ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್ ಹಗರಣ : ಸಿಬಿಐ ತನಿಖೆ ದೇವೇಗೌಡರ ಆಗ್ರಹ

Last Updated 19 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ಬೆಂಗಳೂರು:ರಸ್ತೆ ನಿರ್ಮಾಣಕ್ಕಾಗಿ ನೈಸ್ ಸಂಸ್ಥೆಗೆ ನೀಡಿದ್ದ ಭೂಮಿಯ ಪೈಕಿ 139 ಎಕರೆ ಜಾಗವನ್ನು ಮೂಲ ಒಪ್ಪಂದ ಉಲ್ಲಂಘಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ನೈಸ್‌ನ ಎಲ್ಲ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗೋಣಿಪುರ, ಸೀಗೆಹಳ್ಳಿ ಸುತ್ತಮುತ್ತಲಿನ 139 ಎಕರೆ ಭೂಮಿಯನ್ನು ಕಂಠೀರವ ಸ್ಟುಡಿಯೊ ಅಧ್ಯಕ್ಷ ಎಂ.ರುದ್ರೇಶ್ ಮಾಲೀಕತ್ವದ ಕೆಂಗೇರಿಯ ಎಂ.ಆರ್.ಆರ್.ಡೆವಲಪರ್ಸ್‌, ಎಸ್.ರಾಜಶೇಖರ್, ಎಂ.ಚಂದ್ರಶೇಖರ್ ಮೊದಲಾದವರಿಗೆ 2004-05ರಲ್ಲಿ ಮಾರಾಟ ಮಾಡಿ ನೋಂದಣಿ ಸಹ ಮಾಡಿಕೊಡಲಾಗಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

’1997ರ ಏಪ್ರಿಲ್ 4ರಂದು ಆಗಿರುವ ಮೂಲ ಒಪ್ಪಂದವನ್ನು ಪಾಲಿಸುವುದಾಗಿ ಒಂದೆಡೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುತ್ತಾರೆ. ಮತ್ತೊಂದೆಡೆ ಈ ರೀತಿಯ ಅವ್ಯವಹಾರಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದು ಯಾವಾಗ ಡಿನೋಟಿಫೈ ಆಗಿದೆ ಎಂಬ ದಿನಾಂಕ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಆ ವಿವರಗಳನ್ನೂ ಕೇಳಿದ್ದೇನೆ’ ಎಂದರು.

ನೈಸ್ ಸಂಸ್ಥೆಯವರು 50 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ದಾಖಲೆಗಳ ಸಮೇತ ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಲೋಕಸಭೆಯ ಸ್ಪೀಕರ್ ಮೀರಾಕುಮಾರ್, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಕಳುಹಿಸಿಕೊಟ್ಟಿದ್ದೇನೆ. ಕನಿಷ್ಠ ಪಕ್ಷ ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಲ್ಕತ್ತದಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ಅಡ್ವಾಣಿಯವರು ಎಲ್ಲ ಹಗರಣಗಳ ತನಿಖೆಗೆ ಜೆಪಿಸಿ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಕಪ್ಪು ಹಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ ನೈಸ್ ಹಗರಣದ ಬಗ್ಗೆ ಚಕಾರ ಎತ್ತಿಲ್ಲ. ಅವರ ಮೌನ ಒಳ ಒಪ್ಪಂದವಾಗಿರುವುದನ್ನು ಸೂಚಿಸುತ್ತದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಮೂಲ ಒಪ್ಪಂದದಿಂದ ಹಿಡಿದು ಇಲ್ಲಿಯವರೆಗೆ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ ಅವರು, ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಸತ್ಯವಂತರಾದರೆ ತನಿಖೆಗೆ ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ವಹನ್ವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡುತ್ತಿರುವುದು ಆಶ್ಚರ್ಯಕರ ಸಂಗತಿ.ಅನ್ಯಾಯಕ್ಕೆ ಒಳಗಾದ ರೈತರಿಗೆ ಚುನಾಯಿತ ಪ್ರತಿನಿಧಿಯಾಗಿ ನ್ಯಾಯ ದೊರಕಿಸಿ ಕೊಡಲು ಆಗದಿದ್ದರೆ ಯಾಕೆ ಇರಬೇಕು ಎಂದು ಬೇಸರ ವ್ಯಕ್ತಪಡಿಸಿದರು.

‘ವರಹಾಸಂದ್ರ, ಸೋಂಪುರದಲ್ಲಿ ರೈತ ಬಸಪ್ಪ ಮತ್ತಿತರರಿಗೆ ಸೇರಿದ 10 ಎಕರೆ ಮಾವಿನ ತೋಟವನ್ನು ಯಾವುದೇ ನೋಟಿಸ್ ನೀಡದೆ ಗೂಂಡಾಗಳ ಮೂಲಕ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಆ ಸ್ಥಳಕ್ಕೆ ಹೋಗಿದ್ದೆ. ಒಬ್ಬ ಸಬ್ ಇನ್ಸ್‌ಪೆಕ್ಟರ್, ಮೂವರು ಕಾನ್‌ಸ್ಟೆಬಲ್‌ಗಳು ನನ್ನ ಮೇಲೆ ಯುದ್ಧ ಮಾಡಲು ಬಂದರು. ಈ ವಿಷಯವನ್ನು ಪೊಲೀಸ್ ಆಯುಕ್ತ ಶಂಕರಬಿದರಿ ಗಮನಕ್ಕೆ ತಂದರೆ ತಲಘಟ್ಟಪುರ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ’ ಎಂದು ಅಸಮಾಧಾನ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT