ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗದ `ವಿಶ್ವ ರೈತರ ದಿನ'

Last Updated 25 ಡಿಸೆಂಬರ್ 2012, 8:44 IST
ಅಕ್ಷರ ಗಾತ್ರ

ಕುಷ್ಟಗಿ: ಡಿಸೆಂಬರ್ 23 ಪ್ರತಿವರ್ಷ ಇಡಿ ವಿಶ್ವವೆ ರೈತ ದಿನಾಚರಣೆ ಹೆಸರಿನಲ್ಲಿ `ಅನ್ನದಾತ'ನನ್ನು ಸ್ಮರಿಸುವ ದಿನ, ಅದೇ ರೀತಿ ಪ್ರತಿವರ್ಷದಂತೆ ಈ ಬಾರಿಯೂ ಸಹ ತಾಲ್ಲೂಕಿನ ಕೃಷಿ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳು ಸಹ ರೈತ ದಿನಾಚರಣೆಯನ್ನು ಮರೆಯುವ ಮೂಲಕ ಮತ್ತೆ ತಮ್ಮ ಅಸಡ್ಡೆ ಮನೋಭಾವ ಮುಂದುವರೆಸಿದ್ದಾರೆ ಎಂಬ ಬಗ್ಗೆ ಇಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಭಾನುವಾರ ಇದ್ದುದರಿಂದ ಕೃಷಿ ಇಲಾಖೆ ಕಚೇರಿ ಬಾಗಿಲು ಹಾಕಿದ್ದು ಅಚ್ಚರಿ ಮೂಡಿಸಿತು. ಪಕ್ಕದಲ್ಲೇ ಜಾನುವಾರು ಸಂತೆಯಲ್ಲಿ ನೂರಾರು ಜನರಿದ್ದರೂ ಒಬ್ಬರಿಗೂ ಅದರ ಬಗ್ಗೆ ಮಾಹಿತಿ ಇರಲಿಲ್ಲ. ರೈತರ ದಿನ ಕುರಿತು ವಿಚಾರಿಸಿದಾಗ `ನಮ್ಮ ಚಿಂತೆ ನಮ್ಗ ಸಾಕಾಗೈತ್ರಿ, ಅದ್ರಬಗ್ಗೆ ನಮ್ಗೇನೂ ಗೊತ್ತಿಲ್ರಿ, ನಮ್ಮ ಸಂಕ್ಟ ಅವರ‌್ಗೆ ಎಲ್ಲಿ ಗೊತ್ತಾಗಬೇಕ್ರಿ' ಎಂದು ರೈತರಾದ ಕಂದಕೂರಿನ ಬಸವರಾಜ ಪಾಟೀಲ, ತೋಪಲಕಟ್ಟಿಯ ಹನಮಗೌಡ ದೂರಿದರು.

ನಾಲ್ಕು ವರ್ಷಗಳ ಹಿಂದೆ ಅದೂ ರೈತ ಮುಖಂಡರು ಒತ್ತಡ ಹೇರಿದಾಗ ಮಾತ್ರ ರೈತ ದಿನ ಆಚರಿಸಿದ ಕೃಷಿ ಇಲಾಖೆ ಮತ್ತೆ ನೆನಪಿಸಿಕೊಂಡಿಲ್ಲ. ಶಾಸಕರಾದ ನಂತರ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಉದ್ಘಾಟಿಸಿ ಪ್ರತಿವರ್ಷ ಉತ್ತಮ ರೀತಿಯಲ್ಲಿ ನಡೆಸುವಂತೆ ಸಲಹೆ ನೀಡಿದ್ದ ಅಮರೇಗೌಡ ಬಯ್ಯಾಪುರ ಅವರಿಗೂ ರೈತ ದಿನ ನೆನಪಾಗಲಿಲ್ಲ, ಅಷ್ಟೇ ಅಲ್ಲ ದಶಕದಿಂದಲೂ ಅಧ್ಯಕ್ಷರಾಗಿ ರೈತರನ್ನು ಪ್ರತಿನಿಧಸುತ್ತಿರುವ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಮತ್ತು ಸದಸ್ಯರಿಗೇ ರೈತರು ಬೇಕಾಗಿಲ್ಲವೆ? ಎಂಬ ಪ್ರಶ್ನೆ ಇಲ್ಲಿಯ ರೈತರದು.

ರೈತ ದಿನಾಚಣೆಯಂದು ಕಚೇರಿಯತ್ತ ಸುಳಿಯದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ, `ಮೌನ'ವೇ ಅವರ ಉತ್ತರವಾಗಿತ್ತು. ದಿನಾಚರಣೆ ನಡೆಸುವ ಬಗ್ಗೆ ಕೃಷಿಕ ಸಮಾಜ ಮೌನವಾಗಿರುವುದೇಕೆ? ಎಂಬ ರೈತರ ಆರೋಪಕ್ಕೆ ವಿವರಿಸಿದ ಚಂದಪ್ಪ ತಳವಾರ `ನನ್ನ ಅಧಿಕಾರದ ಅವಧಿಯಲ್ಲಿ ಒಂದು ಬಾರಿ ಮಾತ್ರ ರೈತ ದಿನಾಚರಣೆ ನಡೆದಿದೆ, ಅಧಿಕಾರಿಗಳು ನಮಗೆ ಏನನ್ನೂ ಹೇಳುವುದಿಲ್ಲ, ಅವರ ಮೇಲೆ ಚುನಾಯಿತ ಪ್ರತಿನಿಧಿಗಳ ಹಿಡಿತವೂ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ನೀವಾದರೂ ಕೇಳಬಹುದಿತ್ತಲ್ಲ ಎಂದರೆ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ.

ಆಕ್ರೋಶ: ರೈತ ದಿನಾಚರಣೆಯನ್ನು ಆಚರಿಸದ ಕೃಷಿ ಇಲಾಖೆ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದಾಳಿಂಬೆ ಬೆಳೆಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಇಡಿ ಜಿಲ್ಲೆಯಲ್ಲಿ ಯಾವ ಭಾಗದಲ್ಲಿಯೂ ರೈತರನ್ನು ಸ್ಮರಿಸುವ ಕಾರ್ಯಕ್ರಮ ನಡೆದಿಲ್ಲ, ಜಾತಿ ಇಲ್ಲದ ರೈತ ಎಲ್ಲರಿಗೂ ಬೇಡವಾದ ವ್ಯಕ್ತಿಯಗಿದ್ದಾನೆ, ಜಾತಿಗೊಂದು ದಿನಾಚರಣೆಗಳಿವೆ, ಅದಕ್ಕಾಗಿ ಎಲ್ಲ ಕೆಲಸ ಬದಿಗಿಟ್ಟು ಸತ್ತವರನ್ನು ಗುಣಗಾನ ಮಾಡುವ ಅಧಿಕಾರಿಗಳು, ಪ್ರತಿನಿಧಿಗಳು ಹೊಟ್ಟೆಗೆ ಅನ್ನ ನೀಡುವ ರೈತರನ್ನು ಕಡೆಗಣಿಸಿದ್ದಾರೆ ಎಂದು ಎಂದರು.

ಶೇಕಡ 30ರಷ್ಟು ಜನ ಮಾತ್ರ ಒಕ್ಕಲುತನದಲ್ಲಿ ತೊಡಗಿದ್ದು ಬಹುತೇಕ ಜನ ಕೃಷಿಯತ್ತ ಬೆನ್ನುಮಾಡಿದ್ದಾರೆ. ಕೃಷಿ ಬದುಕಿನ ಸಾಧಕ ಬಾಧಕಗಳ ಬಗ್ಗೆ ಅವಲೋಕ ನಡೆಸಿ ರೈತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿಲ್ಲ ಎಂದು ನೋವು ತೋಡಿಕೊಂಡ ಬಳೂಟಗಿ, ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಹೊಟ್ಟೆಗೆ ಏನು ತಿನ್ನುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT