ (ಸೆಕೆಂಡಿಗೆ ಸುಮಾರು 100 ಕಿಮೀ) ದಿಂದ ಚಿಲುಮೆಯಂತೆ ವಸ್ತು ಚಿಮ್ಮುತ್ತಿರಬಹುದು ಎಂದೂ ತಿಳಿದು ಬರುತ್ತದೆ.  ರೋಹಿತದ ಅಧ್ಯಯನದಿಂದ ಇದು ಪ್ಲಾನೆಟರಿ ನೆಬ್ಯುಲಾ ವರ್ಗಕ್ಕೆ ಸೇರುತ್ತದೆ ಎಂದು ಗೊತ್ತಾಗುತ್ತದೆ. ಅಂದರೆ ಸೂರ್ಯನಂತಹ ನಕ್ಷತ್ರವೊಂದರ ಅವಸಾನದ ಹಂತ. ಕೇಂದ್ರದಲ್ಲಿ ಶ್ವೇತ ಕುಬ್ಜದ ರಚನೆಯಾಗಿದೆ.

ವಿಶೇಷವೆಂದರೆ ಇದರ ಕೇಂದ್ರದಲ್ಲಿ  ಒಂದು ಯಮಳ ನಕ್ಷತ್ರವಿದೆ. ಸುಮಾರು ಇಪ್ಪತ್ತೆಂಟು ಗಂಟೆಗಳಲ್ಲಿ ಒಂದನ್ನೊಂದು ಸುತ್ತುತ್ತವೆ. ಬೆಳಕಿನಲ್ಲಿ ಉಂಟಾಗುತ್ತಿದ್ದ ನಿಯತಕಾಲಿಕ ವ್ಯತ್ಯಾಸದಿಂದ ಈ ಅಂಶ ಪತ್ತೆಯಾಗಿದೆ. ಈ ಅವಧಿ ಬಹಳ ಕಡಿಮೆ; ಆದ್ದರಿಂದ ಇವುಗಳ ನಡುವಿನ ಅಂತರ ಬಹಳ ಕಡಿಮೆ ಎನ್ನಬಹುದು. ಯಮಳ ವ್ಯವಸ್ಥೆಯಲ್ಲಿ ಶ್ವೇತ ಕುಬ್ಜದ ರಚನೆಯಾಗಿರುವ ಏಕಮಾತ್ರ ಉದಾಹರಣೆ ಇದು ಎನ್ನಬಹುದು.

  ಎರಡೂ ನಕ್ಷತ್ರಗಳನ್ನು ಆವರಿಸುವಂತೆ ಅನಿಲ ವ್ಯಾಪಿಸುತ್ತದೆಯಾದರೆ ಇನ್ನೊಂದು ನಕ್ಷತ್ರದ ಪಾತ್ರವೇನು? ಅದರಿಂದ ಸಂಗಾತಿಗೆ ದ್ರವ್ಯರಾಶಿ ವರ್ಗಾವಣೆಯಾಗುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ದೊರೆಯಬಹುದು. ಚಿಲುಮೆಯಂತೆ ಚಿಮ್ಮುತ್ತಿರುವ ವಸ್ತು ಬಹುಶಃ ಬಹಳ ಹಿಂದಿನಿಂದಲೇ ಅಂದರೆ ನಕ್ಷತ್ರ ಶ್ವೇತ ಕುಬ್ಜವಾಗುವುದಕ್ಕೆ ಮೊದಲೇ ಚಿಮ್ಮಿರಬಹುದು ಎಂಬ ಸುಳಿವೂ ಸಿಕ್ಕಿದೆ.  ಇಂತಹ ಸಂದರ್ಭಗಳಲ್ಲಿ ಪ್ಲಾನೆಟರಿ ಹಂತದಲ್ಲಿ ಚಿಮ್ಮಿದ ವಸ್ತು ಹೇಗೆ ವಿಸ್ತರಿಸುತ್ತದೆ ಎಂದು ತಿಳಿಯಲು ಇದು ಅತ್ಯುತ್ತಮ ಅವಕಾಶ ಒದಗಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT