ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಣಗಳ ಕಾಟಕ್ಕೆ ಸಿಗಲಿದೆ ಮುಕ್ತಿ

ಕೋಳಿಫಾರಂ ತೆರವು ಕಾರ್ಯಾಚರಣೆ ಆರಂಭ, ಜನರ ಹೋರಾಟಕ್ಕೆ ಸಂದ ಜಯ
Last Updated 5 ಡಿಸೆಂಬರ್ 2013, 6:19 IST
ಅಕ್ಷರ ಗಾತ್ರ

ದಾವಣಗೆರೆ: ನೊಣಗಳ ಕಾಟದಿಂದ ರೋಸಿ ಹೋಗಿದ್ದ ಹೊಸ ಬೆಳವನೂರು ಗ್ರಾಮಸ್ಥರು ಇನ್ನು ಆತಂಕಪಡಬೇಕಿಲ್ಲ. ನಿದ್ರೆ, ಊಟದ ಸಮಯದಲ್ಲಿ ನೊಣಗಳ ಜತೆಗೆ ಸೆಣಸಾಟ ನಡೆಸಬೇಕಿದ್ದ ಅವರು, ಕೆಲವೇ ದಿನಗಳಲ್ಲಿ ಚಿಂತೆಯಿಲ್ಲದೆ ಊಟ, ನಿದ್ರೆ ಮಾಡಬಹುದು!


ಜಿಲ್ಲಾಡಳಿತ ಬುಧವಾರದಿಂದ ಗ್ರಾಮದ ನಾಲ್ಕು ಕೋಳಿಫಾರಂಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಗ್ರಾಮದ ಮಧ್ಯಭಾಗದ ಲ್ಲಿದ್ದ ಶ್ರೀಶೈಲ, ಶ್ರೀರಾಮ, ವೆಂಕಟೇಶ್ವರ ಹಾಗೂ ಲಕ್ಷ್ಮೀ ವೆಂಕಟೇಶ್ವರ ಫಾರಂಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಫಾರಂನಲ್ಲಿ ಈಗಿರುವ ಕೋಳಿಗಳು ಮಾರಾಟವಾದ ಕೂಡಲೇ ನಾಲ್ಕೂ ಫಾರಂಗಳು ಬಂದ್‌ ಆಗಲಿವೆ.

ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಫಾರಂಗಳನ್ನು ಸ್ಥಳಾಂತರ ಮಾಡುವಂತೆ ಅಂತಿಮ ನೋಟಿಸ್‌ ನೀಡಿತ್ತು. ಅದಕ್ಕೂ ಉತ್ತರಿಸದೇ ಮಾಲೀಕರು ಕೋಳಿ ಸಾಕಣೆ ಮುಂದುವರಿಸಿದ್ದರು. ಬುಧವಾರ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ತೆರವು ಕಾರ್ಯಾಚರಣೆಯ ವ್ಯವಸ್ಥೆ ಮಾಡಿದರು.

ಇಬ್ಬರು ಪಶು ವೈದ್ಯರು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಒಬ್ಬ ಗ್ರಾಮ ಲೆಕ್ಕಿಗ ಹಾಗೂ ಪೊಲೀಸರನ್ನು ಉಸ್ತುವಾರಿಗೆ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 


‘ಫಾರಂನಲ್ಲಿರುವ ಕೋಳಿಗಳನ್ನು ಮಾತ್ರ ಮಾರಾಟ ಮಾಡಬೇಕು. ಯಾವುದೇ ಹೊಸ ಕೋಳಿಮರಿ ತಂದು ಸಾಕುವಂತಿಲ್ಲ. ಈ ಆದೇಶ ಉಲ್ಲಂಘಿಸಿದರೆ ಅದು ಶಿಕ್ಷಾರ್ಹ ಅಪರಾಧ’ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.

ನಾಲ್ಕೈದು ದಿನಗಳ ಒಳಗೆ ಇರುವ ಕೋಳಿಗಳು ಮಾರಾಟವಾಗಲಿದ್ದು, ಫಾರಂ ಬಂದ್‌ ಆಗಲಿವೆ.

ಗ್ರಾಮಸ್ಥರು ಸ್ವಚ್ಛತೆ ಕಾಪಾಡದ ಕೋಳಿಫಾರಂ ತೆರವು ಮಾಡುವಂತೆ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರು. ಶಾಲಾ ಮಕ್ಕಳು ಸೊಳ್ಳೆ ಪರದೆಯ ಕೆಳಗೆ ಪಾಠ ಕೇಳುವ ಪರಿಸ್ಥಿತಿಯಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಕೂಡ ಭೇಟಿ ನೀಡಿ ಫಾರಂ ಸ್ಥಳಾಂತರಕ್ಕೆ ಸೂಚಿಸಿದ್ದರು. ತೆರವು ಆದೇಶ ಪ್ರಶ್ನಿಸಿ ಫಾರಂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್‌ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಸುಗಮವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT