ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಕೇಂದ್ರ ಸ್ಥಳಾಂತರ ವಿರೋಧಿಸಿ ಬಂದ್

Last Updated 25 ಡಿಸೆಂಬರ್ 2012, 6:12 IST
ಅಕ್ಷರ ಗಾತ್ರ

ಉಪ್ಪಿನ ಬೆಟಗೇರಿ (ತಾ.ಧಾರವಾಡ):  ಗ್ರಾಮದಲ್ಲಿರುವ ನೆಮ್ಮದಿ ಕೇಂದ್ರವನ್ನು ಅಮ್ಮಿನಬಾವಿ ಗ್ರಾಮಕ್ಕೆ ಸ್ಥಳಾಂತರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಎಬಿವಿಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗ್ರಾಮವನ್ನು ಬಂದ್ ಮಾಡುವುದರ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ನೆಮ್ಮದಿ ಕೇಂದ್ರ ಇಲ್ಲಿದ್ದು, ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರಿಗೆ ಅನೇಕ ರೀತಿಯಿಂದ ಉಪಯೋಗವಾಗುತ್ತಿದೆ. ಈಗ ಇದ್ದಕ್ಕಿದಂತೆ ಕೇಂದ್ರವನ್ನು ಹೋಬಳಿಯಾದ ಅಮ್ಮಿನಬಾವಿಗೆ ಸ್ಥಳಾಂತರಿಸುತ್ತಿರುವುದರಿಂದ ರೈತರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ನೆಮ್ಮದಿ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಅಂಗಡಿ ಮುಂಗಟ್ಟುಗಳು ಬಂದ್: ನಗರ ಪ್ರದೇಶದಲ್ಲಿ ಉಂಟಾಗುವ ಬಂದ್ ಮಾದರಿಯಲ್ಲಿಯೇ ಈ ಗ್ರಾಮದಲ್ಲಿಯೂ ವ್ಯಾಪಾರ ಹಾಗೂ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಯಾವ ಅಂಗಡಿಯೂ ತೆರೆದಿರಲಿಲ್ಲ.

ಮಾರುಕಟ್ಟೆ ಪ್ರದೇಶ ನಿರ್ಜನವಾಗಿತ್ತು. ಎಲ್ಲ ಅಂಗಡಿ ಮಾಲೀಕರಿಗೆ ಮೊದಲೇ ಮುನ್ಸೂಚನೆ ನೀಡಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಅಂಗಡಿ ಮಾಲೀಕರು ಬಂದ್‌ಗೆ ಸ್ಪಂದಿಸಿ ಅಂಗಡಿಗಳನ್ನು ತೆರೆದಿರಲಿಲ್ಲ. ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ಪ್ರಾರಂಭವಾದ ಬಂದ್ ಪ್ರತಿಭಟನೆ ಮಧ್ಯಾಹ್ನ 1 ಗಂಟೆಯವರೆಗೂ ಮುಂದುವರಿದಿತ್ತು. ನಂತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವಾನಂದ ಭಜಂತ್ರಿ ಅವರು ನೆಮ್ಮದಿ ಕೇಂದ್ರವನ್ನು ಪ್ರಾಯೋಗಿಕವಾಗಿ ಮಾತ್ರ ಅಮ್ಮಿನಬಾವಿಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಆದರೆ ಸಂಪೂರ್ಣವಾಗಿ ಬಂದ್ ಮಾಡಿರಲಿಲ್ಲ. ಈ ಕುರಿತು ಚರ್ಚಿಸಿ ನೆಮ್ಮದಿ ಕೇಂದ್ರನ್ನು ಉಪ್ಪಿನ ಬೆಟಗೇರಿಯಲ್ಲಿಯೇ ಮುಂದುವರೆಸುವುದಾಗಿ ಭರವಸೆ ನೀಡಿದ ನಂತರ ಬಂದ್ ಕರೆಯನ್ನು ಹಿಂತೆಗೆದುಕೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ದೊಡವಾಡ, ಉಪಾಧ್ಯಕ್ಷೆ ಸುಮಿತ್ರಾ ಗೌರಿಮಠ, ಬಾಬಣ್ಣ ತಳವಾರ, ಮಡಿವಾಳಪ್ಪ ಜವಳಗಿ, ಮಕ್ತುಂ ತಟಗಾರ, ಸಯ್ಯದ್ ಮೀರ್ ಕಮಾಲಶಾ, ಎಪಿಎಂಸಿ ಸದಸ್ಯ ಚನ್ನಬಸಪ್ಪ ಮಸೂತಿ, ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಂಜುನಾಥ ಮಸೂತಿ, ಕರವೇ ತಾಲ್ಲೂಕು ಕಾರ್ಯದರ್ಶಿ ಆಜಾದ್ ಜಾಲೆಗಾರ, ಎಬಿವಿಪಿ ಕಾರ್ಯದರ್ಶಿ ಮನು ಮಸೂತಿ, ಗಂಗಪ್ಪ ಮೇದಾರ, ಚನ್ನಬಸಪ್ಪ ಮಸೂತಿ, ಕಲ್ಲಪ್ಪ ಪುಡಕಲಕಟ್ಟಿ, ಶಿವಪ್ಪ ವಿಜಾಪುರ, ನಿಂಗಪ್ಪ ದಿವಟಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT