ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್‌ ವಿಜ್ಞಾನಿ ಹೇಳಿದ ಹಲ್ಲಿ–ಕಪ್ಪೆ ಪಾಠ!

Last Updated 6 ಡಿಸೆಂಬರ್ 2013, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಹಲ್ಲಿಗಳು ಗೋಡೆಯ ಮೇಲೆ ಲಂಬಕೋನದಲ್ಲಿ ಅದು ಹೇಗೆ ಸರಸರನೆ ಮೇಲೇರುತ್ತವೆ ತಿಳಿದಿದೆಯೇ? ಆಯಸ್ಕಾಂತೀಯ ಬಲ ಹೆಚ್ಚಾಗಿದ್ದರೆ ಕಪ್ಪೆಗಳು ಅದರ ಸುತ್ತ ಗಾಳಿ ಯಲ್ಲಿ ಗಿರಿಕಿ ಹೊಡೆಯುತ್ತವೆ ಗೊತ್ತೆ?’ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ವಿಶೇಷ ಉಪನ್ಯಾಸ ನೀಡಿದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್‌ ಆ್ಯಂಡ್ರೆ ಜೈಮ್‌, ಇಂತಹ ಪ್ರಶ್ನೆಗಳನ್ನು ಸಭಿಕರತ್ತ ತೇಲಿ ಬಿಡುವ ಮೂಲಕ, ಅವರ ಸಂಶೋಧನೆಗಳ ಕುರಿತು ಕುತೂಹಲ ಇಮ್ಮಡಿಗೊಂಡು ಉತ್ತರಕ್ಕಾಗಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

‘ಹಲ್ಲಿಗಳು ಗೋಡೆಯ ಮೇಲೆ ಲಂಬವಾಗಿ ಏರಲು ಅವುಗಳ ಪಾದದಲ್ಲಿರುವ ಸೂಕ್ಷ್ಮವಾದ ಕೂದಲುಗಳೇ ಕಾರಣ. ಅವುಗಳ ಪಾದಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕೂದಲುಗಳು ಇರುತ್ತವೆ. ಒಂದೊಂದು ಕೂದಲಿನ ತುದಿಯೂ ಸಾವಿರ ಭಾಗಗಳಾಗಿ ವಿಭಜನೆ ಹೊಂದಿರುತ್ತದೆ. ಅವು ಗೋಡೆಗೆ ಭದ್ರವಾಗಿ ಅಂಟಿಕೊಳ್ಳುತ್ತವೆ’ ಎಂದು ವಿವರಿಸಿದರು ಜೈಮ್‌.

ಸಂಶೋಧನಾ ವಿದ್ಯಾರ್ಥಿಗಳೇ ಹೆಚ್ಚಾಗಿ ತುಂಬಿದ್ದ ಸಭಾಂ ಗಣದಲ್ಲಿ ‘ವಾವ್ಹ್’ ಎಂಬ ಉದ್ಗಾರ ಕೇಳಿ ಬಂತು. ಅದಕ್ಕೆ ಅವರು ‘ಉದ್ಗಾರ ತೆಗೆಯಲು ಇನ್ನೂ ಕಾಲಾವಕಾಶ ಇದೆ. ಏಕೆಂದರೆ, ಹೇಳಿದ್ದಕ್ಕಿಂತ ರಸವತ್ತಾದ ಮಾಹಿತಿ ಮುಂದಿದೆ. ಒಂದು ಹಲ್ಲಿಯ ಹತ್ತು ಲಕ್ಷ ಕೂದಲನ್ನು ಒಟ್ಟಾಗಿ ಸೇರಿಸಿದರೆ ಮನುಷ್ಯನ ಎರಡು ಕೂದಲುಗಳು ಆಗುತ್ತವೆ ಅಷ್ಟೇ’ ಎಂದಾಗ ನಗೆಯ ದೊಡ್ಡ ಅಲೆ ಎದ್ದಿತು.

‘ಗಾಜಿನ ಮೇಲೆ, ಛಾವಣಿ ಕೆಳಗೆ, ನುಣುಪಾದ ಮೇಲ್ಮೈ ಮೇಲೆ ಎಲ್ಲಿ ಬೇಕಾದರೂ ಓಡಾಡುವ ಸಾಮರ್ಥ್ಯವನ್ನು ಹಲ್ಲಿಗಳು ಹೊಂದಿವೆ’ ಎಂದು ಹೇಳಿದರು. ಮಾತು ಕಪ್ಪೆಗಳ ಕಡೆಗೆ ಹೊರಳಿತು. ‘ತಮಾಷೆ ಮಾತಲ್ಲ, ಆಯಸ್ಕಾಂತೀಯ ಬಲ ಹೆಚ್ಚಾಗಿದ್ದರೆ ಕಪ್ಪೆಗಳು ಖಂಡಿತವಾಗಿಯೂ ಅದರ ಸುತ್ತ ಗಿರಿಕಿ ಹೊಡೆಯುತ್ತವೆ. ನಾನೇ ಈ ವಿಷಯವನ್ನು ಪ್ರಯೋಗ ಮಾಡಿ ಸತ್ಯಾಂಶವನ್ನು ಕಂಡುಕೊಂಡಿದ್ದೇನೆ’ ಎಂದು ಹೇಳಿದರು.

‘ಇತರ ಜೀವಿಗಳಂತೆ ಕಪ್ಪೆಗಳೂ ಕೋಟ್ಯಂತರ ಅಣುಗಳ ಕಣಜ. ಪ್ರತಿಯೊಂದು ಅಣುವೂ ಎಲೆಕ್ಟ್ರಾನ್‌ಗಳನ್ನು ಹೊಂದಿದ್ದು, ಅದರ ಕೇಂದ್ರದ ಸುತ್ತ ಸುತ್ತುತ್ತವೆ. ಆಯಸ್ಕಾಂತೀಯ ಕ್ಷೇತ್ರದ ಪ್ರಭಾವಕ್ಕೆ ಈ ಅಣುಗಳು ಒಳಗಾದಾಗ ಎಲೆಕ್ಟ್ರಾನ್‌ಗಳು ತಮ್ಮ ಪರಿಧಿಯನ್ನು ಬದಲಾಯಿಸುತ್ತವೆ. ಆಗ ಕಪ್ಪೆ ಗಾಳಿಯಲ್ಲಿ ಗಿರಿಕಿ ಹೊಡೆಯಲು ಆರಂಭಿಸುತ್ತದೆ’ ಎಂದ ಜೈಮ್‌, ತಮ್ಮ ಶೋಧದ ಕಿರುಚಿತ್ರ ವನ್ನೂ ತೋರಿಸಿದರು. ಆಯಸ್ಕಾಂತದ ಪ್ರಭಾವ ಹೆಚ್ಚಾಗುತ್ತಿದ್ದಂತೆ ಕಪ್ಪೆಯೊಂದು ತನ್ನ ಮೈಸುತ್ತ ಲಗಾಟೆ ಹೊಡೆಯುತ್ತಿದ್ದ ದೃಶ್ಯ ಸಭಿಕರಲ್ಲಿ ಕಚಗುಳಿ ಇಟ್ಟಿತು.

ಕಲ್ಲಿದ್ದಿಲಿನಲ್ಲಿರುವ ಎಲೆಕ್ಟ್ರಾನ್‌ ಪದರುಗಳು ತೋರುವ ಚಮತ್ಕಾರಗಳ ಬಗೆಗೆ ತಮ್ಮ ಉಪನ್ಯಾಸವನ್ನು ಅವರು ಕೇಂದ್ರೀಕರಿಸಿದರು. ‘ಎಲೆಕ್ಟ್ರಾನ್‌ ಪದರುಗಳಿಂದ ಕಾರು ತಯಾರಿಸಿದರೆ ಎಂತಹ ಅಡೆತಡೆಗಳನ್ನೂ ಅದು ನಿವಾರಿಸಿ ಕೊಂಡು ಹೋಗಬಹುದು’ ಎಂದು ಚಟಾಕಿ ಹಾರಿಸಿದರು. ‘ನೀವು ನೊಬೆಲ್‌ ಪ್ರಶಸ್ತಿ ಪಡೆದದ್ದು ಹೇಗೆ ಎಂಬ ಪ್ರಶ್ನೆಯನ್ನು ಮಾತ್ರ ಯಾರೂ ನನ್ನನ್ನು ಕೇಳಬಾರದು’ ಎಂದೂ ತಮಾಷೆಯನ್ನೂ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT