ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಗರ್ಭದಲ್ಲಿ ಜಲ ಕುಸಿತ

Last Updated 23 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಬೇಸಿಗೆ ಪ್ರಾರಂಭವಾಗುತ್ತಿದೆ. ಅದರೊಂದಿಗೆ ಕೊಳವೆ ಬಾವಿಗಳಲ್ಲಿನ ನೀರಿನ ಲಭ್ಯತೆಯ ಪ್ರಮಾಣ ಕುಸಿಯುತ್ತಿದೆ. ಈಗಾಗಲೆ ಕೆಲವು ಕೊಳವೆ ಬಾವಿಗಳು ಬತ್ತಿಹೋಗಿ ಬೇಸಾಯವನ್ನೇ ನಂಬಿದ ರೈತರು ಕಂಗಾಲಾಗಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿದರೆ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಸಂಭವ ಹೆಚ್ಚಾಗಿದೆ.

  ವ್ಯವಸಾಯ ತಾಲ್ಲೂಕಿನ ಜನರ ಜೀವನಾಡಿ. ಬಹುತೇಕ ರೈತರು ತರಕಾರಿಗಳನ್ನು ಬೆಳೆದು ಮಾರಿ ಜೀವನ ನಿರ್ವಹಿಸುತ್ತಾರೆ. ಅದರನಂತರ ರೇಷ್ಮೆ ಮತ್ತು ಹಾಲು. ಈ ಯಾವುದೇ ಉದ್ಯಮ ಉಳಿಯಬೇಕಾದರೆ ನೀರು ಬೇಕೇ ಬೇಕು. ಆದರೆ ದಿನದಿಂದ ದಿನಕ್ಕೆ ನೀರಿನ ಕೊರತೆ ಹೆಚ್ಚುತ್ತಿದೆ.ರೈತರು ಸಾಲ ಸೋಲ ಮಾಡಿ ಕೊಳವೆ ಬಾವಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.ಆದರೆ ವೀಫಲಗೊಳ್ಳುವ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚುತ್ತಿದೆ.

  ಈಗ ಕೊಳವೆ ಬಾವಿ ನಿರ್ಮಿಸುವುದು ಸುಲಭದ ಮಾತಲ್ಲ. ನೀರನ್ನು ನಿರೀಕ್ಷಿಸುವುದು 1500 ಅಡಿಗಳ ಆಳದಲ್ಲಿ. ಅಷ್ಟು ಕೊರೆದರೂ ನೀರು ಸಿಗುವ ಖಾತ್ರಿ ಇಲ್ಲ. ಅಲ್ಪ ಸ್ವಲ್ಪ ನೀರು ಬಿದ್ದರೂ ಅದನ್ನು ಮೇಲೆ ತರಬೇಕಾದರೆ ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ. ಒಂದು ಬೋರ್ ವೆಲ್ ಮಾಡಿಸಬೇಕೆಂದರೆ ರೂ. 2.5 ಲಕ್ಷ ಬೇಕೇಬೇಕು ಎಂಬ ಮಾತು ಸಾಮಾನ್ಯವಾಗಿದೆ.

  ಕೊರೆದಷ್ಟೂ ಮಣ್ಣಿನ ದೂಳು ಮುಗಿಲು ಮುಟ್ಟುತ್ತಿದೆ. ನೀರು ಸಿಗುವುದು ಅದೃಷ್ಟದ ವಿಷಯವಾಗಿದೆ. ಒಂದು ವೇಳೆ ನೀರು ಬಿದ್ದರೂ ಅದು ಎಷ್ಟು ದಿನ ಇರುತ್ತದೆ ಎಂದು ಹೇಳಲಾಗದು.ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ರೈತರು ಕೊಳವೆ ಬಾವಿಯನ್ನು ನಿರ್ಮಿಸಬೇಕಾಗಿ ಬಂದಿದೆ. ನೀರು ಸಿಕ್ಕಿದರೆ ಏನಾದರೂ ಬೆಳೆ ಮಾಡಿ ಸಾಲ ತೀರಿಸುವ ಧೈರ್ಯ ಬರುತ್ತದೆ. ಅದೃಷ್ಟ ಕೈಕೊಟ್ಟರೆ ಸಮಸ್ಯೆ ಎದುರಾಗುತ್ತದೆ.

  ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರ ಕೊಳವೆ ಬಾವಿಗಳನ್ನು ನಿರ್ಮಿಸುತ್ತಿದೆ. ಅಲ್ಲೂ ಇದೇ ಪಾಡು. ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸುವ ಹಣದ ಸಿಂಹ ಪಾಲು ಕುಡಿಯುವ ನೀರು ಪೂರೈಕೆಗೆ ಬಳಕೆಯಾಗುತ್ತಿದೆ. ಕೆಲವು ಗ್ರಾಮಗಳ ಸಮೀಪ ನೀರೇ ಸಿಗದಂತಹ ಪರಿಸ್ಥಿತಿ ತಲೆದೋರಿ, ಹಲವು ಪ್ರಯತ್ನಗಳ ಬಳಿಕ ಬೇರೆ ಕಡೆಗಳಿಂದ ಪೈಪ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.      
                                    
  ಕೊಳವೆ ಬಾವಿ ಸಂಸ್ಕೃತಿಯ ಪ್ರಾರಂಭದೊಂದಿಗೆ ನೆಲ ಗರ್ಭದಲ್ಲಿನ ಜಲ ಬರಿದಾಗತೊಡಗಿದೆ. ನೀರಿನ ಪೋಲು ತಪ್ಪಿಸಲು ಮತ್ತು ಮಿತ ಬಳಕೆಗಾಗಿ ರೈತರು ಹನಿ ನೀರಾವರಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ನೀರೆ ಸಿಗದಿದ್ದ ಮೇಲೆ ಯಾವುದೇ ಪದ್ಧತಿಯನ್ನು ಅನುಸರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಕೃಷಿಕರನ್ನು ಕಾಡುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT